ಬಾಲಿಕಾ ಸಂಘಗಳ ರಚನೆಗೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಚಾಲನೆ

  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಮಕ್ಕಳ ರಕ್ಷಣಾ ಘಟಕ, ಯೂನಿಸೆಫ್ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್ಲಿ ಬಾಲಿಕಾ ಸಂಘಗಳ ರಚನೆಗೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಗುರುವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಎಲ್ಲಾ ಮಕ್ಕಳಿಗೆ ಕನಸು ಇರಬೇಕು, ಅದನ್ನು ಈಡೇರಿಸುವುದರ ಮುಖಾಂತರ ಈ ಸಮಾಜದ ಏಳಿಗೆಗೆ ಕಾರಣಿಕರ್ತರಾಗಬೇಕು. ಬಾಲ ಕಾರ್ಮಿಕ ಪದ್ಧತಿ ಮತ್ತು ಬಾಲ್ಯ ವಿವಾಹದ ಪದ್ಧತಿಗೆ ಒಳಗಾಗದೇ ಈ ಅನಿಷ್ಠ ಸಮಸ್ಯೆಗಳನ್ನು ಸಮಾಜದಿಂದ ಬುಡಸಮೇತ ಕಿತ್ತು ಹಾಕುವಂತೆ ಬಾಲಿಕಾ ಸಂಘಗಳ ಪದಾಧಿಕಾರಿಗಳಿಗೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯೂನಿಸೆಫ್‌ನ ಮಕ್ಕಳ ರಕ್ಷಣಾಧಿಕಾರಿ ಸೋನಿಕುಟ್ಟಿ ಜಾರ್ಜ್ ಅವರು ಮಾತನಾಡಿ, ಜಿಲ್ಲೆಯ ಸುಮಾರು ೪೦,೦೦೦ ಬಾಲಕಿಯರನ್ನು ಬಾಲಿಕಾ ಸಂಘದ ಮುಖಾಂತರ ಸಂಘಟಿಸಲಾಗುತ್ತಿದ್ದು ಯಾರೂ ಕೂಡ ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿಗೆ ಒಳಗಾಗಬಾರದೆಂದು ತಿಳಿಸಿದರು.
ನಾವು ೧೮ ವರ್ಷ ತನಕ ಮದುವೆ ಮಾಡಿ ಕೊಳ್ಳುವುದಿಲ್ಲ. ನನ್ನ ಸ್ನೇಹಿತೆಗೆ ಬಾಲ್ಯ ವಿವಾಹ ಆಗುತ್ತದೆ ಎಂದು ಕಂಡುಬಂದಲ್ಲಿ ತಡೆಗಟ್ಟುತ್ತೇನೆ ಎಂಬ ಪ್ರತಿಜ್ಞೆಯನ್ನು ಇದೇ ಸಂದರ್ಭದಲ್ಲಿ ಬಾಲಿಕೆಯರು ಸ್ವೀಕರಿಸಿದರು. ಅಲ್ಲದೇ ಸಾಂಕೇತಿಕವಾಗಿ ಬಾಲಿಕಾ ಸಂಘದ ಸಭಾ ನಡುವಳಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವುದರ ಕುರಿತಾಗಿ ಚುನಾವಣಾ ಶಾಖೆಯ ಅಧಿಕಾರಿಗಳು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು. ಕಾರ್ಯಕ್ರಮದ ಅಂಗವಾಗಿ ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಬಾಲಿಕಾ ಸಂಘದ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ದೊರೆಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಹೆಚ್. ವೀರಣ್ಣ, ಚುನಾವಣಾ ಶಾಖೆಯ ನಾಗರಾಜ, ಗುರುರಾಜ, ಮಕ್ಕಳ ರಕ್ಷಣಾ ಯೋಜನೆಯ ಸಂಯೋಜಕರಾದ ಆರ್.ಸಿ. ರಾಘವೇಂದ್ರ ಭಟ್, ಅಜಿತ್, ಮಕ್ಕಳ ರಕ್ಷಣ ಯೋಜನೆಯ ಹರೀಶ ಜೋಗಿ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು. 

Leave a Reply