ಪಾಕ್ ಧ್ವಜ ಹಾರಿಸಿದ ಆರೋಪ ಬಂಧಿತರ ಸಂಖ್ಯೆ ಏಳಕ್ಕೆ

ಸಿಂದಗಿ: ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಪಾಕ್ ಧ್ವಜ ಹಾರಿಸಿದ ಆರೋಪದ ಮೇಲೆ ಪೊಲೀಸರು ಭಾನುವಾರ ಅರುಣಕುಮಾರ ಶಶಿಧರ ವಾಘ್ಮೋರೆ (19) ಎಂಬುವನನ್ನು ಬಂಧಿಸಿದ್ದಾರೆ. ಇದರಿಂದಾಗಿ ಒಟ್ಟು ಬಂಧಿತರ ಸಂಖ್ಯೆ ಏಳಕ್ಕೇರಿದೆ.
ಈತ  ನಾಲ್ಕೈದು ದಿನಗಳಿಂದ ತಲೆಮರೆಸಿಕೊಂಡಿದ್ದ. ಆರೋಪಿಯನ್ನು ಭಾನುವಾರ ಬಂಧಿಸಿದ ಇನ್ಸ್‌ಪೆಕ್ಟರ್  ಎಂ.ಚಿದಂಬರ ಅವರು ಆತನನ್ನು ತನಿಖಾಧಿಕಾರಿ ಡಿವೈಎಸ್ಪಿ ಎಂ.ಮುತ್ತುರಾಜ್ ಅವರ ವಶಕ್ಕೆ ಒಪ್ಪಿಸಿದ್ದಾರೆ.
ಆರೋಪಿ ಗದಗ ನಗರದಲ್ಲಿರುವ ಸುಳಿವನ್ನು ಹಿಡಿದು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಅರುಣ ವಾಘ್ಮೋರೆ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಜನಿಸಿದ್ದು, ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿ ನಂತರ ಸಿಂದಗಿ ಪಟ್ಟಣದಲ್ಲಿ ಪ್ರೌಢಶಿಕ್ಷಣ, ಪಿಯುಸಿ ಕಲಿತಿದ್ದಾನೆ.
`ಈತನ ತಂದೆ ಕಳೆದ ವರ್ಷವಷ್ಟೇ ಯಕೃತ್ ತೊಂದರೆಯಿಂದ ಮೃತನಾಗಿದ್ದಾರೆ. ತಾಯಿ ಬಾಂಡೆ ಅವರು ಸಾಮಗ್ರಿಗಳನ್ನು ಮಾರುತ್ತಾರೆ. ತುಂಬಾ ಕಡು ಬಡತನದ ಈ ಕುಟುಂಬದ ಇಬ್ಬರು ಹೆಣ್ಮಕ್ಕಳ ಮದುವೆಯನ್ನು ಇಡೀ ಗೋಂದಳಿ ಸಮುದಾಯದ ಜನರು ಹಣ ಸಂಗ್ರಹಿಸಿ  ಮಾಡಿದ್ದಾರೆ. ಆದರೆ ಈ ಹುಡುಗ ಸಂಘ ದೋಷದಿಂದಾಗಿ ಇಂಥ ದೇಶದ್ರೋಹ ಕೃತ್ಯದಲ್ಲಿ ಭಾಗಿಯಾಗಿರುವುದು ಇಡೀ ಗೋಂದಳಿ ಸಮುದಾಯಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ. ಇದೊಂದು ದಿಗ್ಬ್ರಮೆಯನ್ನುಂಟು ಮಾಡುವ ಸಂಗತಿಯಾಗಿದೆ` ಎಂದು ಅರುಣಕುಮಾರನ ಮಾವ ನಾಮದೇವ ಕಾಂಬಳೆ ತಿಳಿಸಿದರು.
ಈ ಪ್ರಕರಣದಲ್ಲಿ ಈಗಾಗಲೇ ಬಂಧಿತನಾದ ಆರೋಪಿ ಪರಶುರಾಮ ವಾಘ್ಮೋರೆ ಈತನ ಅಣ್ಣ (ಚಿಕ್ಕಪ್ಪನ ಮಗ) ಎಂದು ತಿಳಿದುಬಂದಿದೆ.  -`ಪ್ರಜಾವಾಣಿ` ವಾರ್ತೆ
Please follow and like us:
error