ಆಹಾರ ಇಲಾಖೆ ಅಧಿಕಾರಿಗಳ ದಾಳಿ ೪೫೧ ಕ್ವಿಂ. ಕಡಲೆಕಾಳು ದಾಸ್ತಾನು ವಶ.

ಕೊಪ್ಪಳ ಅ. ೨೯ (ಕ ವಾ) ಕೊಪ್ಪಳ ನಗರದಲ್ಲಿನ ರಾಜ್ಯ ಉಗ್ರಾಣ ನಿಗಮದ ಗೋದಾಮಿಗೆ ಆಹಾರ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಗುರುವಾರದಂದು ದಾಳಿ ನಡೆಸಿ, ಅನಧಿಕೃತವಾಗಿ ದಾಸ್ತಾನು ಇರಿಸಿದ್ದ ೯೦೩ ಕಡಲೆಕಾಳು ಚೀಲಗಳನ್ನು (೪೫೧ ಕ್ವಿಂ) ಜಪ್ತಿ ಮಾಡಿದ್ದಾರೆ.
     ನಗರದ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಗೋದಾಮಿನಲ್ಲಿ ಅನಧಿಕೃತವಾಗಿ ಕಡಲೆಕಾಳು ದಾಸ್ತಾನು ಮಾಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬು ನೇತೃತ್ವದ ತಂಡ ಗೋದಾಮಿಗೆ ದಾಳಿ ನಡೆಸಿದರು.   ತನಿಖೆಯ ಸಂದರ್ಭದಲ್ಲಿ ಉಗ್ರಾಣ ವ್ಯವಸ್ಥಾಪಕರು ಹಾಜರಿದ್ದು, ದಾಸ್ತಾನು ಮಾಡಿರುವವರ ವಿವರವನ್ನು ಅಧಿಕಾರಿಗಳಿಗೆ ಸಲ್ಲಿಸಿದರು.  ಅದರನ್ವಯ ಮಸಬಹಂಚಿನಾಳದ ಅಂದಪ್ಪ ರಾಜೂರ- ೨೫೦ ಚೀಲಗಳು, ಸಂಗನಾಳದ ಹುಚ್ಚೀರಪ್ಪ ದಿವಟರ್- ೨೨೫, ದ್ಯಾಂಪುರದ ಉಮೇಶಪ್ಪ ಮುರಡಿ- ೨೦೦ ಹಾಗೂ ಆಡೂರಿನ ಚಂದಾಹುಸೇನ ಮಕ್ಕಪ್ಪನವರ ಅವರು ದಾಸ್ತಾನು ಇರಿಸಿದ್ದ ೨೨೮ ಚೀಲಗಳು ಸೇರಿದಂತೆ ಒಟ್ಟು ೯೦೩ ಚೀಲ ಕಡಲೆಕಾಳು ಅ. ೨೮ ರಂದು ದಾಸ್ತಾನು ಮಾಡಿರುವುದು ಕಂಡುಬಂದಿದೆ.    ಆದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಪಹಣಿ, ಉತಾರೆ, ಜಮೀನಿನ ದಾಖಲೆಗಳು ಅಥವಾ ಖರೀದಿ ಮಾ

ಡಿದ ಬಗ್ಗೆ ರಸೀದಿಗಳನ್ನಾಗಲಿ ಸಲ್ಲಿಸಿಲ್ಲ.  ಅಲ್ಲದೆ ಕಡಲೆಕಾಳು ದಾಸ್ತಾನು ವಹಿವಾಟಿನ ಬಗ್ಗೆ ಸಕ್ಷಮ ಪ್ರಾಧಿಕಾರಿಗಳಿಂದ ಲೈಸೆನ್ಸ್ ಪಡೆದಿರುವ ಬಗ್ಗೆ ದಾಖಲೆ ಹಾಜರುಪಡಿಸಿಲ್ಲ.  ಸಂಗ್ರಹಣಾ ಶುಲ್ಕ ಪಾವತಿಸುವ ಆಧಾರದ ಮೇಲೆ ದಾಸ್ತಾನು ಮಾಡಿಕೊಂಡಿದ್ದಾಗಿ ಉಗ್ರಾಣ ವ್ಯವಸ್ಥಾಪಕರು ತಿಳಿಸಿದರು.  ದಾಸ್ತಾನಿನ ಬಗ್ಗೆ ಇನ್ನಷ್ಟು ಪರಿಶೀಲಿಸಲಾಗಿ, ನಾಲ್ವರು ದಾಸ್ತಾನು ಮಾಡಿರುವುದಕ್ಕೆ ಅಧಿಕೃತವಾಗಿ ಯಾವುದೇ ದಾಖಲೆಗಳು ಅಂದರೆ, ಖರೀದಿ ಮಾಡಿರುವುದಕ್ಕೆ ರಸೀದಿ, ರೈತರು ಬೆಳೆದಿದ್ದಲ್ಲಿ ಪಹಣಿ, ಕಡಲೆಕಾಳು ವ್ಯವಹಾರಕ್ಕೆ ಲೈಸೆನ್ಸ್ ದಾಖಲೆಗಳು ಯಾವುದೂ ಇರುವುದಿಲ್ಲ.  ದಾಸ್ತಾನುದಾರರು ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಅನಧಿಕೃತವಾಗಿ ದಾಸ್ತಾನು ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ, ಕರ್ನಾಟಕ ಅಗತ್ಯ ವಸ್ತುಗಳ ಕಾಯ್ದೆಯನ್ವಯ ೯೦೩ ಕಡಲೆಕಾಳು ಚೀಲಗಳನ್ನು (೪೫೧ ಕ್ವಿಂ) ಜಪ್ತಿ ಮಾಡಲಾಗಿದ್ದು, ಸುಮಾರು ೨೦. ೩೧ ಲಕ್ಷ ರೂ. ಗಳ ಮೌಲ್ಯದ ಅಂದಾಜು ಮಾಡಲಾಗಿದೆ.  ಜಪ್ತಿ ಮಾಡಿಕೊಂಡಿರುವ ೯೦೩ ಕಡಲೆಕಾಳು ಚೀಲಗಳನ್ನು ಸದ್ಯ ಮುಂದಿನ ಆದೇಶದವರೆಗೆ ಸುರಕ್ಷಿತವಾಗಿ ಇರಿಸಿಕೊಳ್ಳುವಂತೆ ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದೆ.

Please follow and like us:
error