ಅಂಬೇಡ್ಕರ್ ಅವರ ಕನಸು ನನಸು ಮಾಡಲು ಗ್ರಾಮ ವಾಸ್ತವ್ಯ : ಜಿ.ಪಂ.ಅಧ್ಯಕ್ಷ ಟಿ.ಜನಾರ್ಧನ

ಗ್ರಾಮಗಳಲ್ಲಿನ ಅವ್ಯವಸ್ಥೆ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು, ಗ್ರಾಮಸ್ಥರ ಸಲಹೆ ಸೂಚನೆ ಪಡೆಯಲು ಹಾಗೂ ಸಂವಿಧಾನ ಶಿಲ್ಪಿ ಡಾ|| ಬಾಬಾ ಸಾಹೇಬ್ ಅಂಬೇಡ್ಕರ ಅವರ ಕನಸು ನನಸು ಮಾಡಲು ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಟಿ.ಜನಾರ್ಧನ ಹುಲಗಿ ಅವರು ಹೇಳಿದರು.

ಗಂಗಾವತಿ ತಾಲೂಕಿನ ನವಲಿ ಜಿ.ಪಂ.ಕ್ಷೇತ್ರ ವ್ಯಾಪ್ತಿಯ ಸೋಮನಾಳ ಗ್ರಾಮದ ದೇವಸ್ಥಾನದ ಆವರಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡುತ್ತ, ಮೊದಲು ನಾವುಗಳು ಆರ್ಥಿಕವಾಗಿ ಶೈಕ್ಷಣಿಕವಾಗಿ ಸಧೃಢರಾಗಿ ಮುಂದೆಬಂದು ಅಭಿವೃದ್ದಿ ಹೊಂದಬೇಕು. ಅಂದಾಗ ಮಾತ್ರ ಗ್ರಾಮದ ಅಭಿವೃದ್ದಿ ಸಾಧ್ಯವಾಗುತ್ತದೆ. ಗ್ರಾಮ ವಾಸ್ತವ್ಯದ ಮೂಲಕ ಅನೇಕ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ  ಗ್ರಾಮಸ್ಥರೆಲ್ಲರೂ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಮನವಿ ಮಾಡಿದರು. ಗ್ರಾಮಸ್ಥರು ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ೧೨೦ ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದು, ಆಯಾ ಇಲಾಖೆಯ ಅಧಿಕಾರಿಗಳ ಮೂಲಕ ಅವುಗಳಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ನಂತರ ಜಿ.ಪಂ.ಸದಸ್ಯೆ ಜ್ಯೋತಿ ನಾಗರಾಜ ಬಿಲ್ಗಾರ್ ಮಾತನಾಡಿ, ರಾಜ್ಯದಲ್ಲಿ ಈ ಹಿಂದೆ ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಮಾಡಿದ್ದರು. ಇದೀಗ ಕೊಪ್ಪಳ ಜಿ.ಪಂ.ಅಧ್ಯಕ್ಷರು ಈ ಗ್ರಾಮ ವಾಸ್ತವ್ಯ ಮಾಡಿದ್ದು, ಇಡೀ ರಾಜ್ಯಕ್ಕೆ ಕೊಪ್ಪಳ ಜಿಲ್ಲಾ ಪಂಚಾಯತಿ ಮಾದರಿಯಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ.ಉಪಾಧ್ಯಕ್ಷೆ ಅನ್ನಪೂರ್ಣಮ್ಮ ಕಂದಕೂರಪ್ಪ, ಜಿ.ಪಂ.ಸದಸ್ಯರಾದ ವಿರೇಶ ಸಾಲೋಣಿ, ಅಶೋಕ ತೋಟದ, ಅಮರೇಶ ಕುಳಗಿ, ತಾ.ಪಂ.ಸದಸ್ಯ ಸಿದ್ದಪ್ಪ, ಗ್ರಾ.ಪಂ.ಅಧ್ಯಕ್ಷೆ ಹುಲಿಗೆಮ್ಮ ಚಿದಾನಂದಪ್ಪ, ಗ್ರಾ.ಪಂ. ಪಿಡಿಓ ವೀರಣ್ಣ ನಕ್ರಳ್ಳಿ ಸೇರಿದಂತೆ ಗ್ರಾ.ಪಂ.ಸದಸ್ಯರು, ಗ್ರಾಮದ ಗುರು-ಹಿರಿಯರು ಹಾಜರಿದ್ದರು. ಗ್ರಾಮದ ಹನುಮಂತಪ್ಪ ಸಿದ್ದಪ್ಪ ಎಂಬುವವರು ಔಷದಿ ಯಂತ್ರ ಬೇಕೆಂದು ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂಧಿಸಿದ ಜಿ.ಪಂ.ಅಧ್ಯಕ್ಷ ಟಿ.ಜನಾರ್ಧನ ಅವರು ಸ್ಥಳದಲ್ಲಿಯೇ ವಿತರಿಸಿದರು.
ನಂತರ ಸೋಮನಾಳ ಗ್ರಾಮದ ೨ನೇ ವಾರ್ಡ್‌ನ ಡಾ|| ಅಂಬೇಡ್ಕರ್ ನಗರದಲ್ಲಿನ ಯಂಕಪ್ಪ ಹುಸೇನಪ್ಪ ವೀರಾಪುರ ಅವರ ಗುಡಿಸಲಿನಲ್ಲಿ ವಾಸ್ತವ್ಯವಾಗಿದ್ದರು. ಜಿ.ಪಂ.ಅಧ್ಯಕ್ಷರು ಗ್ರಾಮ ವಾಸ್ತವ್ಯ ಹೂಡಿರುವ ಹಿನ್ನಲೆಯಲ್ಲಿ ಗ್ರಾಮದಲ್ಲಿ ಮೊರಂ ಹಾಕುವುದು, ಸಮತಟ್ಟು ಮಾಡುವುದಲ್ಲದೇ ಗ್ರಾಮದಲ್ಲಿನ ಚರಂಡಿ, ಕುಡಿಯುವ ನೀರಿನ ತೊಟ್ಟಿಯನ್ನು ಸ್ವಚ್ಛಗೊಳಿಸಿ, ಬ್ಲಿಚಿಂಗ್ ಫೌಡರ್ ಸಿಂಪಡಿಸಲಾಗಿತ್ತು. ಆವರಣದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿ, ನಳದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಮನೆಯ ಪಕ್ಕದಲ್ಲಿಯೇ ಸಾರ್ವಜನಿಕರ ಕುಂದು ಕೊರತೆಗಳ ದೂರುಗಳನ್ನು ಸ್ವೀಕರಿಸಿದರು. ಇದಕ್ಕೂ ಮೊದಲು ಅಧ್ಯಕ್ಷರು ಗ್ರಾಮದ ವಿವಿಧೆಡೆ ಸಂಚರಿಸಿ ವೀಕ್ಷಣೆ ಮಾಡಿದರಲ್ಲದೇ, ಸಾರ್ವಜನಿಕರ ಕುಂದುಕೊರತೆ ಆಲಿಸಿ, ಕೆಲವುಗಳಿಗೆ ಸ್ಥಳದಲ್ಲಿಯೇ ಪರಿಹಾರ, ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸೂಚಿಸಿದರು. 

Leave a Reply