ಯುವಕರು ದುಶ್ಚಟಗಳಿಗೆ ಬಲಿಯಾಗಬೇಡಿ- ಮುದೇಗೌಡ ಮಾಲಿ ಪಾಟೀಲ್

 ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗಿತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ.  ಯುವಕರು ಆರೋಗ್ಯವಂತರಾಗಿ ಸದೃಢರಾಗಲು ಕ್ರೀಡೆಗಳು ಅತ್ಯಂತ ಅವಶ್ಯವಾಗಿದೆ ಎಂದು ಕೊಪ್ಪಳ ತಾ.ಪಂ. ಅಧ್ಯಕ್ಷ ಮುದೇಗೌಡ ಮಾಲಿಪಾಟೀಲ್ ಅವರು ಅಭಿಪ್ರಾಯಪಟ್ಟರು.

  ಜಿಲ್ಲಾಡಳಿತ, ಜಿ.ಪಂ. ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಪೈಕಾ (ಗ್ರಾಮೀಣ) ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಯುವಜನತೆ ಈ ದೇಶದ ಆಸ್ತಿಯಾಗಿದ್ದು, ಯುವಕರು ದುಶ್ಚಟಗಳಿಗೆ ದಾಸರಾಗಿ, ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.  ಸದೃಢ ಆರೋಗ್ಯವಂತರಾಗಲು, ಶಿಕ್ಷಣದ ಜೊತೆ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲೂ ಸಕ್ರಿಯರಾಗಿ ಪಾಲ್ಗೊಳ್ಳುವುದು ಅಗತ್ಯವಾಗಿದೆ.  ಕ್ರೀಡಾ ಕ್ಷೇತ್ರದಲ್ಲಿ ಕೊಪ್ಪಳ ಜಿಲ್ಲೆ ಉತ್ತಮ ಸಾಧನೆಯನ್ನು ತೋರುತ್ತಿದ್ದು, ಅದರಲ್ಲೂ ಗ್ರಾಮೀಣ ಯುವಕರು, ಶಾಲಾ, ಕಾಲೇಜು ಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಮಿಂಚುತ್ತಿರುವುದು ಸಮಾಧಾನಕರ ತಂದಿದೆ.  ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಆಟವಾಡಬೇಕು, ಗೆಲುವೊಂದೇ ಮುಖ್ಯವಲ್ಲ, ಭಾಗವಹಿಸುವಿಕೆ ಅತಿ ಮುಖ್ಯ.  ಸೋಲೇ ಗೆಲುವಿನ ಮೆಟ್ಟಿಲು ಎಂವುದನ್ನು ವಿದ್ಯಾರ್ಥಿಗಳು ಮರೆಯಬಾರದು ಎಂದು ತಾ.ಪಂ. ಅಧ್ಯಕ್ಷ ಮುದೇಗೌಡ ಮಾಲಿಪಾಟೀಲ್ ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.
  ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವೈ. ಸುದರ್ಶನರಾವ್ ಅವರು ಮಾತನಾಡಿ, ಸರ್ಕಾರ, ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ವಿವಿಧ ಸವಲತ್ತುಗಳನ್ನು ಒದಗಿಸುತ್ತಿದೆ.  ಜಿಲ್ಲಾ ಕ್ರೀಡಾಂಗಣವೂ ಸಹ ಉತ್ತಮ ಸಾಧನ, ಸಲಕರಣೆಗಳೊಂದಿಗೆ ಸುಸಜ್ಜಿತವಾಗಿ ಅಭಿವೃದ್ಧಿಯಾಗುತ್ತಿದ್ದು, ಕ್ರೀಡಾಪಟುಗಳು ಇದರ ಸದುಪಯೋಗ ಪಡೆದುಕೊಂಡು, ಉತ್ತಮ ಕ್ರೀಡಾಪಟುಗಳಾಗಿ, ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತರಬೇಕು ಎಂದು ಮನವಿ ಮಾಡಿದರು.
  ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರ ಸಂಘದ ಪ್ರಭುಸ್ವಾಮಿ ಹಿರೇಮಠ, ಹೆಚ್. ಮುರ್ತುಜಾಸಾಬ್, ಯುವಜನ ಸೇವಾ, ಕ್ರೀಡಾ ಇಲಾಖೆ ಅಧೀಕ್ಷಕ ರಾಮಕೃಷ್ಣಯ್ಯ, ಸಹಾಯಕ ಕ್ರೀಡಾಧಿಕಾರಿಗಳಾದ ತಿಪ್ಪೇಸ್ವಾಮಿ ಹಿರೇಮಠ, ಎಂ.ಎಸ್. ಪಾಟೀಲ್, ಹನುಮಂತಪ್ಪ, ಮಲ್ಲಿಕಾರ್ಜುನ ಮತ್ತು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಜುನಾಥ ಗೊಂಡಬಾಳ ಮುಂತಾದವರು ಭಾಗವಹಿಸಿದ್ದರು.
Please follow and like us:
error