ಖಾಸಗಿ ಶಾಲೆಗಳನ್ನು ರಕ್ಷಿಸುತ್ತಿರುವ ಜಿಲ್ಲಾಧಿಕಾರಿಗಳು ; ಎಸ್.ಎಫ್.ಐ ಆರೋಪ

ಜಿಲ್ಲೆಯಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ವ್ಯಾಪಕವಾಗಿ ಹಣ ಲೂಟಿ ಮಾಡುತ್ತಿರುವುದು ತನಿಖೆಯಿಂದ ಸಾಬೀತಾಗಿದ್ದರು ಕ್ರಮ ಜರುಗಿಸುವಲ್ಲಿ ಜಿಲ್ಲಾಧಿಕಾರಿಗಳು ವಿಫಲರಾಗಿದ್ದಾರೆ. ಸ್ವತ: ಅವರೇ ಖಾಸಗಿ ಶಿಕ್ಷಣ ಸಂಸ್ಥೆಗಳ ರಕ್ಷಕರಂತೆ ವರ್ತಿಸುತ್ತಿದ್ದಾರೆ ಎಂದು ಎಸ್.ಎಫ್.ಐ ರಾಜ್ಯಕಾರ್ಯದರ್ಶಿ ಗುರುರಾಜ್ ದೇಸಾಯಿ ಆರೋಪಿಸಿದರು.
ನಗರದಲ್ಲಿಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು ಮುಂದುವರಿದು,  ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿರುವ ಡೊನೇಷನ್ ಹಾವಳಿ ವಿರೋಧಿ ಸಮಿತಿಯು ನಿಯಮ ಉಲ್ಲಂಘಿಸಿರುವ ಖಾಸಗಿ ಶಾಲೆಗಳ ಮೇಲೆ ಇಲ್ಲಿಯವರೆಗೆ ಕ್ರಮ ಜರುಗಿಸುವ ಪ್ರಯತ್ನ ನಡೆಸಿಲ್ಲ. ಶಿಕ್ಷಣ ಹಕ್ಕು ಕಾಯ್ದೆ ಸೆಕ್ಷನ್ ೦೩ ರ ಪ್ರಕಾರ ಮಕ್ಕಳಿಗೆ ದಾಖಲಾತಿ ಸಂಧರ್ಭದಲ್ಲಿ ಪ್ರವೇಶ ಪರೀಕ್ಷೆಗಳನ್ನು ಯಾವುದೇ ಕಾರಣಕ್ಕೂ ನಡೆಸಬಾರದು ಎಂದು ಹೇಳಿದೆ ಆದರೆ ಎಸ್,ಎಫ್,ಎಸ್ ಮತ್ತು ಟ್ರಿನಿಟಿ ಪಬ್ಲಿಕ್ ಶಾಲೆಗಳು ಪರೀಕ್ಷೆಗಳನ್ನು ನಡೆಸಿರುವುದು ತನಿಖೆಯಿಂದ ಸಾಬೀತಾಗಿದೆ. ಇದರಂತಯೇ ಅನೇಕ ಶಾಲೆಗಳು ಪರೀಕ್ಷೆ ನಡೆಸಿಯೇ ಪ್ರವೇಶಾತಿಗೆ ಅನುಮತಿ ನೀಡುತ್ತಿವೆ. ಸೆಕ್ಷನ್ ೧೩ ರಪ್ರಕಾರ ಸರಕಾರ ನಿಗದಿ ಪಡಿಸಿದ ಶುಲ್ಕಕ್ಕಿಂತ ಹೆಚ್ಚುವರಿ ಶುಲ್ಕ ಪಡೆಯಬಾರದು ಎಂದು ಹೇಳಲಾಗಿದೆ ಆದರೆ ಅನೇಕ ಶಾಲೆಗಳು ಈ ನಿಯಮವನ್ನು ಉಲ್ಲಂಘಿಸುತ್ತಿವೆ. ಟ್ರಿನಿಟಿ ಪಬ್ಲಿಕ್ ಶಾಲೆ ೫,೮೦,೨೮೨ ರೂ, ಪ್ರಾಥಮಿಕ ಶಾಲೆಗೆ, ೫.೧೨.೭೭೧ ರೂ ಪ್ರೌಢ ಶಾಲೆಗೆ ಹೆಚ್ಚುವರಿ ಹಣ ಪಡಿದಿದೆ. ನಮ್ಮ ಹೋರಾಟದ ಭಾಗವಾಗಿ ತನಿಖೆ ನಡೆದು ವಿದ್ಯಾರ್ಥಿಗಳಿಗೆ ಅದನ್ನು ವಾಪಸ್ಸಕೊಡಬೇಕು ಎಂದು ಆದೇಶವಾದಗಲೂ ಆ ಶಿಕ್ಷಣ ಸಂಸ್ಥೆಯವರು ಹಣ ನೀಡಿಲ್ಲ. ಜಿಲ್ಲಾಧಿಕಾರಿಗಳನ್ನು ಕೇಳಿದರೆ ಮತ್ತೆ ತನಿಖೆ ಆದೇಶ ನೀಡುವ ಮೂಲಕ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸೆಕ್ಷನ್ ೭ ರ ಪ್ರಕಾರ ಖಾಸಗಿ ಶಾಲೆಗಳು ಶಾಲೆಯಲ್ಲಿ ಸಮವಸ್ತ್ರ, ಪಠ್ಯಪುಸ್ತಕ, ಷೂ, ಸಾಕ್ಸ್, ಟೈ, ಬೆಲ್ಟ್ ಮಾರಾಟ ಮಾಡುವುದು ಅಪರಾದ ಎಂದು ಹೇಳಿದೆ ಆದರೆ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳು ಕಾಯ್ದೆಯನ್ನು ಉಲ್ಲಂಘಿಸುತ್ತಿವೆ. ಗಂಗಾವತಿ ಚೈತನ್ಯ ಖಾಸಗಿ ಶಿಕ್ಷಣ ಸಂಸ್ಥೆ. ಕೊಪ್ಪಳದ ಎನ್.ಕೆ.ಪಿ.ಎಮ್. ಆಕ್ಸ್‌ರ್ಫಡ್ ಖಾಸಗಿ ಶಾಲೆಗಳು ಇದನ್ನು ದಂಧೆಯನ್ನಾಗಿ ಮಾಡಿಕೊಂಡಿವೆ. ಕ್ರಮ ಜರುಗಿಸಬೇಕಾದ  ಡೊನೆಷನ್ ಹಾವಳಿ ವಿರೋಧಿ ಸಮಿತಿ ಮೌನ ವಹಿಸಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದರು. ಜಿಲ್ಲೆಯಲ್ಲಿರುವ ಅನಧಿಕೃತ ಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ, ಕಲಿಕಾ ಮಾಧ್ಯಮದಲ್ಲಿ ಪಾಲಕರನ್ನು ದಿಕ್ಕು ತಪ್ಪಿಸುತ್ತಿರುವ ಖಾಸಗಿ ಶಾಲೆಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿದರು. ಮಾತೃ ಭಾಷೆಯಲ್ಲಿಯೇ ಶಿಕ್ಷಣ ಸಿಗಬೇಕಾದರೆ ಸಂವಿಧಾನ ತಿದ್ದುಪಡಿಯಾಗಬೇಕು ಅದಕ್ಕಾಗಿ ರಾಜ್ಯ ಸರಕಾರ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದರು.
ಪೋಲಿಸ್ ನಿಯಮ ಜಾರಿಯಾಗಿಲ್ಲ : ಜಿಲ್ಲಾಧ್ಯಕ್ಷ ಅಮರೇಶ್ ಕಡಗದ್ ಮಾತನಾಡಿ ಪೋಲಿಸ್ ನಿಯಮದಂತೆ ಎಲ್ಲಾ ಶಾಲೆಗಳು ಸಿ.ಸಿ.ಕ್ಯಾಮರಾ ಅಳವಡಿಸಬೇಕು, ಮುಖ್ಯೋಪಾಧ್ಯಾಯರ ಅಧ್ಯಕ್ಷತೆಯಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿ ರಚನೆ ಮಾಡಬೇಕು. ಸಲಹಾ ಕೇಂದ್ರಗಳನ್ನು ತೆರೆಯಬೇಕು ಎಂದು ಹೇಳಿದೆ. ಆದರೆ ಯಾವುದೆ ಖಾಸಗಿ ಶಿಕ್ಷಣ ಸಂಸ್ಥೆಗಳು ಜಾರಿ ಮಾಡಿಲ್ಲ. ನಿಯಮ ಉಲ್ಲಂಘಿಸುತ್ತಿರುವ ಖಾಸಗಿ ಶಾಲೆಗಳ ಹಾಗೂ  ಜಿಲ್ಲೆಯಲ್ಲಿ ನವೀಕರಣ ಗೊಳ್ಳದ ೧೫೧  ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮ ಜರುಗಿಸಬೇಕು ಎಂದರು.  ಜಿಲ್ಲಾಕಾರ್ಯದರ್ಶಿ ಬಾಳಪ್ಪ ಹುಲಿಹೈದರ್ ಉಪಸ್ತಿತರಿದ್ದರು.       

Leave a Reply