ಬಳ್ಳಾರಿ ಗ್ರಾಮಾಂತರ ಚುನಾವಣೆ ಕದನ

ಬಳ್ಳಾರಿ, ನ. : ಬಳ್ಳಾರಿ ಗ್ರಾಮಾಂತರ ಚುನಾವಣೆ ಕದನ ರಂಗೇರಿದ್ದು, ಇಂದು ರಾಜಕೀಯ ನಾಯಕರ ದಂಡೇ ತಮ್ಮ ಅಭ್ಯರ್ಥಿಗಳ ಪರವಾಗಿ ಮತ ಯಾಚನೆ ನಡೆಸಿದೆ. ಬಿಜೆಪಿಯಿಂದ ಹೊರ ಬಂದು ಪಕ್ಷೇತರರಾಗಿ ಕಣಕ್ಕಿಳಿದಿರುವ ಶ್ರೀರಾಮುಲು ಪರವಾಗಿ ಇಂದು ಕೆಎಂಎಫ್ ಅಧ್ಯಕ್ಷ, ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಮತ ಯಾಚಿಸಿದ್ದು ವಿಶೇಷವಾಗಿತ್ತು. ಬಿಜೆಪಿ ಅಭ್ಯರ್ಥಿ ಗಾದಿ ಲಿಂಗಪ್ಪನವರ ಪರವಾಗಿ ಸಚಿವರ ದಂಡೇ ಇಂದು ಮತ ಯಾಚಿಸಿದೆ. ಜೊತೆಗೆ ಕಾಂಗ್ರೆಸ್ ಅಭ್ಯರ್ಥಿ ರಾಮ್‌ಪ್ರಸಾದ್ ಪರವಾಗಿ ಕಾಂಗ್ರೆಸ್ ನಾಯಕರು ಮತ ಯಾಚಿಸಿದರು.
ಬಿಜೆಪಿ ಅಭ್ಯರ್ಥಿ ಗಾದಿ ಲಿಂಗಪ್ಪನವರ ಪರವಾಗಿ ಸಚಿವರಾದ ಸುರೇಶ್ ಕುಮಾರ್, ರಾಮ್‌ದಾಸ್, ಶೋಭಾ ಕರಂದ್ಲಾಜೆ, ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಇಂದು ಮತ ಯಾಚಿಸಿದರು. ವಿವಿಧ ಕಡೆಗಳಿಗೆ ತೆರಳಿ ಅವರು ಪ್ರಚಾರ ನಡೆಸಿದರು. ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು ಪರವಾಗಿ ಸೋಮಶೇಖರ ರೆಡ್ಡಿ, ಸಂಸದೆ ಜೆ.ಶಾಂತಾ ಹಾಗೂ ಸುರೇಶ್ ಕುಮಾರ್ ಇಂದು ಮತ ಯಾಚಿಸಿದರು. ಗ್ರಾಮಾಂತರ ಕ್ಷೇತ್ರದ ವಿವಿಧ ಕಡೆ ತೆರಳಿದ ಸೋಮಶೇಖರ ರೆಡ್ಡಿ ಮತ್ತಿತರರು ತಮ್ಮ ಕೈಯಲ್ಲಿ ಫ್ಯಾನನ್ನು ಹಿಡಿದುಕೊಂಡು ಮತ ಯಾಚಿಸಿದರು. ಕಾಂಗ್ರೆಸ್ ಕೂಡಾ ಪ್ರಚಾರದಲ್ಲಿ ಹಿಂದೆಬಿದ್ದಿಲ್ಲ. ಕಾಂಗ್ರೆಸ್ ನಾಯಕರಾದ ಕೆ.ಸಿ.ಕೊಂಡಯ್ಯ, ಅನಿಲ್ ಲಾಡ್, ಅಲ್ಲಂ ವೀರಭದ್ರಪ್ಪ ಸೇರಿದಂತೆ ಹಲವರು ಇಂದು ರಾಮ್‌ಪ್ರಸಾದ್ ಪರ ಮತ ಬೇಟೆ ನಡೆಸಿದರು.
ಪ್ರಚಾರದ ಅಬ್ಬರದ ಮಧ್ಯೆ ಇಂದು ಶ್ರೀರಾಮುಲು ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಾಮ್‌ಪ್ರಸಾದ್ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. 16 ಲಕ್ಷ ರೂ.ಯಿಂದ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬ ಶ್ರೀರಾಮುಲು ಹೇಳಿಕೆ ಹಾಗೂ ತಮ್ಮ ಬೆಂಬಲಿಗರಿಗೆ ಟೀ ಶರ್ಟ್ ಹಂಚಿರುವುದಕ್ಕೆ ಚುನಾವಣಾ ಆಯೋಗಕ್ಕೆ ಬಿಜೆಪಿ ನಾಯಕರಾದ ವಿಜಯಕುಮಾರ್, ಅಶ್ವಥ್‌ನಾರಾಯಣ ದೂರು ನೀಡಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿ ರಾಮ್‌ಪ್ರಸಾದ್‌ಅನುಮತಿಗಿಂತಲೂ ಹೆಚ್ಚು ವಾಹನ ಬಳಸಿಕೊಂಡು ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ
Please follow and like us:
error

Related posts

Leave a Comment