ಸರ್ಕಾರಿ ನೌಕರರ ಧರಣಿ ಮುಂದೂಡಿಕೆ- ಶಂಭುಲಿಂಗನಗೌಡ

  ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯ ವರದಿಯನ್ನು ಬಜೆಟ್‌ಗೂ ಮುನ್ನ ಸರ್ಕಾರಕ್ಕೆ ಸಲ್ಲಿಸುವಂತೆ ಒತ್ತಾಯಿಸಿ, ಮಾ. ೧೫ ರಂದು ಸರ್ಕಾರಿ ನೌಕರರ ಸಂಘದ ಜಿಲ್ಲಾ ಮತ್ತು ತಾಲೂಕು ಘಟಕಗಳಿಂದ ನಡೆಸಲು ಉದ್ದೇಶಿಸಲಾಗಿದ್ದ ಸಾಂಕೇತಿಕ ಧರಣಿಯನ್ನು ಸಂಘದ ರಾಜ್ಯಾಧ್ಯಕ್ಷರ ಸೂಚನೆಯಂತೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ ಅವರು ತಿಳಿಸಿದ್ದಾರೆ.
  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೇಂದ್ರ ಹಾಗೂ ಜಿಲ್ಲಾ ಘಟಕದ ನಿರ್ಧಾರದಂತೆ ವೇತನ ಪರಿಷ್ಕರಣಾ ಸಮಿತಿಯು ತನ್ನ ವರದಿಯನ್ನು ಬಜೆಟ್‌ಗೂ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಒತ್ತಾಯಿಸಲು, ಮಾ. ೧೫ ರಂದು ಒಂದು ದಿನದ ಸಾಂಕೇತಿಕ ಧರಣಿ ನಡೆಸಲು ತೀರ್ಮಾನಿಸಲಾಗಿತ್ತು.  ಆದರೆ ಸುಬೀರ್ ಹರಿಸಿಂಗ್ ನೇತೃತ್ವದ ವೇತನ ಪರಿಷ್ಕರಣಾ ಸಮಿತಿಯು ವರದಿಯನ್ನು ಮಾ. ೧೨ ರಂದು ಸರ್ಕಾರಕ್ಕೆ ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ಮಾ. ೧೫ ರ ಸಾಂಕೇತಿಕ ಧರಣಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.  ಆದರೆ ಸಮಿತಿ ಸಲ್ಲಿಸಿರುವ ವರದಿಯ ಶಿಪಾರಸ್ಸುಗಳನ್ನು ಪ್ರಸಕ್ತ ಬಜೆಟ್ ಮಂಡನೆ ಸಮಯದಲ್ಲೆ ಸರ್ಕಾರ ಜಾರಿಗೆ ತರಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಒತ್ತಾಯಿಸುತ್ತದೆ.  ಸಾಂಕೇತಿಕ ಧರಣಿ ಕೈಗೊಳ್ಳಲು ಬೆಂಬಲ ಸೂಚಿಸಿದ್ದ, ರಾಜ್ಯ ಸರ್ಕಾರಿ ನೌಕರರ ವಿವಿಧ ವೃಂದಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸಮಸ್ತ ಸರ್ಕಾರಿ ನೌಕರರಿಗೆ ಜಿಲ್ಲಾ ಘಟಕದ ಅಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ, ಪ್ರಧಾನ ಕಾರ್ಯದರ್ಶಿ ನಾಗರಾಜ್ ಜುಮ್ಮನ್ನವರ್ ಸೇರಿದಂತೆ ಎಲ್ಲ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Related posts

Leave a Comment