ರಂಗ ಕಲೆ ಉಳಿಸಿ ಬೆಳೆಸಿ ಪ್ರೋತ್ಸಾಹಿಸಲು ಕರೆ

ಕೊಪ್ಪಳ,ಮಾ.೧೫: ಇಂದಿನ ಆಧುನಿಕ ಯುಗದಲ್ಲಿ ದೃಶ್ಯ ಮಾಧ್ಯಮದ ಹಾವಳಿಯಿಂದ ನಮ್ಮ ಹಳೆಯ ಪರಂಪರೆ ಪ್ರತಿಬಿಂಬಿಸುವಂತಹ ರಂಗ ಕಲೆ ನಶಿಸಿ ಹೊಗುತ್ತಿರುವುದು ವಿಷಾದದ ಸಂಗತಿಯಾಗಿದ್ದು ನಮ್ಮ ಹಳೆಯ ಸಂಸ್ಕೃತಿ ಪರಂಪರೆ ಜೀವಂತವಾಗಿ ಉಳಿಸಲು ರಂಗಭೂಮಿಯ ಕಲೆಗೆ ಪ್ರೋತ್ಸಾಹಿಸುವುದು ಅಗತ್ಯವಾಗಿದ್ದು, ಇದನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸುವ ಜವಾಬ್ದಾರಿ ನಮ್ಮ ನಾಡಿನ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂದು ಸೈಯ್ಯದ್ ಪೌಂಡೇಶನ್ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಸೈಯ್ಯದ್ ಹೇಳಿದರು.
ಅವರು ತಾಲೂಕಿನ ಬಹದ್ದೂರಬಂಡಿ ಗ್ರಾಮದಲ್ಲಿ ಯಮನೂರವಲಿ ಉರುಸ್ (ಶ್ರೀ ರಾಜಾಬಾಗಸವಾರ್) ಹಾಗೂ ಶ್ರೀ ಗಂಗಾಧರೇಶ್ವರ ದೇವಸ್ಥಾನದ ಸಾಮೂಹಿಕ ವಿವಾಹ ಕಾರ್ಯಕ್ರಮದ ನಿಮಿತ್ಯ ಶ್ರೀ ಮಾರುತೇಶ್ವರ ತರುಣ ನಾಟ್ಯ ಸಂಘ ಏರ್ಪಡಿಸಿದ ಸೇಡಿಗಾಗಿ ಸಿಡಿದೆದ್ದ ಶಿವನಾಗ ಎಂಬ ಸಾಮಾಜಿಕ ನಾಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು, ಜೀವನ ಒಂದು ನಾಟ್ಯ ರಂಗವಾಗಿದ್ದು, ಮನುಷ್ಯ ಪಾತ್ರದಾರಿಯಾದರೆ ಆ ಪರಮಾತ್ಮ ಸೂತ್ರದಾರಿಯಾಗಿದ್ದು ಪ್ರತಿಯೊಬ್ಬ ಮನುಷ್ಯ ಜೀವನದಲ್ಲಿ ಒಂದಲ್ಲ ಒಂದು ನಾಟ್ಯ ನಟಿಸುತ್ತಲೇ ಇರುತ್ತಾನೆ. ಇಂತಹ ರಂಗ ಭೂಮಿಯ ನಾಟಕದಲ್ಲಿ ಬರುವಂತಹ ಒಳ್ಳೆಯ ಸನ್ನಿವೇಶವನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಒಳ್ಳೆಯ ಸಂದೇಶ ರವಾನೆಯಾಗುತ್ತದೆ. ಅದರಿಂದ ಶಾಂತಿ, ನೆಮ್ಮದಿ ಸಿಗುತ್ತದೆ. ಹೀಗಾಗಿ ಪ್ರತಿಯೊಬ್ಬ ಮನುಷ್ಯ ರಂಗ ಭೂಮಿ ಕಲೆಯನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸಿ ತಮ್ಮ ಜೀವನವನ್ನು ಶಾಂತಿಯ ಬದುಕಿನೊಂದಿಗೆ ಸಾಗಿಸಲು ಅನಕೂಲವಾಗುತ್ತದೆ ಎಂದು ಕೆ.ಎಂ.ಸೈಯ್ಯದ ಅಭಿಪ್ರಾಯ ಪಟ್ಟರು.
ಸಮಾರಂಭದಲ್ಲಿ ಬಹದ್ದೂರ ಬಂಡಿ ಗ್ರಾ.ಪಂ.ಅಧ್ಯಕ್ಷ ನಿಂಗಪ್ಪ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಚಾಂದಪಾಷಾ ಕಿಲ್ಲೇದಾರ, ಸೈಯ್ಯದ್ ಸಾಬ ಕಿಲ್ಲೇದಾರ, ಖಾಜಾ ಹುಸೇನ್ ದೇವಡಿ, ವಿರುಪಾಕ್ಷಪ್ಪ ಬಹದ್ದೂರ ಬಂಡಿ, ಮಾರ್ತಂಡಪ್ಪ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಾಧಿಕ್ ಅಲಿ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು. ನಂತರ ಸೇಡಿಗಾಗಿ ಸಿಡಿದೆದ್ದ ಶಿವನಾಗ ಅರ್ಥಾತ್ ಕಣ್ಣಿರಿನ ಕಡಲು ಎಂಬ ಸಾಮಾಜಿಕ ನಾಟಕ ಯಶಸ್ವಿಯಾಗಿ ಜರುಗಿತು. ದೇವೆಂದ್ರಪ್ಪ ಮಾಸ್ತಾರ ಬಂಡಲಗಿರಿ, ಬಾಬುಸಾಬ ಹಿರೇಮಸೂತಿ, ವಿರೇಶ ಮಂಗಳೂರು, ವಿರೇಶ ಕಲ್ಮಠ ಗಂಗಾವತಿ, ನಟರಾಜ ಗದಗ, ಗವೀಶ ಬಸಾಪಟ್ಟಣ, ಕಬಲಾ ಹುಸೇನ ಕಿಲ್ಲೇದಾರ ಮತ್ತೀತರರ ನೇತೃತ್ವ ಮತ್ತು ಮೌಲಾಹುಸೇನ್ ದೇವಡಿಯವರ ನಿರ್ದೇಶನದಲ್ಲಿ ಯಶಸ್ವಿಯಾಗಿ ನಾಟಕ ಪ್ರದರ್ಶನಗೊಂಡಿತು.

Leave a Reply