ಸಂಗೀತದಿಂದ ಮನಶಾಂತಿ ಸಿಗಲಿದೆ : ಬಬಲಾದಿ

ನಮ್ಮ ಭಾರತ ದೇಶದ ಪರಂಪರೆಯಲ್ಲಿ ಸಾಹಿತ್ಯ ಮತ್ತು ಸಂಗೀತಕ್ಕೆ ಬಹಳಷ್ಟು ಮಹತ್ವವಿದೆ. ಮಧುರವಾದ ಸಂಗೀತ ಕೇಳುಗರಿಗೆ ಮನಸ್ಸಿಗೆ ಶಾಂತಿ, ನೆಮ್ಮದಿ ಕೊಡುತ್ತದೆ. ಮನಶಾಂತಿಗಾಗಿ ಸಂಗೀತ ಅತ್ಯಂತ ಸಹಕಾರಿಯಾಗಿದೆ ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಶ್ರೀಕಾಂತ ಬಬಲಾದಿ ಅಭಿಪ್ರಾಯ ಪಟ್ಟರು.

ಅವರು ನಗರದ ಶ್ರೀ ರಾಘವೇಂದ್ರ ಸ್ವಾಮಿಗಳವರ ಕಲ್ಯಾಣ ಮಂಟಪದಲ್ಲಿ ಶ್ರೀ ಶಾರದಾ ಸಂಗೀತ ಮತ್ತು ಕಲಾ ಶಿಕ್ಷಣ ಸಂಸ್ಥೆ ಕಿನ್ನಾಳ, ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಕೊಪ್ಪಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ೭ನೇ ವರ್ಷದ ಸಂಗೀತ ಮಹೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು, ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿ ಕೊಪ್ಪಳ ಭಾಗದ ಕೊಡುಗೆ ಕೂಡ ಅಪಾರವಾಗಿದೆ. ಇಲ್ಲಿನ ಸಂಗೀತ ದಿಗ್ಗಜ ದಿ|| ಹನುಮಂತರಾವ್ ಬಂಡಿಯವರು ಸಂಗೀತ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದು, ಅವರು ಹಾಕಿಕೊಟ್ಟು ಹಾದಿಯಲ್ಲಿ ಅವರ ಶಿಷ್ಯರ ಬಳಗ ಅದನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯವಾಗಿದೆ. ಈ ದಿಸೆಯಲ್ಲಿ ಲಚ್ಚಣ್ಣ ಹಳೇಪೆಟೆ ಬಳಗದ ಸ್ನೇಹಿತರು ಆಯೋಜಿಸಿರುವ ಈ ಅಹೋರಾತ್ರಿ ಸಂಗೀತ ಕಾರ್ಯಕ್ರಮ ಇಲ್ಲಿನ ಸಂಗೀತ ಆಸಕ್ತರಿಗೆ ಹಬ್ಬದ ಊಟ ಉಣಿಸಿದಂತಾಗಿದೆ ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಶ್ರೀಕಾಂತ ಬಬಲಾದಿಯವರು ಬಣ್ಣಿಸಿದರು.
ಸಮಾರಂಭದ ಸಾನಿಧ್ಯ ವಹಿಸಿದ ಕೊಪ್ಪಳದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಚೈತನ್ಯಾನಂದ ಸ್ವಾಮಿಗಳು ಆಶೀರ್ವಚನ ನೀಡುತ್ತ ಮಾತನಾಡಿದ ಅವರು, ಪ್ರತಿಯೊಬ್ಬ ಮನುಷ್ಯನ ಜೀವನಕ್ಕೊಂದು ಅಲಂಕಾರ ಕೊಡುವ ಶಕ್ತಿ ಸಂಗೀತ ಮತ್ತು ಸಾಹಿತ್ಯಕ್ಕಿದೆ. ವ್ಯಕ್ತಿಯನ್ನು ಮಹಾತ್ಮರನ್ನಾಗಿ ಮಾಡುವ ಶಕ್ತಿ ಕೂಡ ಇದಕ್ಕಿದೆ. ಮನುಷ್ಯನಿಗೆ ಇಷ್ಟವಾದಂತಹ ಊಟ ಮತ್ತು ಮಧುರ ಸಂಗೀತದಿಂದ ಸಮಸ್ಯೆಗಳ ಪರಿಹಾರವಾದಂತಾಗುತ್ತದೆ. ಮನಶಾಂತಿ ಸಿಗಲಿದ್ದು, ಅದ್ಭುತವಾದ ವೈಜ್ಞಾನಿಕ ಶಕ್ತಿ ಸಂಗೀತಕ್ಕಿದೆ. ಪ್ರಕೃತಿಗೆ ಮತ್ತು ಭಕ್ತಿಗೆ ಸಂಗೀತ ಅವಶ್ಯ. ಮನುಷ್ಯನ ನೆಮ್ಮದಿಗೆ ಕೂಡ ಸಂಗೀತ ಸಹಕಾರಿಯಾಗಿದೆ ಎಂದು ಆಶೀರ್ವಚನದಲ್ಲಿ ಶ್ರೀ ಚೈತನ್ಯಾನಂದ ಸ್ವಾಮಿಗಳು ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ನ್ಯಾಯವಾದಿ ಆರ್.ಬಿ.ಪಾನಗಂಟಿ ವಹಿಸಿ ಅಧ್ಯಕ್ಷತೆ ಭಾಷಣ ಮಾಡಿದರು. ಹಿರಿಯ ಸಾಹಿತಿ ಡಾ|| ವಿ.ಬಿ.ರಡ್ಡೇರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಇಂದಿನ ಸಂದರ್ಭದಲ್ಲಿ ಕೆಟ್ಟುಹೋದ ಸಿನಿಮಾ ಸಂಗೀತದ ಜಗತ್ತಿನಲ್ಲಿ ಅಪ್ಪಟ ಸಂಗೀಟ ಉಳಿಸಿಕೊಂಡು ಹೋಗುವ ಅಗತ್ಯವಿದೆ. ಈ ದಿಸೆಯಲ್ಲಿ ಲಚ್ಚಣ್ಣ ಹಳೇಪೆಟೆ ಸ್ನೇಹಿತರ ಬಳಗ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯಾಗಿದೆ ಎಂದರು.
ವೇದಿಕೆಯ ಮೇಲೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ, ಖಜಾನೆ ಇಲಾಖೆಯ ನೌಕರ ಗಂಗಾಧರ ಅರಳಿಕಟ್ಟಿ ಕಿನ್ನಾಳ, ರಂಗಭೂಮಿ ಕಲಾವಿದ ಭರಮಪ್ಪ ಜುಟ್ಲದ್, ಹಿರಿಯ ನ್ಯಾಯವಾದಿ ವಿ.ಎಂ.ಭೂಸನೂರಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೌಕರ ರಾಜೇಂದ್ರ ಬಾಬು, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಪರಮಾನಂದ ಯಾಳಗಿ, ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಆರಂಭದಲ್ಲಿ ಕಿನ್ನಾಳ ಕೌಲ್‌ಪೇಟೆಯ ಶ್ರೀ ಶಾರದಾ ಸಂಗೀತ ಕಲಾ ಮತ್ತು ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಬಳಗದಿಂದ ಪ್ರಾರ್ಥನೆ ಗೀತೆ ಜರುಗಿತು. ಶಿಕ್ಷಣ ಇಲಾಖೆಯ ಅಶೋಕ ಕುಲಕರ್ಣಿ ಆರಂಭದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾದಿರಾಜ ಪಾಟೀಲ್‌ರವರು ಕಾರ್ಯಕ್ರಮ ನಿರೂಪಿಸಿದರೆ, ಕಾರ್ಯಕ್ರಮ ಸಂಘಟಕ ಲಚ್ಚಣ್ಣ ಹಳೇಪೆಟೆಯವರು ಕೊನೆಯಲ್ಲಿ ವಂದಿಸಿದರು. ನಂತರ ಅಹೋರಾತ್ರಿ ಸಂಗೀತ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವೆಂಕಟರಾವ್ ದೇಸಾಯಿ, ಶರಣಪ್ಪ ವಡಿಗೇರ, ಎಂ.ಸಾಧಿಕ್ ಅಲಿ, ಲಕ್ಷ್ಮಣ ಬಡಗಲ್, ನಾರಾಯಣಪ್ಪ ಚಿಲವೇರಿಯವರಿಗೆ ಸನ್ಮಾನಿಸಲಾಯಿತು. 
ನಂತರ ಅಹೋರಾತ್ರಿ ಸಂಗೀತ ಕಾರ್ಯಕ್ರಮ ದಿ.೦೬ ರ ಸಂಜೆ ೬.೦೦ ಗಂಟೆಯಿಂದ ದಿ.೦೭ ರ ಬೆಳಿಗಿನ ಜಾವ ೫.೩೦ ರವರೆಗೆ ಯಶಸ್ವಿಯಾಗಿ ಜರುಗಿತು. ಇದರಲ್ಲಿ ಕೃಷ್ಣ ವೆಂಕಪ್ಪ ಕ್ಷತ್ರಿಯ ಲಕ್ಷ್ಮೇಶ್ವರ ಇವರ ಶಹನಾಯಿ ಮಂಗಲವಾದ್ಯದೊಂದಿಗೆ ಪ್ರಾರಂಭಗೊಂಡ ಅಹೋರಾತ್ರಿ ಸಂಗೀತ ಕಾರ್ಯಕ್ರಮದಲ್ಲಿ ಪೂರ್ಣಿಮಾ ಆಶ್ರಿತ್, ಸದಾಶಿವ ಪಾಟೀಲ್ ಇವರು ಸುಗಮ ಸಂಗೀತವನ್ನು ನೆರವೇರಿಸಿದರು. ವಿ.ಎಂ.ಭೂಸನೂರಮಠರವರು ತತ್ವ ಪದ ಹಾಗೂ ಜಾನಪದ ಕಾರ್ಯಕ್ರಮಗಳನ್ನು ನೀಡಿದರು. ನಂತರ ಧಾರವಾಡದ ನಾಕೋಡ ಬಂಧುಗಳಾದ ವಿದೋಶಿ ರೇಣುಕಾ ನಾಕೋಡ್ ಇವರ ಗಾಯನ ಮಾರೋಬಿಹಾಗ್, ವಿಲಂಬಿತ್ ದೃತ್ ಹಾಗೂ ತರಾನ ದಾಸವಾಣಿ ಪ್ರಸ್ತುತ ಪಡಿಸಿದರು. ಪೂರ್ಣಿಮಾ ಪಾಟೀಲ್ ಧಾರವಾಡರವರು ರಾಗ, ರಾಗೇಶ್ರೀ, ದಾಸವಾಣಿಯೊಂದಿಗೆ ಪ್ರಸ್ತುತಪಡಿಸಿದರು. ಅಂತರಾಷ್ಟ್ರೀಯ ಹಿಂದುಸ್ತಾನಿ ಶಾಸ್ತ್ರಿಯ ಸಂಗೀತ ಕಲಾವಿದರಾದ ಪಂ.ಕೈವಲ್ಯಕುಮಾರ ಗುರವ ರಾಗ ಮಾಲಕೌಂಸ, ವಿಲಂಬಿತ್, ದೃತ್ ತಿನ್‌ತಾಲ್, ತರಾನ್, ಠುಮರಿ, ವಚನ ಗಾಯನ ನಡೆಸಿದರು. 
ಹೆಸರಾಂತ ತಬಲಾ ವಾದಕರಾದ ಪಂ.ರಘುನಾಥ ನಾಕೋಡ್, ಡಾ.ರವಿಕಿರಣ ನಾಕೋಡ್ ಇವರುಗಳ ತಬಲಾ ಸೋಲೊ ಜುಗಲ್ ಬಂದಿ ಕಾರ್ಯಕ್ರಮವು ಮಹಾ ಜನತೆಯನ್ನು ಮಂತ್ರ ಮುಗ್ದರನ್ನಾಗಿ ಮಾಡಿತು. ಡಾ. ಪಂ.ರವೀಂದ್ರ ಕಾಟೋಟಿ, ಹಾರ್ಮೋನಿಯಂ ಸೋಲೊ ಕಾರ್ಯಕ್ರಮ ಬಹುಜನಾಕರ್ಷಣೆಯಾಯಿತು. ಅಹೋರಾತ್ರಿ ಸಂಗೀತ ಕಾರ್ಯಕ್ರಮದಲ್ಲಿ ಸಹ ಕಲಾವಿದರಾಗಿ ಹಾರ್ಮೋನಿಯಂನಲ್ಲಿ ಪಂ.ರವೀಂದ್ರ ಕಾಟೋಟಿ ಬೆಂಗಳೂರು, ವಿರೇಶ ಹಿಟ್ನಾಳ ಕೊಪ್ಪಳ, ಶಿವಣ್ಣ ಸಿಂಧನೂರ, ವಾಯಿಲಿನಲ್ಲಿ ನಾಡಿನ ಕಲಾವಿದ ಪಂ.ಶಂಕರ ಕಬಾಡೆ ಧಾರವಾಡ, ತಬಲಾ ಕಲಾವಿದರಾಗಿ ಪಂ.ರಘುನಾಥ ನಾಕೋಡ್, ರವಿಕಿರಣ ನಾಕೋಡ್, ಜಲೀಲ್ ಪಾಷಾ ಗಂಗಾವತಿ, ಶ್ರೀನಿವಾಸ ಜೋಷಿ ಕೊಪ್ಪಳ, ಗುರುರಾಜ ಯಲಬುರ್ಗಿ, ಶಿವಲಿಂಗಪ್ಪ ಕಿನ್ನಾಳ, ತಾಳ ವಾದ್ಯ ಕೃಷ್ಣ ಸೊರಟೂರ, ವಿನಾಯಕ ಕಿನ್ನಾಳ, ರಂಗಪ್ಪ ಕಡ್ಲಿಬಾಳ ಸಾತ್ ನೀಡಿದರು. ಕೊನೆಯಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಲಚ್ಚಣ್ಣ ಹಳೇಪೆಟೆ ಕಿನ್ನಾಳ ಇವರು ಪ್ರಸ್ತುತ ಪಡಿಸಿದ ಭೈರವಿ ರಾಗದ ನಾಟ್ಯ ಗೀತೆ ಹಾಗೂ ದಾಸರ ಪದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
Please follow and like us:
error