ಇಲಕಲ್ ಸೀರೆ -ಕಥೆ

ಶರಣಪ್ಪ ಬಾಚಲಾಪೂರ – Sharanappa Bachalapur
ಉತ್ತರಿ ಬಿಸಿಲಿಗೆ ಹೊಸ ಸೀರಿಗಳನ್ನು ಒಂದಿನವಾದರೂ ಕಡಿಗ ತೆಗೆದು ಬಿಸಿಲಗ್ಯಾ ಒಣಗಿಸಾಕ ಹಾಕಿ ನುಸಿ, ಜೊಂಡಿಗಿ ಎಲ್ಲಾ ಜಾಡಿಸಿ ಹಾಕಬೇಕು. ಸಾಮಾನ್ಯವಾಗಿ ಉತ್ತರಿ ಬಿಸಿಲು ಚುರುಕಾಗಿರ್ತದ. ಈ ಬಿಸಿಲ್ಯಾಗ ಎಂದೂ ತೊಡಲಾರ್ದವು ಅಂದ್ರ ಮದುವ್ಯಾಗಿನ ಇಳೇ ಸೀರಿ, ತಾಯಿ ಸೀರಿ, ಲಗ್ನದ ಮತ್ತು ಕುಬಸದ ಸೀರಿ ಅಂತ ಇರ್ತಾವ. ಅವನ್ನು ಅಯಾ ಸಂದರ್ಭದಾಗ ಹಕ್ಕೊಂಡಿಂದ ವರ್ಷ ತೀರೀಗಿ ಬಿಸಿಲಗ್ಯಾ ಅವು ಹೊರೂಗ ಬರ್ತಾವ. ಯಾಕಂದ್ರ ಅವು ಕಿಮ್ಮತ್ತಿನುವಂತ ಎಂದು ತೊಟ್ಟೀರಾದ ಇಲ್ಲ. ಹಂಗ ಲಕ್ಷ್ಮವ್ವ ತನ್ನ ಸೀರಿಗಳ ಈ ಉತ್ತರಿ ಬಿಸಿಲಗ್ಯಾ ಒಣಗಿ ಹಾಕಬೇಕಂತ ಅಂದ ಸಂದೂಕ ತೆರೆದು ನೋಡ್ತಾಳ ಸಂದೂಕದಾಗ ಲಗ್ಣ ಸೀರೆಂತ ಮದುವ್ಯಾಗ ಗಂಡನ ಮನಿಯವ್ರು ಕೊಟ್ಟ ತಾಳೀ ಕಟ್ಟಿಸಿ ಗಂಡ ಇಲಕಲ್ಲ ಸೀರಿನ ಮಾಯವಾಗಿತ್ತು ! ಅಲ್ಲದ ಸಂದೂಕದ ಮರುಡ ಜಾರಿತ್ತು !!
ಈ ಕೆಲಸ ಬೇರೆ ಯಾರಿಂದಾಗಿಲ್ಲಾ, ಇದು ಆಗಬೇಕೂ ಮಗನಿಂದ. ಯಾಕಂದರ ಈ ಸಣ್ಣ ವಯಸ್ಸಿನಾಗ ಈ ಇಸ್ವದಾಗ ಏನು ಚಟ ಅದಾವು ಎಲ್ಲಾ ಅವುಗ ಅದಾವು. ಅವನ್ನ ಈ ಮನೀಗ್ಯಾ ಬರಬಾರದಂತ ಹೊರುಗಾಕಿದ್ರೂ ಎಂಗೋ ಬಂದು ಹೋಗ್ತಾನ. ಯಾಕಂದ್ರ ಒಬ್ಬ ಮಗಂತ ನಾವು ಮುದ್ನಿಂದ ಬೆಳಸಿದುಕ ಪ್ರತಿಫಲ ಇದು. ಅಲ್ದ ಅವರಪ್ಪ ಅವಾ ಸಣ್ಣವಿರುವಾಗ ಸತ್ತು ಇವನ ಯಾವ ದಾರೀಗ ಹಚ್ಚಬೇಕಂತ ನನುಗ ತಿಳೀಲಾರದಂಗ ಆತು. ಮತ್ತ ಇವಾನಗುಟ್ಟಿದ್ದ ವಾರೀಗಿ ಹುಡುಗರು ಏನೂ ಕಮ್ಮಿ ಇಲ್ಲ. ಒಬ್ಬರುಕ್ಕಿಂತ ಒಬ್ರು ಬಲ ಅದಾರ. ಒಬ್ಬಾವ ಸೂಳೇರ ಮನ್ಯಾಗ ಇದ್ದರ ಇನ್ನೊಬ್ಬಾವ ಇಸ್ಪೇಟ ಅಡ್ಡೇದಾಗ. ಇನ್ನೊಬ್ಬಾವ ಯಾವಕಿನರ ಕರಕೊಂಡು ಬಣವ್ಯಾಗೋ ಇಲ್ಲಾ ಖಾಲಿ ಮನ್ಯಾಗೋ ಬೀಳ್ತಾನ. ಇಂತಹವುಗಳನ್ನೆಲ್ಲಾ ಬಿಡೂಸಬೇಕಂತ ಊರಾನ ಮಂದಿನ ಪ್ರಯತ್ನ ಪಟ್ಟುರ ಅದು ಏನ ಅಂತಾರಲ್ಲ ಹೇಲಾಕ ಕಲ್ಲೊಗುದ್ರ ಮುಕುಕ್ಕ ಸಿಡಿಸಿಗೆಂಡ್ರಂತ ಅನ್ನಾಂಗಾಗುತ್ತ. ಮಗ ಮಾಡಿದ ಘನ ಕಾರ್ಯದಿಂದ ಅಷ್ಟ ಕಿಮ್ಮತ್ತಿನ ಸೀರಿ ತಗಾ ಬೇಕಂದ್ರ ಏನೆಲ್ಲಾ ಕಷ್ಟಪಟ್ಟಾರಂತ ಆ ಮುಂಡ್ಯಾಮಗೂನಗ ಏನು ಗೊತ್ತು. ಮಗ ಶಿವಪ್ಪನ್ನ ಮನುಸಾಗ ಶಪುಸ್ತ ಯೋಚನ ಲಹರಿ ಹದ್ನೆಂಟು ವರುಷ ಹಿಂದುಕ್ಕ ಹೋಗಿತ್ತು ಲಕ್ಷ್ಮವ್ವಗೆ.
ಆಗಿನ್ನ ಹಿರೇಮನುಷ್ಯಾಳಾಗಿ ಒಂದ್ವರ್ಷಾಗಿತ್ತು…….. ಲಕ್ಷ್ಮವ್ವ ನಪ್ಪ ಕೂಲಿ ನಾಲಿ ಮಾಡಕಂಡು ಬದುಕ್ತಿದ್ದ. ಅಂತಾರದಾಗ ಮಗಳು ದೊಡ್ಡಾಕಾಗೇಳಂದ್ರ ದೊಡ್ಡ ಹೊರೀನ ಹೊತ್ಗೊಂಡಾಂಗಾಗಿತ್ತು. ಲಕ್ಷ್ಮವ್ವನಪ್ಪುಗ  ಕೊಟ್ಟೆಣ್ಣು ಕುಲಕ ಹೊರುಗ ಅನ್ನೋವಂಗ ಅಲ್ಲೆಲ್ಲ್ಯಾ ಪರಿಚಯ ಇದ್ದಾರಿಗೇಳಿ ಮಗಳ್ನ ಒಂದು ಚೆಲೋ ಮನೀಗ್ಯಾ ಕೊಡಬೇಕಂತದುಕೊಂಡಿದ್ದ. ಆದುರ ಚೋಲೋ ಮನಿ ಅಂದು ಅದುಕತಕ್ಕಂತ ತಾವು ಇರಬೇಕನ್ನಾದು ಆತನುಗ ಗೊತ್ತಿತ್ತು. ತಕ್ಕ ಮಟ್ಟಿಗೆ ಇದ್ದಾರ್ಗಿ ಕೊಟ್ರ ಆವುರ್ಗಾ ಒಪ್ಪೂವಂಗ ಲಗ್ಣ, ವರದಕ್ಷ್ಣಿ, ವರೋಪಚಾರ ಕೊಡಬೇಕಾಗುತ್ತಅಲ್ಲ, ಈ ತುಟ್ಟಿ ಕಾಲದಾಗ ತಮ್ಮ ಜೀವನ್ನನ ನೆಡುಸಾದು ಕಷ್ಟವಾದಾಗ ರೊಕ್ಕ ಮಾಡಾದು ಎಲ್ಲಿಂದ ಆಗಬೇಕು. ಅಂತಾದುರಾಗ ಒಂದೆರಡಕರೆ ಭೂಮಿ ಇದ್ದ ಚಳಗೇರಿ ಇರುಪಣ್ಣನ ಮಗ ಪಡಿಯಪ್ಪಗ ಮಗಳ್ನ ನಿಚ್ಚ್ಚಿ ಮಾಡಿದ್ದ.
ಪಡಿಯಪ್ಪ ನೋಡೋದ್ಯ ಚಂದಾಗಿದ್ದ. ಇದ್ದೆರಡಕೆರದಾಗ ಜೀವ್ನ ನಡಸ್ತಿದ್ದು, ಆದುರ ಈ ವರ್ಷ ಮದುವಿ ಮಾಡಬೇಕಂದ್ರ ಮದುವಿ ಖರ್ಚು, ಸೀರಿ ಕುಬುಸಕ್ಕಂತ, ಮತ್ತಾ ಊಟುದ ಖರ್ಚು ಒಟ್ಟ ಏನಿಲ್ಲಾಂದ್ರೂ ಒಂದು ಹತ್ತು ಸಾವಿರಾದರೂ ಬೇಕು. ಈಗಿನ ಕಾಲದಾಗ ಈ ಹತ್ತು ಸಾವಿರಾದರೂ ಹೊಂದೂಸಬೇಕಾದ್ರೂ ತಲಿಮ್ಯಾಗ ಕೈ ಹೊತ್ಗೊಂಡು ಕುಂತ್ರ ಸಾಗೂದುಲ್ಲಾಂತ ತಿಳಿದ ಇರುಪಣ್ಣ ಇದ್ದರಡಕೆರೆ ಭೂಮಿನಾ ಐಸಾವಿರಕ್ಕ ಐದು ವರುಷ ಇಳುವತ್ತಿ ಹಾಕಿದ. ಮಗುನ್ನ ಮೂರು ಸಾವಿರ್ಕ ಸವಕಾರ ಮನೇಗ ದುಡ್ಯಾಕಿಟ್ಟು ರೊಕ್ಕ ಹೊಂದಿಸಿದ.
ಲಗ್ಗುಣ ಮುಂದಿದ್ದಾಗ ಬಟ್ಟೆ ಖರೀದಿಗೋದಿದ್ದಾಗ ಲಗ್ಗುಣ ಸೀರಂತು ಚಲೋ ಇರಬೇಕಂತ ಹೆಣ್ಣ ಕಡೆಯವರು ಆಂದ್ರ, ಇದ್ವಿದ್ರಾಗ ಮುಗುಸಾಣಂತ ಗಂಡೀನ ಕಡೆಯವರು ಮತ್ತಿವುರಿಗೂ ಸೊಲಪು ಜಗಳ ಆತು. ಕಡೀಗ ಗಂಡಿ ಕಡಿಯವರು ಆಗಲೆಂತ ಒಂದು ಚೋಲೋ ಲಗ್ಗುಣ ಸೀರಿ ಅಂತಂದ್ರ ಊರಾನ ನೇಕಾರಿಗೇಳಿ ಒಂದು ಚೋಲೊ ರೇಸಿಮಿ ಸೀರಿನ ನೇಸಬೇಕಂತ ಅಂದು ಲಗ್ಗುಣ ಸೀರಿ ಬಿಟ್ಟು ಆವೊತ್ತು ಉಳುದ ಎಲ್ಲಾ ಸೀರೀನೂ ಖರೀದಿ ಮಾಡಿದುರು. 
ಲಗ್ಗುಣದಾಗ ಈ ಇಲಕಲ್ ಸೀರಿ ಉಟುಗೊಂಡ ಗಂಡನ ಮಗ್ಗಲು ಕುಂತಾಕಿ ಮತ್ತ ಈ ಸೀರೀನ ಎಂದು ತೊಟ್ಟೇ ಇಲ್ಲ. ಅಲ್ದ ಅಂತ ಕಿಮ್ಮತ್ತಿನ ಸೀರಿ ತೊಡ ಐಸತ್ತು ತಮುಗೆಲೈತಿ. ಉಣ್ಣಾಕ, ಉಡಾಕ, ಕೂಲಿ ನಾಲಿ ಮಾಡಿದ್ದ ಸಾಕಾಗೈತ್ಯಾ. ಅಂಥದರಾಗ ಈ ಇಲಕಲ್ ಸೀರಿ ಮುಚ್ಚಿಟ್ಟದ್ದು. ಅದು ಹೊರಗ ಬರಬೇಕಂತ ಆಂದ್ರ ಉತ್ತರಿ ಬಿಸುಲಾಗ ಬರಬೇಕು. ಇಲ್ಲ ಅಂದ್ರ ಬಿತ್ತಾಮುಂದ ಕೂರೆಗಿ ಉಡಸಾಕ ಅದು ಕೂಡುಗ ಬರಬೇಕು. ಎಲ್ಲಾ ಮುಗೂದ ತಕ್ಷಣ ಸಂದೂಕನ ಗತಿ ಆಗಿತ್ತದು.
ಈ ಸೀರಿ ತನುಗ ಬರಬೇಕಾದುದರ ಗಂಡ ಜೀತಾ ಇದ್ದು ಗಳಿಸಿದ್ದು, ಅಲ್ಲದ ನೇಕಾರ ಲೋಕಪ್ಪನ ಮನ್ಯಾಗ ಹೇಳಿ ಕಷ್ಟಪಟ್ಟು ನೇದು ಕೊಟ್ಟದ್ದು. ಅದೂರ ಕಸೂತಿ ಕೆಲಸ, ಗೊಂಡೇವು ಕೆಲಸ ನೋಡಿದ್ರ ಸೀರಿ ಬಿಡಬಾರದು ಅಂತ ನೇಯಿದ ಕೊಟ್ಟಿದ್ದ ಲೋಕಪ್ಪ. ಈಗಿನ ಕಾಲದಾಗ ಆಗಿದ್ರ ಅಂತ ಸೀರಿ ನಾವು ತೊಗೊಂತ್ದಿವ್ಯಾ ? ನಮ್ಮ ಮಕ್ಕಳಿಗೆರ ಕೊಡುಸಾಕಾ ಗತಿತ್ತಾ? ನಮ್ಮ ಯೋಗ್ತಿಗಂತೂ ಈ ಸೀರಿ ದೊಡ್ಡ ಕಿಮ್ಮತ್ತಿಂದ……..
ಈ ಸೀರಿ ನೆನಸಿಗೊಂಡ್ರ ಹೊಟ್ಯಾಗಿನ ಕಳ್ಳು ಹೊರೂಗ ಬರ್ತಾದ. ಮಗ ಈ ಕೆಲಸಕ್ಕ ನಿಂದುರ್ತಾನಂತ ಅಂದ್ಕೊಂಡಿರಲಿಲ್ಲ. ಇವ ಹುಟ್ಟಿದ ತಕ್ಷಣ ತಂದಿ ಸತ್ತ. ಅಂತ ಅವುಗ ಏನೂ ಬುದ್ದಿ ಹೇಳಲಾರದ ಹೋಗಿದ್ದ ತಪ್ಪಾಗೈತ್ಯಾ. ಅವತ್ತ ಸಸಿಯಾಗಿ ಬಗ್ಗದ್ದು ಮರ ಆಗಿ ಬಗ್ಗುತ್ತೇನು ? ಎನ್ಮಾಡ್ಬೇಕು, ಈ ಸೀರಿ ಏನ್ಮಾಡ್ಯಾನೋ, ಎಲ್ಲಿ ಒತ್ತಿ ಇಟ್ಟಾನ ಏನ ಮಾರ್ಯದೇಬಿಟ್ಟಾನೋ, ಕೇಳ್ಬೇಕು.
ಇರಾ ಒಬ್ಬಕ್ಯಾ ಮಗುಳು ಊರಿಗಿ ಬಂದುರ, ಅಷ್ಟೇ ಯಾಕ ಆಕಿ ಲಗ್ಗುಣ ಮುಂದೂ ಆಕೀಗ ಈ ಮುಟ್ಟಿಸಿ ಕೊಟ್ಟಿದ್ದಿಲ್ಲ. ಮತ್ತಾ ನಾಗರಪಂಚಮಿ ದಿನ ಆಕಿ ಗೆಳತ್ಯಾರೆಲ್ಲ ಹೊಸೋಸ ಸೀರೀ ಉಟುಗೊಂಡಾಗ ಈ ಸೀರಿ ಉಟಗೊಂತೀನಂತ ಅಂದು ಹಟ ಹಿಡಿದು ಜಗುಳ ತೆಗೆದುರ ಸೈತ ನಾ ಮುಟ್ಟಸಲಕ್ಕ ಕೊಟ್ಟದ್ದಿಲ್ಲ.
ಆಕಿ ಆಸೆಯಿಂದ ಯವ್ವಾ ಈಸೀರಿ ಉಟುಗೂಳ್ಲ್ಯಾ ಅಂತ ಅನ್ನಾದಷ್ಟ ಸಾಕು, ಬಿಡವ್ವಾ ಈ ಸೀರಿ ಉಟ್ಕೋಬಾರದ್ದು. ಅಷ್ಟು ಕಿಮ್ಮತ್ತಿನ ಸೀರೆ ಈಗ ಮುಗ್ಗುಲಾದ್ರ ಮುಂದನಿಮಗ ಅದು ಬರುತ್ತ ಅಂತೇಳಿದುಕ್ಕ ಮುಖ ಸಪ್ಪುಗ ಮಾಡಿಕೊಂಡು ಗೋನು ಹಾಕಿದ್ಲು ನಾ ಇಲ್ಲದಾಗೊಂದಿನ ಸಂದೂಕದಂದು ಸೀರಿ ತಗೊಂಡು ಉಟುಗೊಂಡು ಜೋಕಾಲಿ ಆಡಾಕೋಗಿದ್ಲು, ಮನೀಗ್ಬಂದು ನೋಡಾದ್ರಾಗ ಆ ಸೀರಿನ ಮಗಳು ಉಟುಗೊಂಡಿದ್ನೋಡಿ ಮೈಯ್ಯಾನ ರಕ್ತ ಎಲ್ಲಾ ಹರುದಾಡಿ ಜೋಕಾಲಿ ಆಡಾಕೋದ ಮಗುಳ್ನ ಈ ಸೀರಿ ಉಟುಗೊಂಡಾಳ ರಂಡಿ ಅಂತ ಕರಕೊಂಡು ಬಂದು ಮನ್ಯಾಗ ಮೈ ಹಣ್ಣಾಗಂಗ ಬಡಿದಿದ್ದ್ಯಾ.
ಅಲ್ಲಿಂದ ಈ ಸೀರಿ ವಿಷಯಕ್ಕೆ ಬಂದಿಲ್ಲ ಮಗಳು. ಅಪ್ಪಿತಪ್ಪಿ ಆ ಸೀರಿ ಉಟುಗೋಣಾ ಆಸೆ ಆಗಿದ್ರೂ ಅಂಜಿಕೊಂಡು ಇಮ್ಮೊಮ್ಮೆ ಕೇಳ್ ಬೈಸಿಕೊಂಡು ಮನೂಸಿನ್ಯಾಗ ಮಂಡಿಗಿ ತಿಂದು ಸುಖಪಡುವಂತಾಗಿತ್ತು. ಲಗ್ಣಾಗ ಮುಂದ ಅದಾ ಸೀರಿ ಕೊಡಬೇ ಅಂತ ಕೇಳಿದುರ ಕೊಟ್ಟಿದ್ದಿಲ್ಲ ನಾನು. ಮನಿ ಮಗೂನ ಈ ಸೀರಿ ಕಳವು ಮಾಡಿದ ಅಂದುರ ಏನು ಮಾಡಬೇಕು?
ಬೇಲಿನ ಎದ್ದು ಹೊಲ ಮೇದುರ ಯಾರು ನೋಡಾರು ಹೊರಗಿನವುರಾದುರ ಕಾಯಬಹುದು. ಅದು ಮನ್ಯಾವುರ ಹೆಂಗ ಕಾಯಾದು. ಮನಿ ಮಕ್ಕಳನ್ನು ಕಾಯಾಕಾಗುತ್ತ? ಅಲ್ಲದ ಹೋದ ಸಲ ಒಂದು ತಾಮ್ರ ಕೊಡ ಸೆಟ್ಟ ಅಂಗಡೀಗ ಒತ್ತಿ ಇಟ್ಟು ನೂರುರೂಪಾಯಿ ತಗೊಂಡೀಗಿದ್ದ. ಅದು ಗೊತ್ತಾಗಿ ಸೆಟ್ಟೀಗ ನೂರು ಮತ್ತ ಬಡ್ಡಿ ಕೊಟ್ಟು ಬಿಡಿಸಿಕೊಂಡು ಬಂದಿದ್ದ್ಯಾ.
ಅವೊತ್ತ ರಾತ್ರಿ ಮಗ ಬಂದಾಗ ಯಾಕೋ ಕೊಡ ಒತ್ತಿ ಇಟ್ಟಿದ್ದಿ ? ನಿನುಗ ದುಡದು ತಂದು ಹಾಕಾಕ ನಾನೇನು ಮೀಸಿ ಹೊತ್ತ ಗಂಡಸ ಮಾಡಿಯೇನು? ನಾನು ಹೆಂಗ್ಸಾಗಿದ್ರು ಗಂಡಿನಂತ ಬಾಳೇವು ಮಾಡಿಕೊಂಡೋಕ್ಕಿನಿ. ನೀನಿಂಗ ಮಾಡಿದ್ರೆಂಗ? ಅಂತ ಬುದ್ದಿವಾದ ಹೇಳಿದ್ರ ಏ ಸುಮ್ನಿರು. ಇಲ್ಲಾಂದ್ರ ಮನಿ ಬಿಟ್ಟೋಗಿ ದುಡದು ತಂದಾಕ್ಕೊಂಡು ತಿನ್ನು ಇದು ನಮ್ಮಪ್ಪನ ಮನಿ ಐತ್ಯಾ. ಅಗಿಲ್ಲಿಲ್ಲಾ ಅಂದ್ರ ಇನ್ನಾ ವಯಸ್ಸೈತಿ ಹೆಂಗರ ಗಳಿಸು ಅಂತ ಕುಡದ ನಿಶ್ಯಾಂದಾಗ ಅಂದ ತಕ್ಷಣ ನನ್ನ ಮೈಯ್ಯನ ನರನಾಡಿಗಳೆಲ್ಲಾ ಬಿಗುದು ಆವುನ್ನ ದಕ ಬಡದಂಗ ಬಡುದು ಮನಿ ಬಿಟ್ಟು ಹೋದ ತಕ್ಷಣ ಎಲ್ಲಿ ಏನ ಮಾಡಕೊಂತಾನ, ಅಲ್ದ ಊರು ಬಿಟ್ಟೋದ್ರ ಹಂಗ ಇದ್ದೊಬ್ಬ ಮಗಾನ್ನ ಸರ್ಯಾಗಿ ನೋಡಿಕೊಳ್ಳದಿಲ್ಲಾಂತ ಮಂದೆಂತಾರ. ಮನುಕ ಅಂಜದಿದ್ರೂ ಮಂದಿಗರ ಅಂಜಬೇಕಲ್ಲ? ಅವ ಕುಡುದಾಗ ಹಿಂಗ ಮಾತಾಡ್ತಾನ ಅಂತಂದು ನನ್ನ ಕರುಳು ಚುರುಕ್ ಅಂದು ಹಿಂದ ಓಡೋಗಿ ಕರಕೊಂಬಂದು ಮಲಗಿಸಿದ್ದೆ.
ಇಂಥ ಸಡ್ಲು ಅವುಗ ಸಿಕ್ಕಾವ, ನಮ್ಮವ್ವ ನಾ ಏನು ಮಾಡಿದ್ರೂ ಸುಮ್ಕಿರತಾಳ ಅಂತ ಅಂದು ದಿನ ದಿನ ಚಟ ಹೆಚ್ಚಾಕ್ಕೆಂತ ಹೊಕ್ಕಾವ. ಆವೂಗ ಬುದ್ದಿ ಹೇಳ್ರಿ ಅಂತ ಅಂದು ಹಿರೇರಿಗೇಳಿದ ಇವುನ ಬಾಯಿಗೆದುರಿ ಇವುನ ಸುದ್ದೀಗ್ಯಾ ಬರಾವಲ್ರು. 
ದೂರದಿಂದ ಮಗಾ ತೂರ್ಯಾಡಿಕೆಂತ ಬರಾದು ಕಾಣಿಸ್ತು. ಅಲ್ದ ಜಿತೀಗ ಆ ಕೇರಿ ಕೆಂಚಿ ಬರಾದೂ ಕಾಣಿಸ್ತು. ಕೆಂಚಿ ನೋಡಾತ್ಲೆ ಮೈಯ್ಯಲ್ಲಾ ಉರುದು ಕೆಂಜಗೆದ್ದಾಂಗಾದುವು. ಯಾಕಂದ್ರ ಕೆಂಚಿ ಮೈಯ್ಯಾಗ ಆ ಇಲಕಲ್ ಸೀರಿ ಇರಾದು ನೋಡಿದ್ರ ನಾ ತೊಟ್ರ ಎಲ್ಲಾ ಮುಕ್ಕ್ಯಾಗುತ್ತಂತ ಬುಟ್ಟಿದ್ಯಾ ಅದು ಕೆಂಚಿಗ್ಬೇಕಾಗಿತ್ತಾ ಈ ಸೀರಿ ಅಂತೀನಿ. ಇಂಥ ಸೀರಿ ಆಕೀನ ಕುಖಕ್ಕ ಎಂದುಟ್ಟಿತ್ತು? ಎಂದು ದಟ್ಟಿ ಉಟುಗೊಂಡು ಕಂಡ ಕಂಡವರ ಮಗ್ಗುಲು ಬೀಳಾ ಈಕಿ ಇವತ್ತ ಅಷ್ಟ ಜೋಪಾನ ಇಟ್ಟಿದ್ದ ಸೀರಿ ಉಟುಗೊಂಡಾಳಲಲಾ ಅಂತಂದು ಸಿಟ್ಟು ನೆತ್ತಿಗೇರ್ತು.
ಕಂಚಿ ಹೆಗಲಮ್ಯಾಲ ಕೈ ಹಾಕ್ಕೊಂಡು ಮನಿ ಮುಂದ ಬಂದು ನಿಂತಿರಾದು ನೋಡಿದ್ರ ಇಕೀನ ಮಾನಾನ ಹೋಗುತ್ತಾನ ಅಂತನ ಅನಿಸ್ತಿತ್ತು.
ಏ ಊರ ಸೂಳಿ…………. ನನ್ನ ಮಗೂನ ಬುದ್ದಿ ಕೆಡಿಸಿದ್ದಲ್ಲದ ಈ ಸೀರಿ ಉಟಗೊಂಡು ಮನ್ಯಾಗ ಬರ್ತಿಯೇನ ಬೋಸಡಿ ರಂಡಿ….. ಅಂತ ಒದರಾಡಿದ್ಲು ಲಕ್ಷ್ಮವ್ವ.
ಯಾರಲೇ ಬೋಸುಡಿ ರಂಡಿ. ನಿನ್ನ ಮಗ ನನ್ನ ಹತ್ರ ಬಂದ. ಕಂಠಮಟ ಕುಡುದ ಬಂದಾನ. ಅದುರ ಖುಷಿಗ ಈ ಸೀರಿನ ನನುಗ ಕಾಣಿಕೆ ಕೊಟ್ಟಾನ….. ಅಂತಂದು ಜೋರು ಬಾಯಿ ಮಾಡಿದ್ಲು.
ಹೌದೇನ್ಲಾ ಅಕಿ ಹೇಳಾದು ಅಂತ ಅಂದು ಮಗೂನ ಮ್ಯಾಗ ಸಿಟ್ಟು ಮಾಡ್ಕೊಂಡು ಕೈ ಮ್ಯಾಕೆತ್ತಿದ್ದ ಲಕ್ಷ್ಮವ್ವ ಧಡಕ್ಲನ ಕೆಳಿ ಬಿದ್ಲು. ಬಿದ್ದಾಕಿ ಮತ್ತ ಮ್ಯಾಕ ಏಳಲೇ ಇಲ್ಲ !
———————————— 

Related posts

Leave a Comment