ಗ್ರಾಮೀಣ ಬಡ ಮಹಿಳೆಯರ ಬಾಳಿಗೆ ಬೆಳಕಾಗಿ ’ಸಂಜೀವಿನಿ’ ಮಹತ್ವಾಕಾಂಕ್ಷಿ ಯೋಜನೆಯನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತಿರಾಜ್ ಇಲಾಖೆಯಡಿ ಜಾರಿಗೆ ತಂದಿದ್ದು ಸ್ವ-ಸಹಾಯ ಸಂಘಗಳ ಬಲವರ್ಧನೆಗೆ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ ಉದಪುಡಿ ರವರು ಕರೆ ನೀಡಿದರು.
ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಯ ’ಸಂಜೀವಿನಿ’ ಯೋಜನೆಯಡಿ ಜಿಲ್ಲಾ ಪಂಚಾಯಿತಿ ಜೆ ಎಚ್ ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಮುಖ್ಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಬಿ.ಕಲ್ಲೇಶ ಮಾತನಾಡಿ ಮಹಿಳೆಯರು ಸ್ವಸಹಾಯ ಸಂWಗಳ ಸಂಘಟನೆಯೊಂದಿಗೆ ಸಾಮಾಜಿಕ ,ಆರ್ಥಿಕ,ಮತ್ತು ರಾಜಕೀಯವಾಗಿ ಮುಂದುವರೆಯಬೇಕು ಅಲ್ಲದೆ ಇತರೆ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಅರಿವು ಮೂಡಿಸುವುದರೊಂದಿಗೆ ಅವರ ಬಾವನೆಗಳಿಗೆ ಬೆಲೆಕೊಟ್ಟು ವಿವಿಧ ಚಟುವಟಿಕೆಗಳು, ಆಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮುಖೇನ ಸ್ವಚ್ಚತೆಯ ಜಾಗೃತಿ ಮೂಡಿಸಿ ಅವರನ್ನು ಮಾದರಿ ಪ್ರಜೆಗಳಾಗಿ ರೂಪಿಸಬೇಕೆಂದು ತಿಳಿಸಿದರು.
ರಾಜ್ಯ ಯೋಜನೆಯ ಕಾರ್ಯಕ್ರಮ ವ್ಯವಸ್ಥಾಪಕ ಎಂ.ಕೆ. ಆಲಿ ಅವರು ’ಸಂಜೀವಿನಿ’ ಯೋಜನೆ ಕುರಿತಾಗಿ ಪ್ರಾಸ್ತಾವಿಕ ಮಾತನಾಡಿ, ಯೋಜನೆಯ ವತಿಯಿಂದ ಕೊಪ್ಪಳ ಜಿಲ್ಲೆಯ ೪ ಗ್ರಾಮಗಳಲ್ಲಿ ಗ್ರಾಮವಾಸ್ತವ್ಯ ಹೂಡುವ ಮೂಲಕ ಮಹಿಳಾ ಸ್ವಸಹಾಯ ಸಂಘಗಳನ್ನು ಒಕ್ಕೂಟ ರಚನೆ ಮಾಡುವುದರೊಂದಿಗೆ ಮಹಿಳಾ ಸಬಲೀಕರಣ- ಅಭಿವೃದ್ದಿ ಮಾಡಲು ನಾವೆಲ್ಲ ಶ್ರಮಿಸಬೇಕಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಬಸವರಾಜ ಮೂಲಿಮನಿ, ಪಿ.ಎಸ್ ಮಲ್ಲಿಕಾರ್ಜುನ ಕೊಪ್ಪಳ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ ಸೇರಿದಂತೆ ಸಿಡಿಪಿಓಗಳು, ಪಿಡಿಓಗಳು ಉಪಸ್ಥಿತರಿದ್ದರು.