ಅಂಗವಿಕಲರಿಗೆ ಸರ್ಕಾರದಿಂದ ಅನೇಕ ಸೌಲಭ್ಯ ಸದುಪಯೋಗಕ್ಕೆ ಅಮ್ಜದ್ ಪಟೇಲ್ ಕರೆ

 ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅಂಗವಿಕಲರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್ ಅಂಗವಿಕಲರಿಗೆ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ವಿಕಲಚೇತನರ ಒಕ್ಕೂಟ ಹಾಗೂ ಜಿಲ್ಲೆಯ ವಿವಿಧ ವಿಕಲಚೇತನರ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕ ಮೈದಾನದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಅಂಗವಾಗಿ ಕ್ರೀಡಾಕೂಟಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಅಂಗವಿಕಲರಿಗೆ ಈಗಾಗಲೇ ವಸತಿ ರಹಿತ ಸಮುದಾಯ ಭವನವನ್ನು ನಿರ್ಮಿಸಿ ಅನುಕೂಲ ಮಾಡಿಕೊಡಲಾಗಿದ್ದು, ಬರುವ ದಿನಗಳಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಅಂಗವಿಕಲರಿಗೆ ಪ್ರತ್ಯೇಕ ಕಾಲೋನಿ ಮಾಡಿಕೊಡಲಾಗುವುದು ಎಂದು ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್ ಭರವಸೆ ನೀಡಿದರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ಡಿ.ಪಿ.ವಸಂತ ಪ್ರೇಮ ಅವರು ವಹಿಸಿ ಮಾತನಾಡಿ, ವಿಕಲಚೇತನರಲ್ಲಿ ಅಭುತಪೂರ್ವವಾದ ಶಕ್ತಿ ಅಡಗಿರುತ್ತದೆ. ಅದನ್ನು ಹೊರಹಾಕಲು ಇಂತಹ ಕಾರ್ಯಕ್ರಮಗಳು ಅತ್ಯಂತ ಸಹಕಾರಿಯಾಗಲಿವೆ. ಅಂಗವಿಕಲರಿಗೆ ಅನುಕಂಪ ಬೇಡ ಅವಕಾಶ ಕೊಡಬೇಕೆಂದರು. ವೇದಿಕೆಯ ಮೇಲೆ ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದ್, ಮುಖಂಡ ವೀರಣ್ಣ ಸಂಡೂರು, ಮಲ್ಲಿಕಾರ್ಜುನ ವೈ.ಪೂಜಾರ, ವಿರುಪಾಕ್ಷಪ್ಪ ತಳಕಲ್, ಮಂಜುನಾಥ ಹೊಸಕೇರಾ, ಮಲ್ಲಯ್ಯ ಹಲಸಿನಮಠ, ಚಂದ್ರಶೇಖರ ಕುಂಬಾರ, ಕಳಕಪ್ಪ ಹೂಗಾರ, ಶಿದ್ದಲಿಂಗಯ್ಯ ಗೋರ್ಲೆಕೊಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಆರಂಭದಲ್ಲಿ ಶರಣಮ್ಮ ಸಂಗಡಿಗರಿಂದ ಪ್ರಾರ್ಥನೆ ಜರುಗಿತು. ವಿರೇಶ ಉಳಗುಂದಿ ನಿರೂಪಿಸಿ ಕೊನೆಯಲ್ಲಿ ವಂದಿಸಿದರು. ನಂತರ ವಿಕಲಚೇತನರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಕಾರ್ಯಕ್ರಮಕ್ಕು ಮುನ್ನ ನಗರದ ಬಸ್ ನಿಲ್ದಾಣದಿಂದ ಸಾರ್ವಜನಿಕ ಮೈದಾನದವರೆಗೆ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಭಾವಚಿತ್ರದ ಮೆರವಣಿಗೆಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಚಾಲನೆ ನೀಡಿದರು. 
ಸಂಜೆ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ ಕುಳಗಿ ಅವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ಡಿ.ಪಿ.ವಸಂತ ಪ್ರೇಮ ಅವರು ವಹಿಸಿದ್ದರು. ವಿಜೇತ ಕ್ರೀಡಾಪಟುಗಳಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನಗಳನ್ನು ವಿತರಿಸಿದರು. 

Leave a Reply