ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಕೇಂದ್ರ ಸುತ್ತ ನಿಷೇಧಾಜ್ಞೆ ಜಾರಿ

ಕೊಪ್ಪಳ ಏ. : ಇದೇ ಏ. ೧೬ ರಿಂದ ೩೦ ರವರೆಗೆ ಜಿಲ್ಲೆಯಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯ ಸುಗಮವಾಗಿ ಜರುಗಲು ಅನುಕೂಲವಾಗುವಂತೆ ಮೌಲ್ಯಮಾಪನ ಕೇಂದ್ರ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಆದೇಶ ಹೊರಡಿಸಿದ್ದಾರೆ.
  ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವು ಕೊಪ್ಪಳದಲ್ಲಿ ಕಾಳಿದಾಸ ಪ್ರೌಢಶಾಲೆ, ಎಸ್‌ಎಫ್‌ಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು, ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಏ. ೧೬ ರಿಂದ ೩೦ ರವರೆಗೆ ಜರುಗಲಿದ್ದು, ಮೌಲ್ಯಮಾಪನ ಕೇಂದ್ರಗಳ ಸುತ್ತಮುತ್ತ ಯಾವುದೇ ರೀತಿಯ ಅವ್ಯವಹಾರ ನಡೆಯದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಏ. ೧೬ ರಿಂದ ೩೦ ರವರೆಗೆ ಬೆಳಿಗ್ಗೆ ೮-೩೦ ಗಂಟೆಯಿಂದ ಸಂಜೆ ೫-೩೦ ಗಂಟೆಯವರೆಗೆ ಮೌಲ್ಯಮಾಪನ ಕೇಂದ್ರ ಸುತ್ತ ೨೦೦ ಮೀ. ಪ್ರದೇಶ ವ್ಯಾಪ್ತಿಯಲ್ಲಿ ಸಿಆರ್‌ಪಿಸಿ ೧೯೭೩ ಕಲಂ ೧೪೪ ರಲ್ಲಿನ ಪ್ರದತ್ತವಾದ ಅಧಿಕಾರ ಚಲಾಯಿಸಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.  ಇದರನ್ವಯ ಪ್ರವೇಶ ಪತ್ರ ಹೊಂದಿದ ಶಿಕ್ಷಕರನ್ನು ಹಾಘೂ ಜಾಗೃತ ದಳದವರನ್ನು ಹೊರತುಪಡಿಸಿ, ಯಾರೂ ಮೌಲ್ಯಮಾಪನ ಕೇಂದ್ರಕ್ಕೆ ಪ್ರವೇಶ ಮಾಡುವಂತಿಲ್ಲ ಅಲ್ಲದೆ ಪರೀಕ್ಷಾ ಕೇಂದ್ರದ ೨೦೦ ಮೀ. ಸುತ್ತಲೂ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಿದೆ.  ನಿಷೇಧಾಜ್ಞೆಯು ಮದುವೆ, ಶವ ಸಂಸ್ಕಾರಗಳು ಹಾಗೂ ಇನ್ನಿತರೆ ಧಾರ್ಮಿಕ ಕಾರ್ಯಗಳಿಗೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

Leave a Reply