ಮಾಯವಾಗುತ್ತಿದೆಯೇ ಮೌಲ್ಯಾಧಾರಿತ ಶಿಕ್ಷಣ….!

      ಶಿಕ್ಷಣವೊಂದು ಸಾರ್ವತ್ರಿಕವಾಗಿ, ಸಮಾಜವೊಂದನ್ನ, ಮೌಲ್ಯಾಧಾರಿತ ಮನೋಸ್ಥಿತಿಗೆ ಕರೆದೊಯ್ಯಬಲ್ಲ ಸಹಜ ದಾರಿ, ಸಂಸ್ಕೃತಿಗಳ ಸಮಾಗಮ ಓದಿಗೆ, ಸುಸಜ್ಜಿತ ಬದುಕೊಂದನ್ನ ನಿರ್ಮಿಸಿಕೊಳ್ಳಲು ಬೇಕಾದ ನಿಜ ಸತ್ತ್ವಕ್ಕೆ, ಶಿಕ್ಷಣ ಬೇಕೇ ಬೇಕು. ಆ ಶಿಕ್ಷಣಕ್ಕೆ ಮೌಲ್ಯವೆಂಬುದು ಬುನಾದಿಯೇ ಸರಿ. ಆದರೆ ಪ್ರಸ್ತುತ ಹಂತದ ಶಿಕ್ಷಣ ಮಾತ್ರ ಮೌಲ್ಯಗಳನ್ನ ದೂರ ಸರಿಸಿ ಪರೀಕ್ಷಾ ಮಾಯೆಗೆ, ಜೀವನಕ್ಕೊಂದು ಉದ್ಯೋಗ ಸಿಕ್ಕರೆ ಸಾಕೆಂಬ ಹಂಬಲಕ್ಕೆ, ಮೌಲ್ಯವನ್ನೇ ಮಾರಿಕೊಳ್ಳುವಂತಹ ಸ್ಥಿತಿಗೆ ತಲುಪುತ್ತಿದೆ ಎಂದರೆ ತಪ್ಪಾಗಲಾರದು. 
ಶಾಲಾ ಹಂತದಿಂದ ಹಿಡಿದು, ಪದವಿ ಹಂತದ ವರೆಗೂ, ನಡೆಯುತ್ತಿರುವ ಆಧುನಿಕ ಭರಾಟೆಯ ಶಿಕ್ಷಣ ಕರಾಮತ್ತುಗಳು ಅಷ್ಟಿಷ್ಟಲ್ಲ. ಶಿಕ್ಷಣವೆಂದರೆ ಯಾವುದು..?  ಯಾವ ಹಂತದ ನೋಟ ಇಂದು ನಮ್ಮಲ್ಲಿ ಮೂಡಿ ಬರುತ್ತಿದೆ..? ಎಂಬುದನ್ನೊಮ್ಮೆ ಗಮನಿಸುವುದಾದರೆ, ಮುದ್ದಾಗಿ ಮನೆಯಲ್ಲಿ ಆಟವಾಡಿಕೊಂಡು ಹೊಸತನದ ಜಗತ್ತಿನಡೆ ಅಂಬೆಗಾಲಿಟ್ಟು,  ಅವ್ವನ ಆಸರೆ ಹೊತ್ತು, ತಮ್ಮದೇ ಆದ ಕ್ರಿಯಾತ್ಮಕ ಆಟಗಳನ್ನ ಆಡಿಕೊಳ್ಳುತ್ತಲೇ.. ಹೊಸತೊಂದು ಲೋಕಕ್ಕೆ ಕರೆದೊಯ್ದು ನೀತಿ ಪಾಠದ ಮೆಟ್ಟಿಲೇರಿಸಿ, ಮಲಗಿಸುತಿದ್ದ ಅಜ್ಜ ಅಜ್ಜಿಯರ ಕಥಾ ಲೋಕವನ್ನ ದೂರವಿಟ್ಟು ಇಂದು ಪುಟ್ಟ ಕಂದಮ್ಮಗಳನ್ನೂ ಯುದ್ಧಕ್ಕೆ ಸನ್ನದ್ಧರಾಗಿರುವ ಸೈನಿಕರಂತೆ ಕೇ.ಜಿ. ಗಟ್ಟಲೇ ಭಾರವಾದ ಪುಸ್ತಕ ರಾಶಿಯನ್ನ ಹೆಗಲ ಮೇಲೆ ಹೊರೆಸಿ, ಅವುಗಳ ಆಶೋಕ್ತಿ ಏನೆಂದು ವಿಚಾರಿಸದೇ..! ವರ್ಷಗಟ್ಟಲೇ ಮೊದಲೇ ಸೀಟು ಕಾಯ್ದಿರಿಸಿ ಬೇಬಿ ಸಿಟಿಂಗ್‌ಗಳಂತವುಗಳಿ ಹಾಕಿ ಬರುತಿದ್ದೇವೆ. 
ಶಾಲೆಯೊಂದು ಮಗುವಿನ ನಿಜ ಸತ್ತ್ವದ ಸಂಯೋಜನಕ್ಕೆ ದಾರಿಯೇ ನಿಜ! ಆದರೆ ಆ ಪುಟ್ಟ ಮಕ್ಕಳನ್ನ ರಾಶಿ ಪುಸ್ತಕ ಹೊರೆಸಿ, ಅಲ್ಲಿ ಕರೆಸಿಕೊಂಡು ಪಾಠ ಪಠಣ ಮಾಡಿಸಲಾಗುತ್ತಿದೆಯೇ ಹೊರತು, ಹಿಂದಿನ ಮಕ್ಕಳು ಅನುಭವಿಸಿದ ಹೊಸತನತೆಯ, ಸೂಕ್ಷ್ಮ ಸಂವೇದನೆಯ ಯಾವುದೇ ಮೌಲ್ಯಗಳು ಅಲ್ಲಿ ಸಿಗುತ್ತಲಿಲ್ಲ. ಹಾಗೆಂದ ಮಾತ್ರಕ್ಕೆ ಶಿಕ್ಷಣ ಪೂರ್ತಿಯಾಗಿ ಸಂವೇದನಾಶೀಲತೆಯ ಕಳೆದುಕೊಳ್ಳುತ್ತಿದೆಯೆಂದೇ ಅರ್ಥವಲ್ಲ..! ಆದರೆ ಮಕ್ಕಳ ಸೃಜನ ಶೀಲತೆಯನ್ನ, ಕ್ರಿಯಾತ್ಮಕತೆಯನ್ನ ಮೂಲೆಗಿರಿಸಿ ಪರೀಕ್ಷಾ ಭೀತಿಗೋಸ್ಕರವೇ ಶಾ! ಪರೀಕ್ಷೆ ಎದುರಿಸಲಿಕ್ಕೆ ಅಸ್ತ್ರ ಶಿಕ್ಷಣ. ಎನ್ನುವ ಮಾತುಗಾರಿಕೆ ಇಂದು ಹರಿದಾಡುತ್ತಿದೆ ಎಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ. 
ಪ್ರಾಥಮಿಕ ಶಿಕ್ಷಣ ನೋಡಿ  ಈ ನಿಲುವು ತಾಳಬಹುದಾದರೆ. ಇನ್ನು ಕಾಲೇಜು ಹಂತದ, ಪದವಿ ಹಂತ ಶಿಕ್ಷಣದ ಪ್ರಸ್ತುತ ರೂಪ ರೇಶೆಗಳೇ ಪೂರ್ತಿಯಾಗಿ ಬದಲಾದ ರೂಪಗಳನ್ನೇ ತಾಳಿ ನಿಂತುಬಿಟ್ಟಿವೆ. ಕಾಲೇಜು ಉಪನ್ಯಾಸಕಗೆ ವಿದ್ಯಾರ್ಥಿಗಳಲ್ಲಿ ಭಯ ಭಕ್ತಿ ಎನ್ನುವ ಮಾತಂತೂ ಹೇಳ ತೀರದ ಮಾತು. ಅವರೊಟ್ಟಿಗಿನ ಸಂಬಂಧವೂ ಇಂದು ಗಟ್ಟಿಗುಳಿಯುತ್ತಿಲ್ಲ.. ಶಿಕ್ಷಣಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ರಾಧಾಕೃಷ್ಣನವರನ್ನ, ಅಂತಹ ಶಿಕ್ಷಕರನ್ನ ಪಡೆದು ಅವರನ್ನ ಮೆರವಣಿಗೆಯ ಮುಖಾಂತರ ಪ್ರಾಧ್ಯಾಪನಕ್ಕೆ ಕರೆದೊಯುತಿದ್ದ ಶಿಷ್ಯಬಳಗವನ್ನೊಮ್ಮೆ ನೋಡಿದಾಗ ಇಂದಿನ ಶಿಕ್ಷಣರಂಗದ ಬಾಂಧವ್ಯತೆಯ ಬಗ್ಗೆ ಕಸಿವಿಸಿಯಾಗುತ್ತದೆ. ಆ ತೆರನಾದ ಶಿಕ್ಷಣ ಮೌಲ್ಯಗಳು ಇಂದಿನ ಉಪಾನ್ಯಸಕರು- ವಿದ್ಯಾರ್ಥಿಗಳಲ್ಲಿ ಉಳಿದಿಲ್ಲ ಎನ್ನುವುದಕ್ಕಿಂತ ಹೆಚ್ಚಾಗಿ ಅವುಗಳನ್ನ ಮೂಡಿಸುವಲ್ಲಿ ಪ್ರಸ್ತುತ ಶಿಕ್ಷಣ ವ್ಯವಸ್ಥೆ ಹಿಂದೇಟು ಹಾಕುತ್ತಿದೆ. 
ಪದವಿ ಹಂತದಲ್ಲಿ ವಿದ್ಯಾರ್ಥಿಗಳು ಉಪನ್ಯಾಸಕರಿಗೆ ಹಿಡಿತದಲ್ಲಿರಲೆಂದು, ಪ್ರತಿನಿತ್ಯ ಕಾಲೇಜುಗಳಿಗೆ ಬರುತ್ತಿರಲೆಂದು ಇಂಟರನಲ್‌ನಂತಹ ಅಂಕಗಳನ್ನ ಅವರ ಕೈಗೆ ನೀಡಿ ಕೂರಿಸುತಿದ್ದಾರೆ. ಪ್ರತಿ ನಿತ್ಯ ಕಾಲೇಜುಗಳಿಗೆ ಹಾಜರಾಗಿರುವ ವಿದ್ಯಾರ್ಥಿಗಳಿಗಿಂತ ಯಾವಾಗಲೋ ಒಮ್ಮೆ ಪಾಠಗಳಿಗೆ ಹಾಜರಾದ ವಿದ್ಯಾರ್ಥಿ ಅವರೆಲ್ಲರಿಗಿಂತ ಹೆಚ್ಚ ಅಂಕ ಪಡೆದುಕೊಂಡು ಉತ್ತೀರ್ಣನಾಗುತ್ತಾನೆ ಎಂದಾದರೆ ಶಿಕ್ಷಣ ಅಲ್ಲಿನ ವಿದ್ಯಾರ್ಥಿಗಳಿಗೆ ಒದಗಿಸುತ್ತಿರುವ ಪಠ್ಯವಸು ಯಾವುದು…? ಓದು ಎನ್ನುವ ಮೌಲ್ಯ ಉಳಿದುಕೊಳ್ಳುವುದಾದರೂ ಹೇಗೆ..? 
ಶಿಕ್ಷಣ ಪದ್ಧತಿಯೊಂದನ್ನೇ ದೂರಿ ನಿಂತರೆ ತಪ್ಪಾದೀತು. ತತ್ಸಮಾನ ಎನ್ನುವಂತೆ ಎಲ್ಲಾ ಮನಸ್ಥಿತಿಯ ಕಲಿಕೆಯ ಬಳಗಕ್ಕೆ ಒಂದೇ ತೆರನಾದ ಪಠ್ಯಪುಸ್ತಕ ನಮ್ಮಲ್ಲಿದೆ, ಅದಕ್ಕೆ ಸರಿ ಸಮಾನ ಎನ್ನುವಂತೆ ಉತ್ತರಗಳ ಪುಸ್ತಕಗಳೂ ಮಾರುಕಟ್ಟೆಯಲ್ಲಿ ಲಭ್ಯ. ಹಾಗಾಗಿ ಕಾಲೇಜು ಹಂತದಲ್ಲಿ ಪಾಠಗಳಿಗೆ ಕುಳಿತರೆಷ್ಟು-ಬಿಟ್ಟರೆಷ್ಟು, ನಾವೇ ಓದಿ ತೇರ್ಗಡೆಯಾಗುತ್ತೇವೆ ಎಂಬ ಒಲವನ್ನ ಇಂದಿನ ವಿದ್ಯಾರ್ಥಿ ಮಿತ್ರರು ತಮ್ಮದಾಗಿಸಿಕೊಂಡಿದ್ದಾರೆ. 
ಈ ಪಿಡುಗು, ಅಂದರೆ ಶಾಲಾ ಹಂತದಲ್ಲಿ ಸಿಗುವ ಶಿಕ್ಷಣ ಮಾರುಕಟ್ಟೆಯಲ್ಲಿ ಮಾರಲು ಸಿಗುತ್ತಿದೆ ಎಂಬ ವಾದ ಕೇಳಿ ಬರುತ್ತಿರುವಾಗ. ಅದನ್ನು ಅಲ್ಲಗಳಿಯಬೇಕಾದರೆ ಶಿಕ್ಷಣ ತನ್ನಲ್ಲಿ ಇನ್ನೂ ಹೆಚ್ಚು ಮೌಲ್ಯಗಳನ್ನ ಅಳವಡಿಸಿಕೊಳ್ಳಬೇಕಿದೆ. ಹೊಸ ತೆರೆನಾದ ರೂಪತಾಳಿ ಅಲ್ಲಿ ಸೃಜಶೀಲ ಓದಿಗೆ ದಾರಿ ಅರಸಬೇಕಿದೆ. ಅಂದಾಗ ಮಾತ್ರ ಇಂತಹ ಒಂದು ಪಿಡುಗು ದೂರವಾಗಬಹುದು. 
ಕ್ರಿಯಾತ್ಮಕತೆಗೆ ಅವಕಾಶ : 
ಶಿಕ್ಷಣದಲ್ಲಿ ಯಾವ ಮಕ್ಕಳು ಯಾವ ವಿಷಯೋಕ್ತಿಯಲ್ಲಿ ಮುಂದುವರೆದರೆ ಸೂಕ್ತ, ಅವರ ಹಿತಾಸಕ್ತಿ ಯಾವುದು..? ಎಂಬುದರ ಬಗ್ಗೆ ಯೋಚಿಸಬೇಕಿದೆ. ಓದು ಜೀವನದ ಅವಿಭಾಜ್ಯ ಅಂಗ ಆದರೆ ಎಲ್ಲರೂ ಅಲ್ಲಿಯೇ ಸಾಧಿಸಬೇಕೆಂದೇನಿಲ್ಲ. ಸೃಜಶೀಲರಾದ ಎಷ್ಟೋ ಮಕ್ಕಳು ತಮ್ಮಲ್ಲಿ ವಿಶೇಷವಾದ ಸತ್ತ್ವಗಳನ್ನ ರೂಡಿಸಿಕೊಂಡಿರುತ್ತಾರೆ ಅಂತವುಗಳನ್ನ ಗುರುತಿಸುವ ಕೆಲಸ ಇಂದು ನಡೆಯಬೇಕಿದೆ. 
ಈ ಎಲ್ಲಾ ತೆರನಾದ ವಾದಗಳಿಗೂ ಶಿಕ್ಷಣ ರಂಗದಲ್ಲಿ ಉತ್ತರ ನೀಡುವ ಸಮರ್ಥ ಸಾಹುಕಾರರೆಂದರೆ ಶಿಕ್ಷಕರು ಮಾತ್ರ. ಶಿಕ್ಷಕರು ತಮ್ಮ ಸತ್ತ್ವಕ್ಕೂ ಮೀರಿ  ಇಲ್ಲಿ ಪ್ರಯತ್ನಿಸುತ್ತಿದ್ದಾರೆ ಆದರೆ ಅವು ಎಲ್ಲೋ ಬೆರಳೆಣಿಕೆಯಲ್ಲಿ ಮಾತ್ರ. ಆದರೆ ನಿಜವಾದ ಮೌಲ್ಯಾಧಾರಿತ, ಸೃಜನಾತ್ಮಕ ಕ್ರಿಯಾತ್ಮಕ ಶಿಕ್ಷಣ ಪದ್ಧತಿ ಬರುಬರುತ್ತಾ ಕಾಣೆಯಾಗುತ್ತಿದೆ. ಅವುಗಳನ್ನ ಗುರುತಿಸುವ ಕೆಲಸ ನಡೆಯಬೇಕಿದೆ. 
ಶಿಕ್ಷಣ ರಂಗದ ನಿಜ ಸಾಹುಕಾರರನ್ನ ನೆನೆಯುವ ದಿನ ಶಿಕ್ಷಕರ ದಿನಾಚರಣೆ. ಈ ದಿನಾಚರಣಿ ಪ್ರತಿ ವರ್ಷದಲ್ಲೂ ಹೊಸತನದ ಹುಡುಕಾಟ ನಡೆಸಬೇಕಿದೆ. ಶಿಕ್ಷಣದ ನಿಜಾರ್ಥ ಅರಿತು ಮೌಲ್ಯಗಳನ್ನ ಅಳವಡಿಸಿಕೊಂಡು ವಿದ್ಯಾರ್ಥಿ-ಶಿಕ್ಷಕರ ಬಾಂಧವ್ಯದ ನಿಜ ಇರುಹನ್ನ ಹುಡುಕಬೇಕಿದೆ. ಶಿಕ್ಷಕರ ದಿನಾಚರಣೆ ನಮ್ಮ ನಿಮ್ಮೆಲ್ಲರೊಳು ಒಂದಾಗಿ ಹೊಸ ಕನಸಿನ ಆಸೆ ಮೂಡಿಸಬೇಕಿದೆ.  
        -ಚೇತನ್ ಸೊಲಗಿ, ಮುಂಡರಗಿ
                ಪತ್ರಿಕಕೋದ್ಯಮ ವಿಭಾಗ , 
           ವಿಜಯನಗರ ಶ್ರೀ ಕೃಷ್ಣದೇವರಾಯ ವಿ. ವಿ.  
  
Images: net
Please follow and like us:
error