ಶ್ರೀರಾಮುಲು ಬೆಂಬಲಿಗರಿಗೆ ಈಶ್ವರಪ್ಪ ಸೂಚನೆ; ಅಭಿಮಾನವಿದ್ದರೆ ಅಧಿಕಾರ ಬಿಡಿ

ಬಳ್ಳಾರಿ: ಶ್ರೀರಾಮುಲು ಜತೆ ತೆರಳಿರುವ ಬಿಜೆಪಿ ಶಾಸಕರು, ಸಂಸದರಿಗೂ ಸ್ವಾಭಿಮಾನ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಜಿಲ್ಲೆಯ ಕೆಲವು ಶಾಸಕರು ಮತ್ತು ಸಂಸದರಿಗೆ ಎಚ್ಚರಿಕೆ ನೀಡಿದರು.
ನಗರದಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಘಟಕದ ನೂತನ ಕಚೇರಿ ಉದ್ಘಾಟಿಸಿದ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು `ನಮ್ಮನ್ನು ಕಿತ್ತಸೆದರೂ ಪರವಾಗಿಲ್ಲ. ಶ್ರೀರಾಮುಲುಗೇ ಬೆಂಬಲ ನೀಡುತ್ತೇವೆ ಎಂದು ತಿಳಿಸಿರುವ ಶಾಸಕರು, ಸಂಸದರು ಮತ್ತು ಸ್ಥಳೀಯ ಸಂಸ್ಥೆಯ ಸದಸ್ಯರನ್ನು ಯಾವಾಗ ಪಕ್ಷದಿಂದ ಕಿತ್ತು ಹಾಕಬೇಕು ಎಂಬುದು ನಮಗೆ ಚೆನ್ನಾಗಿ ಗೊತ್ತು` ಎಂದರು.
`ಶಿಸ್ತು ಕ್ರಮ ಕೈಗೊಂಡರೂ ಪರವಾಗಿಲ್ಲ ಎಂಬ ಪೌರುಷದ ಮಾತನ್ನಾಡಬೇಡಿ. ಜನತೆ ಬಿಜೆಪಿಗೆ ಮತ ನೀಡಿದ್ದಾರೆ, ನಿಮಗಲ್ಲ. ಮತದಾರರಿಗೆ ದ್ರೋಹ ಬಗೆಯುವಂತಹ ಕೆಲಸ ಮಾಡಬಾರದು` ಎಂದು ಅವರು ಸಲಹೆ ನೀಡಿದರು.
`ಬಳ್ಳಾರಿ ಗ್ರಾಮೀಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಪಕ್ಷದ ಸ್ವಾಭಿಮಾನದ ಪ್ರಶ್ನೆಯಾಗಿದೆ. ಹೊಸಪೇಟೆ ಶಾಸಕ ಆನಂದ್‌ಸಿಂಗ್ ಮತ್ತು ಸಿರುಗುಪ್ಪ ಶಾಸಕ ಸೋಮಲಿಂಗಪ್ಪ ಪಕ್ಷದೊಂದಿಗೇ ಇರುವುದಾಗಿ ತಿಳಿಸಿದ್ದಾರೆ` ಎಂದರು. `ಜನತೆ ಆಯ್ಕೆ ಮಾಡಿ ಕಳುಹಿಸಿರುವ ಕೆಲ ಶಾಸಕರು ಇದೀಗ ಶ್ರೀರಾಮುಲು ಜತೆ ಹೋಗಿದ್ದಾರೆ. ಆದರೆ, ಜನ ನಮ್ಮ ಜತೆಗೇ ಇದ್ದಾರೆ. ಬಿಜೆಪಿ ಸರ್ಕಾರ ಮಾಡಿರುವ ಸಾಧನೆಯನ್ನು ಮನೆಮನೆಗೆ ತೆರಳಿ ಮನವರಿಕೆ ಮಾಡೋಣ` ಎಂದು ಅವರು ಮನವಿ ಮಾಡಿದರು.
`ಯಾವುದೋ ವ್ಯಕ್ತಿ ಪಕ್ಷವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವುದಕ್ಕೆ ಬಿಟ್ಟು ನಾವೂ ತಪ್ಪು ಮಾಡಿದ್ದೇವೆ. ಉಪ ಚುನಾವಣೆಯಲ್ಲಿ ಕೇವಲ ಶ್ರೀರಾಮುಲು ಅವರನ್ನು ಸೋಲಿಸುವುದು ನಮ್ಮ ಗುರಿ ಅಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ನಮ್ಮ ವೈರಿಗಳು ಎಂದು ಈಶ್ವರಪ್ಪ ಹೇಳಿದರು.
`ಇದೀಗ ಪಕ್ಷಕ್ಕೆ ತಿರುಗಿಬಿದ್ದಿರುವ ಕೆಲವರು ಪಕ್ಷದಿಂದ ಪ್ರಯೋಜನ ಪಡೆದಿಲ್ಲವೇ?` ಎಂದು ಪ್ರಶ್ನಿಸಿದ ಅವರು, `ಜಿಲ್ಲೆಯ ಮೂವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ರಾಜ್ಯದ ಬೇರೆ ಜಿಲ್ಲೆಗಳಿಗೆ ಪಕ್ಷ ಈ ರೀತಿ ಸ್ಥಾನಮಾನ ನೀಡಿರಲಿಲ್ಲ. ಅವರಿಂದ ನಮಗೂ ಅನುಕೂಲ ಆಗಿದೆ ಎಂದೇ ಅವರಿಗೂ ಅನುಕೂಲ ಮಾಡಿಕೊಟ್ಟೆವು` ಎಂದು ವಿವರಿಸಿದರು. 
`ಎಚ್. ಡಿ. ಕುಮಾರಸ್ವಾಮಿ ಬಳ್ಳಾರಿ ಉಪಚುನಾವಣೆಯಲ್ಲಿ ಅಭ್ಯರ್ಥಿಯನ್ನು ಯಾಕೆ ಕಣಕ್ಕಿಳಿಸಲಿಲ್ಲ ಎಂಬುದಕ್ಕೆ ಉತ್ತರ ನೀಡಲಿ. ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸದ ತಮ್ಮ ನಾಯಕನನ್ನು ಬಳ್ಳಾರಿಗೆ ಬರುವುದಕ್ಕೇ ಅವಕಾಶ ನೀಡದ ಇಲ್ಲಿನ ಜೆಡಿಎಸ್ ಕಾರ್ಯಕರ್ತರು ಅಭಿನಂದನೆಗೆ ಅರ್ಹರು` ಎಂದರು.
Please follow and like us:
error

Related posts

Leave a Comment