ಆಧುನಿಕ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ಸಂಸದರಿಂದ ಕೇಂದ್ರ ಕೃಷಿ ಸಚಿವರಿಗೆ ಮನವಿ

ಭಾರತೀಯ ಕೃಷಿ ಸಂಶೋಧನಾ ಅನುಸಂಧಾನ ಸಂಸ್ಥೆ (ಐಸಿಎಆರ್) ವತಿಯಿಂದ ಆಧುನಿಕ ಕೃಷಿ ಸಂಶೋಧನಾ ಕೇಂದ್ರವನ್ನು ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದ ಶಿವರಾಮಗೌಡ ಅವರು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
  ಉತ್ತರ ಕರ್ನಾಟಕ ಭಾಗದ ರೈತರ ಮನೋಸ್ಥೈರ್ಯ ಹೆಚ್ಚಿಸಲು ಈ ಭಾಗದಲ್ಲಿ ಆಧುನಿಕ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್ (ಐಸಿಎಆರ್), ಕೃಷಿ ಭವನ, ನವದೆಹಲಿ ಇವರ ವತಿಯಿಂದ ಗಂಗಾವತಿಯಲ್ಲಿ ಆಧುನಿಕ ಕೃಷಿ ಸಂಶೋಧನಾ ಕೇಂದ್ರ ಸ್ಥಾಪಿಸುವಂತೆ ಕೋರಿ ಸಂಸದ ಶಿವರಾಮಗೌಡ ಅವರು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರನ್ನು ಡಿ. ೧೯ ರಂದು ಭೇಟಿಯಾಗಿ ಮನವಿ ಸಲ್ಲಿಸಿದರು.  ಇತ್ತೀಚಿನ ವರ್ಷಗಳಲ್ಲಿ ದೇಶದ ಹಾಗೂ ಮುಖ್ಯವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಾದ ಕೊಪ್ಪಳ, ಗದಗ, ಧಾರವಾಡ, ಬೆಳಗಾವಿ, ಬಿಜಾಪುರ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಉಂಟಾದ ಅತಿವೃಷ್ಠಿಯಿಂದಾಗಿ ಉತ್ತಮವಾಗಿ ಬೆಳೆದು ನಿಂತ ಬೆಳೆ ನಾಶವಾಗಿದೆ ಅಲ್ಲದೆ, ನಾಲಾ, ಹಳ್ಳದ ಪಕ್ಕದಲ್ಲಿರುವ ರೈತರ ಸಾಗುವಳಿ ಜಮೀನಿನಲ್ಲಿ ಹೂಳು ಶೇಖರಣೆಯಾಗಿ ಸಾಗುವಳಿ ಮಾಡುವುದೇ ದುಸ್ತರವಾಗಿದೆ.  ಅತಿವೃಷ್ಠಿ ಹಾಗೂ ಹವಾಮಾನ ವೈಪರಿತ್ಯದಿಂದಾಗಿ ಮಣ್ಣಿನ ಆರೋಗ್ಯ ಹಾಳಾಗಿದ್ದು, ಬೆಳೆ ಉತ್ಪಾದನೆಯಲ್ಲಿ ಸಾಕಷ್ಟು ಕುಂಠಿತವಾಗಿದೆ.  ಕೊಪ್ಪಳ ಜಿಲ್ಲೆಯ ಮುಖ್ಯ ಬೆಳೆಗಳಾದ ಭತ್ತ, ಸೂರ್ಯಕಾಂತಿ, ಮೆಕ್ಕೆಜೋಳ, ಹತ್ತಿ, ಶೇಂಗಾ, ತೊಗರಿ, ಕಡಲೆ ಇತ್ಯಾದಿ ಬೆಳೆಗಳು ಜೊತೆಗೆ ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ಬಾಳೆ, ದ್ರಾಕ್ಷಿ, ಪಪಾಯ ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಿದ್ದು, ಬೆಳೆಗೆ ಬೇಕಾಗುವ ತಾಂತ್ರಿಕ ಮಾಹಿತಿಯನ್ನು ರೈತರಿಗೆ ನೀಡಲು ಆಧುನಿಕ ಕೃಷಿ ಸಂಶೋಧನಾ ಸಂಸ್ಥೆಯನ್ನು ಜಿಲ್ಲೆಯ ಗಂಗಾವತಿಯಲ್ಲಿ ಸ್ಥಾಪಿಸಬೇಕು.  ಜಿಲ್ಲೆಯಲ್ಲಿ ಸಣ್ಣ, ಅತಿಸಣ್ಣ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರ ಸಂಖ್ಯೆ ಗಣನೀಯವಾಗಿದ್ದು, ಸದ್ಯದ ಹವಾಮಾನ ವೈಪರಿತ್ಯದಿಂದಾಗಿ ರೈತರು ಕೃಷಿ ಮತ್ತು ತೋಟಗಾರಿಕೆ ಅಭಿವೃದ್ಧಿಯ ಬಗ್ಗೆ ಆಸಕ್ತಿ ಕಳೆದುಕೊಳ್ಳುವ ಹಂತ ತಲುಪಿದೆ.  ರೈತರಿಗೆ ಮನೋಸ್ಥೈರ್ಯ ತುಂಬುವ ಕೆಲಸವಾಗಬೇಕಾಗಿದ್ದು, ನಿಖರ ಕೃಷಿಯ ಆಧುನಿಕ ಸಂಶೋಧನಾ ಸಂಸ್ಥೆಯೊಂದು ಈ ಭಾಗಕ್ಕೆ ಅತ್ಯಗತ್ಯವಾಗಿದೆ.  ಈ ನಿಟ್ಟಿನಲ್ಲಿ ಆಧುನಿಕ ಕೃಷಿ ಸಂಶೋಧನಾ ಕೇಂದ್ರವನ್ನು ಗಂಗಾವತಿಯಲ್ಲಿ ಸ್ಥಾಪಿಸಿದಲ್ಲಿ, ಸ್ಥಳೀಯ ಬೇಡಿಕೆಗನುಗುಣವಾಗಿ ಪೋಷಕಾಂಶಗಳ ಬಳಕೆ ಹಾಗೂ ನೀರಿನ ಸದ್ಬಳಕೆಗೆ ಸಹಾಯಕಾರಿಯಾಗಲಿದೆ ಎಂದು ಸಂಸದ ಶಿವರಾಮಗೌಡ ಅವರು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರನ್ನು ಡಿ. ೧೯ ರಂದು ನವದೆಹಲಿಯ ಅವರ ಕಚೇರಿಯಲ್ಲಿ ಭೇಟಿಯಾಗಿ ಒತ್ತಾಯಿಸಿದ್ದಾರೆ.  ಧಾರವಾಡ ಸಂಸದ ಪ್ರಹ್ಲಾದ ಜೋಷಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply