ಭ್ರಷ್ಟಾಚಾರ ತಡೆಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆ

 ‘ಜನಚೇತನ’ ಯಾತ್ರೆಯ ಸಮಾರೋಪದಲ್ಲಿ ಅಡ್ವಾಣಿ
 ಹೊಸದಿಲ್ಲಿ, ನ.20: ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಅಂತ್ಯವಿಲ್ಲ. ಅವೆಲ್ಲಕ್ಕಿಂತ ಮುಖ್ಯವಾಗಿ ಭ್ರಷ್ಟಾಚಾರ ತಡೆಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿದೆ. ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟ ಮುಂದುವರಿಯಲಿದ್ದು, ನಿರಂತರವಾಗಿ ಸಾಗಲಿದೆ ಎಂದು ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಘೋಷಿಸಿದರು.
ಕಪ್ಪು ಹಣ ವಾಪಸಾತಿ ಹಾಗೂ ಭ್ರಷ್ಟಾಚಾರ ವಿರುದ್ಧ ಅರಿವು ಮೂಡಿಸುವ ನಿಟ್ಟಿನಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ದೇಶಾದ್ಯಂತ ನಡೆಸಿದ 38 ದಿನಗಳ ‘ಜನಚೇತನ’ಯಾತ್ರೆಯನ್ನು ರವಿವಾರ ಹೊಸದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಸಮಾಪನಗೊಳಿಸಿ ಅವರು ಮಾತನಾಡುತ್ತಿದ್ದರು.
ಪ್ರಧಾನಿ ಮನಮೋಹನ್ ಸಿಂಗ್ ಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದರೂ, ದೇಶದ ಹಣದುಬ್ಬರ ದಿನೇ ದಿನೇ ಏರಿಕೆಯಾಗುತ್ತಿದೆ. ಹಾಗಾಗಿ ಯುಪಿಎ ವಿರುದ್ಧ ದೇಶಾದ್ಯಂತ ಜನಾಕ್ರೋಶ ಹೆಚ್ಚಾಗಿದೆ ಎಂದ ಅವರು, ಭ್ರಷ್ಟಾಚಾರದಿಂದ ಕೇಂದ್ರ ಸಚಿವರು ಜೈಲು ಸೇರುತ್ತಿದ್ದರೂ ಕೂಡ ಸರಕಾರಕ್ಕ್ಕೆ ಯಾವುದೇ ಚಿಂತೆ ಇಲ್ಲ ಎಂದು ಯುಪಿಎ ಸರಕಾರದ ವಿರುದ್ಧ ವ್ಯಾಪಕ ವಾಗ್ದಾಳಿ ನಡೆಸಿದರು.
ಯುಪಿಎ ಸರಕಾರಕ್ಕೆ ಕಪ್ಪು ಹಣದ ವಾಪಸಾತಿ ಬಗ್ಗೆಯೂ ಕಾಳಜಿ ಇಲ್ಲ. ಆ ಬಗ್ಗೆ ಮಾಹಿತಿಯೂ ನೀಡುತ್ತಿಲ್ಲ. ಭ್ರಷ್ಟಾಚಾರ ಮಟ್ಟಹಾಕಲೂ ಮುಂದಾಗುತಿತಿಲ್ಲ. ಈ ಬಗ್ಗೆ ಜನರಲ್ಲಿ ಮತ್ತಷ್ಟು ಅರಿವು ಮೂಡಬೇಕು. ಬಲಿಷ್ಠ ಜನಲೋಕಪಾಲ್ ಮಸೂದೆ ಜಾರಿಯಾಗಲೇಬೇಕು ಎಂದು ಅಡ್ವಾಣಿ ಒತ್ತಾಯಿಸಿದರು.
ಬಿಜೆಪಿಯ ಹಿರಿಯ ಮುಖಂಡ ವಾಜಪೇಯಿ ಅನಾರೋಗ್ಯದ ಕಾರಣದಿಂದ ನಮ್ಮ ಜತೆಗೆ ಇಲ್ಲದಿರುವುದು ದೊಡ್ಡ ಕೊರತೆಯಾಗಿತ್ತು. ಆದರೂ ದೇಶದ 22 ರಾಜ್ಯ ಹಾಗೂ ಐದು ಕೇಂದ್ರಾಡಳಿತ ಪ್ರದೇಶದಲ್ಲಿ ಜನಚೇತನ ಭಾರೀ ಬೆಂಬಲ ದೊರೆತ್ತಿತ್ತು ಎಂದು ಅವರು ಹೇಳಿದರು.
ತಮಿಳುನಾಡಿನಲ್ಲಿ ನಮ್ಮ ಪಕ್ಷದ ಶಾಸಕರು, ಸಂಸದರು ಇಲ್ಲ. ಆದರೂ ಕೂಡ ಸುರಿಯುವ ಮಳೆಯನ್ನೂ ಲೆಕ್ಕಿಸದೇ ಅಪಾರ ಪ್ರಮಾಣದಲ್ಲಿ ಜನ ಸಾಗರವೇ ಅಲ್ಲಿ ಸೇರಿತ್ತು ಎಂದು ಯಾತ್ರೆಯ ಅನುಭವವನ್ನು ಅವರು ಬಿಚ್ಚಿಟ್ಟರು.
ಸಮಾರಂಭದಲ್ಲಿ ಬಿಜೆಪಿ ಮುಖಂಡರಾದ ನಿತಿನ್ ಗಡ್ಕರಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಜೆಡಿಯು ಮುಖಂಡ ಶರದ್ ಯಾದವ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು

Leave a Reply