ಚುಟುಕುಗಳು -ಶರಣು ಹಂಪಿ

ಪ್ರಾರ್ಥನೆ
ಜೀವನದಂಗಳದಲ್ಲಿ
ಪ್ರೇಮದಾಟವನ್ನು
ಆಡುವ ಮುಂಚೆ
ಸೋಲು-ಗೆಲುವುಗಳ
ಪರಮಾರ್ಶಿಸಬೇಕಾಗಿ
ಕಳಕಳಿಯ ಕೋರಿಕೆ

ಪ್ರೇಮಿ
ತನುಮನವೆಲ್ಲಾ ವ್ಯಾಪಿಸಿ
ಅಣುಅಣುವಿನಲ್ಲೂ
ನೋವೇ ತುಂಬಿ
ಬದುಕಿನಿಂದ ದೂರವಾಗಿ
ನೋವಿನ ತರಂಗವನ್ನೇ ಮೀಟುತ್ತಿರು
ಎಂದು ವಿಷಾದ ಗೀತೆಯ
ಉಡುಗೊರೆ ಕೊಟ್ಟು ಹೋದವ

ತರ್ಪಣ
ಬಾಂಧವ್ಯಗಳ ಜೊತೆ
ಬಂಧುವಿನಂತೆ ನಟಿಸಿ
ಆಟದ ವಸ್ತುವಿನಂತೆ
ನನ್ನ ಬಳಸಿಕೊಳ್ಳಲು ಬಯಸಿ
ಮುಗ್ಧ ಭಾವನೆಗಳ ಕೊಂದ
ನಿನ್ನ ಮನಸಿಗೆ ಅಶ್ರುನಮನ

ವಿನಂತಿ
ಎದೆಯಾಳದಿಂದ ಹೊರಹೊಮ್ಮುವ
ನಿಟ್ಟುಸಿರಿನ ಬಿಸಿ
ನಿನ್ನ ಸುಡುವ ಮುನ್ನ
ಹುಡುಗಾಟದಲ್ಲಿ ನೀನು
ನನ್ನೆದೆಯಲ್ಲಿಟ್ಟ ನೆನಪಿನ
ಗುರುತನ್ನು ಕಾಣದಂತೆ ಅಳಿಸಿಬಿಡು

ನಾಚಿಕೆ
ಸೂರ್ಯ ರಶ್ಮಿಗೆ
ಸಂಕೋಚದಿಂದ
ಮುದುಡಿದ ತಾವರೆಯಂತೆ
ನಿನ್ನ ನೋಡಿದಾಕ್ಷಣ
ಕೆಂಪೇರಿದ ಕೆನ್ನೆಯೊಂದಿಗೆ
ತಲೆಬಾಗಿಸಿ, ಕಾಲ್ಬೆರಳಿನಿಂದ
ನೆಲಕೆರೆದು ವ್ಯಕ್ತಪಡಿಸಿದ
ಹೆಣ್ತನದ ಸೂಚನೆ

ದ್ರೋಹ
ನನ್ನೆಲ್ಲಾ ನಂಬಿಕೆ,
ಭರವಸೆಗಳನ್ನು
ಗಾಳಿಗೆ ತೂರಿ,
ಮನಸಿನರಗಿನ ಮನೆಗೆ
ಕೊಳ್ಳಿ ಇಟ್ಟ
ನಿನ್ನ ಮನದ ಒಳಸಂಚು !!!

ಬದುಕಂದ್ರೆ………
ಎಲ್ಲಾ
ಯಾರೂ ಇಲ್ಲದಂತಹ
ಏಕಾಂಗಿತನವೇ
ತುಂಬಿಕೊಂಡಕತ್ತಲೆ ಕೋಣೆ

ಕಟ್ಟಿಕೊಂಡ ಕನಸುಗಳು
ನಂಬಿಕೆ ಕಳೆದುಕೊಂಡು
ಬೆತ್ತಲಾಗಿ ಸತ್ತು ಮಲಗಿದರೂ
ಜೀವನ ನಡೆಸಬೇಕಾದ ಅನಿವಾರ್ಯತೆ

ನಾನೆಂಬ ಭಾವ ಸತ್ತು
ಇನ್ನೊಬ್ಬರ ಖುಗಾಗಿ
ಸುಳ್ಳೆ ಸುಳ್ಳು ನಗುತ್ತಾ
ಕಳೆಯಬೇಕಾಗಿರುವ ಮನೋಜ್ಞ ಅಭಿನಯದ
ಸುಂದರ ನಾಟಕ

ಒಂದು ಜೀವದ ನೋವನ್ನು
ಬಲವಂತದಿಂದ ಕಿತ್ತುಕೊಂಡು
ಮತ್ತೊಂದು ಜೀವಿಯ ಸಂತೋಷಕ್ಕೆ ಅದನ್ನು
ಟಾನಿಕ್‌ನಂತೆ ನೀಡುವಕಪಟ ವೈದ್ಯ

ಸಂತೋಷ, ಹತಾಶೆ, ಸೆಳೆತ, ಮಿಡಿತ
ಹೀಗೆ ನೂರಾರು ಭಾವನೆಗಳನ್ನು
ಕಟ್ಟಿಕೊಂಡು ಶರವೇಗದಲ್ಲಿ ಓಡುವ ಕಾಲರಾಯನ ಗೆಳೆಯ

Please follow and like us:
error