ಗ್ರಾಮಗಳ ಕುಡಿಯುವ ನೀರಿನ ಗುಣಮಟ್ಟ ೩ ತಿಂಗಳಿಗೊಮ್ಮೆ ಪರೀಕ್ಷಿಸಿ – ಕೆ.ಪಿ. ಮೋಹನ್‌ರಾಜ್

  ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಪೂರೈಕೆ ಮಾಡಲಾಗುತ್ತಿರುವ ಕುಡಿಯುವ ನೀರಿನ ಗುಣಮಟ್ಟವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರೀಕ್ಷಿಸಿ, ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿಯ ಪ್ರಭಾರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಕೆ.ಪಿ. ಮೋಹನರಾಜ್ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಜಿ.ಪಂ. ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
  ಜಿಲ್ಲೆಯಲ್ಲಿ ಇತ್ತೀಚೆಗೆ ವಿವಿಧ ಗ್ರಾಮಗಳಲ್ಲಿ ವಾಂತಿ-ಬೇಧಿ ಪ್ರಕರಣಗಳು ಕಂಡು ಬರುತ್ತಿದ್ದು, ಕುಡಿಯುವ ನೀರು ಕಲುಷಿತವಾಗಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.   ವಾಂತಿಭೇದಿಯಿಂದ ಲಕ್ಮಾಪುರ ಗ್ರಾಮದಲ್ಲಿ ೨೭ ಜನ, ಹಿರೇಬೊಮ್ಮನಾಳದಲ್ಲಿ ೩೪ ಹಾಗೂ ಕೋಮಲಾಪುರ ಗ್ರಾಮದಲ್ಲಿ ೨೪ ಜನ ತೀವ್ರ ಅಸ್ವಸ್ಥಗೊಂಡಿರುವ ಪ್ರಕರಣ ಇತ್ತೀಚೆಗಷ್ಟೇ ವರದಿಯಾಗಿದೆ.  ಪೈಪ್‌ಲೈನ್‌ನಲ್ಲಿ ಸೋರಿಕೆಯಿಂದ ಕಲುಷಿತಗೊಂಡ ನೀರನ್ನು ಗ್ರಾಮಸ್ಥರು ಕುಡಿಯಲು ಬಳಕೆ ಮಾಡಿರುವುದೇ ಈ ಎಲ್ಲ ಗ್ರಾಮಗಳಲ್ಲಿನ ವಾಂತಿಬೇಧಿ ಪ್ರಕರಣಕ್ಕೆ ಕಾರಣವಾಗಿದೆ.  ಗ್ರಾಮೀಣ ಪ್ರದೇಶಗಳಲ್ಲಿ ಕೈಗೊಳ್ಳುವ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟದ ಪೈಪ್ ಬಳಸಿರುವುದು ಇದರಿಂದ ಸಾಬೀತಾಗುತ್ತದೆ.   ಎಲ್ಲ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಪೂರೈಕೆ ಮಾಡಲಾಗುತ್ತಿರುವ ಕುಡಿಯುವ ನೀರು ಯೋಗ್ಯವಾಗಿದೆಯೋ, ಇಲ್ಲವೋ ಎಂಬುದರ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ನೀರಿನ ಗುಣಮಟ್ಟವನ್ನು ಪರೀಕ್ಷಿಸಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾಧಿಕಾರಿ, ಜಿ.ಪಂ. ಇಂಜಿನಿಯರಿಂಗ್ ವಿಭಾಗಕ್ಕೆ ವರದಿಯನ್ನು ತಪ್ಪದೆ ಸಲ್ಲಿಸಬೇಕು.  ಕಳೆದೆರಡು ವರ್ಷಗಳಿಂದ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಎಲ್ಲ ಕಾಮಗಾರಿಗಳ ಬಗ್ಗೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಸದ್ಯದ ನೀರಿನ ಮೂಲ, ಕೊಳವೆಬಾವಿಗಳ ಸ್ಥಿತಿ-ಗತಿ ಬಗ್ಗೆ ವಿಸ್ತೃತ ವರದಿಯನ್ನು ತಯಾರಿಸಿ ಹದಿನೈದು ದಿನಗಳ ಒಳಗಾಗಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಇದಕ್ಕೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕಟ್ಟಿಮನಿ ಅವರು, ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ಗಳ ಮೇಲೆಯೇ ತಿಪ್ಪೆಗುಂಡಿಗಳನ್ನು ಹಾಕಿರುವುದು ಕಂಡುಬಂದಿದ್ದು, ಇಂತಹ ತಿಪ್ಪೆಗುಂಡಿಗಳಲ್ಲಿನ ಗೊಬ್ಬರವನ್ನು ತೆಗೆಯುವ ಸಂದರ್ಭದಲ್ಲಿ ಪೈಪ್‌ಲೈನ್ ಒಡೆದು ಹಾಕುತ್ತಿದ್ದಾರೆ, ನಂತರ ಇದರ ಮೇಲೆಯೇ ಮತ್ತೆ ತಿಪ್ಪೆ ಹಾಕುವುದರಿಂದ, ನೀರು ಕಲುಶಿತಗೊಳ್ಳಲು ಕಾರಣವಾಗುತ್ತಿದೆ.  ಇಂತಹವುಗಳಿಗೆ ಕಡಿವಾಣ ಹಾಕುವುದು ಅಗತ್ಯವಾಗಿದೆ ಎಂದರು.
ಬಿಸಿಯೂಟ ಸ್ಥಗಿತಕ್ಕೆ ಅಸಮಾಧಾನ : ವಾಂತಿಭೇದಿ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ ಹಿರೇಬೊಮ್ಮನಾಳ ಗ್ರಾಮದ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ನೀಡುವ ಯೋಜನೆಯನ್ನು ಸ್ಥಗಿತಗೊಳಿಸಿದ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು, ಬಿಸಿಯೂಟ ಸ್ಥಗಿತಗೊಳಿಸಲು ಯಾವುದೇ ಸೂಕ್ತ ಕಾರಣಗಳಿಲ್ಲದಿದ್ದರೂ, ಕಲುಷಿತ ನೀರಿನ ನೆಪವೊಡ್ಡಿ, ಬಿಸಿಯೂಟ ಸ್ಥಗಿತಗೊಳಿಸಿದ್ದಕ್ಕೆ, ವಿವರಣೆ ನೀಡುವಂತೆ ಅಕ್ಷರ ದಾಸೋಹ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಇನ್ನು ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.
ಕೆರೆ ಒತ್ತುವರಿ ತೆರವಿಗೆ ಆದ್ಯತೆ : ಜಿಲ್ಲೆಯ ವಿವಿಧ ಕಡೆ ಕೆರೆ ಒತ್ತುವರಿಯಾಗಿರುವುದಾಗಿ ತಿಳಿದುಬಂದಿದ್ದು, ಇಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕೆರೆ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯವನ್ನು ಶೀಘ್ರ ಪ್ರಾರಂಭಿಸಲಾಗುವುದು, ನಂತರ ಕೆರೆಗಳ ವ್ಯಾಪ್ತಿಗೆ ಗುರುತು ಹಾಕಿ, ಜಿಪಿಎಸ್ ವ್ಯವಸ್ಥೆಗೆ ಅಳವಡಿಸಲಾಗುವುದು.  ಕೆರೆಗಳ ಬದುಗಳನ್ನು ಬಲಪಡಿಸಿ, ಸುತ್ತಮುತ್ತ ಗಿಡಗಳನ್ನು ನೆಡುವ ಕಾರ್ಯ ಮಾಡಲಾಗುವುದು.  ಈ ಮೂಲಕ ಕೆರೆ ಒತ್ತುವರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನರಾಜ್ ಅವರು ಹೇಳಿದರು.
  ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ಮಾತನಾಡಿ, ಜನಸಂಖ್ಯೆ ಆಧಾರದ ಮೇಲೆ, ಹೆಚ್ಚು ಜನಸಾಂದ್ರತೆ ಇರುವಂತಹ ಪ್ರಮುಖ ಗ್ರಾಮಗಳಲ್ಲಿ ಕಸ ವಿಲೇವಾರಿಗೆ ಯೋಜನೆ ರೂಪಿಸಲಾಗಿದೆ.  ಆದರೆ ಸರ್ಕಾರದ ಮಾರ್ಗಸೂಚಿಯಂತೆ ಇದರಲ್ಲಿ ವಾಹನ ಖರೀದಿಗೆ ಅವಕಾಶ ಕಲ್ಪಿಸಲಾಗಿಲ್ಲ.  ವಾಹನ ಖರೀದಿಗೆ ಅವಕಾಶ ನೀಡುವಂತೆ ಕೋರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಮಾಡಿಕೊಳ್ಳಲಾಗಿದ್ದು, ಸದ್ಯದಲ್ಲಿ ಅನುಮತಿ ದೊರೆಯುವ ಸಾಧ್ಯತೆ ಇದೆ.  ಆದ್ದರಿಂದ ಜಿಲ್ಲೆಯ ಪ್ರಮುಖ ೨೦ ಗ್ರಾಮಗಳಲ್ಲಿ ಮನೆ, ಮನೆಗಳಿಂದ ಕಸ ಸಂಗ್ರಹಿಸಿ, ವಿಲೇವಾರಿಗೊಳಿಸುವ ಯೋಜನೆಗೆ ಸರ್ಕಾರಕ್ಕೆ ಪ್ರಸ್ತಾವನೆ ತಯಾರಿಸಬೇಕು, ಅಲ್ಲದೆ ಅಂತಹ ಗ್ರಾಮಗಳಲ್ಲಿ ಕಸ ಸಂಗ್ರಹಣೆಗೆ ಸೂಕ್ತ ಸರ್ಕಾರಿ ಜಮೀನನ್ನು ಗುರುತಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ. ಉಪಕಾರ್ಯದರ್ಶಿ ರವಿ ಬಸರಿಹಳ್ಳಿ ಅವರಿಗೆ ಸೂಚನೆ ನೀಡಿದರು.  ಅಲ್ಲದೆ ಜಿಲ್ಲೆಯಲ್ಲಿ ವಿವಿಧ ಬೆಳೆ, ಗೊಬ್ಬರ, ಬೀಜ ಮುಂತಾದವುಗಳನ್ನು ದಾಸ್ತಾನು ಇರಿಸಲು ಗೋದಾಮುಗಳ ಕೊರತೆ ಇದೆ.  ಜಿಲ್ಲಾ ಕೇಂದ್ರದ ರೈಲ್ವೆ ನಿಲ್ದಾಣಕ್ಕೆ ಹತ್ತಿರದಲ್ಲಿ ಗೋಡೌನ್ ನಿರ್ಮಾಣಕ್ಕೆ ಹಾಗೂ ಜಿಲ್ಲೆಯ ವಿವಿದೆಡೆ ಅಗತ್ಯಕ್ಕನುಗುಣವಾಗಿ ಗೋಡೌನ್‌ಗಳನ್ನು ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ರಾಜ್ಯ ಉಗ್ರಾಣ ನಿಗಮದ ಅಧಿಕಾರಿಗಳಿಗೆ ಜಿ.ಪಂ. ಅಧ್ಯಕ್ಷರು ಸೂಚನೆ ನೀಡಿದರು.
  ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಅನ್ನಪೂರ್ಣ ಕಂದಕೂರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ವಿನಯಕುಮಾರ್ ಮೇಲಿನಮನಿ, ಅಮರೇಶಪ್ಪ ಕುಳಗಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply