೮ನೇ ತರಗತಿ ಪ್ರವೇಶ ಪರೀಕ್ಷೆ ಅರ್ಜಿ ಆಹ್ವಾನ.

ಕೊಪ್ಪಳ, ಜು.೨೪ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಡೆಹರಾಡೂನ್‌ನ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‌ನ ೮ನೇ ತರಗತಿ ಪ್ರವೇಶ ಪರೀಕ್ಷೆಗೆ ಕರ್ನಾಟಕದ ಬಾಲಕರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಜುಲೈ ೨೦೧೬ನೇ ಅಧಿವೇಶನಕ್ಕಾಗಿ ಬೆಂಗಳೂರು ಕೇಂದ್ರದಲ್ಲಿ ಡಿಸೆಂಬರ್ ೦೧ ಮತ್ತು ೦೨ ರಂದು ಅರ್ಹತಾ ಪ್ರವೇಶ ಪರೀಕ್ಷೆಗಳು ನಡೆಯಲಿವೆ. ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಂಗಳೂರು, ದೂರವಾಣಿ ಸಂಖ್ಯೆ: ೦೮೦-೨೫೫೮೯೪೫೯ ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹೊಯ್ಸಳ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಅರ್ಜಿ ಆಹ್ವಾನ.
ಕೊಪ್ಪಳ, ಜು.೨೪  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
     ಇತರರ ಪ್ರಾಣ ರಕ್ಷಣೆಗಾಗಿ ತಮ್ಮ ಪ್ರಾಣದ ಹಂಗನ್ನು ತೊರೆದು ಅಸಾಧಾರಣ ಧೈರ್ಯ, ಸಾಹಸ ಪ್ರದರ್ಶಿಸಿದ ೦೬ ರಿಂದ ೧೫ ವರ್ಷದೊಳಗಿನ ಬಾಲಕರು ಹೊಯ್ಸಳ ಪ್ರಶಸ್ತಿಗೆ ಮತ್ತು ಅಸಾಧಾರಣ ಧೈರ್ಯ, ಸಾಹಸ ಪ್ರದರ್ಶಿಸಿದ ಬಾಲಕಿಯರು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬಾಲಕ, ಬಾಲಕಿಯ ಧೈರ್ಯ, ಸಾಹಸ ಪ್ರಕರಣವು  ೨೦೧೪ ರ ಅಗಸ್ಟ್ ನಿಂದ ೨೦೧೫ ರ ಜುಲೈ ತಿಂಗಳೊಳಗೆ ಜರುಗಿರಬೇಕು. ಅಲ್ಲದೇ, ಪ್ರಶಸ್ತಿಗಾಗಿ ಪ್ರತಿಭೆಯನ್ನು ಜಿಲ್ಲಾ ಮಟ್ಟದಲ್ಲಿ ಗುರುತಿಸಿರಬೇಕು. ಈ ಬಗ್ಗೆ ದಿನಪತ್ರಿಕೆಗಳ ಪ್ರಕಟಣೆಯ ತುಣುಕುಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ನಿಗದಿತ ಅರ್ಜಿ ನಮೂನೆಯನ್ನು ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಭವನ, ಕೊಪ್ಪಳ ಇವರಿಂದ ಪಡೆಯಬಹುದಾಗಿದ್ದು, ಭರ್ತಿ ಮಾಡಿದ ಅರ್ಜಿಗಳನ್ನು ಆಗಸ್ಟ್ ೧೦ ರೊಳಗಾಗಿ   ಸಲ್ಲಿಸಬಹುದಾಗಿದೆ ಎಂದು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  
ಕೊಪ್ಪಳ ಬಿಡಾಡಿ ದನಗಳ ಬಹಿರಂಗ ಹರಾಜು.
ಕೊಪ್ಪಳ, ಜು.೨೪  ಕೊಪ್ಪಳ ನಗರದ ರಸ್ತೆ, ಬೀದಿ ಮತ್ತು ವಿವಿಧ ಸ್ಥಳಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಉಂಟುಮಾಡುತ್ತಿರುವ ಹಾಗೂ ಅಪಾಯ ತಂದೊಡ್ಡುತ್ತಿರುವ ಬಿಡಾಡಿ ದನಗಳನ್ನು ಜು.೩೧ ರಂದು ಕಂಡಲ್ಲಿಯೇ ಬಹಿರಂಗ ಹರಾಜು ಹಾಕಲಾಗುವುದು ಎಂದು ಕೊಪ್ಪಳ ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದ್ ತಿಳಿಸಿದ್ದಾರೆ.
     ಕೊಪ್ಪಳ ನಗರಸಭಾ ವ್ಯಾಪ್ತಿಯಲ್ಲಿ ಬಿಡಾಡಿ ದನಗಳ ಹಾವಳಿ ಬಗ್ಗೆ ಅವುಗಳ ಮಾಲೀಕರಿಗೆ ಈಗಾಗಲೇ ಸಾಕಷ್ಟು ಬಾರಿ ಪ್ರಕಟಣೆ ಮೂಲಕ ಎಚ್ಚರಿಸಲಾಗಿತ್ತು ಮತ್ತು ಎಚ್ಚರಿಕೆಗೆ ಸ್ಪಂದಿಸದಿದ್ದರಿಂದ ಅವುಗಳನ್ನು ಬಂಧಿಸಿ ಗೋಶಾಲೆಗೆ ವರ್ಗಾಯಿಸಲಾಗಿತ್ತು. ಆದರೆ ದನಗಳು ತಮ್ಮವೆಂದು ವಾದ ಮಾಡಿದ ಕೆಲವರು ವ್ಯಾಜ್ಯವನ್ನು ಪೊಲೀಸ್ ಠಾಣೆವರೆಗೂ ಕೊಂಡೊಯ್ದರು. ಇನ್ನು ಕೆಲವರು ಗೋಶಾಲೆಯವರೊಂದಿಗೆ ಜಗಳವಾಡಿ, ವರ್ಗಾಯಿಸಿದ ದನಗಳನ್ನು ತೆಗೆದುಕೊಂಡು ಹೋದರು. ಬಳಿಕ ಎರಡು ತಿಂಗಳ ಕಾಲ ಸುಮ್ಮನಿದ್ದ ದನಗಳ ಮಾಲೀಕರು ಮತ್ತದೇ ಪ್ರಕ್ರಿಯೆಯನ್ನು ಮುಂದುವರೆಸಿದ್ದು, ಪುನಃ ದನಗಳನ್ನು ರಸ್ತೆಗೆ ಬಿಟ್ಟಿದ್ದಾರೆ.
     ಇದರಿಂದಾಗಿ ನಗರದ ರಸ್ತೆ, ಬೀದಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿರುವ ಈ ಬಿಡಾಡಿ ದನಗಳು ಇತ್ತೀಚಿಗೆ ನಗರದ ಕುಷ್ಟಗಿ ರಸ್ತೆಯಲ್ಲಿ ಒಂದು ಮಗುವಿಗೆ ಹಾಗೂ ನಗರಸಭೆ ಎದುರು ಒಬ್ಬ ಮನುಷ್ಯನಿಗೆ ಪ್ರಾಣಾಪಾಯ ತಂದೊಡ್ಡಿದ್ದು ಪ್ರತ್ಯಕ್ಷದರ್ಶಿಗಳಿಂದ ತಿಳಿದುಬಂದಿದೆ.  ಅಲ್ಲದೇ ನಗರ ಸುಂದರೀಕರಣ ದೃಷ್ಠಿಯಿಂದ ರಸ್ತೆ ವಿಭಜಕಗಳಲ್ಲಿ ಹಾಕಿರುವ ಗಿಡಗಳನ್ನು ಸಹ ಕಿತ್ತು ತಿನ್ನುತ್ತಿವೆ. ಕರ್ನಾಟಕ ಪುರಸಭೆ ಕಾಯ್ದೆ ೧೯೬೪ ಕಲಂ ೨೩೯ ರನ್ವಯ ಸಾರ್ವಜನಿಕ ಬೀದಿ ಅಥವಾ ಸ್ಥಳಗಳಲ್ಲಿ ಸಂಚಾರಕ್ಕೆ ಅಡ್ಡಿ ಅಥವಾ ಅಪಾಯ ಉಂಟುಮಾಡುವ ಜಾನುವಾರುಗಳಿಗೆ ಹಾಗೂ ರಕ್ಷಕನಿಲ್ಲದೇ ಜಾನುವಾರುಗಳನ್ನು ಬಿಡಾಡಿಯಾಗಿ ಬಿಟ್ಟು ಉಪದ್ರವವನ್ನುಂಟು ಮಾಡುವವರು ದಂಡನೆಗೆ ಅರ್ಹರಾಗಿರುತ್ತಾರೆ.
     ಈ ನಿಟ್ಟಿನಲ್ಲಿ ನಗರಸಭೆ ವತಿಯಿಂದ ಬಿಡಾಡಿ ದನಗಳ ಮಾಲೀಕರಿಗೆ ಕೊನೆಯ ಎಚ್ಚರಿಕೆ ನೀಡಲಾಗುತ್ತಿದ್ದು, ಮೂರು ದಿನಗಳಲ್ಲಿ ತಮ್ಮ ದನಗಳನ್ನು ತೆಗೆದುಕೊಂಡು ಹೋಗಬೇಕು. ಇಲ್ಲವಾದಲ್ಲಿ ಜು.೩೧ ರಂದು ಬೆಳಿಗ್ಗೆ ೧೨ ಗಂಟೆಗೆ ಬಿಡಾಡಿ ದನಗಳನ್ನು ಕಂಡಲ್ಲಿಯೇ ಬಹಿರಂಗ ಹರಾಜು ಹಾಕಲಾಗುವುದು ಎಂದು ತಿಳಿಸಿರುವ ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದ್ ಅವರು, ನಂತರ ಎದುರಾಗುವ ಕ್ಲೇಮು ಅಥವಾ ನಷ್ಟಗಳಿಗೆ ಕೊಪ್ಪಳ ನಗರಸಭೆ ಜವಾಬ್ದಾರಿಯಾಗಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ. 

Please follow and like us:

Leave a Reply