ಮೋದಿಯ ವಿರುದ್ಧ ವ್ಯಾಪಕ ಪ್ರತಿಭಟನೆ

ಗುಜರಾತ್ ಹತ್ಯಾಕಾಂಡ ಸಂತ್ರಸ್ತರ ಬಂಧನ
ಸಾರಾಭಾಯಿ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕರ್ತರು ಜೈಲಿಗೆ
ನರೋಡಾ, : ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ‘ಸದ್ಭಾವನಾ ಉಪವಾಸ’ದ ವಿರುದ್ಧ ಗುಜರಾತ್‌ನಲ್ಲಿ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದೆ. ಗುಜರಾತ್ ಹತ್ಯಾಕಾಂಡದ ಸಂತ್ರಸ್ತರು ಮೋದಿ ಉಪವಾಸ ಪ್ರಹಸನದ ವಿರುದ್ಧ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿಯ ಮಿತ್ರಪಕ್ಷವಾದ ಜೆಡಿಯು ಮೋದಿಯ ಉಪವಾಸವನ್ನು ಖಂಡಿಸಿದ್ದು, ಅವರು ರಾಜಧರ್ಮವನ್ನು ಪಾಲಿಸಬೇಕೆಂದು ಆಗ್ರಹಿಸಿದರು.ಎರಡನೆಯ ದಿನವಾದ ಇಂದು ಗುಜರಾತ್ ಹತ್ಯಾಕಾಂಡ ಸಂತ್ರಸ್ತರು ಸಾಮಾಜಿಕ ಕಾರ್ಯಕರ್ತೆ ಹಾಗೂ ಖ್ಯಾತ ನೃತ್ಯಗಾತಿ ಮಲ್ಲಿಕಾ ಸಾರಾಭಾಯಿ ನೇತೃತ್ವದಲ್ಲಿ ಪ್ರತಿಭಟನೆಗಿಳಿದಾಗ ಪೊಲೀಸರು ಮಧ್ಯಪ್ರವೇಶಿಸಿ ಅವರನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಮುಕುಲ್ ಸಿನ್ಹಾ, ಭರತ್ ಪಿ.ಜಾಲಾ, ಹಾಗೂ ಶಂಶಾದ್ ಪಠಾಣ್ ಮೊದಲಾದವರು ಸೇರಿದ್ದಾರೆ.ತನ್ನನ್ನು ಯಾಕೆ ಬಂಧಿಸಲಾಗಿದೆಯೆಂದು ತನಗೆ ತಿಳಿದಿಲ್ಲ. ತನ್ನನ್ನು ಬಂಧಿಸುವಂತೆ ಶನಿವಾರ ಮುಂಜಾನೆ ತಮಗೆ ಸೂಚನೆ ದೊರೆತಿದೆಯೆಂದು ಪೊಲೀಸರು ಪ್ರತಿಪಾದಿಸಿದ್ದಾರೆಂದು ಬಂಧನದ ಬಳಿಕ ಮಲ್ಲಿಕಾ ಸಾರಾಭಾಯಿ ಹೇಳಿದರು. ಇದು ‘ಸದ್ಭಾವನೆ’ ಯಲ್ಲ. ಇದು ‘ಸ್ಯಾಡ್ ಭಾವನೆ’ ಎಂದವರು ಪ್ರತಿಕ್ರಿಯಿಸಿದರು.
ಎಲ್ಲ ಗುಜರಾತಿಗಳಿಗೆ ಮೋದಿಯವರ ಬಹಿರಂಗ ಪತ್ರ ಮುಸ್ಲಿಂ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಉಪವಾಸವು ಅವರ ಪಾಪವನ್ನು ತೊಳೆಯಲಾರದೆಂದು ಸಂತ್ರಸ್ತರು ದೂರಿದ್ದಾರೆ. ನ್ಯಾಯವನ್ನು ಕೇಳಿ ತಾವು ಮೋದಿಯವರಿಗೆ ಬಹಿರಂಗ ಪತ್ರ ಬರೆದಿದ್ದೇವೆ. ಸಹಾನುಭೂತಿ ತೊರಿಸಲು ಒಂಬತ್ತು ವರ್ಷಗಳು ಯಾಕೆ ಬೇಕಾದವೆಂದು ತಾವು ಪ್ರಶ್ನಿಸಿದ್ದೇವೆಂದು ಅವರು ಹೇಳಿದ್ದಾರೆ.
ಮೋದಿಯಿಂದ ಲಂಚ: ಸಾರಾಭಾಯಿ ಆರೋಪ
ಅಹ್ಮದಾಬಾದ್: ಗುಜರಾತ್ ಹಿಂಸಾಚಾರದ ಕುರಿತಾಗಿ ತಾನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆಯನ್ನು ಹಳಿ ತಪ್ಪಿಸಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತನ್ನ ವಕೀಲರಿಗೆ ಲಂಚ ನೀಡಲು ಸಾರ್ವಜನಿಕ ಹಣವನ್ನು ಬಳಸುತ್ತಿದ್ದಾರೆಂದು ಖ್ಯಾತ ನೃತ್ಯಗಾತಿ, ಸಾಮಾಜಿಕ ಕಾರ್ಯಕರ್ತೆ ಮಲ್ಲಿಕಾ ಸಾರಾಭಾಯಿ ಇಂದಿಲ್ಲಿ ಆರೋಪಿಸಿದ್ದಾರೆ.ಗುಜರಾತ್‌ನ 2002ರ ಹಿಂಸಾಚಾರದಲ್ಲಿ ರಾಜ್ಯದ ಆಡಳಿತ ಹಾಗೂ ಮೋದಿಯವರ ಪಾತ್ರವಿದೆಯೆಂದು ಆರೋಪಿಸಿ ಸಾರಾಭಾಯಿ 2002ರ ಎಪ್ರಿಲ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್‌ನಲ್ಲಿ ದಾಖಲಿಸಿದ್ದರು.
ಮುಖ್ಯಮಂತ್ರಿ ಮೋದಿ ಆಗಿನ ರಾಜ್ಯ ಗುಪ್ತಚರ ಬ್ಯೂರೋದ ವರಿಷ್ಠ ಶ್ರೀಕುಮಾರ್ ಹಾಗೂ ಅವರ ಸಹಾಯಕ ಐಪಿಎಸ್ ಅಧಿಕಾರಿ ಸಂಜೀವ ಭಟ್‌ರನ್ನು ಕರೆದು ಸುಪ್ರೀಂ ಕೋರ್ಟ್‌ನಲ್ಲಿರುವ ತನ್ನ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ದಾರಿ ತಪ್ಪಿಸಲು ತನ್ನ ವಕೀಲರಿಗೆ ರೂ. 10 ಲಕ್ಷ ನೀಡುವಂತೆ ಸೂಚಿಸಿದ್ದರೆಂದು ಮಲ್ಲಿಕಾ ಆರೋಪಿಸಿದರು.ಅವರು ಇತ್ತೀಚೆಗೆ ನಾನಾವತಿ-ಮೆಹ್ತಾ ಆಯೋಗದ ಮುಂದೆ ಶ್ರೀಕುಮಾರ್ ನೀಡಿರುವ ಹೇಳಿಕೆಯ ಪ್ರತಿಯೊಂದನ್ನು ಮಾಧ್ಯಮಗಳಿಗೆ ನೀಡಿದರು.
ಸರಕಾರದ ಆರೋಗ್ಯಕ್ಕೆ ಅಪಾಯಕರವೆಂದು ಮೋದಿ ಅಭಿಪ್ರಾಯಿಸಿದ್ದ ತನ್ನ ಅರ್ಜಿಯ ವಿಚಾರಣೆ ವಿಳಂಬಿಸಲು ತನ್ನ ವಕೀಲರಿಗೆ ಲಂಚ ನೀಡುವುದಕ್ಕಾಗಿ ‘ಗುಪ್ತಚರ ಸೇವೆ’ಯ ಹಣ ಬಳಸುವಂತೆ ಮುಖ್ಯಮಂತ್ರಿ ಅವರಿಗೆ ಸೂಚಿಸಿದ್ದರೆಂದು ಪೊಲೀಸ್ ಅಧಿಕಾರಿ ಸಂಜೀವ್ ಭಟ್ ಸಹ ಮೇಯಲ್ಲಿ ನಾನಾವತಿ ಆಯೋಗದ ಮುಂದೆ ಹೇಳಿಕೆ ನೀಡಿದ್ದರೆಂದು ಸಾರಾಭಾಯಿ ಆರೋಪಿಸಿ ದರು. ತಾನು ಬಳಿಕ ನಾನಾವತಿ ಆಯೋಗದ ಬಳಿ ಹೋಗಿ, ಸಂಜೀವ್ ಭಟ್ ಹಾಗೂ ಆಗ ಅವರ ಹಿರಿಯಧಿಕಾರಿಯಾಗಿದ್ದ ಶ್ರೀಕುಮಾರ್‌ರ ಪಾಟಿ ಸವಾಲಿಗೆ ಅವಕಾಶ ಕೋರಿದೆನು. ಆದರೆ, ಆಯೋಗ ತನ್ನ ಕೋರಿಕೆಯನ್ನು ನಿರಾಕರಿಸಿತು. ಬಳಿಕ ತಾನು ಶ್ರೀಕುಮಾರ್‌ಗೆ ಈ ಬಗ್ಗೆ ಅಫಿದಾವಿತ್ ಒಂದನ್ನು ಸಲ್ಲಿಸುವಂತ ಸೂಚಿಸಬೇಕೆಂದು ಆಯೋಗಕ್ಕೆ ಪತ್ರ ಬರೆದೆನು.
ಆಯೋಗ ತನಗೆ ಅನುಮತಿ ನೀಡಿತು. ಹಾಗೂ ತಾನು ಆಯೋಗದ ಪರವಾಗಿ ಅಫಿದಾವಿತ್ ಸಲ್ಲಿಸುವಂತೆ ಶ್ರೀಕುಮಾರ್‌ರನ್ನು ವಿನಂತಿಸಿದೆನು. ಅದನ್ನವರು ಶುಕ್ರವಾರ ಸಲ್ಲಿಸಿದ್ದಾರೆಂದು ಅವರು ವಿವರಿಸಿದರು.ಶ್ರೀಕುಮಾರ್‌ರ ಅಫಿದಾವಿತ್‌ನಲ್ಲಿ ಬಹಿರಂಗಗೊಂಡಿರುವ ವಿಚಾರ ಆಘಾತಕಾರಿ ಮಾತ್ರವಲ್ಲದೆ ಕ್ರಿಮಿನಲ್ ಚಟುವಟಿಕೆಯೂ ಆಗಿದೆ ಹಾಗೂ ಸುಪ್ರೀಂ ಕೋರ್ಟ್‌ನ ವಿಚಾರಣೆಯನ್ನು ಹಾದಿ ತಪ್ಪಿಸಲು ಮೋದಿ ನಡೆಸಿದ ಪ್ರಯತ್ನವಾಗಿದೆ. ಇದು ನ್ಯಾಯಾಲಯದ ನಿಂದನೆಯೂ ಆಗಿದೆಯೆಂದು ಸಾರಾಭಾಯಿ ಪ್ರತಿಪಾದಿಸಿದರು.
ಶ್ರೀಕುಮಾರ್ ರಾಜ್ಯ ಗುಪ್ತಚರ ಇಲಾಖೆಯ ಮುಖ್ಯಸ್ಥರಾದ ಬಳಿಕ ಹಾಗೂ ತಾನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಒಂದೆರೆಡು ದಿನಗಳ ಬಳಿಕ ಸಂಜೀವ ಭಟ್ ಹಾಗೂ ಶ್ರೀಕುಮಾರ್‌ರನ್ನು ಮೋದಿ ತನ್ನ ಕಚೇರಿಗೆ ಕರೆಸಿಕೊಂಡಿದ್ದರು. ಅವರು ಅಲ್ಲಿಗೆ ಹೋದಂತೆಯೇ ‘‘ನಿಮಗೆ ಮಲ್ಲಿಕಾ ಸಾರಾಭಾಯಿಯವರ ಪ್ರಕರಣದ ಬಗ್ಗೆ ಗೊತ್ತೇ?’’ ಎಂದು ಮೋದಿ ಪ್ರಶ್ನಿಸಿದರು. ಶ್ರೀಕುಮಾರ್ ತನಗೆ ತಿಳಿದಿಲ್ಲವೆಂದು ಉತ್ತರಿಸಿದರು ಎಂದು ಅಫಿದಾವಿತ್ತನ್ನುಲ್ಲೇಖಿಸಿ ಮಲ್ಲಿಕಾ ಹೇಳಿದರು.
ಆಗ ಮುಖ್ಯಮಂತ್ರಿ, ಆಕೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಸರಕಾರಕ್ಕೆ ಅಪಾಯಕಾರಿಯಾದುದು. ಅದನ್ನು ಹಳಿ ತಪ್ಪಿಸಲು ರೂ. 10 ಲಕ್ಷ ಮಂಜೂರು ಮಾಡಿದ್ದೇನೆ. ಸಂಜೀವ ಭಟ್‌ಗೆ ಅದು ತಿಳಿದಿದೆ. ಅವರಿಗೆ ತಮ್ಮ ‘ಗುಪ್ತ ನಿಧಿ’ಯಿಂದ ಅದನ್ನು ನೀಡುವಂತೆ ಸೂಚಿಸಿದರೆಂದು ಅವರು ಆರೋಪಿಸಿದರು.ಅದಕ್ಕೆ ಶ್ರೀಕುಮಾರ್, ಗುಪ್ತ ನಿಧಿಯಲ್ಲಿ ಹಣವಿಲ್ಲವೆಂದರು. ಆಗ ಮೋದಿ, ಅದನ್ನು ಮುಖ್ಯ ಕಾರ್ಯದರ್ಶಿ ವ್ಯವಸ್ಥೆ ಮಾಡುವಂತೆ ತಾನು ನೋಡಿಕೊಳ್ಳುತ್ತೇನೆ. ಸಂಜೀವ್‌ಗೆ ಎಲ್ಲ ವಿಚಾರ ತಿಳಿದಿದೆಯೆಂದರೆಂದು ಅವರು ಪ್ರತಿಪಾದಿಸಿದರು.
ಶ್ರೀಕುಮಾರ್ ಬಳಿಕ ಅಂದಿನ ಡಿಜಿಪಿ ಕೆ. ಚಕ್ರವರ್ತಿಯವರ ಬಳಿ ಹೋಗಿ ಲಿಖಿತ ಆದೇಶ ಕೇಳಿದರು. ಚಕ್ರವರ್ತಿ ಅವರನ್ನು ಆಮೇಲೆ ಮತ್ತೆ ಕರೆಸಿ, ಲಿಖಿತ ಆದೇಶ ಅಗತ್ಯವಿಲ್ಲ. ಹಣದ ವ್ಯವಸ್ಥೆಯಾಗಿದೆ. ಈ ವ್ಯವಹಾರ ನಡೆದಿರುವ ಬಗ್ಗೆ ದಾಖಲೆಯಲ್ಲಿ ಕಾಣಿಸಲು ರಶೀದಿಯೊಂದಕ್ಕೆ ಸಹಿ ಹಾಕುವಂತೆ ಅವರಿಗೆ ಸೂಚಿಸಿದರೆಂದು ಶ್ರೀಕುಮಾರ್ ಅಫಿದಾವಿತ್‌ನಲ್ಲಿ ಹೇಳಿದ್ದಾರೆಂದು ಮಲ್ಲಿಕಾ ತಿಳಿಸಿದರು.
ಶ್ರೀಕುಮಾರ್, ಏನು ನಡೆಯುತ್ತಿದೆಯೆಂದು ಸಂಜೀವ ಭಟ್‌ರಲ್ಲಿ ಕೇಳಿದರು. ಸುಪ್ರೀಂ ಕೋರ್ಟ್‌ನಲ್ಲಿರುವ ಅರ್ಜಿಯ ವಿಚಾರಣೆಯನ್ನು ದಾರಿ ತಪ್ಪಿಸಲು ಸಾರಾಭಾಯಿಯವರ ವಕೀಲರಾದ ಕೃಷ್ಣಕಾಂತ ವಖಾರಿಯ ಹಾಗೂ ಕಂಪೆನಿ ಮತ್ತು ದಿಲ್ಲಿಯ ಅವರ ವಕೀಲರಿಗೆ ಮುಖ್ಯಮಂತ್ರಿ ಲಂಚ ನೀಡುತ್ತಿದ್ದಾರೆಂದು ಭಟ್ ಅವರಿಗೆ ಉತ್ತರಿಸಿದರೆಂದು ಅವರು ಆರೋಪಿಸಿದರು.ಈ ಇಡೀ ಕಾರ್ಯಾಚರಣೆಯ ಉಸ್ತುವಾರಿಯನ್ನು ಆಗಿನ ಶಾಸಕ ಅಮಿತ್ ಶಾ ವಹಿಸಿದ್ದರೆಂದು ಮಲ್ಲಿಕಾ ದೂರಿದರು.
ಸಂಜೀವ ಭಟ್ ಹಣವನ್ನು ಅಮಿತ್ ಶಾಗೆ ನೀಡಿದರು. ಅವರದನ್ನು ಕೃಷ್ಣಕಾಂತ್‌ರ ಕಚೇರಿಯಲ್ಲಿ ತುಷಾರ್ ಮೆಹ್ತಾ ಎಂಬವರಿಗೆ ಪಾವತಿಸಿದರು ಎಂಬುದು ತನ್ನ ಊಹೆ ಹಾಗೂ ಮೂಲಗಳು ಹೇಳಿದ ವಿಚಾರವಾಗಿದೆ. ಆದರೆ, ಕೃಷ್ಣಕಾಂತ್ ಈ ಬಗ್ಗೆ ತನಗೇನೂ ತಿಳಿದಿಲ್ಲ. ತುಷಾರ್‌ಗೆ ಗೊತ್ತಿರಬಹುದು ಎನ್ನುತ್ತಿದ್ದಾರೆಂದು ಅವರು ಹೇಳಿದರು.ಆ ಹಣವನ್ನು ಬಳಿಕ ಮೆಹ್ತಾ ಹಾಗೂ ದಿಲ್ಲಿಯ ತನ್ನ ವಕೀಲರಾದ ಅಗರ್ವಾಲ್ ಅಸೋಸಿಯೇಟ್ಸ್ ಹಂಚಿಕೊಂಡರು ಅಥವಾ ಸಂಪೂರ್ಣವಾಗಿ ಮೆಹ್ತಾ ಅಥವಾ ಅಗರ್ವಾಲ್ ಅಸೋಸಿಯೇಟ್ಸ್‌ಗೆ ನೀಡಲಾಯಿತೆಂಬ ಕುರಿತು ತನ್ನ ಮೂಲಗಳಲ್ಲಿ ಪುರಾವೆಯಿದೆಯೆಂದು ಮಲ್ಲಿಕಾ ಪ್ರತಿಪಾದಿಸಿದರು.
ಅದನ್ನು ಕೂಡಲೇ ಮುಖ್ಯಮಂತ್ರಿಗೆ ತಿಳಿಸುವ ಕಾರ್ಯತಂತ್ರವನ್ನು ತಾವು ರೂಪಿಸಿದೆವು. ಸುಪ್ರೀಂ ಕೋರ್ಟ್‌ನಲ್ಲಿ ತನ್ನ ವಿರುದ್ಧ ವಾದಿಸುವ ಸರಕಾರಿ ವಕೀಲರಿಗೆ ಅವರದನ್ನು ತಿಳಿಸಲಿ ಎಂಬುದು ತಮ್ಮ ಉದ್ದೇಶವಾಗಿತ್ತೆಂದು ಅವರು ಹೇಳಿದರು. ಮೋದಿ ಲಂಚ ನೀಡಲು ಸಾರ್ವಜನಿಕರ ಹಣ ಬಳಸಿಕೊಂಡಿರುವುದು ಮಾತ್ರವಲ್ಲದೆ, ನ್ಯಾಯಾಲಯದ ಕಲಾಪವನ್ನು ದಾರಿ ತಪ್ಪಿಸಲು ಅಧಿಕೃತವಾಗಿ ಲಂಚ ನೀಡುವಂತಹ ಕ್ರಿಮಿನಲ್ ಚಟುವಟಿಕೆಯನ್ನೂ ನಡೆಸಿದ್ದಾರೆ. ಇದು ನ್ಯಾಯಾಲಯ ನಿಂದನೆಯಾಗಿದೆ ಎಂದು ಸಾರಾಭಾಯಿ ಆರೋಪಿಸಿದ್ದಾರೆ.ಆದರೆ, ಅವರ ಈ ಆರೋಪದ ಬಗ್ಗೆ ಗುಜರಾತ್ ಸರಕಾರದ ಪ್ರತಿಕ್ರಿಯೆ ತಕ್ಷಣಕ್ಕೆ ಲಭ್ಯವಾಗಿಲ್ಲ                                                                                     ಕೃಪೆ :  ವಾರ್ತಾಭಾರತಿ           

Leave a Reply