fbpx

ಶರಣರ ಹಾದಿಯಲ್ಲಿ ನಡೆದ ವಿವೇಕಾನಂದ ಜಗತ್ತಿನ ಆದರ್ಶ ಸಂತ

  ಶರಣರ ಹಾದಿಯಲ್ಲಿ ನಡೆದ, ಅದರಂತೆ ನುಡಿದ ದಿವ್ಯಶಕ್ತಿ ಮಹಾನ್ ಚೇತನ ಸ್ವಾಮಿವಿವೇಕಾನಂದರು ಜಗತ್ತಿನ ಆದರ್ಶ ಸಂತ ಎಂದು ರಾಷ್ಟ್ರೀಯ ಬಸವದಳದ ರಾಜ್ಯ ಅಧ್ಯಕ್ಷ ವೀರಣ್ಣ ಕೊರ್ಲಹಳ್ಳಿ ಅಭಿಪ್ರಾಯಪಟ್ಟರು.
ಅವರು ನಗರದ ಗಣೇಶ ನಗರದಲ್ಲಿರುವ ದೇವರಾಜ ಅರಸು ಭವನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಸಂಘಗಳ ಒಕ್ಕೂಟ ಮತ್ತು ಬ್ಲ್ಯೂಸ್ಟಾರ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಾಂತಿಗಾಗಿ ಯುವಜನರ ದಿನಾಚರಣೆಯ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ನಮ್ಮ ಶರಣರು ತಮ್ಮ ವಚನಗಳ ಮೂಲಕ ೮೦೦ ವರ್ಷಗಳ ಹಿಂದೆ ಹಾಕಿಕೊಟ್ಟ ಮಾರ್ಗದರ್ಶನದಂತೆಯೇ ವಿವೇಕಾನಂದರು, ಆದರ್ಶಪ್ರಾಯವಾದ ಜೀವನವನ್ನು ನಡೆಸಿ, ಕೇವಲ ೩೯ ವರ್ಷಗಳಲ್ಲಿ ಮಾಡಿದ ಭಾಷಣಗಳು, ನೀಡಿದ ಪ್ರವಚನಗಳು, ಸಂದೇಶಗಳು ಇಡೀ ಲೋಕದ ಮನುಜರ ಕಣ್ಣು ತೆರೆಸಿವೆ, ಯುವಜನರು ವಿವೇಕಾನಂದರನ್ನು ಹೆಚ್ಚು ಹೆಚ್ಚು ಓದಿಕೊಳ್ಳಬೇಕು ಎಂದರು.ನ್ಯಾಯವಾದಿ, ಹಾಸ್ಯ ಭಾಷಣಕಾರ ಹನುಮಂತರಾವ್ ಕೆಂಪಳ್ಳಿ ಮಾತನಾಡಿ, ಸಮಾಜ ಸುಧಾರಣೆಗೆ ಮನುಷ್ಯ ತನ್ನ ಜೀವನದ ಒಂದು ಭಾಗವನ್ನು ಮೀಸಲಿಡಬೇಕು, ನೆರೆಹೊರೆಯವರನ್ನು ಪ್ರೀತಿಸಬೇಕು ಜೊತೆಗೆ ಹಾಸ್ಯ ಮನೋಭಾವ ಬೆಳೆಸಿಕೊಂಡು ಸಹಜೀವನ ನಡೆಸಬೇಕು ಎಂದರು.

ಬಾಲಕರ ವಸತಿ ನಿಲಯದ ವಾರ್ಡನ ಕೆ. ಎಸ್. ಮಂಗಳಪ್ಪ ಮಾತನಾಡಿ, ಜನಪದರು ಹಾಕಿಕೊಟ್ಟ ಹಾದಿಯಲ್ಲಿ ನಮ್ಮ ಯುವತಿಯರು ಹೆಜ್ಜೆ ಹಾಕಿದರೆ ಜೀವನ ಸುಖಮಯವು ಸುಂದರವು ಆಗಿರುತ್ತದೆ, ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವದರಿಂದ ಹೆಚ್ಚು ಕ್ರಿಯಾಶೀಲರಾಗುತ್ತಾರೆ ಎಂದರು.

ಪತ್ರಕರ್ತ ಪವನಕುಮಾರ ದೇಶಪಾಂಡೆ, ವಿನೂತನ ಶಿಕ್ಷಣ ಸೇವಾ ಸಂಸ್ಥೆಯ ಅಧ್ಯಕ್ಷ ಸಿದ್ದಲಿಂಗಯ್ಯ ಹಿರೇಮಠ ಮುಂತಾದವರು ಮಾತನಾಡಿದರು. ವೇದಿಕೆಯಲ್ಲಿ ಪತ್ರಕರ್ತ ರವಿಕುಮಾರ ನಾಯಕ, ಬಸನಗೌಡ್ರ, ವಿವಿಧ ಹಾಸ್ಟೆಲ್‌ಗಳ ವಾರ್ಡನಗಳಾದ ಬಸವರಾಜ ಪಲ್ಲೇದ, ಎಸ್. ಎಂ. ಶ್ಯಾಂಗೋಳ ಇತರರು ಇದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಟಿ. ರಾಮಕೃಷ್ಣಯ್ಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಮಾರುತಿ ಮ್ಯಾಗೇರಿ ಸ್ವಾಗತಿಸಿದರು, ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಿದ್ದು ಲಮಾಣಿ ವಂದಿಸಿದರು. ನಾಲ್ಕು ಹಾಸ್ಟೆಲ್‌ಗಳ ಸುಮಾರು ೩೦೦ ಕ್ಕೂ ಅಧಿಕ ಯುವಕ ಯುವತಿಯರು ಪಾಲ್ಗೊಂಡಿದ್ದರು.
Please follow and like us:
error

Leave a Reply

error: Content is protected !!