fbpx

ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಇನ್ನಷ್ಟು ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ- ಶಿವರಾಜ್ ತಂಗಡಗಿ.

ಕೊಪ್ಪಳ, ಆ.೧೫ (ಕ ವಾ) ಜಿಲ್ಲೆಯಲ್ಲಿನ ಅಂತರ್ಜಲ ಮಟ್ಟ ಹೆಚ್ಚಿಸಲು ಇನ್ನಷ್ಟು ಬ್ರಿಜ್ ಕಂ ಬ್ಯಾರೇಜ್‌ಗಳು ಹಾಗೂ ಚೆಕ್ ಡ್ಯಾಂ ಗಳನ್ನು ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಹೇಳಿದರು.
     ಸಣ್ಣ ನೀರಾವರಿ ಇಲಾಖೆಯ ವತಿಯಿಂದ ತಾಲೂಕಿನ ಕೋಳೂರು ಗ್ರಾಮದ ಬಳಿ ಹಿರೇಹಳ್ಳಕ್ಕೆ ನಿರ್ಮಿಸಲಾಗಿರುವ ಬ್ರಿಜ್ ಕಂ ಬ್ಯಾರೇಜಿನ ಉದ್ಘಾಟನೆಯನ್ನು ಶನಿವಾರದಂದು ನೆರವೇರಿಸಿ ಅವರು ಮಾತನಾಡಿದರು.
     ಕೋಳೂರು-ಮಂಗಳಾಪುರ ಗ್ರಾಮಗಳ ಮಧ್ಯೆ ಹಿರೇಹಳ್ಳಕ್ಕೆ ೦೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಬ್ರಿಜ್ ಕಂ ಬ್ಯಾರೇಜ್ ನಿಂದ ಅಂತರ್ಜಲ ಮಟ್ಟ ಹೆಚ್ಚಳಗೊಂಡು, ಈ ಭಾಗದ ಸುತ್ತಮುತ್ತಲ ಹಳ್ಳಿಗಳ ರೈತರ ಹಾಗೂ ಕುಡಿಯುವ ನೀರು ಘಟಕಗಳ ಬೋರ್‌ವೆಲ್‌ಗಳು ಹೆಚ್ಚು ನೀರನ್ನು ಒದಗಿಸಲಿವೆ.  ಬ್ಯಾರೇಜ್‌ಅನ್ನು ೧೭೫ ಮೀ. ಉದ್ದ, ೪ ಮೀ. ಎತ್ತರ ಹಾಗೂ ಸೇತುವೆಯ ಅಗಲವನ್ನು ೪. ೨೫ ಮೀ. ನಿರ್ಮಿಸಲಾಗಿದೆ.  ಈ ಬ್ಯಾರೇಜ್‌ನಿಂದ ೦. ೦೫೯ ಟಿಎಂಸಿ ನೀರು ಸಂಗ್ರಹವಾಗಲಿದ್ದು, ಪರೋಕ್ಷವಾಗಿ ೭೩೫ ಎಕರೆ ಪ್ರದೇಶ ನೀರಾವರಿಗೆ ಒಳಪಡಲಿದೆ.  ಕೇವಲ ೦೬ ತಿಂಗಳ ಅವಧಿಯಲ್ಲಿ  ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣವಾಗಿರುವುದರಿಂದ, ಈ ಭಾಗದ ರೈತರು ಸಂತಸಗೊಂಡಿದ್ದಾರೆ.  ಜಿಲ್ಲೆಯಲ್ಲಿನ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಬೂದಿಹಾಳ ಮತ್ತು ಡಂಬ್ರಳ್ಳಿ ಗ್ರಾಮದ ಬಳಿ ತಲಾ ೦೬ ಕೋಟಿ ರೂ. ವೆಚ್ಚದಲ್ಲಿ ಇದೇ ಮಾದರಿಯ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆ ಮಂಜೂರಾತಿ ನೀಡಿದೆ.  ಅಲ್ಲದೆ ತಲಾ ಒಂದು ಕೋಟಿ ರೂ. ವೆಚ್ಚದಲ್ಲಿ ಮುರ್ಲಾಪುರದಲ್ಲಿ ಎರಡು ಮತ್ತು ಅಲ್ಲೀಪುರದಲ್ಲಿ ಚೆಕ್ ಡ್ಯಾಂ ನಿರ್ಮಾಣ ಹಾಗೂ ಭೈರಾಪುರದಲ್ಲಿ ೦೨ ಕೋಟಿ ರೂ. ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ.  ರೈತರಿಗೆ ನೇರವಾಗಿ ಸಹಕಾರಿಯಾಗುವಂತಹ ಇನ್ನಷ್ಟು ಬ್ರಿಜ್ ಕಂ ಬ್ಯಾರೇಜ್‌ಗಳನ್ನು ಜಿಲ್ಲೆಯಲ್ಲಿ ಅಗತ್ಯವಿರುವೆಡೆ ನಿರ್ಮಿಸಲು ಸಣ್ಣ ನೀರಾವರಿ ಇಲಾಖೆ ಮುಂದಾಗಲಿದೆ.  ೧೦೦ ಕೋಟಿ ರೂ. ವೆಚ್ಚದ ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಗೆ ಒಂದು ವಾರದೊಳಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗುವುದು.  ಕೊಪ್ಪಳ ಜಿಲ್ಲೆಗೆ ವಿವಿಧ ಕಾಮಗಾರಿಗಳಿಗಾಗಿ ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು ೨೪೨ ಕೋಟಿ ರೂ. ಅನುದಾನ ಒದಗಿಸಲಾಗಿದೆ.  ಪ್ರತಿ ವರ್ಷ ರಾಜ್ಯದ ೦೫ ಜಿಲ್ಲೆಗಳಲ್ಲಿ ಸರಣಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ.  ಕೆರೆಗಳಿಗೆ ನೀರು ತುಂಬಿಸುವಂತಹ ಯೋಜನೆಯನ್ನು ಈಗಾಗಲೆ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಪ್ರಾರಂಭಿಸಲಾಗಿದ್ದು, ಕೊಪ್ಪಳ ತಾಲೂಕಿನಲ್ಲಿಯೂ ಕೆರೆ ತುಂಬಿಸುವ ಯೋಜನೆಗೆ ಸರ್ವೆ ಕಾರ್ಯ ನಡೆಸಲು ಸದ್ಯದಲ್ಲೇ ಕ್ರಮ ಕೈಗೊಳ್ಳಲಾಗುವುದು.  ಕೃಷ್ಣಾ-ಬಿ ಸ್ಕೀಂ, ಸಿಂಗಟಾಲೂರು ಏತ ನೀರಾವರಿ ಸೇರಿದಂತೆ ಎಲ್ಲ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಸಚಿವರು, ರೈತರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ರೈತರ ಆತ್ಮಹತ್ಯೆಯಿಂದ ಅವರ ಸಮಸ್ಯೆ ಪರಿಹಾರವಾಗುವುದಿಲ್ಲ.  ಬದಲಿಗೆ ಅವರ ಕುಟುಂಬವನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದಂತಾಗುತ್ತದೆ.  ಯಾವುದೇ ರೈತರು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಳ್ಳಬಾರದು.  ರೈತರ ಹಿತಕಾಯಲು ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ತಿಳಿಸಿದರು.
     ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಕೋಳೂರು-ಮಂಗಳಾಪುರ ಗ್ರಾಮದ ಮಧ್ಯೆ ಸೇತುವೆಯ ಜೊತೆಗೆ ನೀರು ಸಂಗ್ರಹಿಸುವ ವ್ಯವಸ್ಥೆ ಇರುವ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣದಿಂದ, ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.  ಅಳವಂಡಿ ಹೋಬಳಿಯಲ್ಲಿ ೬. ೫ ಕೋಟಿ ರೂ. ವೆಚ್ಚದಲ್ಲಿ ಸರಣಿ ಚೆಕ್ ಡ್ಯಾಂ ನಿರ್ಮಾಣ, ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯಿಂದ ೮-೧೦ ಸಾವಿರ ಎಕರೆ ನೀರಾವರಿ ಕಲ್ಪಿಸಲು ಅವಕಾಶವಿದ್ದು, ಯೋಜನೆಗೆ ಶೀಘ್ರದಲ್ಲೇ ಮುಖ್ಯಮಂತ್ರಿಗಳಿಂದ ಅಡಿಗಲ್ಲು ನೆರವರೇರಿಸಲಾಗುವುದು.  ಕೊಪ್ಪಳ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳು ೫೦೦ ಕೋಟಿ ರೂ. ಗೂ ಹೆಚ್ಚಿನ ಅನುದಾನವನ್ನು ಒದಗಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದೆ ಎಂದರು.     ಸಂಸದ ಸಂಗಣ್ಣ ಕರಡಿ ಅವರು ಮಾತನಾಡಿ, ಹಿಂದುಳಿದಿರುವ ಕೊಪ್ಪಳ ಜಿಲ್ಲೆಯ ಅಭಿವೃದ್ಧಿಗೆ ನಿಸರ್ಗವನ್ನು ಸದ್ಬಳಕೆ ಮಾಡಿಕೊಳ್ಳುವಂತಹ ಯೋಜನೆಗಳು ಜಾರಿಯಾಗಬೇಕು.  ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಶೇ. ೬೦ ರಷ್ಟು ನೀರಾವರಿ ಸೌಲಭ್ಯ ಕಲ್ಪಿಸಲಾಗಿದ್ದರೆ, ರಾಜ್ಯದಲ್ಲಿ ನೀರಾವರಿ ಪ್ರಮಾಣ ಕೇವಲ ಶೇ. ೨೩ ರಷ್ಟು ಮಾತ್ರ ಇದೆ.  ಕೆರೆ ತುಂಬಿಸುವಂತಹ ಯೋಜನೆ, ಚೆಕ್ ಡ್ಯಾಂ ನಿರ್ಮಾಣ, ಬ್ರಿಜ್ ಕಂ ಬ್ಯಾರೇಜ್ ಯೋಜನೆಗಳನ್ನು ಹೆಚ್ಚಾಗಿ ಈ ಭಾಗದಲ್ಲಿ ಜಾರಿಗೊಳಿಸಬೇಕಾಗಿದೆ ಎಂದರು.
     ಕಾರ್ಯಕ್ರಮದಲ್ಲಿ ತಾಲೂಕಾ ಪಂಚಾಯತಿ ಅಧ್ಯಕ್ಷೆ ಬಾನು ಚಾಂದುಸಾಬ, ಜಿ.ಪಂ. ಸದಸ್ಯೆ ಭಾಗೀರಥಿ ಪಾಟೀಲ್, ಕೋಳೂರು ಗ್ರಾ.ಪಂ. ಅಧ್ಯಕ್ಷೆ ಬಸಮ್ಮ ಹನುಮಂತಪ್ಪ ಪೂಜಾರ್, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದ್ರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Please follow and like us:
error

Leave a Reply

error: Content is protected !!