ಸುಗಮ ಪಿಯುಸಿ ಪರೀಕ್ಷೆಗೆ ವ್ಯವಸ್ಥಿತ ಸಿದ್ಧತೆ ಕೈಗೊಳ್ಳಿ- ಎಂ. ಕನಗವಲ್ಲಿ.

ಕೊಪ್ಪಳ ಮಾ. ೦೨ (ಕ.ವಾ)  ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಮಾ. ೧೧ ರಿಂದ ೨೮ ರವರೆಗೆ ನಡೆಯಲಿದ್ದು, ಪರೀಕ್ಷೆಯನ್ನು ಸುಗಮ, ನ್ಯಾಯಸಮ್ಮತ ಹಾಗೂ ಸಮರ್ಪಕವಾಗಿ ಕೈಗೊಳ್ಳಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು  ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಸಿದ್ಧತೆ ಕುರಿತಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಜಿಲ್ಲೆಯಲ್ಲಿ ಈ ಬಾರಿ ಒಟ್ಟು ೧೦೧೫೬ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಗೆ ಹಾಜರಾಗಲಿದ್ದು, ಇದಕ್ಕಾಗಿ ಒಟ್ಟು ೧೪ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.  ಪರೀಕ್ಷೆಯು ಸಮರ್ಪಕವಾಗಿ ನಡೆಸಲು ಈಗಿನಿಂದಲೇ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು.   ಪ್ರಶ್ನೆಪತ್ರಿಕೆಗಳ ಸುರಕ್ಷತೆ ಬಗ್ಗೆ ಅಧಿಕಾರಿಗಳು ಇಲಾಖೆಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.  ಪ್ರಶ್ನೆಪತ್ರಿಕೆಗಳನ್ನು ಇರಿಸಲಾಗುವ ಖಜಾನೆ ಕೇಂದ್ರಗಳಿಂದ ದೂರವಿರುವ ಪರೀಕ್ಷಾ ಕೇಂದ್ರಗಳಿಗೆ ನಿಗಧಿತ ಅವಧಿ ಅಂದರೆ ಬೆಳಿಗ್ಗೆ ೮-೩೦ ಗಂಟೆಯ ಒಳಗಾಗಿ ತಲುಪುವಂತೆ ಪೂರ್ವಸಿದ್ಧತೆ ಕೈಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸೂಕ್ತ ಆಸನ, ಗಾಳಿ, ಬೆಳಕು ಹಾಗೂ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಇರಬೇಕು. ಪರೀಕ್ಷಾ ಕೊಠಡಿಯಲ್ಲಿ ಮೇಲ್ವಿಚಾರಕರು, ಪರೀಕ್ಷೆ ಕುರಿತಂತೆ ವಿದ್ಯಾರ್ಥಿಗಳಿಗೆ ಸೂಕ್ತ ತಿಳುವಳಿಕೆ ಹಾಗೂ ಜಾಗೃತಿ ಮೂಡಿಸುವ ಮೂಲಕ ಪರೀಕ್ಷಾಭಯ ಹೋಗಲಾಡಿಸಬೇಕು. ಪರೀಕ್ಷೆಗೆ ಇನ್ನೂ ಸಮಯಾವಕಾಶ ಇರುವುದರಿಂದ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಂಬಂಧಿತ ವಿಷಯಗಳ ಬೋಧನೆ ಮಾಡಿದಲ್ಲಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಲಿದೆ. ಪರೀಕ್ಷೆ ಸಂದರ್ಭದಲ್ಲಿ ಆಯಾ ವಿಷಯದ ಉಪನ್ಯಾಸಕರನ್ನು ಅಥವಾ ಶಿಕ್ಷಕರನ್ನು ಮೇಲ್ವಿಚಾರಕರನ್ನಾಗಿ ನೇಮಿಸಬಾರದು.  ಪರೀಕ್ಷೆ ಸಂದರ್ಭದಲ್ಲಿ ಮಾಧ್ಯಮದವರು ಚಿತ್ರೀಕರಣ ಅಥವಾ ಫೋಟೋ ಪಡಯಲು ಅವಕಾಶ ನೀಡಿದಲ್ಲಿ, ವಿದ್ಯಾರ್ಥಿಗಳ ಏಕಾಗ್ರತೆಗೆ ಭಂಗ ಉಂಟಾಗುವ ಸಾಧ್ಯತೆ ಇರುವುದರಿಂದ, ಮಾಧ್ಯಮದವರು ಪರೀಕ್ಷೆ ಪ್ರಾರಂಭಕ್ಕೂ ಮೊದಲು ಅಲ್ಲಿನ ವ್ಯವಸ್ಥೆಯ ಬಗ್ಗೆ ವಿಡಿಯೋ ಅಥವಾ ಫೋಟೋ ಪಡೆಯಲು ಮಾತ್ರ ಅವಕಾಶ ನೀಡಬಹುದು.  ಪರೀಕ್ಷೆ ಪ್ರಾರಂಭದ ನಂತರ ಮಾಧ್ಯಮದವರ ಪ್ರವೇಶಕ್ಕೆ ಅವಕಾಶವಿಲ್ಲ.  ಪರೀಕ್ಷೆಯನ್ನು ಸುಗಮವಾಗಿ ನಡೆಸಲು, ಪರೀಕ್ಷಾ ಕೇಂದ್ರದ ಸುತ್ತ ೨೦೦ ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳ್ಳಲಿದೆ.  ಅಲ್ಲದೆ ಸೂಕ್ತ ಪೊಲೀಸ್ ಬಂದೋಬಸ್ತ್‌ಗೆ ಕ್ರಮ ಕೈಗೊಳ್ಳಲಾಗುವುದು.  ಪರೀಕ್ಷೆಯಲ್ಲಿ ಯಾವುದೇ ಅಕ್ರಮ ಅಥವಾ ನಕಲಿಗೆ ಅವಕಾಶ ನೀಡದಂತೆ ಸುಗಮ ಹಾಗೂ ನ್ಯಾಯಸಮ್ಮತವಾಗಿ ಪರೀಕ್ಷೆ ನಡೆಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ  ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಭಾರಿ ಉಪನಿರ್ದೇಶಕ ಶಿವಾನಂದ ಕಡಪಟ್ಟಿ ಅವರು ಪರೀಕ್ಷೆಯ ಕುರಿತು ಸಭೆಗೆ ವಿವರಣೆ ನೀಡಿ, ಈ ವರ್ಷ ಒಟ್ಟು ೧೦೧೫೬ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಲಿದ್ದಾರೆ.  ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ಸಾಗಿಸಲು ಈಗಾಗಲೆ ಸಂಬಂಧಪಟ್ಟವರಿಗೆ ಜವಾಬ್ದಾರಿ ನೀಡಲಾಗಿದೆ ಎಂದರು.
ಪರೀಕ್ಷಾ ಕೇಂದ್ರಗಳು ಹಾಗೂ ಪರೀಕ್ಷಾರ್ಥಿಗಳ ಸಂಖ್ಯೆ:   ಕೊಪ್ಪಳದ ಗವಿಸಿದ್ದೇಶ್ವರ ಪ.ಪೂ. ಕಾಲೇಜು (೮೭೭), ಬಾಲಕರ ಸ.ಪ.ಪೂ. ಕಾಲೇಜು (೧೦೨೫), ಬಾಲಕಿಯರ ಸ.ಪ.ಪೂ. ಕಾಲೇಜು (೧೦೫೦), ಬಿ.ಎನ್.ಆರ್.ಕೆ. ಪ.ಪೂ. ಕಾಲೇಜು (೬೦೬).  ಯಲಬುರ್ಗಾದ ಸರ್ಕಾರಿ ಪ.ಪೂ. ಕಾಲೇಜು (೭೮೫), ಕುಕನೂರಿನ ವಿದ್ಯಾನಂದ ಗುರುಕುಲ ಪ.ಪೂ. ಕಾಲೇಜು (೫೨೨), ಕುಷ್ಟಗಿಯ ಬಾಲಕರ ಸರ್ಕಾರಿ ಪ.ಪೂ. ಕಾಲೇಜು(೮೪೦), ಹಾಗೂ ಬಾಲಕಿಯರ ಸ.ಪ.ಪೂ.ಕಾಲೇಜು (೨೯೭), ತಾವರಗೇರಾದ ಬಾಲಕಿಯರ ಸ.ಪ.ಪೂ. ಕಾಲೇಜು (೩೫೩).  ಗಂಗಾವತಿಯ ಬಾಲಕರ ಸ.ಪ.ಪೂ. ಕಾಲೇಜು (೯೫೩).  ಹೆಚ್.ಆರ್.ಸರೋಜಮ್ಮ ಪ.ಪೂ.ಕಾಲೇಜು (೪೯೭), ಎಸ್‌ಎಂಎನ್‌ಎಮ್ ಬಾಲಕಿಯರ ಸ.ಪ.ಪೂ. ಕಾಲೇಜು (೧೦೨೦).  ಕಾರಟಗಿಯ ಸರ್ಕಾರಿ ಪ.ಪೂ. ಕಾಲೇಜು (೭೯೧) ಮತ್ತು ಶ್ರೀರಾಮನಗರದ ಎ.ಕೆ.ಆರ್.ಡಿ ಪ.ಪೂ. ಕಾಲೇಜು (೫೪೦) ಸೇರಿ ಒಟ್ಟು ೧೪ ಪರೀಕ್ಷಾ ಕೇಂದ್ರಗಳಲ್ಲಿ ೧೦೧೫೬ ವಿದ್ಯಾರ್ಥಿಗಳು ಪರೀಕ್ಷೆಬರೆಯಲಿದ್ದಾರೆ. 
ವೇಳಾಪಟ್ಟಿ : ಮಾ. ೧೧ ರಿಂದ ಮಾ. ೨೮ ರವರೆಗೆ ಬೆಳಿಗ್ಗೆ ೯ ರಿಂದ
ಮಧ್ಯಾಹ್ನ ೧೨-೧೫ ಗಂಟೆಯವರೆಗೆ ಪರೀಕ್ಷೆ ಜರುಗಲಿದೆ.  ಮಾ. ೧೧ ರಂದು ಜೀವಶಾಸ್ತ್ರ,
ಎಲೆಕ್ಟ್ರಾನಿಕ್ಸ್.  ಮಾ. ೧೨- ಇತಿಹಾಸ, ಗಣಕ ವಿಜ್ಞಾನ.  ಮಾ. ೧೪- ಭೂಗೋಳಶಾಸ್ತ್ರ,
ಗಣಿತ.  ಮಾ. ೧೫- ರಾಜ್ಯಶಾಸ್ತ್ರ, ಬೇಸಿಕ್ ಮ್ಯಾಥ್ಸ್.  ಮಾ. ೧೬- ಅರ್ಥಶಾಸ್ತ್ರ,
ಭೂಗರ್ಭಶಾಸ್ತ್ರ.  ಮಾ. ೧೭-ಮನಃಶಾಸ್ತ್ರ, ಭೌತಶಾಸ್ತ್ರ. ಮತ್ತು ಅಂದು ಮಧ್ಯಾಹ್ನ ೨
ಗಂಟೆಯಿಂದ ೫-೧೫ ರವರೆಗೆ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ.  ಮಾ. ೧೮-
ತರ್ಕಶಾಸ್ತ್ರ, ಶಿಕ್ಷಣ.  ಮಾ. ೧೯ ರಂದು ಐಚ್ಛಿಕ ಕನ್ನಡ, ಸಂಖ್ಯಾಶಾಸ್ತ್ರ,
ಗೃಹವಿಜ್ಞಾನ.  ಮಾ. ೨೧ ರಂದು ರಸಾಯನಶಾಸ್ತ್ರ, ವ್ಯವಹಾರ ಅಧ್ಯಯನ.  ಮಾ. ೨೨ ರಂದು
ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್.  ಮಾ. ೨೩ ರಂದು ಹಿಂದಿ, ತೆಲುಗು.  ಮಾ. ೨೪ ರಂದು
ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ.  ಮಾ. ೨೬ ರಂದು ಇಂಗ್ಲೀಷ್.  ಮಾ. ೨೮ ರಂದು ಕನ್ನಡ,
ತಮಿಳು, ಮಲಯಾಳಂ, ಅರೇಬಿಕ್ ವಿಷಯಗಳ ಪರೀಕ್ಷೆ ನಡೆಯಲಿದೆ.
     ಸಭೆಯಲ್ಲಿ ಡಿಡಿಪಿಐ
ಎ. ಶ್ಯಾಮಸುಂದರ್, ಖಜಾನೆ ಇಲಾಖೆಯ ಕಳ್ಳೇರ್,  ಸೇರಿದಂತೆ ಕ್ಷೇತ್ರ
ಶಿಕ್ಷಣಾಧಿಕಾರಿಗಳು, ಕಾಲೇಜುಗಳ ಪ್ರಾಚಾರ್ಯರು, ತಹಸಿಲ್ದಾರರು ಭಾಗವಹಿಸಿದ್ದರು.

Please follow and like us:
error