You are here
Home > Koppal News > ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಾಗಿ ಜಾಗೃತಿ ಕಾರ್ಯಕ್ರಮ

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಾಗಿ ಜಾಗೃತಿ ಕಾರ್ಯಕ್ರಮ

 ಜಿಲ್ಲಾಡಳಿತ,  ಜಿಲ್ಲಾ ಪೋಲಿಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಾಗಿ ಜಾಗೃತಿ ಕಾರ್ಯಕ್ರಮವನ್ನು ಯಲಬುರ್ಗಾ ತಾಲೂಕು ಮಸಬಹಂಚಿನಾಳ ಗ್ರಾಮದ ಶ್ರೀಮತಿ ಗೌರಮ್ಮ ಬಸಪ್ಪ  ಸರಕಾರಿ ಪ್ರೌಢ ಶಾಲೆಯಲ್ಲಿ  ಆಯೋಜಿಸಲಾಯಿತು.
  ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಕ್ಕಳ ವಿಶೇಷ ಪೋಲಿಸ ಘಟಕದ ಬಸಪ್ಪ ಹಾದಿಮನಿ ಅವರು ಮಾತನಾಡಿ ಭಾರತ ದೇಶವು ಸಹ ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿಹಾಕಿದ್ದು ದೇಶದ ಎಲ್ಲಾ ಮಕ್ಕಳಿಗೂ ಅವರ ಹಕ್ಕುಗಳನ್ನು ಅವರಿಗೆ ಒದಗಿಸಲು ಪ್ರಯತಿಸುತ್ತಿದೆ. ಅಲ್ಲದೇ ಮಕ್ಕಳಿಗೆ ಬದಕುವ ಹಕ್ಕು, ಅಭಿವೃದ್ಧಿ ಮತ್ತು ವಿಕಾಸಹೊಂದುವ ಹಕ್ಕು, ಶೋಷಣೆಯ ವಿರುದ್ಧ ಸಂರಕ್ಷಣೆ ಹಕ್ಕು ಮತ್ತು ಭಾಗವಹಿಸುವ ಹಕ್ಕುಗಳನ್ನು ನೀಡಿರುವುದಷ್ಟೇ ಅಲ್ಲದೇ ಈ ಹಕ್ಕುಗಳನ್ನು ಅವರಿಗೆ ತಲುಪಿಸಲು ಹಲವಾರು ಕಾನೂನುಗಳನ್ನು ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.   ಬಾಲ ನ್ಯಾಯ (ಆರೈಕೆ ಮತ್ತು ಪೋಷಣೆ) ಕಾಯ್ದೆ-೨೦೦೦ರನ್ವಯ ಜಿಲ್ಲೆಯಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕವನ್ನು ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿಗಳ ಕಛೇರಿಯಲ್ಲಿ ಸ್ಥಾಪಿಸಲಾಗಿದೆ. ಅಲ್ಲದೇ ಪೊಲೀಸ್ ಠಾಣೆಯ ಠಾಣಾಧಿಕಾರಿಗಳನ್ನು ಮಕ್ಕಳ ಕಲ್ಯಾಣಾಧಿಕಾರಿಗಳೆಂದು ನೇಮಿಸಿದ್ದು, ಆರೈಕೆ ಮತ್ತು ಪೋಷಣೆ ಅವಶ್ಯಕತೆಯಿರುವ ಯಾವುದೇ ಮಗುವನ್ನು ಯಾರೇ ವ್ಯಕ್ತಿಗಳು ಆರೈಕೆ ಮತ್ತು ಪೋಷಣೆಗಾಗಿ ಮಕ್ಕಳನ್ನು ಹಾಜರಪಡಿಸಬಹುದಾಗಿದೆ. ನಂತರ ಮಕ್ಕಳಿಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ಸೂಕ್ತ ಪುರ್ನವಸತಿಯನ್ನು ಕಲ್ಪಿಸಲಾಗುತ್ತದೆ.  ಮಕ್ಕಳ ಮೇಲಿನ ಲೈಗಿಂಕ ದೌರ್ಜನ್ಯ ತಡೆ ಕಾಯ್ದೆಯನ್ನು ಜಾರಿಗೊಳಿಸಿದ್ದು, ಈ ಕಾಯ್ದೆಯ ಮುಖ್ಯ ಉದ್ದೇಶ, ಮಕ್ಕಳ ಮೇಲೆನ ದೌರ್ಜನ್ಯವನ್ನು ತಡೆಗಟ್ಟುವುದಾಗಿದೆ. ಈ ಕಾಯ್ದೆಯಡಿ ೧೮ ವರ್ಷದೂಳಗಿನ ಹೆಣ್ಣು ಅಥವಾ ಗಂಡು ಮಕ್ಕಳಿಗೆ ಸಂಜ್ಞೆ, ಶಾಬ್ದಿಕವಾಗಿ ಕಿರುಕುಳನ್ನು ನೀಡುವುದು ಸಹ ದೌರ್ಜನ್ಯವೆಂದು ಪರಿಗಣಿಸಲಾಗುತ್ತದೆ. ಈ ಕಾಯ್ದೆಯಡಿಯಲ್ಲಿ ಪ್ರಕರಣವು ದಾಖಲಾದಲ್ಲಿ ಅದು ವಿಚಾರಣಾ ಅರ್ಹ ಮತ್ತು ಜಾಮೀನುರಹಿತ ಪ್ರಕರಣ ಎಂದು ಪರಿಗಣಿಸಲಾಗುತ್ತದೆ ಅದ್ದರಿಂದ ಎಲ್ಲರೂ ಮಕ್ಕಳ ಹಕ್ಕುಗಳನ್ನು ಗೌರವಿಸಬೇಕು ಎಂದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿಕುಮಾರ ಪವಾರ ಮಾತನಾಡಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಎಚ್.ಐ.ವಿ ಸೋಂಕಿತ/ ಭಾದಿತ ಕುಟುಂಬದ ಮಕ್ಕಳಿಗೆ ವಿಶೇಷ ಪಾಲನಾ ಯೋಜನೆಯಡಿ ಎಚ್.ಐ.ವಿ ಸೋಂಕಿತದಿಂದ ತಂದೆ/ತಾಯಿ ಮೃತಪಟ್ಟಿದ್ದಲ್ಲಿ, ಪ್ರತಿ ತಿಂಗಳು ೭೫೦ ರೂಗಳಂತೆ, ತಂದೆ-ತಾಯಿ ಇಬ್ಬರಲ್ಲಿ ಒಬ್ಬರು ಜೀವಂತ ಇದ್ದರೆ ಪ್ರತಿ ತಿಂಗಳು ೬೫೦ ರೂ.ಗಳಂತೆ ೧೮ ವರ್ಷದವರೆಗೆ ಸಹಾಯಧನ ನೀಡಲಾಗುತ್ತದೆ. ಅಲ್ಲದೆ ಶೈಕ್ಷಣಿಕ ವೆಚ್ಚವಾಗಿ ವರ್ಷಕ್ಕೆ ೫೦೦ ರೂಗಳನ್ನು ನೀಡಲಾಗುತ್ತದೆ. ಪ್ರಾಯೋಜಿಕತ್ವ ಯೋಜನೆಯಡಿ ತಂದೆ ತಾಯಿ ತೀರಿಹೋದ ಬಡಮಕ್ಕಳಿಗೂ ಸಹ ಇಲಾಖೆಯಿಂದ ಸಹಾಯಧನವನ್ನು ನೀಡಲಾಗುತ್ತದೆ ಎಂದು ಹೇಳಿದರು.ಸಮಾಜಕ್ಕೆ ಬೇಡವಾದ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ ನಂತರ ಅಂತಹ ಮಕ್ಕಳನ್ನು ದತ್ತು ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ ಎಂದರು.  
ಮಕ್ಕಳ ಸಹಾಯವಾಣಿಯ ನಿಂಗಪ್ಪ, ಮುಖ್ಯೋಪಧ್ಯಾಯ ವಿ.ಎನ್. ಸಜ್ಜನ್, ಸಹಶಿಕ್ಷಕರಾದ ಮೂಕಯ್ಯ ಕುಲಕರ್ಣಿ, ಸುರೇಶ ಗೊಂಡಬಾಳ ಮತ್ತಿತರರು ಭಾಗವಹಿಸಿದ್ದರು.

Leave a Reply

Top