ಕಾಯಕವೆಂದರೆ ಹೊಟ್ಟೆ ಪಾಡಿನ ಕೆಲಸವಲ್ಲ -ಡಾ. ಕೆ ರವಿಂದ್ರನಾಥ.

ಕೊಪ್ಪಳ ನ ೧೦: ದಾರ್ಶನಿಕರು ಹೇಳುವ ಹಾಗೆ ನಿಜ ಅರ್ಥದಲ್ಲಿ ಕಾಯಕವೆಂದರೆ ಹೊಟ್ಟೆ ಪಾಡಿನ ಕೆಲಸವಲ್ಲ. ಅದು ಬರೀ ಬೌದ್ಧಿಕ ಕ್ರಿಯೆಯೂ ಅಲ್ಲ. ಕ್ರಿಯೆ ಮತ್ತು ಜ್ಞಾನದ ಸಮಾಗಮವೇ ನಿಜವಾದ ಕಾಯಕ. ಹನ್ನೆರಡನೆಯ ಶತಮಾನದ ಶರಣರು ಇದನ್ನು ಮೈಗೂಡಿಸಿಕೊಂಡಿದ್ದರಲ್ಲದೆ, ಸಮಾಜಕ್ಕೂ ಅದನ್ನು ಅರುಹಿದರು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ ಕೆ ರವಿಂದ್ರನಾಥ ಅಭಿಪ್ರಾಯಪಟ್ಟರು.  ಸ್ಥಳೀಯ ಬಾಲಕರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲಿ ಜಿಲ್ಲಾ ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ಆಯೋಜಿಸಿದ್ದ ದಿ.ಬಸಪ್ಪ ಕೆಂಚಪ್ಪ ದಿವಟರ ಸ್ಮರಣಾರ್ಥ ದತ್ತಿ ನಿಧಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸಕರಾಗಿ ಕಾಯಕ ಜೀವಿ ಶರಣರು ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು.
         ಮುಂದುವರೆದು ಮಾತನಾಡಿದ ಅವರು ಆಯ್ದಕ್ಕಿ ಮಾರಯ್ಯ, ಸೊನ್ನಲಗಿಯ ಸಿದ್ದರಾಮ, ಹಡಪದ ಅಪ್ಪಣ್ಣ, ಮಡಿವಾಳ ಮಾಚಿದೇವ ಮುಂತಾದ ಶರಣರು ಸತ್ಯ ಶುದ್ಧ ಕಾಯಕವನ್ನು ಆಚರಿಸಿಕೊಂಡು ಬಂದವರು. ಅವರೆಲ್ಲ ಸಮಾಜದ ಹಿತಕ್ಕಾಗಿ ಬದುಕಿದರು. ತತ್ವ ಮತ್ತು ಆಚರಣೆಗಳು ಅನುಸರಿಸಲು ಸರಳವಾಗಿರಬೇಕಲ್ಲದೆ, ಸಮಾಜ ಶುದ್ಧೀಕರಣಕ್ಕಾಗಿ ಧರ್ಮ ಮುಂದಾಗಬೇಕಾಗುತ್ತದೆ ಎಂದರು.

         ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಂಗ್ರಸ್ ಪಕ್ಷದ  ಹಿರಿಯ ರುದ್ರಮುನಿ ಗಾಳಿ ಮಾತನಾಡಿ ಮನುಷ್ಯ ಸಮಾಜಮುಖಿಯಾಗಿ ಬದುಕಿದಾಗ ಮಾತ್ರ ಜೀವನ ಸಾರ್ಥವಾಗುತ್ತದೆ, ಅಂvಹ ಸಾರ್ಥಕ ಬದುಕನ್ನು ಬಾಳಿದ ದಿ. ಬಸಪ್ಪ ದಿವಟರ ಅವರು ನಮಗೆ ಆದರ್ಶ ಪುರುಷರಾಗಿದ್ದಾರೆ. ಅವರು ಸಮಾಜಕ್ಕಾಗಿ ಸದಾ ದುಡಿದರಲ್ಲದೆ ತಮ್ಮ ಸಾವಿನ ನಂತರವೂ ಇಂತಹ ದತ್ತಿ ದಾನಗಳನ್ನು ನೀಡಿ ಕನ್ನಡ ಭಾಷೆಯ ಸೇವೆಯನ್ನು ಮಾಡಿದ್ದಾರೆ ಎಂದು ನುಡಿದರು.
        ಕಾಲೇಜಿನ ಪ್ರಾಚಾರ್ಯ ಎಸ್ ಬಿ ರಾಜೂರ ಭುವನೇಶ್ವರಿ ಭಾವಚಿತ್ರಕ್ಕೆ ಗೌರವ ಸಮರ್ಪಿಸಿ ಮಾತನಾಡುತ್ತಾ ಕೊಪ್ಪಳ ನಾಡು ಸಾಹಿತ್ಯ ಮತ್ತು ಸಂಸೃತಿಗೆ ಹೆಸರಾದದ್ದು, ಇಲ್ಲಿ ಅಶೋಕನ ಕಾಲದಿಂದಲೂ ಸಮಾಜಮುಖಿಯಾದ ಕಲ್ಯಾಣ ಕಾರ್ಯಗಳು ನಡೆದಿವೆ. ದತ್ತಿ ಕಾರ್ಯಕ್ರಮಗಳು ಕೂಡಾ ಮನಸ್ಸು ಪರಿವರ್ತನೆಗೆ ದಿವ್ಯೌಷಧಿ ಎಂದು ಅಭಿಪ್ರಾಯ ಪಟ್ಟರು.
ಪುರಸಭೆಯ ಮಾಜಿ ಸದಸ್ಯ ವೈಜನಾಥ ದಿವಟರ್ ಮಾತನಾಡಿ ತಮ್ಮ ತಂದೆಯವರು ಸಾಹಿತ್ಯ ಪ್ರೇಮಿಯಾಗಿದ್ದರು. ಸಾಹಿತ್ಯದ ಚಟುವಟಿಕೆಗಳು ನಡೆಯುವಲ್ಲಿ ತಮ್ಮ ಹೆಜ್ಜೆಗಳನ್ನು ಹಾಕುತ್ತಿದ್ದರು ಎಂದು ತಮ್ಮ ತಂದೆಯವರಿಗಿದ್ದ ಸಾಹಿತ್ಯ ಪ್ರೀತಿಯನ್ನು ನನಪಿಸಿಕೊಂಡರು. ಹಿರಿಯ ಸಾಹಿತಿ ಎಚ್ ಎಸ್ ಪಾಟೀಲ, ಅಲ್ಲಮಪ್ರಭು ಬೆಟ್ಟದೂರು ಹಾಗೂ ಕೊಟ್ರಗೌಡ ಹುರಕಡ್ಲಿ ಮಾತನಾಡಿದರು. ಹಿರಿಯ ಸಾಹಿತಿ ಎ ಎಂ ಮದರಿ, ಮಾಜಿ ಪುರಸಭೆ ಸದಸ್ಯ ಪ್ರಶಾಂತ ರಾಯ್ಕರ್ , ವೀರ ಕನ್ನಡಿಗ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರು ಹಾಗೂ ತಾಲೂಕಾ ಕಸಾಪ ಗೌರವ ಕಾರ್ಯದರ್ಶಿ ಹುಸೇನ್ ಪಾಶಾ ವೇದಿಕೆಯ ಮೇಲೆ ಉಪಸ್ತಿತರಿದ್ದರು.
ಜಿಲ್ಲಾ ಕನ್ನಡ ಸಾಹಿತ್ಯ  ಪರಿಷತ್ತು ಅಧ್ಯಕ್ಷ ವೀರಣ್ಣ ನಿಂಗೋಜಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ  ಶಿ ಕಾ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.ಜಿಲ್ಲಾ ಕಸಾಪ  ಗೌರವ ಕೋಶಾಧ್ಯಕ್ಷ ಆರ್ ಎಸ್ ಸರಗಣಾಚಾರ್ ಸ್ವಾಗತಿಸಿದಿರು. ತಾಲೂಕಾ ಕಸಾಪ ಗೌರವ ಕೋಶಾಧ್ಯಕ್ಷ ಮೈಲಾರಗೌಡ ಹೊಸ್ಮನಿ ಕಾರ್ಯಕ್ರಮ ನಿರೂಪಿಸಿದರೆ, ಕೊನೆಗೆ ಆನಂದ ಹಳ್ಳಿಗುಡಿ.
Please follow and like us:
error