ಯಲಬುರ್ಗಾ ಡಾ|| ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆಗೆ ಅರ್ಜಿ ಆಹ್ವಾನ.

ಕೊಪ್ಪಳ, ಜ.೧೨ (ಕ ವಾ) ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಸತಿ ರಹಿತರಿಗೆ ವಸತಿಯನ್ನು ಕಲ್ಪಿಸುವ ಉದ್ದೇಶದಿಂದ ನೂತನವಾಗಿ ಡಾ||ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆ ಜಾರಿಗೆ ಬಂದಿದ್ದು,  ಯಲಬುರ್ಗಾ ಪಟ್ಟಣ ಪಂಚಾಯತಿ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.
     ಯೋಜನೆಯಡಿ ಈಗಾಗಲೇ ಗುರುತಿಸಲಾಗಿರುವ ವಸತಿ ರಹಿತ ಫಲಾನುಭವಿಗಳ ಪ್ರಕಾರ ಯಲಬುರ್ಗಾ ಪಟ್ಟಣ ಪ್ರದೇಶಕ್ಕೆ ಪರಿಶಿಷ್ಟ ಜಾತಿ-೨೦, ಪರಿಶಿಷ್ಟ ಪಂಗಡದ-೦೯ ಗುರಿ ನಿಗದಿಪಡಿಸಲಾಗಿದೆ. ಪ್ರತಿ ಮನೆ ನಿರ್ಮಾಣದ ವೆಚ್ಚ ರೂ ೧.೮೦ ಲಕ್ಷ ಗಳನ್ನು ನಿಗದಿಪಡಿಸಲಾಗಿದೆ. ಯೋಜನೆಗೆ ಪಟ್ಟಣ ಆಶ್ರಯ ಸಮಿತಿ ಮೂಲಕ ಅನುಮೋದನೆ ಪಡೆದು ಅನುಷ್ಠಾನಗೊಳಿಸಲು  ಮಾರ್ಗಸೂಚಿ ಹೊರಡಿಸಲಾಗಿದೆ. ಅರ್ಜಿದಾರರ ಕುಟುಂಬವು ವಸತಿರಹಿತವಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ವಾಸಿಸುತ್ತಿರುವವರು, ಗುಡಿಸಲು ವಾಸಿಗಳು, ತಾತ್ಕಾಲಿಕ ಶೇಡ್, ಶಿಥಿಲಗೊಂಡ ಮನೆ ಅಥವಾ ಕಚ್ಛಾ ಮನೆಗಳಲ್ಲಿ ವಾಸಿಸುತ್ತಿದ್ದು, ೩೦೦ ಸ್ಕ್ವೇರ್ ಫೀಟ್‌ಗಿಂತ ಹೆಚ್ಚಿಗೆ ಇರದ ಒಂದು ಕೋಣೆಯಿಲ್ಲದ ೪ಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರಬೇಕು. ಕುಟುಂಬದ ಯಾವುದೇ ಸದಸ್ಯರು ರಾಜ್ಯದ ಯಾವುದೇ ಭಾಗದಲ್ಲಿ ಸ್ವಂತ ಮನೆಯನ್ನು ಹೊಂದಿರಬಾರದು.  ವಾರ್ಷಿಕ ಆದಾಯ ನಗರ ಪ್ರದೇಶಗಳಲ್ಲಿ ರೂ.೮೭,೬೦೦ ಗಳಿಗಿಂತ ಕಡಿಮೆ ಇರಬೇಕು. ಅರ್ಜಿದಾರರು ಮಹಿಳಾ ಫಲಾನುಭವಿಗಳಾಗಿರಬೇಕು. ಮಾಜಿ ಯೋಧರು, ವಿಧುರರು, ಅಂಗವಿಕಲರು ಮತ್ತು ಹಿರಿಯ ನಾಗರೀಕರಾಗಿದ್ದಲ್ಲಿ ಪುರುಷರು ಅರ್ಹರಾಗಿದ್ದಾರೆ. ಸ್ವಂತ ನಿವೇಶನ ಹೊಂದಿದ್ದು, ನಿವೇಶನಕ್ಕೆ ಸಂಬಂಧಿಸಿದ ಖಾತೆ ಹೊಂದಿರಬೇಕು. ಸಾಮಾಜಿಕ ಮತ್ತು ಆರ್ಥಿಕ ಜಾತಿ ಗಣತಿ-೨೦೧೧ ರಲ್ಲಿ ವಸತಿ ರಹಿತರ ಪಟ್ಟಿಯಲ್ಲಿ ಗುರುತಿಸಿರಬೇಕು. ಬೇರೆ ಯಾವುದೇ ಯೋಜನೆ/ಇಲಾಖೆಯಿಂದ ವಸತಿ ಸೌಲಭ್ಯ ಪಡೆದಿರಬಾರದು.
     ಭರ್ತಿ ಮಾಡಿದ ಅರ್ಜಿಯೊಂದಿಗೆ ಆಸ್ತಿ ದಾಖಲಾತಿ, ಆಧಾರ್‌ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ, ಪಡಿತರ ಚೀಟಿ, ೪ ಸ್ಟಾಂಪ್ ಸೈಜ್ ಅಳತೆಯ ಭಾವಚಿತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇತ್ಯಾದಿ ದಾಖಲೆಗಳನ್ನು ಲಗತ್ತಿಸಿ, ಪ್ರಕಟಣೆಗೊಂಡ ೭ ದಿನಗಳೊಳಗಾಗಿ ಪಟ್ಟಣ ಪಂಚಾಯತ್ ಕಾರ್ಯಾಲಯ, ಯಲಬುರ್ಗಾ ಇವರಿಗೆ ಸಲ್ಲಿಸಬೇಕು ಎಂದು ಯಲಬುರ್ಗಾ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿ ನಾಗೇಶ ಅವರು ತಿಳಿಸಿದ್ದಾರೆ.
 
ನೌಕಾದಳದಲ್ಲಿ ವಿವಿಧ ತರಬೇತಿ ಅರ್ಜಿ ಆಹ್ವಾನ.
ಕೊಪ್ಪಳ, ಜ.೧೨ (ಕರ್ನಾಟಕ ವಾರ್ತೆ): ಭಾರತೀಯ ನೌಕಾದಳದಲ್ಲಿ ಅಕ್ಟೋಬರ್ ತಿಂಗಳಿನಿಂದ ಆರಂಭವಾಗಲಿರುವ ಸ್ಟೀವುವಾರ್ಡ್, ಕುಕ್, ಟೋಪಾಸ್ (ಸ್ಯಾನಿಟರಿ ಹೈಜಿನೆಸ್ಟ್) ಟ್ರೇಡ್‌ಗಳ ತರಬೇತಿಗಾಗಿ ಬಾಗಲಕೋಟೆ ಹಾಗೂ ಕೊಪ್ಪಳ ಜಿಲ್ಲೆಯ ಅವಿವಾಹಿತ ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನೌಕಾದಳದ ವೆಬ್‌ಸೈಟ್ :
www.joinindiannavy.gov.in ನ್ನು ಅಥವಾ ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬಾಗಲಕೋಟೆ, ದೂರವಾಣಿ ಸಂಖ್ಯೆ : ೦೮೩೫೪-೨೩೫೪೩೪ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಗೊಂಬೆಗಳ ತಯಾರಿಕೆ ತರಬೇತಿ ಅರ್ಜಿ ಆಹ್ವಾನ.
ಕೊಪ್ಪಳ, ಜ.೧೨ (ಕ ವಾ) ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ (ರಿ) ಇವರಿಂದ ಫೆಬ್ರವರಿ ತಿಂಗಳ ೧೧ ರಿಂದ ಆರಂಭಗೊಳ್ಳಲಿರುವ ೧೫ ದಿನಗಳ ಟೆಡ್ಡಿ ಬೇರ್ (ಗೊಂಬೆಗಳ) ತಯಾರಿಕೆ ತರಬೇತಿಗೆ ಆಸಕ್ತ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ತರಬೇತಿಯಲ್ಲಿ ವಿವಿಧ ಟೆಡ್ಡಿ ಬೇರ್ ಮೊದಲಾದ ಕಾಡು ಪ್ರಾಣಿಗಳ ಮೃದು ಗೊಂಬೆಗಳನ್ನು (ಸಾಫ್ಟ್ ಟಾಯ್ಸ್) ತಯಾರಿಸುವ ತರಬೇತಿ ನೀಡಲಾಗುತ್ತದೆ. ಅಲ್ಲದೆ, ವ್ಯಾವಹಾರಿಕವಾಗಿ ತುಂಬಾ ಲಾಭ ತರುವ ಚಟುವಟಿಕೆಯಗಿ ಮಹಿಳೆಯರು ಈ ವೃತ್ತಿಯನ್ನು ಕೈಗೊಳ್ಳುವ ಕುರಿತು ತರಬೇತಿಯನ್ನು ಸಹ ನೀಡಲಾಗುತ್ತದೆ. ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು, ಆಸಕ್ತ ೧೮ ರಿಂದ ೪೫ ವರ್ಷದೊಳಗಿನ ಅರ್ಹ ನಿರುದ್ಯೋಗಿ ಮಹಿಳಾ ಯುವ ಜನತೆ ತರಬೇತಿಯಲ್ಲಿ ಭಾಗವಹಿಸಬಹುದಾಗಿದ್ದು, ತರಬೇತಿ ಪಡೆಯಲಿಚ್ಛಿಸುವವರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ (ರಿ), ಉದ್ಯೋಗ ವಿದ್ಯಾ ನಗರ, ದಾಂಡೇಲಿ ರಸ್ತೆ, ಹಳಿಯಾಳ, ಉತ್ತರ ಕನ್ನಡ, ಈ ವಿಳಾಸಕ್ಕೆ ಫೆ.೦೪ ರೊಳಗಾಗಿ ಸಂಪರ್ಕಿಸಬಹುದಾಗಿದೆ.ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ: ೦೮೨೮೪-೨೨೦೮೦೭, ೯೪೮೩೪೮೫೪೮೯, ೯೪೮೨೧೮೮೭೮೦ ನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆ ನಿರ್ದೇಶಕರು ತಿಳಿಸಿದ್ದಾರೆ.

Please follow and like us:
error