fbpx

ಕೊಪ್ಪಳದಲ್ಲಿ ಪತ್ರಿಕಾ ದಿನಾಚರಣೆ

ಮಾಧ್ಯಮಗಳು ಮಾಹಿತಿಯ ಜೊತೆಗೆ ಸೂರ್ತಿಯನ್ನೂ ನೀಡಬೇಕು : ಗವಿಶ್ರೀಗಳು.
     ಕೊಪ್ಪಳ :  ವರದಿಗಾರರಲ್ಲಿ ತತ್ವಜ್ಞಾನಿಯ ವಿವೇಚನೆ, ಬುದ್ಧಿಯ ವಿಮರ್ಶೆ, ಸಂತನ ಹೃದಯ ವೈಶಾಲ್ಯತೆ ಮೈಗೂಡಿಸಿಕೊಂಡಾಗ ಪತ್ರಕರ್ತನಾಗಲು ಸಾಧ್ಯವಾಗುತ್ತದೆ. ಮಾಧ್ಯಮಗಳು ಮಾಹಿತಿ ನೀಡುವ ಕೆಲಸ ಮಾಡುವುದಲ್ಲದೇ ಓದುಗರಿಗೆ ಸ್ಪೂರ್ತಿ ನೀಡಬೇಕು ಎಂದು ನಗರದ ಸಂಸ್ಥಾನ ಗವಿಮಠದ  ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.
       ನಗರದ ಜ.ಚ.ನಿ.ಭವನದಲ್ಲಿ  ಕೊಪ್ಪಳ ಮಿಡಿಯಾ ಕ್ಲಬ್ ಆಶ್ರಯದಲ್ಲಿ ಜರುಗಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಮಾಧ್ಯಮಗಳು ಕಲ್ಲು ಇದ್ದಂತೆ. ಸಮಾಜ ಒಂದು ಗಿಡ ಇದ್ದಂತೆ. ಗಿಡಕ್ಕೆ ಕಲ್ಲು ಎಸೆದರೆ ನಾಲ್ಕಾರು ಸಮಸ್ಯೆಗಳಿಗೆ ಪರಿಹಾರವೆಂಬ ಹಣ್ಣುಗಳು ಉದುರುತ್ತವೆ ಎಂದು ಮಾರ್ಮಿಕವಾಗಿ ನುಡಿದರು.
       ಸಮಾರಂಭದಲ್ಲಿ ಮಾಧ್ಯಮ ಮತ್ತು ವಾಸ್ತವ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದ ಸರಕಾರಿ ಸಹಾಯಕ ಅಭಿಯೋಜಕ ಬಿ.ಎಸ್.ಪಾಟೀಲ್ ಅವರು, ಪತ್ರಿಕೋದ್ಯಮದ ಉಗಮ ವಿಕಾಸದ ಹಲವು ಮಜಲುಗಳನ್ನು ವಿವರಿಸುವುದರ ಜೊತೆಗೆ ವಾಸ್ತವ ಜಗತ್ತಿನಲ್ಲಿ ಮಾಧ್ಯಮಗಳ ಪಾತ್ರ ಕುರಿತು ವಿವರಿಸಿದರು.
        ಗಂಗಾವತಿ ಆವೃತ್ತಿಯ  ವಿಜಯವಾಣಿ ಸ್ಥಾನಿಕ ಸಂಪಾದಕ ಎ.ಆರ್.ರಘುರಾಮ ಮಾತನಾಡಿ, ಪತ್ರಿಕೋದ್ಯಮಕ್ಕೆ ಹೊಸದಾಗಿ ಬರುತ್ತಿರುವ ಯುವ ಪತ್ರಕರ್ತರು ಟೇಬಲ್ ಪತ್ರಿಕೋದ್ಯಮದಿಂದ ಹೊರಬರಬೇಕು. ಏನೇ ಸುದ್ದಿ, ವರದಿ ಮಾಡುವುದಿದ್ದರೆ ಸ್ಥಳಗಳಿಗೆ ತೆರಳಿ, ಅನುಭವಿಸಿ ಬರೆಯಬೇಕು. ಅಂದಾಗಲೇ ವರದಿಗೆ ನ್ಯಾಯ ಸಿಗಲು ಸಾಧ್ಯ. ಇತ್ತಿಚೆಗೆ ಪತ್ರಕರ್ತರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣಗಳು ವಿಷಾದನೀಯ. ಇಂಥ ಘಟನೆಗಳು ಜರುಗಿದಾಗ ಸಮಾಜದಿಂದ ಸ್ಪಂದನೆ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
       ಅಂಕಣಕಾರ ಹಾಗೂ ಹಿರಿಯ ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿ ಮಾತನಾಡಿ, ಓದುಗರು ಹಾಗೂ ವೀಕ್ಷಕರ ಅಭಿರುಚಿಗೆ ತಕ್ಕಂತೆ ಮಾಧ್ಯಮಗಳು ಸುದ್ದಿಯನ್ನು ವರದಿಯನ್ನು ಪ್ರಕಟಿಸುತ್ತವೆ ಹಾಗೂ ಬಿತ್ತರಿಸುತ್ತವೆ. ಸಮಾಜದ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವಂಥ ವರದಿಗಳಿಗೆ ಓದುಗರು ಸ್ಪಂದಿಸಬೇಕು. ಪತ್ರಕರ್ತರೂ ಕೂಡಾ ಇಂಥ ವರದಿಗಳನ್ನು ಜೊತೆಗೆ ಮಾನವೀಯ ಆಸಕ್ತಿ ವರದಿಗಳಿಗೆ ಆದ್ಯತೆ ನೀಡುವಮತಾಗಬೇಕು ಎಂದು ಹೇಳಿದರು.
       ಜಿಲ್ಲಾ ವಾರ್ತಾಽಕಾರಿ ಬಿ.ವಿ.ತುಕಾರಾಂ ಅವರು ಪತ್ರಿಕೋದ್ಯಮದಲ್ಲಿ ಉತ್ತಮ ಸುದ್ದಿಗಳನ್ನು, ವರದಿಗಳನ್ನು ಕೊಡುವುದರಲ್ಲಿ ಸ್ಪರ್ಧೆ ಇರಲಿ. ಈ ಸ್ಪರ್ಧೆ ಖಾಸಗಿಯಾಗಿ ಬೆಳೆಯಬಾರದು ಎಂದರು.
      ಸಮಾರಂಭದ ಅಧ್ಯಕ್ಷತೆ ವಹಿಸಿದ್ದ  ಕೊಪ್ಪಳ ಮೀಡಿಯಾ ಕ್ಲಬ್‌ನ ಅಧ್ಯಕ್ಷ ಸೋಮರೆಡ್ಡಿ ಅಳವಂಡಿ ಮಾತನಾಡಿ, ಟಿಆರ್‌ಪಿಯಾಗಲಿ, ಪ್ರಸರಣವಾಗಲಿ, ಪರ್ಯಾಯವಾಗಿ ಅವು ಪತ್ರಿಕೆ ಓದುವ ಹಾಗೂ ಟಿವಿ ನೋಡುವ ಜನರನ್ನೇ ಅವಲಂಬಿಸಿವೆ. ಯಾವುದೇ ದೃಶ್ಯ ಪದೇ ಪದೇ ಪ್ರಸಾರವಾದರೆ ಜನರು ಅದನ್ನೂ ನೋಡುತ್ತಿದ್ದಾರೆ ಎಂದರ್ಥ. ಬೇಡವಾಗಿದ್ದರೆ ನೋಡುವುದನ್ನು ಬಿಡಬೇಕು. ತಂತಾನೇ ಆ ದೃಶ್ಯಗಳ ಪ್ರಸಾರವೂ ನಿಲ್ಲುತ್ತದೆ. ಹಾಗೆಯೇ ಪತ್ರಿಕೆಗಳೂ ಕೂಡಾ. ಓದುಗರಿಗೆ ಬೇಡವಾದುದನ್ನು ಕೊಟ್ಟರೆ ತಿರಸ್ಕರಿಸುತ್ತಾರೆ. ಮುಂದೆ ಅಂಥ ವಿಷಯ ವಸ್ತು ಪತ್ರಿಕೆಯಲ್ಲಿ  ಸಿಗುವುದಿಲ್ಲ. ಮಾಧ್ಯಮ ಪ್ರತಿನಿಽಗಳು ಸಮಾಜದಲ್ಲಿ ತಮ್ಮ ಹೊಣೆಗಾರಿಕೆ ಅರಿತು ಕಾರ್ಯ ನಿರ್ವಹಿಸಬೇಕು ಎಂದು ಅವರು ತಿಳಿಸಿದರು.
      ಈ ಸಂದರ್ಭದಲ್ಲಿ ಮೀಡಿಯಾ ಕ್ಲಬ್‌ನ ಛಾಯಾಗ್ರಾಹಕ ವಿಭಾಗದ ಮುಖಂಡ ಪ್ರಕಾಶ ಕಂದಕೂರ, ಮಾರುತಿ ಕಟ್ಟಿಮನಿ, ಈರಣ್ಣ ಬಡಿಗೇರ, ಶಂಕರ ಕೊಪ್ಪದ, ಜಯಂತ್ ಸಿ.ಎಂ., ಅಮಿತ್ ಮಾಲಗಿತ್ತಿ, ಹುಸೇನ್ ಪಾಷಾ, ಗಂಗಾಧರ ಬಂಡಿಹಾಳ, ತಿಪ್ಪನಗೌಡ ಮಾಲೀಪಾಟೀಲ್, ಸಂತೋಷ ದೇಶಪಾಂಡೆ, ಶ್ರೀಪಾದ್ ಅಯಾಚಿತ್, ಶರಣಬಸವ ಹುಲಿಹೈದರ್, ಮುಕ್ಕಣ್ಣ ಕತ್ತಿ, ಬಸವರಾಜ ಶೀಲವಂತರ್, ಸಿರಾಜ್ ಬಿಸರಳ್ಳಿ ಮತ್ತಿತರರು ಇದ್ದರು.
     ಸುಪ್ರಿಂ ಹಾಗೂ ಸುಪ್ರಿಯಾ ಪ್ರಾರ್ಥಿಸಿದರು. ಬಸವರಾಜ ಕರುಗಲ್ ನಿರೂಪಿಸಿದರು. ದೊಡ್ಡೇಶ್ ಯಲಿಗಾರ ಸ್ವಾಗತಿಸಿದರು. ಶರಣಪ್ಪ ಬಾಚಲಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಸೀಂ ಭಾವಿಮನಿ ವಂದಿಸಿದರು. 
Please follow and like us:
error

Leave a Reply

error: Content is protected !!