ಕನಕಗಿರಿ : ಜಲಾನಯನ ಅಭಿವೃದ್ಧಿ ಕಾರ್ಯಗಳು ತೃಪ್ತಿಕರ- ಶಿವರಾಜ್ ತಂಗಡಗಿ

  ಜಲಾನಯನ ಅಭಿವೃದ್ಧಿ ಇಲಾಖೆಯಿಂದ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಳ್ಳಲಾಗುತ್ತಿರುವ ಸಮಗ್ರ ಜಲಾನಯನ ನಿರ್ವಹಣೆ ಯೋಜನೆಯ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಜ್ ಎಸ್ ತಂಗಡಗಿ ಅವರು ತೃಪ್ತಿ ವ್ಯಕ್ತಪಡಿಸಿದರು.
  ಕನಕಗಿರಿ ಕ್ಷೇತ್ರದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆಯಿಂದ ಕೈಗೊಳ್ಳಲಾಗುತ್ತಿರುವ ವಿವಿಧ ಕಾಮಗಾರಿಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಅನುಷ್ಠಾನಗೊಳಿಸುತ್ತಿರುವ ಸಮಗ್ರ ಜಲಾನಯನ ನಿರ್ವಹಣೆ ಯೋಜನೆಯ ಎರಡನೆ ಹಂತದ ಪ್ರವೇಶದ್ವಾರ ಚಟುವಟಿಕೆ (ಇಟಿಣಡಿಥಿ Poiಟಿಣ ಂಛಿಣiviಣಥಿ) ಕಾಮಗಾರಿಗಳಾದ ಶಿರವಾರ ಜಿನುಗುಕೆರೆ, ವರ್ಣಖೇಡ್ ಜಿನುಗುಕೆರೆ ತಾಕುಗಳಿಗೆ ಭೇಟಿ ನೀಡಿದರು.  ವಿನ್ಯಾಸಗಳನ್ನು ನಿರ್ಮಿಸಿದ ಫಲಾನುಭವಿಗಳೊಂದಿಗೆ ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಿ ಕಾಮಗಾರಿಗಳ ಅನುಷ್ಠಾನ ಹಾಗೂ ಗುಣಮಟ್ಟದ ಬಗ್ಗೆ ಸಂತೃಪ್ತಿ ವ್ಯಕ್ತ ಪಡಿಸಿದರು.  ರೈತರ ಆರ್ಥಿಕ ಆದಾಯ ವೃದ್ಧಿಸುವ ಯೋಜನೆಗಳಿಗೆ ಹೆಚ್ಚು ಒತ್ತು ನೀಡಬೇಕು.  ಕ್ಷೇತ್ರದಲ್ಲಿ ಅಂತರ್ಜಲ ವೃದ್ಧಿಗಾಗಿ ಜಿನುಗು ಕೆರೆ, ನಾಲಾ ಬದು ವಿನ್ಯಾಸಗಳನ್ನು ಕ್ಷೇತ್ರದಾದ್ಯಂತ ಹೆಚ್ಚು ಹೆಚ್ಚಾಗಿ ನಿರ್ಮಿಸಲು ಸೂಚಿಸಿದರಲ್ಲದೆ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯನ್ನು ಕೂಡಾ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಒದಗಿಸುವ ಭರವಸೆ ನೀಡಿದರು.
  ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಡಾ. ಕೆ. ಮಲ್ಲಿಕಾರ್ಜುನ ಅವರು ಈ ಸಂದರ್ಭದಲ್ಲಿ ಮಾತನಾಡಿ, ಸಮಗ್ರ ಜಲಾನಯನ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಮೊದಲ ಹಂತವನ್ನು ೨೦೦೯-೧೦ ರಿಂದ ಹಾಗೂ ಎರಡನೆ ಹಂತವನ್ನು ೨೦೧೦-೧೧ ರಿಂದ ಪ್ರಾರಂಭಿಸಲಾಗಿದೆ. ಸಮಗ್ರ ಜಲಾನಯನ ನಿರ್ವಹಣಾ ಯೋಜನೆಯ ಮೊದಲ ಹಂತದಲ್ಲಿ ಒಟ್ಟು ೩೫೧೪ ಹೆಕ್ಟೇರ್ ಪ್ರದೇಶವನ್ನು ಹಾಗೂ ಎರಡನೆ ಹಂತದಲ್ಲಿ ೪೯೩೬ ಹೆಕ್ಟೇರ್ ಪ್ರದೇಶವನ್ನು ೩-೫ ವರ್ಷಗಳ ಯೋಜನಾ ಅವಧಿಯಲ್ಲಿ ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ.  ಪ್ರಸ್ತುತ ಮೊದಲ ಹಂತದಲ್ಲಿ ೭ ಕಿರು ಜಲಾನಯನಗಳಲ್ಲಿ ೭ ಗ್ರಾಮಗಳಾದ ದೇವಲಾಪುರ, ಚಿಕ್ಕವಡ್ರಕಲ್, ಗೌರಿಪುರ, ಬಸರಿಹಾಳ, ಬೈಲಕ್ಕಂಪುರ, ಕನಕಾಪುರ, ಹಾಗೂ ಕನಕಗಿರಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು. ಎರಡನೆ ಹಂತದಲ್ಲಿ ೧೨ ಕಿರು ಜಲಾನಯನಗಳಲ್ಲಿ ೮ ಹಳ್ಳಿಗಳಾದ ಲಾಯದುಣಸಿ, ಹುಲಿಹೈದರ, ಶಿರವಾಳ, ಹನುಮನಾಳ, ವರ್ಣಖೇಡ್, ಹೊಸಗುಡ್ಡ, ಕನಕಗಿರಿ ಹಾಗೂ ಬೈಲಕ್ಕಂಪುರ ಒಳಗೊಂಡಿವೆ. ಸದರಿ ಯೋಜನೆಯಡಿಯಲ್ಲಿ ಕೃಷಿ, ಅರಣ್ಯ ಮತ್ತು ತೋಟಗಾರಿಕೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು. ಬದು ನಿರ್ಮಾಣ, ಕೃಷಿಹೊಂಡ, ತಡೆಆಣೆಕಟ್ಟು, ಜಿನುಗುಕೆರೆ, ನಾಲಾಬದು ಇತ್ಯಾದಿ ನೀರು ಸಂಗ್ರಹಣಾ ವಿನ್ಯಾಸಗಳನ್ನು ನಿರ್ಮಿಸಲಾಗುವುದು. ಜಲಾನಯನ ಗ್ರಾಮಗಳಲ್ಲಿ ಪಶು ಸಂಗೋಪನೆ ಅಭಿವೃದ್ಧಿಗಾಗಿ ಪಶು ಚಿಕಿತ್ಸಾ ಶಿಬಿರಗಳನ್ನು ವರ್ಷದಲ್ಲಿ ೨ ಸಲ ಏರ್ಪಡಿಸಲಾಗುವುದು. ಸೃಜಿಸಿದ ನೀರು ಸಂಗ್ರಹಣಾ ವಿನ್ಯಾಸಗಳಲ್ಲಿ ಮೀನು ಮರಿಗಳನ್ನು ಬಿಟ್ಟು ರೈತನ ಆರ್ಥಿಕ ಆದಾಯ ವೃದ್ಧಿಸುವ ಯೋಜನೆ ಕೂಡಾ ಇದೆ. ಇದಲ್ಲದೆ, ಜಲಾನಯನ ಗ್ರಾಮಗಳಲ್ಲಿ ಸ್ವಸಹಾಯ ಗುಂಪು, ಬಳಕೆದಾರರ ಗುಂಪುಗಳನ್ನು ಸೃಜಿಸಲಾಗಿದ್ದು, ಶೇಣಿಕೃತ ಸ್ವಸಹಾಯ ಗುಂಪುಗಳಿಗೆ ಸುತ್ತುನಿಧಿಯನ್ನು ಕೂಡ ಜಲಾನಯನ ಮೇಳ ಏರ್ಪಡಿಸಿ ಚೆಕ್ ಮೂಲಕ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಜಲಾನಯನ ಅಭಿವೃದ್ಧಿ ಇಲಾಖೆ ತಾಂತ್ರಿಕ ಅಧಿಕಾರಿ ವಿ.ಕೆ. ಕಮತರ್ ಅವರು ಮಾತನಾಡಿ, ಈಗಾಗಲೇ ಸರ್ಕಾರೇತರ ಸಂಸ್ಥೆಗಳ ಮೂಲಕ ಜಲಾನಯನ ಗ್ರಾಮಗಳಲ್ಲಿ ಜನಜಾಗೃತಿಗಾಗಿ ಅರಿವು ಮೂಡಿಸುವ ಗ್ರಾಮಸಭೆ, ಜಾಥಾ, ಬೀದಿ ನಾಟಕ ಇತ್ಯಾದಿ ಕಾರ್ಯಕ್ರಮಗಳನ್ನು ಯಶಸ್ವಿ ರೀತಿಯಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದರು. ತಾಲ್ಲೂಕ ಜಲಾನಯನ ಅಭಿವೃದ್ಧಿ ಅಧಿಕಾರಿ ವೆಂಕಪ್ಪ ಅತ್ತಾರ ಹಾಗೂ ಸಿಬ್ಬಂದಿವರ್ಗ ಪಾಲ್ಗೊಂಡಿದ್ದರು.
Please follow and like us:
error