ಸೆ.೧೧ ರಂದು ಜಿ.ಪಂ ಪ್ರಗತಿ ಪರಿಶೀಲನಾ ಸಭೆ.

ಕೊಪ್ಪಳ,
ಸೆ.೦೮ (ಕ ವಾ) ಕೊಪ್ಪಳ ಜಿಲ್ಲಾ ಪಂಚಾಯತ್‌ನ ಮಾಸಿಕ ಕೆ.ಡಿ.ಪಿ ಹಾಗೂ
ವಿಶೇಷ ಅಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯನ್ನು ಸೆ.೧೧ ರಂದು ಬೆಳಿಗ್ಗೆ ೧೧
ಗಂಟೆಗೆ ಜಿಲ್ಲಾ ಪಂಚಾಯತ್‌ನ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
    
ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಮರೇಶ ಕುಳಗಿ ಸಭೆಯ ಅಧ್ಯಕ್ಷತೆ ವಹಿಸುವರು. ಸಂಬಂಧಪಟ್ಟ
ಎಲ್ಲ ಅಧಿಕಾರಿಗಳು ಆಗಸ್ಟ್-೨೦೧೫ ರ ಅಂತ್ಯಕ್ಕೆ ತಮ್ಮ ಇಲಾಖೆ ಸಾಧಿಸಿದ ಪ್ರಗತಿ
ಮಾಹಿತಿಯೊಂದಿಗೆ ಸಮಯಕ್ಕೆ ಸರಿಯಾಗಿ ಸಭೆಗೆ ಹಾಜರಾಗುವಂತೆ ಹಾಗೂ ಪ್ರಗತಿ ವರದಿಗಳನ್ನು
ಸೆ.೦೯ ರೊಳಗಾಗಿ ಯೋಜನಾ ಶಾಖೆಗೆ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ
ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ತಿಳಿಸಿದ್ದಾರೆ.
ಸೆ.೦೮ ರಿಂದ ಕಾಲು ಬಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ.
ಕೊಪ್ಪಳ,
ಸೆ.೦೮ (ಕ ವಾ) ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ
ಕೇಂದ್ರ ಪುರಸ್ಕೃತ ಕಾಲುಬಾಯಿ ರೋಗ ನಿಯಂತ್ರಣ ಯೋಜನೆಯಡಿ ೯ನೇ ಸುತ್ತಿನ ಕಾಲು ಬಾಯಿ ರೋಗ
ನಿರೋಧಕ ಲಸಿಕಾ ಕಾರ್ಯಕ್ರಮವನ್ನು ಸೆ.೦೮ ರಿಂದ ೨೩ ರವರೆಗೆ ಜಿಲ್ಲಾದ್ಯಂತ
ಹಮ್ಮಿಕೊಳ್ಳಲಾಗಿದೆ.
ಏನಿದು ಕಾಲು-ಬಾಯಿ ರೋಗ?
ಕಾಲು-ಬಾಯಿ ಜ್ವರವು ದನ, ಎಮ್ಮೆ,
ಹಂದಿ, ಜಿಂಕೆ ಸೇರಿದಂತೆ ಇತರೆ ಸೀಳು ಗೊರಸಿನ ಪ್ರಾಣಿಗಳಲ್ಲಿ ಕಂಡು ಬರುವ ಪಿಕಾರ್ನೋ
ವೈರಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ರೋಗವಾಗಿದೆ. ಈ ರೋಗವು ಅಂಟು ಜಾಡ್ಯವಾಗಿದ್ದು,
ರೋಗಗ್ರಸ್ಥ ರಾಸುವಿನ ಸಂಪರ್ಕ, ಆಹಾರ, ಗಾಳಿ ಮತ್ತು ನೀರಿನ ಮೂಲಕ ರಾಸುವಿನಿಂದ
ರಾಸುವಿಗೆ ಹರಡುತ್ತದೆ. ಕಾಲು ಬಾಯಿ ರೋಗೋದ್ರೇಕದಲ್ಲಿ ಕೆಲವೊಮ್ಮೆ ಜಾನುವಾರುಗಳು
ಮರಣವನ್ನಪ್ಪುತ್ತವೆ. ರೋಗದಿಂದ ಚೇತರಿಸಿಕೊಂಡ ಜಾನುವಾರುಗಳಲ್ಲಿ ಉತ್ಪನ್ನ ಸಾಮರ್ಥ್ಯ
ಕಡಿಮೆಗೊಳ್ಳುತ್ತದೆ. ಅಲ್ಲದೆ, ಹಸು, ಎಮ್ಮೆಗಳಲ್ಲಿ ಗರ್ಭಕಟ್ಟುವ ತೊಂದರೆಗಳು
ಉಂಟಾಗುತ್ತವೆ. ಹೋರಿ, ಎತ್ತುಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ಕ್ಷೀಣಿಸುತ್ತದೆ.
ಇವೆಲ್ಲವುಗಳ ಪರಿಣಾಮವಾಗಿ ರೈತ ಆರ್ಥಿಕವಾಗಿ ಸಂಕಷ್ಟ ಎದುರಿಸುವಂತಾಗುತ್ತದೆ.
    
ಕಾಲು-ಬಾಯಿ ಜ್ವರದ ವಿರುದ್ಧ ನಿಯಮಿತವಾಗಿ ಲಸಿಕೆ ಹಾಕುವುದರಿಂದ ಈ ರೋಗವನ್ನು ತಹಬದಿಗೆ
ತರಬಹುದಾಗಿದ್ದು, ಈ ನಿಟ್ಟಿನಲ್ಲಿ ಕಾಲು ಬಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮವನ್ನು
ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಡಿ ಕೊಪ್ಪಳ ಜಿಲ್ಲೆಯ ೩.೯೯ ಲಕ್ಷ
ಜಾನುವಾರುಗಳಿಗೆ ಉಚಿತವಾಗಿ ಈ ಕಾಲುಬಾಯಿ ರೋಗ ನಿರೋಧಕ ಲಸಿಕೆಯನ್ನು ಹಾಕಲಾಗುವುದು.
ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯನ್ನು ತಾಲೂಕಾವಾರು ಗ್ರಾಮವಾರು ತಯಾರಿಸಲಾಗಿದ್ದು,
ಪಶುಪಾಲನಾ ಇಲಾಖೆ ಅಧಿಕಾರಿ, ಸಿಬ್ಬಂದಿಗಳನ್ನೊಳಗೊಂಡ ಲಸಿಕಾ ತಂಡಗಳು ವೇಳಾಪಟ್ಟಯಂತೆ
ಆಯಾ ಗ್ರಾಮಗಳಿಗೆ ಭೇಟಿ ನೀಡಿ, ಜಾನುವಾರುಗಳಿಗೆ ಉಚಿತ ಲಸಿಕೆಯನ್ನು ಹಾಕಲಿವೆ. ಈ ಲಸಿಕೆ
ಹಾಕುವುದರಿಂದ ಹಾಲು ಕಡಿಮೆಯಾಗುವುದಾಗಲಿ, ಗರ್ಭಪಾತವಾಗುವುದಾಗಲಿ ಆಗುವುದಿಲ್ಲ. ಈ
ನಿಟ್ಟಿನಲ್ಲಿ ರೈತರು ಯಾವುದೇ ಮೂಢನಂಬಿಕೆ ಅಥವಾ ತಪ್ಪು ಗ್ರಹಿಕೆಗೆ ಬಲಿಯಾಗದೇ, ತಮ್ಮ
ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಪಶುಪಾಲನಾ ಇಲಾಖೆ
ಉಪನಿರ್ದೇಶಕ ಡಾ. ಭಾಸ್ಕರ ನಾಯಕ್ ಅವರು ಸಾರ್ವಜನಿಕರಲ್ಲಿ ಕೋರಿದ್ದಾರೆ.
Please follow and like us:
error