ಜಾತಿ ಕುಲಗಳನ್ನು ಮೆಟ್ಟಿ ನಿಂತ ಕನಕದಾಸರು

ಕರ್ನಾಟಕದಲ್ಲಿ ಕನಕದಾಸರ ಹೆಸರನ್ನು ಹೇಳದವರಿಲ್ಲ. ಗಡಿನಾಡುಗಳಲ್ಲಿ ಕನಕದಾಸರ ಹೆಸರನ್ನು ಕೇಳದವರಿಲ್ಲ. ಪುರಂದರದಾಸರು ಮತ್ತು ಕನಕದಾಸರು ಸಮಕಾಲೀನರು. ಇದಕ್ಕೆ ಅವರ ಪದಗಳೇ ಸಾಕ್ಷಿ . ಈ ಅವರ ಜೀವನ ಚರಿತ್ರೆಯನ್ನು ಅವಲೋಕಿಸೋಣ.
ಕನಕದಾಸರು ಜಾತ್ಯಾ ಕುರುಬರು ಎಂದರೆ ಹಾಲುಮತಸ್ಥರು. ಹಾವೇರಿ ಜಿಲ್ಲೆಯ ಬಾಡವೆಂಬ ಗ್ರಾಮವು ದಾಸರ ಜನ್ಮಸ್ಥಳ ತಂದೆಯ ಹೆಸರು ಬೀರಪ್ಪ. ತಾಯಿಯ ಹೆಸರು ಬಚ್ಚಮ್ಮ. ಬೀರಪ್ಪನು ತನಗೆ ಜನಿಸಿದ ಓರ್ವನೇ ಪುತ್ರನಿಗೆ ತನ್ನ ಕುಲದೈವ ವೆಂಕಟಪತಿಯ ಹೆಸರಿಡಬೇಕೆಂದು ತಿಮ್ಮಪ್ಪನೆಂಬುದಾಗಿ ನಾಮಕರಣ ಮಾಡಿದನು. ತಿರುಮಲೆಯಪ್ಪನೆಂಬ ತಮಿಳು ಶಬ್ದವು ತಿಮ್ಮಪ್ಪನೆಂಬುದಾಗಿದೆ. ಇವರ ಕಾಲ ಕ್ರಿ.ಶ. ಸುಮಾರು ೧೫೦೮. ತಿಮ್ಮಪ್ಪನು ಬಾಲ್ಯ ಪ್ರಭೃತಿ ವೀರರಸಪ್ರಧಾನವಾದ ಭಕ್ತರ ಚರಿತ್ರೆಗಳನ್ನು ಕೇಳುತ್ತಿದ್ದನಾದ್ದರಿಂದ ಮನಸ್ಸಿನಲ್ಲಿ ಶೂರತನವೇ ನೆಲೆಸಿತ್ತು. ಬಚ್ಚಮ್ಮಳು ತಿಮ್ಮಪ್ಪನಿಗೆ ಪ್ರೌಢ ವಿದ್ಯಾಬ್ಯಾಸ ಮಾಡೆಂದರೆ ಅವನು ಬ್ರಾಹ್ಮಣ ಬಾಲಕರ ಕೆಲಸವೆನ್ನುತ್ತಿದ್ದನು. ತಂದೆಗಿದ್ದ ಢಣಾಯಕತನವು ಮಗನಿಗೂ ದೊರೆತ ಕಾರಣ ತಿಮ್ಮಪ್ಪನು ಚಿಕ್ಕ ವಯಸ್ಸಿನಲ್ಲಿಯೇ ರಾಜನಂತಾದನು. ತಂದೆಗಿಂತ ದಕ್ಷತೆಯಿಂದ ರಾಜಕಾರ‍್ಯ ನಿರ್ವಾಹ ಮಾಡಿದ್ದರಿಂದ ವಿಜಯನಗರದ ಆಸ್ಥಾನದಲ್ಲಿ ಇವನ ಖ್ಯಾತಿಯೂ ಬಹಳವಾಯಿತು. ಅಧಿಕಾರವೂ ದೊಡ್ಡದಾಯಿತು.
ಒಮ್ಮೆ ಏನು ನಿಮಿತ್ತವೋ ಭೂಶೋಧನೆ ಮಾಡುತ್ತಿರಲು ತಿಮ್ಮಪ್ಪನಿಗೆ ಭೂಗತವಾಗಿದ್ದ ಅಪಾರ ಧನರಾಶಿಯು ಕರಗತವಾಯಿತು. ಕನಕರಾಶಿಯು ಕರವಶವಾದುದನ್ನು ನೋಡಿ ಅದೃಷ್ಠವಂತನೆಂದು ಅವನನ್ನು ಜನರು ಕನಕನಾಯಕನೆಂದೇ ಕರೆದರು.ಕನಕನು ಆ ದ್ರವ್ಯದಿಂದ ಕಾಗಿನೆಲೆಯಲ್ಲಿ ಭವ್ಯದೇವಾಲಯನ್ನು ಕಟ್ಟಿಸಿ ತನ್ನ ಜನ್ಮಸ್ಥಳವಾದ ಬಾಡದಲ್ಲಿ ಆದಿಕೇಶವಮೂರ್ತಿಯನ್ನು ತಂದು ಅದನ್ನು ಪ್ರತಿಷ್ಠಾಪಿಸಿ ತಿರುಪತಿಯಂತಹ ಕ್ಷೇತ್ರಗಳಲ್ಲಿ ನಡೆಯುವಂತೆ ಕಾಗಿನೆಲೆಯಲ್ಲು ಪೂಜಾಪದ್ದತಿಯನ್ನೇರ್ಪಡಿಸಿದನು.
ಹೀಗಿರಲು ಒಂದು ರಾತ್ರಿ ಸ್ವಪ್ನದಲ್ಲಿ ಕನಕಗಿನಿಗೆ ಕೇಶವನು ದರ್ಶನವಿತ್ತು- ಎಲೋ ಕನಕಾ, ನೀನು ನನ್ನ ದಾಸನಾಗು ಎಂದು ಹೇಳಿದಂತಾಯಿತು. ಸ್ವಪ್ನಾವಸ್ಥೇಯಲ್ಲಿಯೇ ತಿರಿದುಂಬುವುದಕ್ಕೆ ನಾನೇಕೆ ದಾಸನಾಗಲಿ ? ನಾನು ದೊರೆತನ ಮಾಡಬೇಕು ಎಂದು ತಾನೇ ಉತ್ತರವಿತ್ತಂತೆ ಜಾಗ್ರದಾವಸ್ಥೆಯಲ್ಲಿ ಜ್ಞಾಪಕವಾಯಿತು. ಹೀಗೆ ಪದೇ ಪದೇ ಸ್ಪಪ್ನದಲ್ಲಿ ಶ್ರೀ ಕೇಶವಸ್ವಾಮಿಯ ದರ್ಶನ  ನೀಡಿ ಇದೇ ರೀತಿ ಹೇಳಲು ಆಗ ಕನಕನ ಉತ್ತರವೂ ಇದೇ ಆಗಿತ್ತು. 
ಕಾಲಾಂತರದಲ್ಲಿ ಕನಕನಿಗೆ ಯುದ್ದ ಪ್ರಸಂಗವೊದಗಿತು. ಯುದ್ದದಲ್ಲಿ ಶತ್ರುಗಳದೇ ಮೇಲುಗೈ ಆಗಿ ಅವನ ದೇಹದಲ್ಲೆಲ್ಲಾ ಬಾಣಗಳು ನಾಟಿಕೊಂಡವು. ಖಡ್ಗವು ಕೈಯಿಂದ ಕೆಳಗುರುಳಿ ಕನಕನು ಕೇಶವಾ ಎಂದು ಕೂಗಿಕೊಂಡು ನೆಲದ ಮೇಲೆ ಬಿದ್ದುಬಿಟ್ಟನು. ದೇಹದ ಮೇಲೆ ಸ್ಮೃತಿ ತಪ್ಪಿದಾಗ ಪರಮಾತ್ಮನು ಮಾನವ ವೇಷದಾರಿಯಾಗಿ ಬಂದು ಈತನನ್ನು ಉಪಚರಿಸಿದನು. ಆಗ ಕನಕನು ಹರಿದಾಸನಾದನು. ಕಾಗಿನೆಲೆ ಆದಿಕೇಶವ, ಬಾಡದಾದಿ ಕೇಶವ ಎಂಬ ಅಂಕಿತದಿಂದ ದೇವರನಾಮಗಳನ್ನು ರಚಿಸಿದನು. ಅದೇ ಸಂದರ್ಭದಲ್ಲಿ ಅವನಿಗೆ ಬಂದ ಪರವೆಂದರೆ
ಈಶ ನಿನ್ನ ಚರಣ ಭಜನ | ಆಶೆಯಿಂದ ಮಾಡುವೆನು |
ದೋಷರಾಶಿ ನಾಶಮಾಡು | ಶ್ರೀಶ ಕೇಶವ ||
ಎಂದು ಭಜನೆ ಮಾಡಿದರು. ವ್ಯಾಸರಾಯರ ಶಿಷ್ಯತ್ವ ವಹಿಸಿದರು. ಒಂದು ದಿನ ವಿಜಯನಗರದಲ್ಲಿ ಮದ್ಹಾಹ್ನ ಕಾಲದಲ್ಲಿ ಮಠದಲ್ಲಿ ವಿದ್ವದ್ಗೋಷ್ಠಿ ನೆರೆದಿದ್ದಾಗ ವ್ಯಾಸರಾರಯ ಪ್ರಕೃತ ಇಷ್ಟು ಜನರಲ್ಲಿ ವೈಕುಂಠಕ್ಕೆ ಹೋಗುವರ‍್ಯಾರು ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಆಗ ಕನಕದಾಸರು ನಾನು ಹೋದರೆ ಹೋದೇನು ! ಎಂದರು. ಅಲ್ಲಿದ್ದ ಎಲ್ಲಾ ಪಂಡಿತರಿಗೂ ಕೋಪ ಸಿಡಿದೆದ್ದಿತು. ಆಗ ಕನಕನು ” ಬ್ರಾಹ್ಮಣೋತ್ತಮರೇ ಪಂಡಿತಾಗ್ರಣಿಗಳೇ ಇಷ್ಟಕ್ಕೇ ಕೋಪವೇಕೆ ? ನನ್ನ ಭಾವವಿಷ್ಟೇ ನಾನು ಎಂಬುವುದ ಹೋದರೆ ಹೋದೇನು. ಇದ್ದರೆ ಇದ್ದೇನು ಎಂದು ಕ್ಷಮೆ ಬೇಡಿ ಸಾಷ್ಟಾಂಗ ನಮಸ್ಕಾರ ಮಾಡಿದರು. ಇದರಿಂದ ತಿಳಿದು ಬರುವುದೇನೆಂದರೆ ಕನಕದಾಸರು ಇಷ್ಟು ಸಣ್ಣ ಶಬ್ದದಲ್ಲಿ ಎಂತಹ ಗೂಡಾಥವಡಗಿದೆಯೆಂದು. ಈ ಮಾತನ್ನು ಕೇಳಿದ ವ್ಯಾಸರಾಯರು ಕನಕದಾಸರನ್ನು ಶ್ಲಾಘಿಸಿದರು. ಗುರುಗಳಿಗೆ ಶ್ರೀ ಕೃಷ್ಣ ಪರಮಾತ್ಮನನ್ನು ತೋರಿಸಿದ ಮಹಾನುಭಾವರು ಕನಕದಾಸರು ಇವರನು ಅನೇಕ ಪವಾಡಗಳನ್ನು ಮಾಡಿದರು.
ಕನಕದಾಸರು ಬಿಡಿಯಾಗಿ ದೇವರ ನಾಮಗಳನ್ನು ಮಾಡಿರುವುದು ಮಾತ್ರವಲ್ಲದ ಇಡಿಯಾದ ಅನೇಕ ಗ್ರಂಥಗಳನ್ನು ರಚಿಸುವರು. ಅವುಗಳಲ್ಲಿ ಹರಿಭಕ್ತಿಸಾರ, ನಳಚರಿತ್ರೆ,  ಮೋಹನ ತರಂಗಿಣಿ, ನೃಸಿಂಹಸ್ತವ, ರಾಮಧ್ಯಾನ ಚರಿತೆಗಳು ಮುಖ್ಯವಾದಗವುಗಳು.
ದಾಸರ ಮಾತುಗಳು ಅನುಭವದ ಮಾತುಗಳು.ಯುಕ್ತಿಗೆ ನಿಲುಕುವುವಲ್ಲ. ವಾಕ್ಯಾರ್ಥಗಳಿಗೆ ಬರುವವಲ್ಲ. ಸಮುದ್ರದ ಆಳವು ಮುಳುಗಿದವರಿಗೇ ತಿಳಿಯುವುದು. ಸಕ್ಕರೆಯೂ ಸಿಹಿಯಾಗಿದೆಯೆಂದ ಹೇಳಬಹುದು. ಸಿಹಿ ಹೇಗಿದೆಯೆಂದು ಕೇಳಿದರೆ ಸವಿದು ನೋಡೆನ್ನಬೇಕಾಗುವುದು. ದಾಸರ ಪದಗಳಾದರೂ  ಜ್ಞಾನಪ್ರಧಾನಗಳಲ್ಲ, ಶಬ್ದ ಪ್ರಧಾನಗಳಲ್ಲ. ಅಲ್ಲಿ ನೋಡಬೇಕಾದದ್ದು ಅರ್ಥ. ಅಲ್ಲಿ ಮಾಡಿಕೊಳ್ಳಬೇಕಾಗಿರುವುದು ಅನುಭವ, ದಾಸ ಸಾಹಿತ್ಯವು ಪಾಮರ ಸಾಹಿತ್ಯವಲ್ಲ. ಅದು ಪಂಡಿತರ ಸಾಹಿತ್ಯವೂ ಅಲ್ಲ. ಈರ್ವರಿಗೂ ನಿಲುಕದ ಅನುಭವ ಸಾಹಿತ್ಯ.
– ಸುಧಾ ಕುಲಕರ್ಣಿ
೧೦ನೇ ತರಗತಿ,
ಶಾರದಾ ಸ್ಕೂಲ್, ಕೊಪ್ಪಳ
ಮೊ : ೯೪೪೮೨೧೪೨೫೦
Please follow and like us:
error

Related posts

Leave a Comment