ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ- ಎಸ್.ಬಿ. ಕಡಿ

ಕೊಪ್ಪಳ ಮಾ. ೦೫: ಶಿಕ್ಷಣ ಸಂಸ್ಥೆಗಳು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಆದ್ಯತೆ ನೀಡಬೇಕು, ಈ ಮೂಲಕ ಹಿಂದುಳಿದಿರುವ ಪ್ರದೇಶದಲ್ಲಿ ಶಿಕ್ಷಣದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಗವಿಸಿದ್ದೇಶ್ವರ ಮಹಾವಿದ್ಯಾಲಯದ ನಿವೃತ್ತ ಉಪನ್ಯಾಸಕ ಎಸ್.ಬಿ. ಕಡಿ ಅವರು ಹೇಳಿದರು.
  ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಸಂಸ್ಥೆಯ ಕೊಪ್ಪಳದ ಶ್ರೀ ಶಿವಶಾಂತವೀರ ಪಬ್ಲಿಕ್ ಸ್ಕೂಲ್ ವತಿಯಿಂದ ಏರ್ಪಡಿಸಲಾಗಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
  ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದಿರುವಂತಹ ಪ್ರದೇಶಗಳಲ್ಲಿರುವ ಶಿಕ್ಷಣ ಸಂಸ್ಥೆಗಳು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು ಅಗತ್ಯವಾಗಿದ್ದು, ಈ ದಿಸೆಯಲ್ಲಿ ಕೊಪ್ಪಳದ ಶ್ರೀ ಶಿವಶಾಂತವೀರ ಪಬ್ಲಿಕ್ ಸ್ಕೂಲ್ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರ ಮೂಲಕ ಸ್ಪರ್ಧಾತ್ಮಕ ಯುಗದ ಶಿಕ್ಷಣ ಕ್ಷೇತ್ರಕ್ಕೆ ತನ್ನ ಪಾಲ್ಗೊಳ್ಳುವಿಕೆಯನ್ನು ನಿರೂಪಿಸಿದಂತಾಗಿದೆ.  ಎಲ್ಲ ವರ್ಗದ ಮಕ್ಕಳಿಗೂ, ಶಿಕ್ಷಣ ಸಂಸ್ಥೆ ಆದ್ಯತೆಯನ್ನು ನೀಡಿ, ಮಕ್ಕಳ ಭವಿಷ್ಯ ಉಜ್ವಲವಾಗಿಸಲು ಶ್ರಮಿಸುತ್ತಿದೆ.  ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಲು ಪಾಲಕರು ಮುಂದಾಗಬೇಕು ಎಂದು ನಿವೃತ್ತ ಉಪನ್ಯಾಸಕ ಎಸ್.ಬಿ. ಕಡಿ ಅವರು ಮನವಿ ಮಾಡಿದರು.
  ಶಿವಶಾಂತವೀರ ಪಬ್ಲಿಕ್ ಸ್ಕೂಲ್‌ನ ಅಧ್ಯಕ್ಷ ಎಸ್.ಆರ್. ನವಲಿ ಹಿರೇಮಠ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಲು ಶಾಲೆಯ ಆಡಳಿತ ಮಂಡಳಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಈಗಾಗಲೆ ಶಾಲೆಗೆ ಸ್ಮಾರ್ಟ್ ಕ್ಲಾಸ್ ಅಳವಡಿಸುವುದರ ಮೂಲಕ ಮಕ್ಕಳಿಗೆ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಯತ್ನಿಸಲಾಗುತ್ತಿದೆ. ಮುಂದಿನ ಶೈಕ್ಷಣಿಕ ಸಾಲಿನಿಂದ ಇಂಗ್ಲೀಷ್ ಮಾಧ್ಯಮದಲ್ಲಿ ೮ನೇ ತರಗತಿ ಪ್ರಾರಂಭಿಸಲು ಅನುಮತಿ ದೊರೆತಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸುವಂತೆ ಮಾಡಲು ಇನ್ನಷ್ಟು ಸುಧಾರಣಾ ಕ್ರಮಗಳನ್ನು ಅಳವಡಿಸಲಾಗುವುದು ಎಂದರು.
  ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಹೆಚ್. ವೀರಣ್ಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.  ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಯ್ಯ, ಶಿವಶಾಂತವೀರ ಪಬ್ಲಿಕ್ ಸ್ಕೂಲ್‌ನ ಮುಖ್ಯಸ್ಥೆ ರೋಜ್ ಮೇರಿ, ಆಡಳಿತಾಧಿಕಾರಿ ವಿಜಯಾ ಹಿರೇಮಠ, ಶಾಲಾ ಸಿಬ್ಬಂದಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.  ಶಾಲಾ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.  ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
Please follow and like us:
error