ನ. ೧೪ ರಿಂದ ಕೊಪ್ಪಳದಲ್ಲಿ ಅಂತರರಾಷ್ಟ್ರೀಯ ಮಕ್ಕಳ ಚಲನ ಚಿತ್ರೋತ್ಸವ- ಡಾ. ಸುರೇಶ್ ಇಟ್ನಾಳ್

ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಕೊಪ್ಪಳದಲ್ಲಿ ಇದೇ ಮೊದಲ ಬಾರಿಗೆ ಅಂತರ ರಾಷ್ಟ್ರೀಯ ಮಕ್ಕಳ ಚಲನ ಚಿತ್ರೋತ್ಸವ  ನ. ೧೪ ರಿಂದ ೨೦ ರವರೆಗೆ ಏಳು ದಿನಗಳ ಕಾಲ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಹೇಳಿದರು.
  ಅಂತರ ರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ಹಮ್ಮಿಕೊಳ್ಳುವ ಕುರಿತು ಸಿದ್ಧತೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಕರ್ನಾಟಕ ಚಲನಚಿತ್ರ ಅಕಾಡೆಮಿಯು ಇದೇ ಮೊದಲ ಬಾರಿಗೆ ಅಂತರ ರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವವನ್ನು ಜಿಲ್ಲಾ ಮಟ್ಟಕ್ಕೆ ವಿಸ್ತರಿಸುವುದು ಶ್ಲಾಘನೀಯವಾಗಿದೆ.  ಮಕ್ಕಳ ಪಠ್ಯ ಪುಸ್ತಕ ಮತ್ತು ಆಟಗಳ ಮಧ್ಯೆ ಸೃಜನಶೀಲ ಸಿನಿಮಾ ಎಂಬ ಮೋಹಕ ಮನರಂಜನೆ ಶಿಕ್ಷಣಕ್ಕೆ ಪೂರಕ ಕೊಂಡಿಯಂತೆ ಬೆಸೆದುಕೊಂಡಿದೆ.  ನ. ೧೪ ರಂದು ಬೆಳಿಗ್ಗೆ ೮ ಗಂಟೆಗೆ ನಗರದ ಲಕ್ಷ್ಮೀ ಚಿತ್ರಮಂದಿರದಲ್ಲಿ ಚಿತ್ರೋತ್ಸವದ ಉದ್ಘಾಟನೆ ಸಮಾರಂಭ ಜರುಗಲಿದ್ದು, ಕೊಪ್ಪಳ ನಗರದಲ್ಲಿ ಹಮ್ಮಿಕೊಳ್ಳಲಾಗಿರುವ ಮಕ್ಕಳ ಚಲನ ಚಿತ್ರೋತ್ಸವವನ್ನು ಯಶಸ್ವಿಗೊಳಿಸಲು ಅಧಿಕಾರಿಗಳು ಸಿದ್ಧತೆಗಳನ್ನು ಕೈಗೊಳ್ಳಬೇಕು.  ಅಂತರ ರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವಕ್ಕೆ ಭಾರತ, ಬ್ರೆಜಿಲ್, ಮಂಗೋಲಿಯಾ, ಸ್ವಿಟ್ಜರ್‌ಲ್ಯಾಂಡ್, ಹಂಗರಿ, ಇರಾನ್ ಸೇರಿದಂತೆ ಹಲವು ದೇಶಗಳ ಒಟ್ಟು ೧೬ ಚಲನಚಿತ್ರಗಳನ್ನು ಚಲನಚಿತ್ರ ಅಕಾಡೆಮಿಯು ಆಯ್ಕೆಗೊಳಿಸಿದ್ದು, ಕೊಪ್ಪಳದಲ್ಲಿ ನ. ೧೪ ರಿಂದ ೨೦ ರವರೆಗೆ ನಗರದ ಶಾರದಾ, ಲಕ್ಷ್ಮೀ ಮತ್ತು ಕನಕಾಚಲ ಚಿತ್ರಮಂದಿರಗಳಲ್ಲಿ ನಿತ್ಯ ಬೆಳಿಗ್ಗೆ ೮-೩೦ ರಿಂದ ೧೦-೩೦ ರವರೆಗೆ ಬೇರೆ ಬೇರೆ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.  ಕೊಪ್ಪಳ ಹಾಗೂ ಭಾಗ್ಯನಗರದಲ್ಲಿನ ೧ ರಿಂದ ೧೦ ನೇ ತರಗತಿ ವರೆಗಿನ ಮಕ್ಕಳಿಗೆ ಉಚಿತವಾಗಿ ಚಲನಚಿತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ಮಕ್ಕಳನ್ನು ನಿಗದಿತ ಅವಧಿಯಲ್ಲಿ ಶಿಕ್ಷಕರೊಂದಿಗೆ ಚಿತ್ರಮಂದಿರಕ್ಕೆ ಸುರಕ್ಷಿತವಾಗಿ ಕರೆದುಕೊಂಡು ಬಂದು, ಹೋಗುವ ಹೊಣೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ಯಾಮಸುಂದರ್ ಅವರಿಗೆ ಸೂಚನೆ ನೀಡಿದರು.  ಅಲ್ಲದೆ ಚಿತ್ರೋತ್ಸವಕ್ಕೆ ನಿಗದಿಪಡಿಸಲಾಗಿರುವ ಚಲನಚಿತ್ರ ಮಂದಿರಗಳ ಮಾಲೀಕರು, ಚಿತ್ರಗಳ ಪ್ರದರ್ಶನಕ್ಕೆ ಎಲ್ಲ ವ್ಯವಸ್ಥೆಗಳನ್ನು ಸಮರ್ಪಕ ರೀತಿಯಲ್ಲಿ ಕೈಗೊಳ್ಳಬೇಕು.  ಚಿತ್ರಮಂದಿರಗಳ ಸ್ವಚ್ಛತೆಯನ್ನು ಕಾಯ್ದುಕೊಂಡು, ಕುಡಿಯುವ ನೀರು ಇತ್ಯಾದಿ ವ್ಯವಸ್ಥೆ ಮಾಡುವಂತೆ ಚಿತ್ರಮಂದಿರಗಳ ವ್ಯವಸ್ಥಾಪಕರಿಗೆ ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಸೂಚನೆ ನೀಡಿದರು.
  ಚಲನಚಿತ್ರೋತ್ಸವ ಜಿಲ್ಲಾ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುವ ಜಿಲ್ಲಾ ವಾರ್ತಾಧಿಕಾರಿ ತುಕಾರಾಂ ರಾವ್ ಅವರು ಮಾತನಾಡಿ, ೬ ರಿಂದ ೧೦ ವರ್ಷದೊಳಗಿನ ಮಕ್ಕಳಿಗೆ ಟೈನಾ (ಬ್ರೆಜಿಲ್), ಯಲೊ ಕೋಲ್ಟ್ (ಮಂಗೋಲಿಯಾ), ಪನಿ ಕ್ಲುಕಿ,  ಬ್ಲೂ ಟೈಗರ್, ಜರ್ನಿ ಆಫ್ ದಿ ಬಿಗಿನಿಂಗ್ ಆಫ್ ಟೈಮ್ (ಜ್ಹೆಕ್ ಗಣರಾಜ್ಯ), ಗುಬ್ಬಚ್ಚಿಗಳು, ಮಲ್ಲಿ, ಕಫಲ್, ಗೂಪಿ ಗವ್ವಾಯಾ ಭಾತಾ ಬಜಾಯ, ಕೋಬ್ (ಭಾರತ) ಸೇರಿದಂತೆ ಒಟ್ಟು ೧೦ ಚಲನಚಿತ್ರಗಳು.  ೧೧ ರಿಂದ ೧೬ ವರ್ಷದೊಳಗಿನ ಮಕ್ಕಳಿಗೆ ಸಿಂಡ್ರೆಲ್ಲಾ ಮೂನ್ (ಚೀನಾ), ಚಿಲ್ಡ್ರನ್ ಆಫ್ ಹೆವೆನ್ (ಇರಾನ್), ಇನ್ ದಿ ನೇಮ್ ಆಫ್ ಶೆರ‍್ಲಾಕ್ ಹೋಮ್ಸ್ (ಹಂಗರಿ), ಕ್ಲಾರಾ ಅಂಡ್ ದಿ ಸಿಕ್ರೆಟ್ ಆಫ್ ದಿ ಬೇರ‍್ಸ್ (ಸ್ವಿಡ್ಜರ್‌ಲ್ಯಾಂಡ್), ಜರ್ನಿ ಆಫ್ ದಿ ಬಿಗಿನಿಂಗ್ ಆಫ್ ಟೈಮ್ (ಜ್ಹೆಕ್ ಗಣರಾಜ್ಯ), ಇನುಕ್ (ಗ್ರೀನ್ ಲ್ಯಾಂಡ್), ಅಲೆಗಳು, ಕೋಬ್ (ಭಾರತ) ಸೇರಿದಂತೆ ಒಟ್ಟು ೮ ಚಲನಚಿತ್ರಗಳನ್ನು ವೀಕ್ಷಣೆಗೆ ನಿಗದಿಪಡಿಸಲಾಗಿದೆ.  ಈ ಚಲನಚಿತ್ರಗಳು ಅಂತರರಾಷ್ಟ್ರೀಯ ಚಿತ್ರಗಳಾಗಿರುವುದರಿಂದ, ಇಂತಹ ಅಪರೂಪದ ಚಿತ್ರಗಳ ವೀಕ್ಷಣೆಯ ಅವಕಾಶ ನಗರದ ಎಲ್ಲ ಶಾಲಾ ವಿದ್ಯಾರ್ಥಿಗಳಿಗೆ ದೊರೆಯುವಂತಾಗಬೇಕು ಎಂದರು.
  ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ಯಾಮಸುಂದರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಳ್ಳಿ ಮಂಡಲದ ಜಿಲ್ಲಾ ಸಂಚಾಲಕ ಮಂಜುನಾಥ ಗೊಂಡಬಾಳ,  ಲಕ್ಷ್ಮಿ ಚಿತ್ರಮಂದಿರದ ಮಾಲೀಕರಾದ ವಿಶ್ವನಾಥ್, ಶಾರದಾ ಟಾಕೀಸ್‌ನ ರಾಘು, ಕನಕಾಚಲದ ವೀರೇಶ್ ಅವರು ಭಾಗವಹಿಸಿದ್ದರು.

Related posts

Leave a Comment