ತೊಗಾಡಿಯಾ ಕೋಲಾಹಲಕ್ಕೆ ಸದನ ಬಲಿ

 ದ್ವೇಷದ ಮಾತುಗಳನ್ನು ಆಡುವವರಿಗೆ, ದ್ವೇಷದ ರಾಜಕಾರಣ ಮಾಡುವವರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. – ಸಿದ್ದರಾಮಯ್ಯ, ಮುಖ್ಯಮಂತ್ರಿ 
ಬೆಂಗಳೂರು,  ಫೆ ವಿಎಚ್‌ಪಿ ಮುಖಂಡ ಪ್ರವೀಣ್ ತೊಗಾಡಿಯಾ ಬೆಂಗಳೂರಿಗೆ ಬರದಂತೆ ನಿಷೇಧ ಹೇರಿದ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ಸದಸ್ಯರು ವಿಧಾನಮಂಡಲದ ಉಭಯ ಸದನಗಳಲ್ಲಿ ಗದ್ದಲ, ಕೋಲಾಹಲ ಸೃಷ್ಟಿಸಿದ ಹಿನ್ನೆಲೆಯಲ್ಲಿ ಅರ್ಧದಿನದ ಕಲಾಪ ಬಲಿಯಾಯಿತು.
ಬುಧವಾರ ಬೆಳಗ್ಗೆ ವಿಧಾನಸಭೆಯ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಆರ್.ಅಶೋಕ್, ಫೆ.8ರಂದು ವಿಎಚ್‌ಪಿ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ವಿಎಚ್‌ಪಿ ನಾಯಕ ಪ್ರವೀಣ್ ತೊಗಾಡಿಯಾ ಬೆಂಗಳೂರಿಗೆ ಆಗಮಿಸಬೇಕಿತ್ತು. ಆದರೆ, ಸರಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ನಗರಕ್ಕೆ ಅವರ ಆಗಮನಕ್ಕೆ ನಿಷೇಧ ಹೇರಲಾಗಿದೆ. ಕೂಡಲೇ ಅವರಿಗೆ ವಿಧಿಸಿರುವ ನಿಷೇಧ ತೆರವುಗೊಳಿಸಬೇಕು. ರಾಜ್ಯದಲ್ಲಿ ಈಗಾಗಲೇ ಆರೇಳು ಜಿಲ್ಲೆಗಳಲ್ಲಿ ಸಮಾವೇಶ ನಡೆಸಿದ್ದು, ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ ಎಂದರು.
ಮಾತ್ರವಲ್ಲದೆ, ರಾಜ್ಯ ಸರಕಾರ ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವ ಮೂಲಕ ಬಹುಸಂಖ್ಯಾತರನ್ನು ನಿರ್ಲಕ್ಷಿಸುತ್ತಿದೆ. ಮಾತನಾಡಲು ಅವಕಾಶವಿಲ್ಲವೆಂದರೆ ಇದೇನು ಸರ್ವಾಧಿಕಾರಿ ಸಮಾಜವೇ, ಹಿಟ್ಲರ್ ನೀತಿ ಸರಿಯಲ್ಲ ಎಂದ ಅಶೋಕ್, ಪ್ರವೀಣ್ ತೊಗಾಡಿಯಾಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು.
ಸಾಮರಸ್ಯ ಕದಡಲು ಬಿಡೆವು: ಈ ವೇಳೆ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ಸಾಮರಸ್ಯ ಕದಡಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಸಮಾಜದಲ್ಲಿ ದ್ವೇಷದ ಭಾವನೆ ಬಿತ್ತಲು ಬಿಡುವುದಿಲ್ಲ. ಕಾನೂನು ಸುವ್ಯವಸ್ಥೆ, ಶಾಂತಿ ಕಲಕುವ ವ್ಯಕ್ತಿಗಳಿಗೆ ರಾಜ್ಯದಲ್ಲಿ ಜಾಗವಿಲ್ಲ ಎಂದು ಸ್ಪಷ್ಟಪಡಿಸಿದರು. ದ್ವೇಷದ ಮಾತುಗಳನ್ನು ಆಡುವವರಿಗೆ, ದ್ವೇಷದ ರಾಜಕಾರಣ ಮಾಡುವವರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಪ್ರಕಟಿಸಿದ ಸಿದ್ದರಾಮಯ್ಯ, ನಮ್ಮ ಸರಕಾರಕ್ಕೆ ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರೆಂಬ ಯಾವುದೇ ಭೇದವಿಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
 ಸಿದ್ದರಾಮಯ್ಯನವರ ಉತ್ತರದಿಂದ ಕೆರಳಿದ ಬಿಜೆಪಿ ಸದಸ್ಯರು ಗದ್ದಲ ಸೃಷ್ಟಿಸಿ ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ಆರಂಭಿಸಿದರು. ಕ್ರೈಸ್ತ ಸಮುದಾಯದ ಬೆನ್ನಿಹಿನ್ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ಜಕ್ಕೂರು ಮೈದಾನವನ್ನು ನೀಡಿತ್ತು. ‘ಪಾಕಿಸ್ತಾನ್ ಜಿಂದಾಬಾದ್’ ಎಂದವರನ್ನು ಬಂಧಿಸಿದರೆ ಅಮಾಯಕರ ಬಂಧನವಾಗಿದೆಯೆಂದು ಕಾಂಗ್ರೆಸ್‌ನ ನಾಯಕರೊಬ್ಬರು ಹೇಳಿಕೆ ನೀಡುತ್ತಾರೆ. ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕಾರಣ ಸರಿಯಲ್ಲ ಎಂದು ಬಿಜೆಪಿ ಸದಸ್ಯರು ರಾಜ್ಯ ಸರಕಾರದ ವಿರುದ್ಧ ಆಕ್ಷೇಪಿಸಿದರು.
ಈ ಹಂತದಲ್ಲಿ ಬಿಜೆಪಿ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಆಡಳಿತ ಪಕ್ಷದ ಎಸ್.ಟಿ.ಸೋಮಶೇಖರ್, ಪ್ರಮೋದ್ ಮಧ್ವರಾಜ್, ಪ್ರಿಯಾಂಕಾ ಖರ್ಗೆ ಸೇರಿ ಹಲವು ಸದಸ್ಯರು ಧಿಕ್ಕಾರದ ಘೋಷಣೆ ಮೊಳಗಿಸಿದರು. ಆರೋಪ-ಪ್ರತ್ಯಾರೋಪ, ಗದ್ದಲ ಕೂಗಾಟದ ಹಿನ್ನೆಲೆಯಲ್ಲಿ ಸದನದಲ್ಲಿ ಕೋಲಾಹಲ ಸೃಷ್ಟಿಯಾಯಿತು. ಈ ಹಿನ್ನೆಲೆಯಲ್ಲಿ ಸ್ಪೀಕರ್ ಕಾಗೋಡು ಕಲಾಪವನ್ನು ಮೂರು ಬಾರಿ ಮುಂದೂಡಿದರು. ಹೀಗಾಗಿ ಅರ್ಧ ದಿನದ ಕಲಾಪ ಪ್ರವೀಣ್ ತೊಗಾಡಿಯಾ ನಿಷೇಧ ವಿಷಯಕ್ಕೆ ಬಲಿಯಾಯಿತು.
ಬಿಜೆಪಿ ಧರಣಿಯಲ್ಲಿ ಜೆಡಿಎಸ್ ಶಾಸಕ!
ತೊಗಾಡಿಯಾಗೆ ಹೇರಿರುವ ನಿಷೇಧ ತೆರವಿಗೆ ಆಗ್ರಹಿಸಿ ಬಿಜೆಪಿ ಸದಸ್ಯರು ನಡೆಸುತ್ತಿದ್ದ ಧರಣಿಗೆ ಜೆಡಿಎಸ್‌ನ ಮಲ್ಲಿಕಾರ್ಜುನ ಖೂಬಾ ಬೆಂಬಲ ಸೂಚಿಸಿದರು. ಆ ಪಕ್ಷದ ಮುಖ್ಯ ಸಚೇತಕ ಮಧು ಬಂಗಾರಪ್ಪ ವಾಪಸ್ ಕರೆದರೂ ಖೂಬಾ ತಮ್ಮ ಸ್ಥಾನಕ್ಕೆ ಬರಲು ಒಪ್ಪದಿದ್ದದ್ದು ಅಚ್ಚರಿ ಮೂಡಿಸಿತು.
Please follow and like us:
error