ಲೋಕಪಾಲ ಮಸೂದೆ ಗುರುವಾರ ಲೋಕಸಭೆಯಲ್ಲಿ ಮಂಡನೆ

ನವದೆಹಲಿ: ಕಳೆದ ಕೆಲವು ತಿಂಗಳಿಂದ ಕೇಂದ್ರ ಸರ್ಕಾರ ಹಾಗೂ ಅಣ್ಣಾ ತಂಡದ ನಡುವೆ `ಜಿದ್ದಾಜಿದ್ದಿ`ಗೆ ಕಾರಣವಾಗಿರುವ ವಿವಾದಾತ್ಮಕ ಲೋಕಪಾಲ ಮಸೂದೆಗೆ ಪ್ರಧಾನಿ ಮನಮೋಹನ್ ಸಿಂಗ್ ಸಚಿವ ಸಂಪುಟ ಮಂಗಳವಾರ ರಾತ್ರಿ ಕೊನೆಗೂ ಹಸಿರು ನಿಶಾನೆ ತೋರಿತು. ಈ ಐತಿಹಾಸಿಕ ಮಸೂದೆ ಗುರುವಾರ ಲೋಕಸಭೆಯಲ್ಲಿ ಮಂಡನೆ ಆಗಲಿದೆ.
ತೀವ್ರ ಒತ್ತಡದ ನಡುವೆಯೂ ಕೇಂದ್ರ ತನಿಖಾ ದಳ (ಸಿಬಿಐ) ವನ್ನು ಲೋಕಪಾಲದ ವ್ಯಾಪ್ತಿಯಿಂದ ಹೊರಗಿಡುವ ಮೂಲಕ ಸಚಿವ ಸಂಪುಟ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಅವರಿಗೆ `ಸೆಡ್ಡು` ಹೊಡೆಯಿತು. ಆದರೆ, ಕೆಲವೊಂದು ರಕ್ಷಣೆಗಳೊಂದಿಗೆ ಪ್ರಧಾನಿ ಅವರನ್ನು ಮಸೂದೆ ವ್ಯಾಪ್ತಿಗೆ ತರಲು ಒಪ್ಪಿಗೆ ನೀಡಿತು.
ಸಂಸತ್ ಭವನದಲ್ಲಿ ಸಂಜೆ ಸೇರಿದ್ದ ಸಂಪುಟ ಸಭೆ ಸುಮಾರು ಒಂದೂವರೆ ಗಂಟೆ ಚರ್ಚಿಸಿದ ಬಳಿಕ ಮಸೂದೆಗೆ ಅನುಮೋದನೆ ನೀಡಿತು. ಮಸೂದೆ ಸಿದ್ಧಪಡಿಸಲು ಹಿರಿಯ ಸಚಿವರು ಹಾಗೂ ಅಧಿಕಾರಿಗಳ ತಂಡ ಎರಡು ದಿನಗಳಿಂದ ಹಗಲು ರಾತ್ರಿ ಶ್ರಮಿಸಿತು. ಕಳೆದ ಆಗಸ್ಟ್‌ನಲ್ಲಿ ಲೋಕಸಭೆಯಲ್ಲಿ ಮಂಡಿಸಿರುವ ಮಸೂದೆಯನ್ನು ಸರ್ಕಾರ ವಾಪಸ್ ಪಡೆದು ಈ ಹೊಸ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಲಿದೆ.
ಅಧ್ಯಕ್ಷರು ಅಥವಾ ಮುಖ್ಯಸ್ಥರೂ ಸೇರಿದಂತೆ ಲೋಕಪಾಲದಲ್ಲಿ ಒಂಬತ್ತು ಸದಸ್ಯರಿರುತ್ತಾರೆ. ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅಥವಾ ಹಾಲಿ ನ್ಯಾಯಮೂರ್ತಿ ಸಂಸ್ಥೆ ಮುಖ್ಯಸ್ಥರಾಗಿರುತ್ತಾರೆ. ಲೋಕಸಭೆ ಸ್ಪೀಕರ್, ಪ್ರಧಾನಿ, ಲೋಕಸಭೆ ವಿರೋಧ ಪಕ್ಷದ ನಾಯಕರು ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ ನಾಲ್ವರ ಸಮಿತಿ ಅಧ್ಯಕ್ಷರನ್ನು ನೇಮಕ ಮಾಡಲಿದೆ.
ಅಧ್ಯಕ್ಷರು ಮತ್ತು ಸದಸ್ಯರ ಅವಧಿ ಐದು ವರ್ಷ. `ವಾಗ್ದಂಡನೆ ನಿರ್ಣಯ` (ಇಂಪೀಚ್‌ಮೆಂಟ್) ಮೂಲಕ ಲೋಕಪಾಲರನ್ನು ಅಧಿಕಾರದಿಂದ ಪದಚ್ಯುತಿಗೊಳಿಸಬಹುದಾಗಿದೆ. ಇದಕ್ಕೆ 100 ಸಂಸದರ ಸಹಿ ಒಳಗೊಂಡ ದೂರು ಅಗತ್ಯ. ಲೋಕಪಾಲದಲ್ಲಿ ಹಾಗೂ ಶೋಧನಾ ಸಮಿತಿಯಲ್ಲಿ ಶೇ. 50ರಷ್ಟು ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರು ಮತ್ತು ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಲೋಕಪಾಲ ಪೀಠದಲ್ಲಿ ಅರ್ಧದಷ್ಟು ಕಾನೂನು ಅಥವಾ ನ್ಯಾಯಾಂಗ ಹಿನ್ನೆಲೆಯಿಂದ ಬಂದವರು ಸದಸ್ಯರಾಗಿರುತ್ತಾರೆ.   |
ಲೋಕಪಾಲಕ್ಕೆ ಸ್ವಯಂ ಪ್ರೇರಿತವಾಗಿ ತೀರ್ಮಾನ ಕೈಗೊಳ್ಳುವ ಅಧಿಕಾರ ಇರುವುದಿಲ್ಲ. ದೂರುಗಳ ಆಧಾರದ ಮೇಲೆ ನಿರ್ಧಾರ ಮಾಡಬೇಕು. ಲೋಕಪಾಲದ ವಿಚಾರಣಾ ವಿಭಾಗವು ನಿರ್ದೇಶಕರು ಪ್ರಾಥಮಿಕ ವಿಚಾರಣೆ ಅವರನ್ನೊ ಗೊಂಡಿರುತ್ತದೆ. ಲೋಕಪಾಲರು ದೂರು ಕುರಿತು ಪ್ರಾಥಮಿಕ ತನಿಖೆ ನಡೆಸುವಂತೆ ಸಿಬಿಐಗೂ ಕೇಳಬಹುದು. ಪ್ರಾಥಮಿಕ ತನಿಖೆ ಮೂರು ತಿಂಗಳಲ್ಲಿ ಪೂರ್ಣಗೊಳ್ಳಬೇಕು. ಕಾಲಾವಕಾಶ ಅಗತ್ಯವಾದರೆ ಲಿಖಿತ ಮನವಿ ಸಲ್ಲಿಸಬೇಕು. ಆರು ತಿಂಗಳವರೆಗೆ ಸಮಯ ವಿಸ್ತರಿಸಲು ಕಾಯ್ದೆಯಲ್ಲಿ ಅವಕಾಶವಿದೆ.
ದೇಶದ ಅತ್ಯುನ್ನತ ತನಿಖಾ ಸಂಸ್ಥೆ `ಸಿಬಿಐ` ಅನ್ನು ಲೋಕಪಾಲ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಸಿಬಿಐ ಆಡಳಿತಾತ್ಮಕ ಅಧಿಕಾರವನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಯಲ್ಲೇ ಉಳಿಸಲಾಗಿದೆ. 
ಲೋಕಪಾಲ ಶಿಫಾರಸು  ಮಾಡಿದ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಮಾತ್ರ ಈ ಸಂಸ್ಥೆ ಅಧೀನದಲ್ಲೇ ನಡೆಸಲು ಮಸೂದೆ ಅವಕಾಶ ಕಲ್ಪಿಸಿದೆ. ಸಿಬಿಐ ನಿರ್ದೇಶಕರನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ಪ್ರಧಾನಿ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿ ನೇಮಕ ಮಾಡಲಿದೆ. ಎಸ್‌ಪಿ ಹಾಗೂ ಅವರ ಮೇಲಿನ ಅಧಿಕಾರಿಗಳನ್ನು ಸಿವಿಸಿ, ಗೃಹ ಕಾರ್ಯದರ್ಶಿ, ಆಡಳಿತ ಮತ್ತು ಸಿಬ್ಬಂದಿ ಇಲಾಖೆ ಕಾರ್ಯದರ್ಶಿ ಒಳಗೊಂಡ ಸಮಿತಿ ನೇಮಿಸಲಿದೆ. 
 ಪ್ರಧಾನಿ  ಅವರನ್ನು ಕೆಲವು ರಕ್ಷಣೆಗಳೊಂದಿಗೆ ಲೋಕಪಾಲದ ವ್ಯಾಪ್ತಿಗೆ ತರುವ ಮೂಲಕ ಹಜಾರೆ ಮತ್ತು ಅವರ ಬೆಂಬಲಿಗರನ್ನು ಸಮಾಧಾನಗೊಳಿಸುವ ಪ್ರಯತ್ನ ಮಾಡಲಾಗಿದೆ.
ಅಂತರರಾಷ್ಟ್ರೀಯ ವ್ಯವಹಾರ, ಪರಮಾಣು ಶಕ್ತಿ, ಬಾಹ್ಯಾಕಾಶ, ಆಂತರಿಕ ಮತ್ತು ಬಾಹ್ಯ ಭದ್ರತೆ ಮೊದಲಾದ ಮಹತ್ವದ ವಿಷಯಗಳನ್ನು ಮಸೂದೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಪ್ರಧಾನಿ ವಿರುದ್ಧದ ದೂರುಗಳ ತನಿಖೆ ಕುರಿತು ಲೋಕಪಾಲ ಪೂರ್ಣಪೀಠ ತೀರ್ಮಾನಿಸಬೇಕು. ಇದಕ್ಕೆ ಕನಿಷ್ಠ 2/3 ರಷ್ಟು ಸದಸ್ಯರ ಒಪ್ಪಿಗೆ ಇರಬೇಕು. ಪ್ರಧಾನಿ ವಿಚಾರಣೆ ಸಾರ್ವಜನಿಕವಾಗಿ ನಡೆಯಬಾರದು. ಕೋಣೆಯೊಂದರಲ್ಲಿ ಗೌಪ್ಯವಾಗಿ ನಡೆಯಬೇಕು. ದೂರು ತಿರಸ್ಕೃತವಾದರೆ ದಾಖಲೆ ಬಹಿರಂಗ ಮಾಡಬಾರದು ಎಂದು ಮಸೂದೆ ವ್ಯಾಖ್ಯಾನಿಸಿದೆ.
ಲೋಕಪಾಲದಿಂದ ಶಿಫಾರಸು ಮಾಡಲಾದ ಪ್ರಕರಣಗಳ ತನಿಖಾ ವರದಿಯನ್ನು ಈ ಸಂಸ್ಥೆಗೇ ಸಲ್ಲಿಸಬೇಕು. ಕನಿಷ್ಠ ಮೂವರು ಸದಸ್ಯರು ವರದಿಯನ್ನು ಪರಿಶೀಲಿಸಿ ದೋಷಾರೋಪ ಪಟ್ಟಿ ಸಲ್ಲಿಸಬೇಕೇ? ಪ್ರಕರಣ ಕೈಬಿಡಬೇಕೇ ಅಥವಾ ಇಲಾಖೆ ವಿಚಾರಣೆಗೆ ಆದೇಶಿಸಬೇಕೇ ಎಂಬ ತೀರ್ಮಾನ ಮಾಡಬಹುದು. ಮೊಕದ್ದಮೆ ದಾಖಲಿಸಲು ಸರ್ಕಾರದ ಮುಖ್ಯಸ್ಥರ ಅಥವಾ ಇಲಾಖಾ ಮುಖ್ಯಸ್ಥರ ಮಂಜೂರಾತಿ ಅಗತ್ಯವಿಲ್ಲ. ದೋಷಾರೋಪ ಪಟ್ಟಿ ಸಲ್ಲಿಕೆಯಾದರೆ ಲೋಕಪಾಲದ `ಪ್ರಾಸಿಕ್ಯೂಷನ್` ವಿಭಾಗ ವಿಶೇಷ ನ್ಯಾಯಾಲಯದಲ್ಲಿ ವಿಚಾರಣಾ ಪ್ರಕ್ರಿಯೆ ಆರಂಭಿಸಬಹುದು.
Please follow and like us:
error