ಜೀವನದ ಭರವಸೆಯನ್ನು ಕಳೆದುಕೊಳ್ಳದಿರಿ- ಟಿ. ಕೊಟ್ರಪ್ಪ.

ಕೊಪ್ಪಳ ಜ. ೩೧ (ಕ ವಾ) ಹಿಂದಿನ ಪೂರ್ವಾಶ್ರಮದ ನೆನಪುಗಳನ್ನು, ಅಹಿತಕರ ಘಟನೆಗಳನ್ನು ಮೆಲುಕು ಹಾಕಿ ಖಿನ್ನತೆಗೆ ಒಳಗಾಗದೆ, ಧ್ಯಾನ, ಒಳ್ಳೆಯ ಚಿಂತನೆಗಳನ್ನು ಮಾಡುತ್ತ ನೆಮ್ಮದಿಯ ಬದುಕು ಸಾಗಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಅವರು ವೃದ್ಧಾಶ್ರಮ ವಾಸಿಗಳಿಗೆ ಕರೆ ನೀಡಿದರು.
      ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಕಲ್ಯಾಣ ಇಲಾಖೆ ಹಾಗೂ ವಿದ್ಯಾನಂದ ಗುರುಕುಲ ಇವರ ಸಹಯೋಗದೊಂದಿಗೆ ಕುಕನೂರಿನ ವಿದ್ಯಾನಂದ ಗುರುಕುಲ ವೃದ್ಧಾಶ್ರಮದಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
     ಜೀವನದಲ್ಲಿ ಖಿನ್ನತೆಯಿಂದ ಹೊರಬಂದು, ಮಾನಸಿಕ ನೆಮ್ಮದಿ ಪಡೆಯಲು ಸಂಗೀತ ಬಹಳ ಅವಶ್ಯಕವಾಗಿದೆ.  ಇದಕ್ಕಾಗಿ ಇಲಾಖೆಯು, ಕುಟುಂಬ ಮತ್ತು ಸಮಾಜದಿಂದ ಪರಿತ್ಯಕ್ತರಾದ ವೃದ್ಧರಿಗಾಗಿ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.  ವೃದ್ಧಾಶ್ರಮವಾಸಿಗಳು, ಹಿಂದಿನ ಪೂರ್ವಾಶ್ರಮದ ನೆನಪುಗಳನ್ನು, ಅಹಿತಕರ ಘಟನೆಗಳನ್ನು ಮೆಲುಕು ಹಾಕುತ್ತಾ ಖಿನ್ನತೆಗೆ ಒಳಗಾಗದೆ, ಧ್ಯಾನ, ಒಳ್ಳೆಯ ಚಟುವಟಿಕೆಗಳಲ್ಲಿ ತೊಡಗಿಕೊಂಡು, ಒಳ್ಳೆಯ ಚಿಂತನೆಗಳನ್ನು ಮಾಡುತ್ತ, ಜೀವನದ ಭರವಸೆಯನ್ನು ಕಳೆದುಕೊಳ್ಳದೆ ನೆಮ್ಮದಿಯಿಂದ ಬದುಕು ನಡೆಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಅವರು ಹೇಳಿದರು.
     ವೃದ್ಧಾಶ್ರಮ ವಾಸಿಗಳಾದ ಚನ್ನಬಸಮ್ಮ ಬೇವಿನಮರದ ಮತ್ತು ಹನುಮಂತಪ್ಪ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.  ಜಿಲ್ಲಾ ಅಂಗವಿಕಲರ ಕಲ್ಯಣಾಧಿಕಾರಿ ಜಗದೀಶ್ ಕಾರ್ಯಕ್ರಮ ಕುರಿತು ಮಾತನಾಡಿದರು.  ನಿವೃತ್ತ ಶಿಕ್ಷಕ ಆರ್.ವಿ. ರಾಜೂರ್, ಗುರುಕುಲ ಸಂಸ್ಥೆಯ ಜಂಟಿ ಕಾರ್ಯದರ್ಶಿ ಜಿ.ವಿ. ಜಹಗೀರ್‍ದಾರ್ ಉಪಸ್ಥಿತರಿದ್ದರು.  ವೃದ್ಧಾಶ್ರಮದ ನಿವಾಸಿಗಳಾದ ಸುಧಾಬಾಯಿ ಪ್ರಾರ್ಥಿಸಿದರು,  ಪ್ರಾಂಶುಪಾಲ ಕೆ.ಆರ್. ಕುಲಕರ್ಣಿ ಸ್ವಾಗತಿಸಿದರು.
     ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗ್ಯನಗರದ ಅಂಧ ಕಲಾವಿದೆ ಚಂದ್ರಿಕಾ ಅವರು ಭಕ್ತಿಗೀತೆ, ಭಾವಗೀತೆ, ತತ್ವಪದ, ಜಾನಪದ ಗೀತೆಗಳನ್ನು ಹಾಡಿ, ವೃದ್ಧರನ್ನು ರಂಜಿಸಿದರು.  ರಾಮಚಂದ್ರಪ್ಪ ಉಪ್ಪಾರ್ ಹಾರ್‍ಮೋನಿಯಂನಲ್ಲಿ, ನಾಗರಾಜ ಶ್ಯಾವಿ-ಕೊಳಲು ವಾದನದಲ್ಲಿ, ಮಾರುತಿ ಬಿನ್ನಾಳ ಅವರು ತಬಲಾದಲ್ಲಿ ಹಾಗೂ ಪ್ರದೀಪ್ ತಾಳವಾದ್ಯದಲ್ಲಿ ಸಂಗೀತಕ್ಕೆ ಸಾಥ್ ನೀಡಿದರು.
Please follow and like us:
error