ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಬೇಕು- ಕೆ.ವಿ. ಕೃಷ್ಣಮೂರ್ತಿ

 : ಗ್ರಾಹಕರ ಹಿತರಕ್ಷಣೆಗಾಗಿ ಸರ್ಕಾರ ಹಲವಾರು ಕಾನೂನುಗಳನ್ನು ಜಾರಿಗೊಳಿಸಿದ್ದು, ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದುವುದು ಅಗತ್ಯವಾಗಿದೆ ಎಂದು ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ ಅವರು ಹೇಳಿದರು.
       ವಿಶ್ವ ಗ್ರಾಹಕರ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವೇದಿಕೆ, ಕಾನೂನು ಮಾಪನಶಾಸ್ತ್ರ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ, ಹಾಗೂ ಭವಾನಿ ಮಹಿಳಾ ಸೇವಾ ಸಂಸ್ಥೆ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ  ಜಿಲ್ಲೆಯ ಗಂಗಾವತಿ ನಗರದ ಚಲುವಾದಿ ಓಣಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
 ಅನ್ಯಾಯ, ವಂಚನೆ ಹಾಗೂ ಶೋಷಣೆಗೆ ಒಳಗಾದ ಗ್ರಾಹಕರ ಹಿತರಕ್ಷಣೆಗಾಗಿ ಅನೇಕ ಕಾನೂನುಗಳು ಜಾರಿಗೊಂಡಿದ್ದು, ಗ್ರಾಹಕರ ರಕ್ಷಣೆಗಾಗಿಯೇ ಗ್ರಾಹಕರ ವೇದಿಕೆ ರೂಪುಗೊಂಡಿದೆ.  ವಂಚನೆಗೆ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಲು ಗ್ರಾಹಕರ ವೇದಿಕೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ.  ಅನೇಕ ವಂಚನೆ ಪ್ರಕರಣಗಳಲ್ಲಿ ಗ್ರಾಹಕರ ವೇದಿಕೆ, ಗ್ರಾಹಕರಿಗೆ ಪರಿಹಾರವನ್ನು ಒದಗಿಸಿಕೊಟ್ಟಿದೆ ಎಂದು ತಿಳಿಸಿದ ಅವರು, ವಿಶ್ವ ಗ್ರಾಹಕರ ದಿನಾಚರಣೆ ಕುರಿತು ಗ್ರಾಹಕರ ವೇದಿಕೆಯಿಂದ ಗ್ರಾಹಕರಿಗೆ ನೀಡುವ ಪರಿಹಾರಗಳ ಬಗ್ಗೆ, ಗ್ರಾಹಕರ ವೇದಿಕೆಯ ಕಾರ್ಯನಿರ್ವಹಣೆಯ ಬಗ್ಗೆ ಮತ್ತು ಗ್ರಾಹಕರ ಜಾಗೃತದಿಂದ ನಿರ್ವಹಿಸಬೇಕಾದ ಕರ್ತವ್ಯಗಳು ಮತ್ತು ಅವರು ಹೊಂದಿರುವ ಹಕ್ಕುಗಳು ಇವುಗಳ ಬಗ್ಗೆ ತಿಳುವಳಿಕೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಗಂಗಾವತಿಯ ಹಿರಿಯ ವಕೀಲ ಮಲ್ಲಪ್ಪ ಬೆಂಚಮಟ್ಟಿ ಅವರು, ಗ್ರಾಹಕರು ಎಂದರೇ ಯಾರು ? ಗ್ರಾಹಕರ ಹಕ್ಕುಗಳು ಯಾವುವು? ಗ್ರಾಹಕರ ಹಿತರಕ್ಷಣೆ ಕಾಯ್ದೆ ಮತ್ತು ಗ್ರಾಹಕರ ವೇದಿಕೆಯ ಬಗ್ಗೆ ಮಾತನಾಡಿ, ಗ್ರಾಹಕರು ಶೋಷಣೆಯಿಂದ ತಪ್ಪಿಸಿಕೊಳ್ಳಲು ಯಾವ ರೀತಿ ಕ್ರಮವಹಿಸಬೇಕು ಎಂಬುದಕ್ಕೆ ಹಲವಾರು ಉದಾಹರಣೆಗಳೊಂದಿಗೆ ಸಲಹೆ ನೀಡಿದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಸದಸ್ಯರಾದ ಬಿ.ಶಿವರೆಡ್ಡಿಗೌಡ, ವೇದಾ ಜೋಷಿ, ಕಾನೂನು ಮಾಪನಶಾಸ್ತ್ರ ಇಲಾಖೆಯ ಎಸ್.ಓ. ಹಾಗೂ ಕೆ.ಎಫ್.ಸಿ.ಎಸ್.ಸಿ. ಜಿಲ್ಲಾ ವ್ಯವಸ್ಥಾಪಕ ಜಯಕುಮಾರ, ತಹಶೀಲ್ದಾರ್ ದಿನೇಶಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ, ಶಾಲೆಯ ಮುಖ್ಯ ಗುರು ಸಂಗಪ್ಪ ಗಾಜಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಕಲಘಟಗಿ ಅಶೋಕ ಅವರು ಸ್ವಾಗತಿಸಿದರು. ಸಾವಿತ್ರಿ ಮುಜುಮ್‌ದಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಶಿವರೆಡ್ಡಿ ಅವರು ಜಾಗೃತಿ ಸಂದೇಶವನ್ನು ನೀಡಿದರು. ಶಾಲೆಯ ಸಹ ಶಿಕ್ಷಕ ಸಂತೋಷ ಅವರು ನಿರೂಪಿಸಿ ಕೊನೆಯಲ್ಲಿ ವಂದನಾರ್ಪಣೆಗೈದರು.
ಕಾರ್ಯಕ್ರಮದ ಅಂಗವಾಗಿ ಗಂಗಾವತಿ ನಗರದ ಪ್ರಾಥಮಿಕ ಶಾಲಾ ವಿಭಾಗ, ಪ್ರೌಢ ಶಾಲಾ ವಿಭಾಗದಲ್ಲಿ ಪ್ರಬಂಧ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರಥಮ, ದ್ವಿತೀಯ, ತೃತೀಯ ಈ ರೀತಿಯಾಗಿ ಒಟ್ಟು ೧೨ ಶಾಲಾ ಮಕ್ಕಳಿಗೆ ಬಹುಮಾನಗಳನ್ನು ಇದೇ ಸಂದರ್ಭದಲ್ಲಿ ನೀಡಲಾಯಿತು. ಕಾರ್ಯಕ್ರಮದ ಅಂಗವಾಗಿ ಹೆಚ್.ಪಿ.ಸಿ. ಗ್ಯಾಸ್ ಕಂಪನಿಯಿಂದ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯವರಿಂದ ಜಾಗೃತಿ ಕಾರ್ಯಕ್ರಮದ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು. 
Please follow and like us:
error