ಸಾಲಬಾಧೆಗೆ ಶ್ರಮದ ದಿಟ್ಟ ಉತ್ತರ ಬಾಳೆ ಬೆಳೆದು ಬದುಕು ಬಂಗಾರವಾಗಿಸಿಕೊಂಡ ರೈತ.

ಕೊಪ್ಪಳ ಜು. ೨೧ ಸಾಲ ಬಾಧೆಗೆ ಎದೆಗುಂದದೆ, ದಿಟ್ಟತನದಿಂದ, ಶ್ರಮ ವಹಿಸಿ, ಬಾಳೆ ಬೆಳೆದು ಬದುಕು ಬಂಗಾರವಾಗಿಸಿಕೊಂಡ ಯಲಬುರ್ಗಾ ತಾಲೂಕು ಮುರಡಿ ಗ್ರಾಮದ ಪ್ರಗತಿಪರ ರೈತನೋರ್ವನ ಯಶೋಗಾಥೆ, ರೈತರಿಗೆ ಮಾದರಿಯಾಗಿದೆ. ಯಲಬುರ್ಗಾ ತಾಲೂಕು ಮರಡಿ ಗ್ರಾಮದ ಕೃಷ್ಣರಾವ್ ದೇಶಪಾಂಡೆ ಅವರೇ, ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ವಿಶಿಷ್ಟ ತಂತ್ರಜ್ಞಾನ ಅಳವಡಿಕೊಂಡು, ಭರಪೂರ ಬಾಳೆ ಇಳುವರಿ ಪಡೆದು, ಹೆಚ್ಚಿನ ಆದಾಯ ನಿರೀಕ್ಷೆಯಲ್ಲಿರುವ ರೈತ.  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಮಾಧ್ಯಮದವರಿಗೆ ವಿಶೇಷ ಅಧ್ಯಯನ ಪ್ರವಾಸ ಏರ್ಪಡಿಸಿತ್ತು.ದಾಳಿಂಬೆ ಬೆಳೆ ಬೆಳೆದು, ವಿದೇಶಗಳಿಗೆ ರಫ್ತು ಮಾಡಿ, ಲಕ್ಷ, ಲಕ್ಷ ಆದಾಯ ಗಳಿಸುತ್ತಿದ್ದ ಕೃಷ್ಣರಾವ್, ದಿಢೀರನೆ ಬಂದೆರಗಿದ ಅಂಗಮಾರಿ ರೋಗಕ್ಕೆ ತನ್ನ ದಾಳಿಂಬೆ ತೋಟ ಹಾಳಾಗಿ, ಸುಮಾರು ೧೬ ಲಕ್ಷ ನಷ್ಟ ಅನುಭವಿಸಿದರು.  ಇದಕ್ಕೆ ಧೃತಿಗೆಡದೆ, ತೋಟಗಾರಿಕೆ ಇಲಾಖೆಯ ನೆರವನ್ನು ಪಡೆದು, ಇದೀಗ ತನ್ನ ನಾಲ್ಕು ಎಕರೆ ಜಮೀನಿನಲ್ಲಿ ವಿಶಿಷ್ಟ ತಾಂತ್ರಿಕತೆ ಅಳವಡಿಸಿಕೊಂಡು, ಬಾಳೆ ಬೆಳೆದಿದ್ದಾರೆ.  ಇವರೊಂದಿಗೆ ಸಾಥ್ ನೀಡಿದ್ದು, ಇವರ ಪುತ್ರ ಹರ್ಷವರ್ಧನ.ಸಾಂಪ್ರದಾಯಿಕವಾಗಿ ಬಾಳೆ ಬೆಳೆಯುವವರು, ಒಂದು ಗುಂಡಿಗೆ ಒಂದು ಬಾಳೆ ಗಿಡವನ್ನು ನೆಟ್ಟು, ಒಂದು ಎಕರೆಗೆ ಗರಿಷ್ಠ ೧೨೧೦ ಗಿಡವನ್ನು ನೆಡಲು ಸಾಧ್ಯವಿದೆ.    ಆದರೆ ಹೊಸ ತಾಂತ್ರಿಕತೆಯಲ್ಲಿ ಪ್ರತಿ ಒಂದು ಗುಂಡಿಗೆ ಮೂರು ಬಾಳೆ ಗಿಡವನ್ನು ನೆಟ್ಟು, ಒಂದು ಸಾಲಿನಿಂದ ಇನ್ನೊಂದು ಸಾಲಿಗೆ ೧೦ ಅಡಿಗಳ ಅಂತರ ಕಾಯ್ದುಕೊಂಡಿದ್ದಾರೆ.   ಹೊಸ ವಿಧಾನವು ಬಾಳೆ ಗಿಡಗಳು ಗಾಳಿಯ ರಭಸಕ್ಕೆ ಬೀಳದಂತೆ, ಒಂದಕ್ಕೊಂದು ಗಿಡಗಳು ಆಧಾರವಾಗಲಿದ್ದು, ಇದರ ಬೇರುಗಳು ಸಹ ಒಂದಕ್ಕೊಂಡು ಬೆಸೆದುಕೊಂಡು, ಗಾಳಿಯ ರಭಸವನ್ನು ತಡೆದುಕೊಳ್ಳುವ ಶಕ್ತಿ ನೀಡಲಿದೆ.  ಈ ವಿಧಾನದಲ್ಲಿ ಇವರು ಪ್ರತಿ ಎಕರೆಗೆ ೨೧೭೮ ಗಿಡಗಳನ್ನು ನೆಟ್ಟಿದ್ದಾರೆ. ಗಿಡಗಳಿಗೆ ಉತ್ತಮ ಕೊಟ್ಟಿಗೆ ಗೊಬ್ಬರ, ಕಾಲಕಾಲಕ್ಕೆ ಕಾಂಪೋಸ್ಟ್, ಯೂರಿಯಾ ಗೊಬ್ಬರವನ್ನೂ ನೀಡಿದ್ದು, ಹನಿ-ನೀರಾವರಿ ಅಳವಡಿಸಿಕೊಂಡಿದ್ದಾರೆ.  ಸಾಂಪ್ರದಾಯಿಕ ಪದ್ಧತಿಯಲ್ಲಿ ಪ್ರತಿ ಎಕರೆಗೆ ಸುಮಾರು ೯೦ ಸಾವಿರದಷ್ಟು ಖರ್ಚು ಬರುತ್ತದೆ, ಅಲ್ಲದೆ ಎಕರೆಗೆ ಗರಿಷ್ಠ ೨ ರಿಂದ ೩ ಲಕ್ಷ ಆದಾಯ ಪಡೆಯಲು ಸಾಧ್ಯವಿದೆ.  ಆದರೆ ಈ ಹೊಸ ತಾಂತ್ರಿಕತೆಯಲ್ಲಿ ಪ್ರತಿ ಎಕರೆಗೆ ೧. ೨೦ ಲಕ್ಷ ರೂ. ಖರ್ಚು ಬರಲಿದ್ದು, ಪ್ರತಿ ಎಕರೆಗೆ ೫ ರಿಂದ ೬ ಲಕ್ಷ ರೂ. ಆದಾಯ ಗಳಿಸಲು ಸಾಧ್ಯವಿದೆ ಎನ್ನುತ್ತಾರೆ ರೈತ ಕೃಷ್ಣರಾವ್.ತೋಟಗಾರಿಕೆ ಇಲಾಖೆಯು ಸಹ ರೈತರ ನೆರವಿಗೆ ಬಂದಿದ್ದು, ಇಲಾಖೆಯು ರಾಷ್ಟ್ರೀಯ ತೋಟಗಾರಿಕೆ ಮಿಷನ್‌ನಲ್ಲಿ ಪ್ರತಿ ಹೆಕ್ಟೇರ್‌ಗೆ ೩೦ ಸಾವಿರ ರೂ. ಸಹಾಯಧನ, ಹನಿ ನೀರಾವರಿಗೆ ಶೇ. ೯೦ ರಷ್ಟು ಸಹಾಯಧನ ಜೊತೆಗೆ ಸಮಗ್ರ ಪೋಷಕಾಂಶಗಳ ನಿರ್ವಹಣೆ ಹಾಗೂ ಸಮಗ್ರ ಪೀಡೆ ನಿರ್ವಹಣೆಗೆ ಪ್ರತಿ ಹೆಕ್ಟೇರ್‌ಗೆ ತಲಾ ೧ ಸಾವಿರ ರೂ., ಯಾಂತ್ರೀಕರಣ ಯೋಜನೆಯಡಿ ಸ್ಪ್ರೇಯರ್ ಮತ್ತು ಇನ್ನಿತರೆ ಉಪಕರಣಗಳ ಖರೀದಿಗೆ ೩೦ ಸಾವಿರ ರೂ. ಸಹಾಯಧನ ಕೊಡಲಾಗಿದೆ.  ಅಲ್ಲದೆ ಗಿಡಗಳ ನಾಟಿಗೆ ಪ್ರತಿ ಎಕರೆಗೆ ೧೬೭೦೦ ಸಹಾಯಧನ ಕೊಡಲಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕ ಶಶಿಕಾಂತ್ ಕೋಟಿಮನಿ ತಿಳಿಸಿದರು.ಯಲಬುರ್ಗಾ ತೋಟಗಾರಿಕೆ ಸಹಾಯಕ ನಿರ್ದೇಶಕ ಮಂಜುನಾಥ ನಿಂಗಣ್ಣವರ್, ಸಹಾಯಕ ತೋಟಗಾರಿಕೆ ಅಧಿಕಾರಿ ಉಮೇಶ್ ಕಾಳೆ, ಹಾರ್ಟಿ ಕ್ಲಿನಿಕ್‌ನ ತಜ್ಞ ವಾಮನಮೂರ್ತಿ ಸೇರಿದಂತೆ ಇತರೆ ರೈತರು ಈ ಸಂದರ್ಭದಲ್ಲಿ ಇದ್ದರು.

Related posts

Leave a Comment