ಸಾವರಿನ್ ಡಿಸ್ಟಲರೀಸ್ ವಿರುದ್ಧ ಕ್ರಮ:

 ಶಿವರಾಮಗೌಡ
 ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಸಿಂಗಾಪುರ ಗ್ರಾಮದಲ್ಲಿರುವ ಸಾವರಿನ್ ಡಿಸ್ಟಲರೀಸ್ ಎನ್ನುವ ಮದ್ಯ ತಯಾರಿಕಾ ಘಟಕದಿಂದ ಸಾರ್ವಜನಿಕರಿಗೆ ಅನೇಕ ರೀತಿಯ ತೊಂದರೆಗಳಾಗುತ್ತಿದ್ದು, ಈ ಘಟಕ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಶಿವರಾಮಗೌಡ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
  ಲೋಕಸಭೆ ಅಧಿವೇಶನದ ಶೂನ್ಯ ಅವಧಿಯಲ್ಲಿ ಕೊಪ್ಪಳ ಸಂಸದ ಶಿವರಾಮಗೌಡ ಅವರು ಸಾವರಿನ್ ಡಿಸ್ಟಲರೀಸ್ ಮದ್ಯ ತಯಾರಿಕಾ ಘಟಕದಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮಾ. ೧೯ ರಂದು ಸಂಸತ್ತಿನಲ್ಲಿ ಗಮನ ಸೆಳೆದಿದ್ದು, ಕೂಡಲೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.  ಈ ಘಟಕದಿಂದ ಹೊರಹೊಮ್ಮುವ ಧೂಳು ಕಣದಿಂದ ಕ್ಯಾನ್ಸರ್, ಗಂಟಲುಬೇನೆ, ಕಣ್ಣುರಿ, ಮಂಡಿನೋವು ಸೇರಿದಂತೆ ಅನೇಕ ರೋಗಗಳು ಹರಡುತ್ತಿದ್ದು, ವಾತಾವರಣ ಕಲುಷಿತಗೊಳ್ಳುವುದಲ್ಲದೆ, ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.  ಹಾರುಬೂದಿಯಿಂದಾಗಿ ಸಿಂಗಾಪುರ, ಮುಕ್ಕೂಮದಾ ಗ್ರಾಮಗಳು ಸೇರಿದಂತೆ ಸುತ್ತಮುತ್ತಲ ಅನೇಕ ಗ್ರಾಮಗಳಲ್ಲಿ ಶೇ. ೫೦ಕ್ಕೂ ಹೆಚ್ಚು ಬೆಳೆ ನಷ್ಟವಾಗುತ್ತಿದ್ದು, ಕೃಷಿಯನ್ನೆ ನಂಬಿರುವ ರೈತರ ಜೀವನ ನಿರ್ವಹಣೆ ದುಸ್ತರವಾಗಿದೆ.  ಸಾವರಿನ್ ಡಿಸ್ಟಲರೀಸ್ ದಿಂದ ಹೊರಹೊಮ್ಮುವ ದುನಾತದಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ವಾತಾವರಣ ಸಂಪೂರ್ಣ ಕಲುಷಿತಗೊಂಡಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.  ಘಟಕದ ತ್ಯಾಜ್ಯವಾದ ಮೊಲಾಸಿಸ್ (ಕಲ್ಮಶ) ಪಕ್ಕದ ಹಳ್ಳಕ್ಕೆ ಸೇರುವುದರಿಂದ, ನೀರು ಕಲುಷಿತಗೊಂಡು ತುಂಗಭದ್ರಾ ನದಿಗೆ ಸೇರುತ್ತಿದೆ.  ಇದರಿಂದ ತುಂಗಭದ್ರಾ ನದಿಯ ಜಲಚರ ಪ್ರಾಣಿಗಳು ಸಾವಿಗೀಡಾಗುತ್ತಿವೆ.  ಅಲ್ಲದೆ ನದಿಯ ನೀರನ್ನು ಕುಡಿಯಲು ಉಪಯೋಗಿಸುವ ಸಿಂಧನೂರು, ಮಾನ್ವಿ, ರಾಯಚೂರು ತಾಲೂಕುಗಳ ನದಿ ಪಾತ್ರದ ಜನ, ಜಾನುವಾರುಗಳು ವಿವಿಧ ಮಾರಣಾಂತಿಕ ರೋಗಗಳಿಂದ ಬಳಲುವಂತಾಗಿದ್ದು, ಈ ಕುರಿತಂತೆ ಕೇಂದ್ರದ ಅರಣ್ಯ ಮತ್ತು ಪರಿಸರ ಸಚಿವರಿಗೆ ಕಳೆದ ಫೆ. ೦೩ ರಂದು ವಿವರವಾಗಿ ಪತ್ರದ ಮೂಲಕ ತಿಳಿಸಲಾಗಿದೆ.  ಕೇಂದ್ರ ಸರ್ಕಾರ ಕೂಡಲೆ ಎಚ್ಚೆತ್ತುಕೊಂಡು, ಅಗತ್ಯ ಕ್ರಮ ಜರುಗಿಸುವಂತೆ ಸಂಸದ ಶಿವರಾಮಗೌಡ ಅವರು ಸಂಸತ್ತಿನಲ್ಲಿ ಒತ್ತಾಯಿಸಿದ್ದಾರೆ  

Leave a Reply