ವಿದ್ಯಾರ್ಥಿಗಳಿಗೂ ಎಟಿಎಂ ಕಾರ್ಡ್ :

ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನಿಂದ ಜ. ೨೯ ರಂದು ವಿನೂತನ ಯೋಜನೆ ಜಾರಿ
 ವಿದ್ಯಾರ್ಥಿ ದೆಸೆಯಲ್ಲಿಯೇ ಹಣ ಉಳಿತಾಯ ಮಾಡುವುದಲ್ಲದೆ, ಬ್ಯಾಂಕಿಂಗ್ ವ್ಯವಹಾರದ ಅರಿವು ಹೊಂದುವಂತೆ ಮಾಡುವ ನಿಟ್ಟಿನಲ್ಲಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನಿಂದ ವಿದ್ಯಾರ್ಥಿಗಳಿಗೆ ಎಟಿಎಂ ಕಾರ್ಡ್ ವಿತರಿಸುವ ಜೂನಿಯರ್ ಡೆಬಿಟ್ ಕಾರ್ಡ್ ಯೋಜನೆ ಜ. ೨೯ ರಂದು ಜಾರಿಗೆ ಬರಲಿದೆ.
  ಭಾರತ ಸರ್ಕಾರ ಹಾಗೂ ಭಾರತೀಯ ರಿಜರ್ವ್ ಬ್ಯಾಂಕಿನ ಯೋಜನೆ ಅನುಗುಣವಾಗಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ೧೦ ರಿಂದ ೧೮ ವರ್ಷದೊಳಗಿನ ಶಾಲಾ, ಕಾಲೇಜು ಮಕ್ಕಳಿಗೆ ಬ್ಯಾಂಕ್ ಎಟಿಎಂ ಕಾರ್ಡ್ ವಿತರಿಸಲಿದ್ದು, ಜ. ೨೯ ರಂದು ಸುಮಾರು ೫ ಸಾವಿರ ವಿದ್ಯಾರ್ಥಿಗಳಿಗೆ ಜೂನಿಯರ್ ಡೆಬಿಟ್ ಕಾರ್ಡ್ ವಿತರಣೆ ಮಾಡಲಿದೆ.  ೧೦ ರಿಂದ ೧೮ ವರ್ಷದೊಳಗಿನ ವಿದ್ಯಾರ್ಥಿಗಳು, ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಉಳಿತಾಯ ಖಾತೆಯನ್ನು ತೆರೆದು, ಪ್ರಗತಿ ಕೃಷ್ಣಾ ರೂಪೇ ಜೂನಿಯರ್ ಎಟಿಎಂ ಕಾರ್ಡ್‌ಗಳನ್ನು ಪಡೆಯಬಹುದಾಗಿದೆ.
ಉಪಯುಕ್ತತೆ : ನೂತನ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಿಂದಲೇ ಹಣ ಉಳಿತಾಯದ ಮನೋಭಾವ ಬೆಳೆಯುವುದಲ್ಲದೆ, ಬ್ಯಾಂಕಿಂಗ್ ವ್ಯವಹಾರದ ಬಗ್ಗೆ ಅರಿವು ಹೊಂದಲು ಸಹಕಾರಿಯಾಗಲಿದೆ.  ಶಾಲಾ ಮಕ್ಕಳು ಶೂನ್ಯ ಠೇವಣಿಯೊಂದಿಗೆ ಬ್ಯಾಂಕ್ ಖಾತೆ ತೆರೆಯಲು ಅವಕಾಶ ಕಲ್ಪಿಸಲಾಗಿದ್ದು, ವಿದ್ಯಾರ್ಥಿ ವೇತನ, ಬಹುಮಾನ ಮೊತ್ತ, ಇತರೆ ನೆರವಿನ ಮೊತ್ತವನ್ನು ಜಮಾ ಮಾಡಲು ಅಥವಾ ಯಾವುದೇ ಬ್ಯಾಂಕಿನ ಎಟಿಎಂ ಗಳಲ್ಲಿ ಹಣ ಪಡೆಯಲು ಅನುಕೂಲವಾಗಲಿದೆ. ಎಟಿಎಂ ಕಾರ್ಡ್ ಬಳಸಿ, ಯಾವುದೇ ಎಟಿಎಂ ಮೂಲಕ ದಿನಕ್ಕೆ ಗರಿಷ್ಠ  ೫ ಸಾವಿರ ರೂ. ಹಣ ಪಡೆಯಬಹುದಾಗಿದ್ದು, ಹಣವಿಲ್ಲದ ಖರೀದಿಗಳನ್ನು ಆಯ್ದ ಅಂಗಡಿಗಳಲ್ಲಿ ಕಾರ್ಡ್ ಸ್ವೈಪ್ ಮಾಡುವ ಮೂಲಕ ಗರಿಷ್ಠ ೨ ಸಾವಿರ ಮೊತ್ತದ ಸಾಮಗ್ರಿ ಖರೀದಿಸಲು ಅವಕಾಶವಿದೆ.  ಬೇರೆ ಊರುಗಳಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ಹಣದ ನೆರವು ಪಡೆಯಲು ಉತ್ತಮ ವ್ಯವಸ್ಥೆ, ಹಣ ಕಳ್ಳತನದ ಭಯ ಇರುವುದಿಲ್ಲ.  ೧೮ ವರ್ಷ ಮೀರಿದ ನಂತರ ಖಾತೆಯನ್ನು ಸಾಮಾನ್ಯ ಖಾತೆಯಾಗಿ ಸುಲಭದಲ್ಲಿ ಬದಲಿಸಬಹುದಾಗಿದೆ. 
ಪೋಷಕರಿಗೆ ಎಸ್‌ಎಂಎಸ್ : ಶಾಲಾ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಪಾಲಕರು/ಪೋಷಕರ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡುವುದರಿಂದ, ವಿದ್ಯಾರ್ಥಿಗಳ ಬ್ಯಾಂಕ್ ಖಾತೆಯಲ್ಲಿ ನಡೆಯುವ ವ್ಯವಹಾರದ ಬಗ್ಗೆ ಪಾಲಕರು/ಪೋಷಕರ ಮೊಬೈಲ್‌ಗೆ ಎಸ್‌ಎಂಎಸ್ ಸಂದೇಶ ರವಾನೆಯಾಗಲಿದ್ದು, ಖಾತೆಯ ಮೇಲೆ ಪಾಲಕರು ನಿಗಾ ವಹಿಸಲು ಅನುಕೂಲವಿದೆ.
ಖಾತೆ ತೆರಯಲು ಬೇಕಾದ ದಾಖಲೆ : ಶಾಲಾ ವಿದ್ಯಾರ್ಥಿಗಳಿಗಾಗಿ ರೂಪಿಸಲಾಗಿರುವ ಈ ಯೋಜನೆಯಡಿ ಬ್ಯಾಂಕ್ ಖಾತೆ ತೆರಯಲು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನ ಯಾವುದೇ ಶಾಖೆಯಲ್ಲಿ ನಿಗದಿತ ನಮೂನೆಯನ್ನು ಭರ್ತಿ ಮಾಡಿ, ಮಾದರಿ ಸಹಿಯ ಕಾರ್ಡ್ ಹಾಗೂ ಪಾಸ್‌ಪೋರ್ಟ್ ಅಳತೆಯ ಫೋಟೋಗಳು, ಬ್ಯಾಂಕ್ ಖಾತೆ ತೆರೆಯಲು ಪಾಲಕರು/ಪೋಷಕರ ಸಮ್ಮತಿ ಪತ್ರ ಹಾಗೂ ಅವರ ಮೊಬೈಲ್ ಸಂಖ್ಯೆ ಮತ್ತು ಗುರುತಿನ ಚೀಟಿ.  ಶಾಲೆ/ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ಶಾಲಾ, ಕಾಲೇಜಿನ ಮುಖ್ಯಸ್ಥರಿಂದ ಪ್ರಮಾಣಪತ್ರ.
  ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ರೂಪಿಸಿರುವ ಈ ಯೋಜನೆಯಡಿ ಜ. ೨೯ ರಂದು ಸುಮಾರು ೫ ಸಾವಿರ ಕಾರ್ಡುಗಳನ್ನು ವಿತರಿಸುವ ಗುರಿ ಹೊಂದಲಾಗಿದ್ದು, ಇದರ ಸದುಪಯೋಗವನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಪ್ರಗತಿ ಕೃಷ್ಣಾ ಬ್ಯಾಂಕಿನ ಕೊಪ್ಪಳ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಪ್ರಬಂಧಕರು ಮನವಿ ಮಾಡಿದ್ದಾರೆ.

Leave a Reply