ಕೊಪ್ಪಳದಲ್ಲಿ ರಾಷ್ಟ್ರೀಯ ವಿಪತ್ತು ಕಡಿಮೆಗೊಳಿಸುವ ದಿನಾಚರಣೆ

 ಜಿಲ್ಲಾಡಳಿತ, ಪೋಲೀಸ್ ಇಲಾಖೆ, ಗೃಹರಕ್ಷಕದಳ, ಅಗ್ನಿಶಾಮಕದಳ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ, ತುರ್ತುಸೇವೆಗಳು ಕೊಪ್ಪಳ ಜಿಲ್ಲೆ, ಎನ್.ಸಿ.ಸಿ, ಎನ್.ಎಸ್.ಎಸ್, ಭಾರತ ಸೇವಾದಳ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ವಿಪತ್ತು ಕಡಿಮೆಗೊಳಿಸುವ ದಿನಾಚರಣೆ ಗುರುವಾರದಂದು ನಗರದ ಪೊಲೀಸ್ ಕಲ್ಯಾಣ ಮಂಟಪದಲ್ಲ್ಲಿ ಆಚರಿಸಲಾಯಿತು. 
  ಗೃಹ ರಕ್ಷಕ ದಳ ಜಿಲ್ಲಾ ಸಮಾದೇಷ್ಠರಾದ ರವೀಂದ್ರ ವ್ಹಿ.ಶೀಗನಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲಾ ಮಕ್ಕಳಲ್ಲಿ ಹಾಗೂ ಸಾರ್ವಜನಿಕರಲ್ಲಿ ವಿಕೋಪಗಳ ಕುರಿತು ಅರಿವು ಮೂಡಿಸುವುದು ಕಾರ್ಯಕ್ರಮದ ಧ್ಯೇಯೋದ್ದೇಶವಾಗಿದೆ. ವಿಪತ್ತುಗಳಿಂದ ಉಂಟಾಗುವ ಅವಘಡಗಳನ್ನು ತಡೆಯುಲ್ಲಿ ಹಾಗೂ ಆಸ್ತಿ ಪಾಸ್ತಿ ಸಂರಕ್ಷಿಸುವಲ್ಲಿ ಗೃಹ ರಕ್ಷಕ ದಳ ಹಾಗೂ ಅಗ್ನಿಶಾಮಕ ದಳಗಳ ಕೊಡುಗೆ ಅಪಾರವಾಗಿದೆ. ಈ ದಳಗಳ ಸಿಬ್ಬಂದಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಇತರರ ರಕ್ಷಣೆಗೆ ಮುಂದಾಗುವ ಅವರ ಧೈರ್ಯ ಶ್ಲಾಘನೀಯವಾದುದು. ಪ್ರಸ್ತುತ ದಿನಮಾನಗಳಲ್ಲಿ ವಿಕೋಪಗಳು ಸಹಜವಾಗಿದ್ದು, ಇಂತಹ ವಿಕೋಪಗಳನ್ನು ಎದುರಿಸಲು ಮಾನವ ಸದಾ ಸಿದ್ಧವಾಗಿರಬೇಕಾಗುತ್ತದೆ. ಅದೇ ರೀತಿ ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲು ನಡೆಯುವ ವಿಪತ್ತುಗಳ ಹಾನಿ ತಡೆಯಲು ಪ್ರಾಮಾಣಿಕ ಯತ್ನ ಮಾಡಬೇಕು ಎಂದು ಅವರು ಕರೆ ನೀಡಿದರು. 
  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೊಪ್ಪಳ ಪಿ.ಎಸ್.ಐ ನಾಗರತ್ನ ಅವರು ಪ್ರಾಕೃತಿಕ ವಿಕೋಪಗಳು ಹಾಗೂ ಮಾನವನಿಂದುಂಟಾಗುವ ವಿಕೋಪಗಳ ಕುರಿತು ಹಾಗೂ ವಿಪತ್ತುಗಳೀಡಾದಾಗ ಅನುಸರಿಸಬೇಕಾದ ಎಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು.
  ಕೊಪ್ಪಳ ತಹಶೀಲ್ದಾರ್ ಪುಟ್ಟರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮಕ್ಕೂ ಮುನ್ನ ನಡೆದ ರಾಷ್ಟ್ರೀಯ ವಿಪತ್ತು ಕಡಿಮೆಗೊಳಿಸುವ ದಿನಾಚರಣೆ ರ‍್ಯಾಲಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ|| ಪಿ.ರಾಜು ಅವರ ಚಾಲನೆ ನೀಡಿದರು. 
  ಈ ಸಂದರ್ಭದಲ್ಲಿ ಸೆಕೆಂಡ್ ಇನ್ ಕಮಾಂಡ್ ಜಲಾಲಸಾಬ ಹುಡೇದ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪುಟ್ಟಸ್ವಾಮಿ ಕೆ.ಎಮ್, ಅಗ್ನಿಶಾಮಕ ದಳದ ಲಿಂಗಪ್ಪಯ್ಯ, ವಿವಿಧ ಶಾಲಾ, ಕಾಲೇಜುಗಳ ಭಾರತ ಸೇವಾದಳ, ಭಾರತ ಸ್ಕೌಟ್ಸ್, ಗೈಡ್ಸ್, ಎನ್.ಸಿ.ಸಿ ಹಾಗೂ ಎನ್.ಎಸ್.ಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. 
Please follow and like us:
error