You are here
Home > Koppal News > ಲಾಸ್ಟ್ ಲವ್ ಲೆಟರ್ : ಓದಿ ಮರೆತುಬಿಡು ಪ್ಲೀಸ್…

ಲಾಸ್ಟ್ ಲವ್ ಲೆಟರ್ : ಓದಿ ಮರೆತುಬಿಡು ಪ್ಲೀಸ್…

 ಪ್ರೀತಿಯ ಬಸು ಅನ್ನೋಕೆ ಆತ್ಮಸಾಕ್ಷಿ ಒಪ್ಪುತ್ತಿಲ್ಲ. ಯಾಕೆಂದರೆ ನನ್ನೆದೆಯ ತುಂಬ ಗಂಡ ರಮೇಶನ ಅಚ್ಚಿದೆ. ಹೊಟ್ಟೆಯಲ್ಲಿ ನನ್ನ-ರಮೇಶನ ಕುಡಿ ಬೆಳೆಯುತ್ತಿದೆ. ಹಾಗಾಗಿ ಆತ್ಮೀಯ ಬಸು ಎನ್ನಬಲ್ಲೆ. ನನ್ನಿಂದ ನಿನಗೆ ಬಂದ ಪ್ರೇಮಪತ್ರಗಳ ಸಂಖ್ಯೆ ಕೆನ್ನೆಗೆ ಕೊಟ್ಟ ಸವಿಮುತ್ತುಗಳಿಗಿಂತಲೂ ಹೆಚ್ಚೆಂದು ಗೊತ್ತು. ಆದರೆ ಇದು ನನ್ನ ಲಾಸ್ಟ್ ಲವ್ ಲೆಟರ್ ; ಓದಿ, ನನ್ನನ್ನು, ನನ್ನ ನೆನಪುಗಳನ್ನೂ ಮರೆತುಬಿಡು ಪ್ಲೀಸ್…
     ಆವತ್ತೊಂದಿನ ಮೊಂಡುತನ ಬಿಟ್ಟಿದ್ರೆ ನನ್ನನ್ನ ಕಳ್ಕೋತಿದ್ದಿಲ್ಲ ಕಣೋ. ನಮ್ಮಿಬ್ಬರ ಪ್ರೀತಿಯ ಜಗಳದಲ್ಲಿ ಸೋಲಬಾರದು ಎನ್ನುವ ಕೆಟ್ಟ ಹಠಕ್ಕೆ ಬಿದ್ದು, ಜೀವನದುದ್ದಕ್ಕೂ ನಾವಿಬ್ಬರೂ ಕಳೆದ ಕ್ಷಣಗಳನ್ನೂ ಮರೆಯಬೇಕಾದ ಆನಿವಾರ್ಯತೆಯ ಸ್ಥಿತಿಗೆ ಬಂದಿದ್ದಕ್ಕೆ ನಾನು ಎಳ್ಳಷ್ಟೂ ಕಾರಣಳಲ್ಲ ಎನ್ನುವುದು ನಿನಗೆ ಚೆನ್ನಾಗಿ ಗೊತ್ತು. 
      “ನಮ್ಮಿಬ್ಬರ ಪ್ರೀತಿಯ ವಿಷಯ ಮನೆಯಲ್ಲಿ ಗೊತ್ತಾಗಿದೆ. ತರಾತುರಿಯಲ್ಲಿ ಮದುವೆ ನಿಶ್ಚಯ ಮಾಡಿದ್ದಾರೆ” ಎಂದು ಪರಿ ಪರಿಯಾಗಿ ಹೇಳಿದರೂ ನಿನಗೆ ನನ್ನ ಪರಿಸ್ಥಿತಿಗಿಂತ ಹಿಂದಿನ ದಿನ “ನನ್ನ ಮಾತಾಡಸ್ಬೇಡ ಇಡಿಯಟ್” ಅಂತ ಬೈಯ್ದಿದ್ದೇ  ಹೆಚ್ಚಾಯಿತು. ಆಫೀಸ್ನಲ್ಲಿ ಓ.ಟಿ. ಮಾಡಿ ನಿನ್ನ ದಡಿಯಾ ಬಾಸ್‌ನ್ನು ಖುಷಿ ಪಡಿಸುವುದೇ ನಿನಗೆ ಪರಮಗುರಿ ಎನಿಸಿತು. ನಿನಗೋಸ್ಕರ ಆವತ್ತು ರಾತ್ರಿ ೧೧ ಗಂಟೆಯತನಕ ಕೋರ್ಟ್ ಸರ್ಕಲ್‌ನಲ್ಲಿ ಲಗೇಜ್ ಸಮೇತ ಅದೂ ಒಬ್ಬಳೇ ನಿಂತಿದ್ದೆ. ಸುತ್ತಾಡೋ ಗಂಡಜಾತಿ ಪ್ರಾಣಿಗಳೆಲ್ಲ ನನ್ನನ್ನ ಒಂಥರಾ… ಛೀ ಬೇಡಾ ಬಿಡು …ಆ ರೀತಿ ನೋಡ್ತಿದ್ರು.
      ನಿನ್ನ ಮೊಬೈಲ್‌ಗೆ ನಾನು ಎಷ್ಟು ಫೋನ್ ಮಾಡಿದರೂ ಪಿಕ್ ಮಾಡ್ಲಿಲ್ಲ. ಕೊನೆಗೆ ಎಸ್‌ಟಿಡಿ ಬೂತ್‌ನಿಂದಾನೂ ಟ್ರೈ ಮಾಡ್ದೆ. ನೀನು ರೀಸೀವ್ ಮಾಡ್ಲಿಲ್ಲ, ಮೇಸೇಜ್ ಕಳಿಸಿದ್ರೂ ನಿನ್ನಿಂದ ರಿಪ್ಲೈ ಬರಲೇ ಇಲ್ಲ. ಬೆಳಗಾದರೆ ನಾನೂ ನಮ್ಮೂರಲ್ಲಿ ಇರಲೇಬೇಕಿತ್ತು. ನಮ್ಮೂರ ಬಸ್ ಹತ್ತಿ ಊರು ಸೇರಿದಾಗ ಕೋಳಿ ಕೂಗುತ್ತಿತ್ತು. ಸ್ನಾನ ಮುಗಿಸಿ, ತಿಂಡಿ ತಿಂದು ಅವಸರದ ಮದುವೆಗೆ ಅಲಂಕಾರ ಮಾಡಿಕೊಂಡು.. ಅಷ್ಟೇ ಏಕೆ, ತಾಳಿ ಕಟ್ಟಿಸಿಕೊಳ್ಳುವ ಕೊನೆ ಘಳಿಗೆಯಲ್ಲೂ ಕಾದೆ. ಸಿನಿಮಾದಲ್ಲಿ ವಿಲನ್ ಬರೋ ಥರಾ ನೀನು ಇಲ್ಲಿನ ಮದುವೆಗೆ ಹೀರೋ ಆಗಿ ಬಂದು “ನಿಲ್ಸಿ” ಅಂತಿಯೇನೋ ಎಂದು ಕನಸು, ನಿರೀಕ್ಷೆ ಇಟ್ಕೊಂಡಿದ್ದೆ. ಊಹ್ಞೂ.. ನೀನು ಬರಲೇ ಇಲ್ಲ.
       ಆದರೆ ಆವತ್ತಿಂದ ನನ್ನ ಬಾಳಿನಲ್ಲಿ ರಮೇಶ ಬಂದ. ನಾನು ಎಲ್ಲ ಹುಡುಗಿಯರಂತಲ್ಲ. ಕೊರಳಿಗೆ ಸಹನೆಯ ಗುರುತು ಎನಿಸಿರುವ ತಾಳಿ ಗಂಟು ಬಿದ್ದಾಕ್ಷಣವೇ ನಮ್ಮಿಬ್ಬರ ಪ್ರೀತಿ, ನಿನ್ನ ಮರೆತ ಘಳಿಗೆ ಎಲ್ಲವನ್ನೂ ರಮೇಶನ ಎದುರು ಹೇಳಿದೆ. ಅವನ ಸ್ಥಾನದಲ್ಲಿ ಬೇರೆ ಯಾವುದೇ ಗಂಡು ಪ್ರಾಣಿ ಇದ್ರೂ ಡೈವೋರ್ಸ್ ಹಂತ ತಲುಪಬೇಕಿತ್ತು. (ಒಂದು ವೇಳೆ ಹಾಗೇನಾದ್ರೂ ಆಗಿದ್ರೆ ನಾನು ಮತ್ತೇ ನಿನಗೆ ಸಿಗ್ತಿದ್ದೆ ಅಂತ ಭಾವಿಸ್ಬೇಡ. ಈ ಲೈಫ್‌ಲಿ ನಾನೆಂದು ನಿನಗೆ ಸಿಗಲ್ಲ.) ಮಿಲನ ಸಿನಿಮಾದಲ್ಲಿ ಪುನೀತ್‌ರಂತೆ “ಮದುವೆಗೆ ಮುಂಚೆ ಹೇಳಿದ್ರೆ ನಾನೇ ನಿಂತು ನಿಮ್ಮಿಬ್ಬರ ಮದುವೆ ಮಾಡ್ತಿದ್ದೆ. ಈಗ್ಲೂ ಕಾಲ ಮಿಂಚಿಲ್ಲ, ಬಸು ಜೊತೆ ಚೆನ್ನಾಗಿ ಇರ‍್ತಿನಿ ಅನ್ನೋದಾದ್ರೆ…” ಅಂತ ರಮೇಶ ಹೇಳಿದಾಗ, “ಬೇಕಿದ್ರೆ ನನ್ನನ್ನ ಸಾಯಿಸ್ಬಿಡಿ. ನಿಮ್ಮನ್ನ ಬಿಟ್ಟು ಬೇರೆಲ್ಲೂ ಹೋಗೋ ಮಾತೇ ಇಲ್ಲ. ಗಂಡ-ಹೆಂಡಿರ ಮಧ್ಯೆ ಯಾವುದೇ ಮುಚ್ಚು ಮರೆ ಇರಬಾರದು ಅನ್ನೋ ಕಾರಣಕ್ಕೆ ಇದನ್ನೆಲ್ಲ ಹೇಳಬೇಕಾಯಿತು” ಅಂದೆ. ರಮೇಶ ಕೂಡಾ ಲವ್ ಫೇಲ್ಯೂರ್ ಆಗಿರೋದನ್ನ ಹೇಳ್ಕೋಂಡ್ರು.        
     ನೀನು ಚಳಿಜ್ವರದಿಂದ ಹೊರಬರಲಾರದೇ ಹಾಸ್ಟೇಲ್‌ನಲ್ಲಿದ್ದಾಗ, ಸುರಿವ ಮಳೆಯಲ್ಲಿ ಕೊಡೆ ಹಿಡಿದು ಮಳೆಹನಿಯೂ ನಾಚುವಂತೆ ಸುರಿದ ಆ ಕಣ್ಣೀರ ನೆನಪು; ನೃಪತುಂಗ ಬೆಟ್ಟದಲ್ಲಿ ಆಕಾಶ್‌ನೀಲಿ ಬಣ್ಣದ ಶರ್ಟ್‌ನ್ನು ಗಿಫ್ಟಾಗಿ ಕೊಟ್ಟು ಆರ್ಥಪೂರ್ಣವಾಗಿ ಆಚರಿಸಿದ ನಿನ್ನ ಬರ್ತಡೆ; ನಾವಿಬ್ಬರೂ ಸೇರಿ ನೋಡಿದ ಮೊದಲ ಸಿನಿಮಾ “ರಾಮಕೃಷ್ಣ”; ಜ್ಯುಬಿಲಿ ಸರ್ಕಲ್ ಬಳಿಯ ಪಾರ್ಕ್‌ನಲ್ಲಿ ನಿನ್ನ ತಲೆಗೆ ದಿಂಬಾಗಿದ್ದ ನನ್ನ ಕಾಲುಗಳು;… ಇಂಥ ನಮ್ಮಿಬ್ಬರ ಹತ್ತಾರು ಮಧುರ ನೆನಪುಗಳು ಇನ್ನು ನಿನ್ನ ಬಾಳಲಿ ಬರುವುದು ಬೇಡ, ಇರುವುದು ಬೇಡ ಎಂದು ಹೇಳಲು ನನಗೂ ಕಷ್ಟ. ಹೇಳ್ಲೇಬೇಕು ಬೇರೆ ದಾರಿ ಇಲ್ಲ. 
      ನನ್ನ ಲವ್ ಲೆಟರ್‌ಗಳನ್ನ, ನಾವಿಬ್ಬರೂ ತೆಗೆಸಿಕೊಂಡ ಫೋಟೋಗಳನ್ನ ನೀನು ಸೇಫಾಗಿ ಸೂಟ್‌ಕೇಸ್‌ನಲ್ಲಿ ಇಟ್ಟಿರೋದು ನಂಗೊತ್ತು. ನಿಂಗೊಂದು ಶಾಕಿಂಗ್ ನ್ಯೂಸ್‌ನ್ನ ಸಹ ಹೇಳ್ತಾ ಇದೀನಿ. ಅವೆಲ್ಲ ನನಗೆ ಕಳೆದವಾರ ಸಿಕ್ಕಾಯ್ತು!! (ಕೊನೆ ಭಾನುವಾರ ನಿನ್ನ ಸಮಾಧಾನ ಮಾಡೋಕೆ ನಿನ್ನ ಗೆಳೆಯ, ನನ್ನ ಅಣ್ಣನ ಸಮಾನನಾದ ಮಂಜು ಬಂದಿದ್ರಲ್ಲ!) ಬೆಂಕಿಗೆ ಆಹುತಿಯಾಗಿದ್ದೂ ಆಯ್ತು. 
      ನಂಗೊತ್ತು. ನೀನು ಪ್ರೀತ್ಸೆ ಸಿನಿಮಾದಲ್ಲಿ ಉಪೇಂದ್ರ ಮಾಡೋ ಥರ ಮಾಡಲ್ಲ ಅಂತ. ಆದ್ರೆ ಎದ್ದೇಳು ಮಂಜುನಾಥ, ಮಠ ಸಿನಿಮಾದಲ್ಲಿರೋ ಜಗ್ಗೇಶನೋ, ಇಂತಿ ನಿನ್ನ ಪ್ರೀತಿಯ ಸಿನಿಮಾದಲ್ಲಿನ ಕಿಟ್ಟಿ ಥರಾ ಮಾತ್ರ ಆಗ್ಬೇಡ. ಪ್ಲೀಸ್ ಕಣೋ ಅನ್ನೋ ಹಾರೈಕೆ ನನ್ನದು.
       ಹ್ಞಾಂ.. ನನ್ನ ಫೋನ್ ನಂಬರ್, ಮನೆ ಅಡ್ರೆಸ್, ಹೆಸರೂ ಕೂಡಾ ಚೇಂಜ್ ಆಗಿದೆ. ನೀನು ಇವನ್ನೆಲ್ಲ ಮರೆತು ಮದುವೆ, ಮನೆ ಮಕ್ಕಳು ಅಂತ ಹಾಯಾಗಿರು ಎಂದು ಮಾತ್ರ ಹೇಳಬಲ್ಲೆ. ಮಿಕ್ಕಿದ್ದೂ ನಿನಗೆ ಬಿಟ್ಟಿದ್ದೂ. ಪ್ರಪಂಚ ಗುಂಡಗಿದೆ. ಚಿಕ್ಕದಾಗಿದೆ ನಿಜ. ಆದರೆ ಇನ್ನೆಂದು ನೀನು ನನಗೆ ಸಿಗಬೇಡ, ಕಂಡ್ರೂ ಮಾತಾಡ್ಸೋ ಪ್ರಯತ್ನ ಮಾಡ್ಬೇಡ.. 
                     ಗುಡ್ ಬೈ ಆಂಡ್ ಗುಡ್‌ಲಕ್..
                                                         ಇಂತಿ ನಿನ್ನ
                                                          ಧನು.ಕೆ.
            (ಯಾರಿದು ಧನು? ಅಂತ ತಲೆ ಕೆಡಿಸಿಕೋಬೇಡ. ನಾನು ಅವಳೇ. ಹೆಸರು ಬದಲಾಯಿಸಿದಿನಿ ಅಷ್ಟೇ.)  
—–
ಚಿತ್ರಪ್ರಿಯ ಸಂಭ್ರಮ

Leave a Reply

Top