ನಮ್ಮ ನಡೆ – ಕೇರಿಯ ಕಡೆ… ದಲಿತ ಸಾಹಿತ್ಯ ಪರಿಷತ್ ನಿಂದ ವಿನೂತನ ಕಾರ್ಯಕ್ರಮ

ನಾಡಿನ ದಲಿತರ ಶೋಷಿತರ ದನಿಯಾಗಿ ಹೊಸ ಚಿಂತನೆಯೊಂದಿಗೆ ದಲಿತ ಸಾಹಿತ್ಯ ಪರಿಷತ್ತು ಮತ್ತೆ ಕೇರಿಯೆಡೆಗೆ ಮರಳಿದೆ. ಬದುಕು ಕಟ್ಟಿಕೊಂಡ ಓಣಿಯಲ್ಲಿ ಮತ್ತೆ ಬದುಕನ್ನು ಹುಡುಕುವ ಕೆಲಸ ಮಾಡುತ್ತಿರುವುದು ನೋಡಿದರೆ ಸಂತಸವೆನಿಸುತ್ತದೆ.  ಓದುವ ಮತ್ತು ಓದಿಸುವ, ಬಾಲ್ಯದಲ್ಲಿ ಆಡಿದ ಮಣ್ಣಿನ ವಾಸನೆಯ ರುಚಿಯನ್ನು ಸವಿದ ನೆನಪುಗಳನ್ನು ಇಂದಿನ ದಲಿತ ಯುವ ಪೀಳಿಗೆಗೆ ತಿಳಿಸಬೇಕಾದ ಮಹತ್ತರವಾದ ಜವಾಬ್ದಾರಿಯನ್ನು ಹೊತ್ತುಕೊಂಡು ಸಾಗುತ್ತ ಧಾಪುಗಾಲಿಡಬೇಕಿದೆ. ಹಾಗಾಗಿ ಪ್ರಸ್ತುತ ’ನಮ್ಮ ನಡೆ ಕೇರಿಯ ಕಡೆ’ ಚಿಂತನೆಯ ಅವಶ್ಯಕತೆ ಇದೆ ಎಂದು ಅನಿಸುತ್ತಿದೆ, ಅಂಬೇಡ್ಕರರ ಸ್ವಾಭಿಮಾನದ ಬದುಕೇ ನಮಗೆ ಆದರ್ಶವಾದ ಈ ಸಂದರ್ಭದಲ್ಲಿ ನವ ಬಂಡವಾಳಶಾಹಿ, ನವ ವಸಾಹತುಶಾಹಿ, ಜಾಗತೀಕರಣದ ಒಳ ಸುಳಿಯ ತಿಳಿಯಲು ಚರಿತ್ರೆಯನು ಓದಬೇಕಿದೆ. ಶೋಷಕ ಶತೃವಿನ ಹರಿತವಾದ ಕತ್ತಿಗೆ ಕೊರಳಾಗದೆ ಪ್ರೀತಿಯ ಕೊಳದ ನೀರಿನಿಂದ ತಿಕ್ಕಿ ತಿಕ್ಕಿ ಅದರ ತುದಿಯನ್ನು ಮೆದುವಾಗಿಸಿಕೊಳ್ಳಲು ಮಾನವತೆಯ ನೀರ ಹಂಚುತ್ತ ಸಾಗಬೇಕಾದ ಸಂದರ್ಭವಿದು. 
ನಾವು ಕಷ್ಟಪಟ್ಟು ಓದಿಕೊಂಡು ನೌಕರಿ ಮಾಡಿಕೊಂಡು ಪಟ್ಟಣದಲ್ಲಿ ಇದ್ದರಷ್ಟೇ ಸಾಲದು ನಾವು ಬೆಳೆದು ಬಂದ ಕೇರಿಯನ್ನೊಮ್ಮೆ ನೋಡಿ ಅಲ್ಲಿನ ಬದುಕುಗಳನ್ನು ಇಂದಿನ ಪೀಳಿಗೆಗೆ ಮನವರಿಕೆ ಮಾಡಿಸುವ, ಕಾಳಜಿ ಹುಟ್ಟಿಸುವ, ಸ್ವಾಭಿಮಾನವನ್ನು ಬಿಟ್ಟು ಸೇವಕನಾಗಿಸಿಕೊಳ್ಳುವ ಅಪಾಯದ ಅರಿವುಗಳನ್ನು ತಿಳಿಸಬೇಕಿದೆ. ಈ ಹಂತದಲ್ಲಿ ಅವರ ಜವಾಬ್ದಾರಿಯನ್ನು ಹೆಚ್ಚಿಸುವ ಮತ್ತು ಅವರಿಗೆ ಬೇಕಾದ ಓದಿನ ವಾತಾವರಣವನ್ನು ನಿರ್ಮಾಣ ಮಾಡುವ ಕೆಲಸ ಆಗಬೇಕಿದೆ. ಅದನ್ನು ದಲಿತ ಅಧ್ಯಯನದ ಮಾದರಿಯಲ್ಲಿ ಹಮ್ಮಿಕೊಂಡು ತಲೆಮಾರನ್ನು ಎಚ್ಚರಿಸುವ ಮತ್ತು ಸಂಘಟಿಸಿಕೊಳ್ಳುವ ಅಗತ್ಯವಿದೆ. ಕೇರಿಯ ಹುಡುಗರು ತಮ್ಮ ಕಷ್ಟಗಳು ಹರಿಯುವ ಹಾಗೆ ಓದಬೇಕು ಸಂಘಟಿತರಾಗಬೇಕು ಮತ್ತು ಹಕ್ಕುಗಳಿಗೋಸ್ಕರ ಹೋರಾಟ ಮಾಡಬೇಕು. ಅದಕ್ಕಿರುವ ಏಕೈಕ ಮಾರ್ಗ ಶಿಕ್ಷಣ. 
ಲಂಡನ್‌ನಲ್ಲಿ ಓದುತ್ತಿರುವಾಗ ಸ್ವಾತಂತ್ರ್ಯ ಹೋರಾಟಗಾರರಾದ ಲಾಲಾ ಲಜಪತರಾಯ ರವರು ಬಾಬಾ ಸಾಹೇಬ್ ಅಂಬೇಡ್ಕರರನ್ನು ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿ ಹೋರಾಡೋಣ ಬನ್ನಿ ಎಂದಾಗ ಅಂಬೇಡ್ಕರರು, ನೀವು ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿರಿ ನಾನು ನನ್ನ ಜನರ ಸ್ವಾತಂತ್ರ್ಯಕ್ಕಾಗಿ ಓದಬೇಕಿದೆ ಎನ್ನುವ ಮಾತು ನಮಗೀಗ ಪ್ರಸ್ತುತ ಎನಿಸುತ್ತದೆ. ಹಾಗಾಗಿ ಶೋಷಣೆಯ ಹೊಸದಾದ ಜಾಲದಲ್ಲಿ ಸಿಲುಕಿರುವ ಮತ್ತು ಸಿಲುಕುತ್ತಿರುವ ನಮ್ಮ ಬಂಧುಗಳನ್ನು ಹೊಸ ಪರಿಕಲ್ಪನೆಯಲ್ಲಿ ಸಂಘಟಿಸುವ ಕೂಗಿನ ಅವಶ್ಯಕತೆ ಇದೆ. ಒಂದು ಕಾಲದಲ್ಲಿ ದೇಶವನ್ನಾಳಿದವರು, ದರಿದ್ರರಾಗಿ ಶಿಕ್ಷಣ ಅನ್ನ ನೀರಿಲ್ಲದೆ ಅಮಾನವೀಯವಾಗಿ ಬದುಕುತ್ತಿದ್ದಾರೆ, ಇನ್ನೊಂದೆಡೆ ನಮ್ಮ ದೇಶದ ಮೂಲ ನಿವಾಸಿಗಳಲ್ಲದವರು ಈ ದೇಶವನ್ನು ತಮ್ಮಪ್ಪನ ಆಸ್ತಿ ಎಂಬಂತೆ ಪ್ರತಿಪಾದಿಸುತ್ತಾ ಅದನ್ನು ಹೇಗೆ ಬೇಕು ಹಾಗೆ ಬಳಸಿಕೊಂಡು ಕೋಮುವಾದ, ಜಾತಿವಾದ, ಮತ್ತು ವರ್ಗ ವರ್ಣ ವ್ಯವಸ್ಥೆಗಳನ್ನು ಮತ್ತೆ ಮತ್ತೆ ಪ್ರತಿಪಾದಿಸಿಕೊಳ್ಳುತ್ತಿದ್ದಾರೆ. ಸತತ ಎರಡು ಸಾವಿರ ವರ್ಷಗಳಿಂದಲೂ ದೇಶವನ್ನು ಲೂಟಿ ಮಾಡುತ್ತಾ ಸಂಪತ್ತನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದಾರೆ. ಶಿಕ್ಷಣವನ್ನು ನೀಡದೆ ಅನಕ್ಷರಸ್ತರನ್ನಾಗಿಸಿ ದಸ್ಯುಗಳನ್ನಾಗಿಸಿ ತಾವು ಮಾತ್ರ ಏನೂ ಮಾಡಿಲ್ಲ ಅದೆಲ್ಲ ಹಳೆಯ ಕಥೆ ಎಂಬಂತೆ ಕಥೆ ಕಟ್ಟುತ್ತಿದ್ದಾರೆ. ಒಂದೆಡೆ ಹಳೆಯ ಕಾವ್ಯ ಕಥೆಗಳನ್ನೇ ನಮ್ಮ ಸತ್ಯಗಳೆಂದು, ತಾವೆ ಓದಿದ ತಾವೆ ಬರೆದ ಅಲ್ಲದೇ ತಮ್ಮದೇ ಕಥೆ ಬರೆದುಕೊಂಡು ಅದು ದೇಶದ ಕಥೆ ಎಂಬಂತೆ ಬಿಂಬಿಸುತ್ತಾ ನಮ್ಮನ್ನು ದಾರಿತಪ್ಪಿಸುತ್ತಿದ್ದಾರೆ. 
ತಲೆತಲಾಂತರದಿಂದ  ಅಸಮಾನತೆಯನ್ನೇ ಸತ್ಯವೆಂದು, ಅದೇ ದೇವನ ಸೃಷ್ಟಿ ಎಂದು ತೋರಿಸಿ ಮೂರ್ಖರನ್ನಾಗಿಸಿದ್ದಾರೆ.  ಅಸ್ಪೃಶ್ಯತೆಯನ್ನು ಜೀವಂತವಾಗಿರಿಸಿಕೊಂಡು ಅದು ಇನ್ನು ಇಲ್ಲವೆಂದು ಹೇಳುತ್ತಲೇ ಹೊಸಮುಖವಾಡಗಳೊಂದಿಗೆ ಜೀವಂತವಾಗಿರಿಸುತ್ತಾ ನಮ್ಮನ್ನು ದಾರಿತಪ್ಪಸುತ್ತಿದ್ದಾರೆ.  ಈಗಲೂ ಹಳ್ಳಿಯ ಹೋಟೆಲುಗಳಲ್ಲಿ ಇನ್ನೂ ಸಮಾನವಾಗಿ ಕುಳಿತು ಚಹಾ ಕುಡಿಯದ ಸಂದರ್ಭವಿದು ಅಂದಮೇಲೆ ಚಂದ್ರನ ಮೇಲೆ ಕಾಲಿಟ್ಟರೂ ಪಕ್ಕದ ಮನೆಯವನಾರೂ ಎನ್ನುವ ಸಂಸ್ಕೃತಿ, ಅನಾಗರಿಕ ಆಚರಣೆಗಳು, ಒಂದೇ ಎರಡೇ ಹೇಳುತ್ತಿದ್ದರೆ ಶಬ್ದಗಳೇ ಸಾಲದು. ಆದರೀಗ ಇವೆಲ್ಲವುಗಳನ್ನು ನಮ್ಮ ಕೇರಿಗೆ ತಿಳಿಸಬೇಕಾದ ಅಗತ್ಯವಿದೆ. ಅದರೊಟ್ಟಿಗೆ ಇಷ್ಟುದಿನ ನೀವು ತೋಡಿದ ಕಂದರವ ನೀವೇ ಮುಚ್ಚಬೇಕು ಎಂದು ಕೇಳಬೇಕಿದೆ. ನಾವು ಮೊದಲಿನಂತಿಲ್ಲ ಎನ್ನುವುದನ್ನು ಸಹ ತಿಳಿಸಬೇಕಿದೆ. ದೇವದಾಸಿ ಪದ್ದತಿಯಂತಹ ಅಮಾನವೀಯ ಪದ್ದತಿಯಲ್ಲಿ ಸಿಲುಕಿಸಿ ನನ್ನಕ್ಕ ತಂಗಿಯರ ಅದೆಷ್ಟು ಬಾಳುಗಳು ಕಮರಿಹೋಗಿಲ್ಲ. ದೇವನೂ ಜಾತಿಯ ಸೃಷ್ಟಿಸಿ ತಾನೂ ಆಳುವವರ, ಉಳ್ಳವರ ಪರ ಎಂಬುದನ್ನು, ತಾನೇ ಸೃಷ್ಟಿಸಿದ ಮನುಷ್ಯರಲ್ಲಿ ಶ್ರೇಷ್ಠ ಮತ್ತು ಕನಿಷ್ಠವೆಂಬ ತಾರತಮ್ಯ ಸೃಷ್ಟಸಿದ ಕಥೆಯನ್ನು, ಅರಿಯುವ ಮತ್ತು ತಿಳಿಯಪಡಿಸುವ ಅಗತ್ಯವಿದೆ.  ಹಾಗಾಗಿ ಈ ಎಚ್ಚರಿಕೆಯನ್ನಿಟ್ಟುಕೊಂಡು ಬೆದರಿಸುವ ದೇವರುಗಳನ್ನು ಸೃಷ್ಟಿಸುತ್ತಾ ಸಾಗಿರುವ ಪೂರೋಹಿತ ಶಾಹಿ  ವರ್ಗಕ್ಕೆ ತಿಳಿಸಲು ಮತ್ತು ಅವರ ಹುನ್ನಾರಗಳನ್ನು  ಬಯಲಿಗಿಡಬೇಕಾದ ತುರ್ತು ಇದೆ ಎಂದು ಅನಿಸುತ್ತದೆ. ಜಾತಿ ಪದ್ದತಿಯನ್ನು ಬೇರು ಸಹಿತ ಕೀಳುವ ಮಾನವ ಪ್ರೀತಿಯನ್ನು ಸ್ಥಾಪಿಸುವ ಕೆಲಸ ಮಾಡಲು ನಾವು ಕೇರಿಗೆ ಹೋಗುವ ಅಗತ್ಯವಿದೆ.  ಮೂಢ ನಂಬಿಕೆಯಂತಹ ಕೀಳು ಮಟ್ಟದ ಚಿಂತನೆಗಳನ್ನು ಅನಕ್ಷರಸ್ತ ಸಮಾಜದಲ್ಲಿ ಬಿತ್ತಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಮತ್ತು ತಮ್ಮ ಬೇಳೆ ಬೇಯಿಸಿಕೊಳ್ಳುವ ದುಡಿಯದೇ ತಿಂದು ಬೊಜ್ಜು ಬೆಳೆಸಿಕೊಂಡಿರುವವರ ಎಲ್ಲಾ ಚಿಂತನೆಗಳನ್ನು ಠುಸ್ ಎನ್ನಿಸುವ ಸಲುವಾಗಿ ನನ್ನ ಮುಂದಿನ ತಲೆಮಾರನ್ನು ಈ ಎಲ್ಲ ಆ ಅಪಾಯಗಳಿಂದ ರಕ್ಷಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಅನಿಸುತ್ತಿರುವುದರಿಂದ ನಾವೇಲ್ಲರೂ ಮತ್ತೆ ಕೇರಿಯ ಕಡೆ ಹೋಗಬೇಕಿದೆ. ಇದೆಲ್ಲದಕ್ಕೂ ಮೂಲವೆಂದರೆ ಶಿಕ್ಷಣ. ಅಂಬೇಡ್ಕರ ಸಹ ಶಿಕ್ಷಣವನ್ನೇ ಮೊದಲ ಆದ್ಯತೆಯಾಗಬೇಕು ಎಂದು ಸಂವಿಧಾನದಲ್ಲಿ ತನ್ನ ಜನಗಳಿಗಾಗಿ ಮೀಸಲು ಬರೆದು ಹೋದ ಮಹಾತ್ಮ. ನಿಜವಾಗಿಯೂ ಬಾಬಾ ಸಾಹೇಬರೇ ದಲಿತರಿಗೆ ಸ್ವಾತಂತ್ರ್ಯ ನೀಡಿದ ಮಹಾತ್ಮ. 
ಈ ಎಲ್ಲಾ ವಿಚಾರಗಳನ್ನು ಬುದ್ಧ ಬಸವ ಅಂಬೇಡ್ಕರರ ಚಿಂತನೆಗಳೊಂದಿಗೆ ಕೇರಿಯ ಕಡೆ ಸಾಗಿಸಬೇಕಿದೆ. ಮುಗ್ದ ಕಂದಮ್ಮಗಳು ಕಲ್ಲು ಮೂರ್ತಿಗಳ ಮುಂದೆ ಮಂಗಳಾರತಿ ಎತ್ತುವ ಮುಂಚೆ ಅವರದೇ ಚರಿತ್ರೆಗಳನ್ನು ಚಾರಿತ್ರಿಕ ಮತ್ತು ವೈಜ್ಞಾನಿಕ ದೃಷ್ಟಿಕೋನಗಳಿಂದ ಓದಿಸುವ ಜವಾಬ್ದಾರಿ ಹೊತ್ತುಕೊಂಡು ಕೇರಿಯನ್ನು ನೋಡಬೇಕಿದೆ. 
ಸಾಹಿತ್ಯ ಪರಿಷತ್ತು ಎಂದ ಕೂಡಲೆ ಅದು ಓದುವ ಓದಿಸುವ ಮತ್ತು ಬರೆಯುವ ಕೆಲಸ ಮಾಡುವ ಜವಾಬ್ದಾರಿಯ ಜೊತೆಗೆ ಎಂತಹುದನ್ನು ಓದಿಸಬೇಕು ಎಂಬುದುಕೂಡಾ ಮುಖ್ಯವಾದುದೆಂದುಕೊಂಡು ಮತ್ತೆ ಬಾಲ್ಯ ಕಳೆದ ಓಣಿಯ ಕಡೆ ನಡೆದು ಬಾಲಕರ ಮುಂದೆ ಓದುವ ಮತ್ತು ಓದಿಸುವ ಕೆಲಸ ಮಾಡಿದ್ದಾದರೆ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಲು ಸಾಧ್ಯ. ನಾವೂ ಓದಿ ದೊಡ್ಡವರಾದ ಕೂಡಲೇ ಊರು ಬಿಡಬೇಕಪ್ಪ ಉದ್ಧಾರ ಆಗ್ತೀವಿ ಎಂದುಕೊಂಡು ಹೋಗಿದ್ದೇನೋ ಸರಿ. ಆದರೆ ಉದ್ಧಾರವಾದ ನಂತರದ ಕೆಲಸವೇ ಉದ್ಧಾರವಾದ ಬಗೆಯನ್ನು ತಿಳಿಸುವುದು. ಬದುಕು ಕಟ್ಟಿಕೊಂಡ ಬಗೆಯನ್ನು ತಿಳಿಸುವುದು. ಕಲಿಯುವ ಬದುಕುಗಳಿಗೂ ಓದಿನೆಡೆ ಸೆಳೆಯುವ ತಮ್ಮ ಗುರಿಯನ್ನು ಕಟ್ಟಿಸಿಕೊಡುವ ಕೆಲಸ ಮಾಡುವುದೇ ಮುಂದಿನ ಜವಾಬ್ದಾರಿಯಾಗಬೇಕು. ಅದನ್ನೇ ದಲಿತ ಸಾಹಿತ್ಯ ಪರಿಷತ್ತು ಮಾಡಬೇಕು ಅಂತ ಅನಿಸುತ್ತಿರುವುದರಿಂದ ’ನಮ್ಮ ನಡೆ ಕೇರಿಯ ಕಡೆ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸವೆನಿಸುತ್ತದೆ. 
ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ.ಅರ್ಜುನ ಗೊಳಸಂಗಿಯವರು ಮತ್ತು ಅವರ ತಂಡ ಈ ಹೊಸ ಚಿಂತನೆಯನ್ನು ಜಾರಿಯಲ್ಲಿಡುತ್ತಾ ಕೇರಿಯ ಕಡೆ ನಮ್ಮನ್ನು ಸೆಳೆದುಕೊಂಡು ಹೋಗುತ್ತಿರುವುದನ್ನು ನೋಡುತ್ತಿದ್ದ ನನ್ನ ಅನೇಕ ಗೆಳೆಯರು ’ಇದು ಆಗಬೇಕಿತ್ತು, ಇದೇ ಸರಿಯಾದ ಮಾರ್ಗ’ ಎಂದು ನಮ್ಮನ್ನು ಪ್ರೋತ್ಸಾಹಿಸಿದರು. ಹಾಗಾಗಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಬರಗೂರಿನಲ್ಲಿ ರಾಜ್ಯದಲ್ಲಿ ಎರಡನೆಯ ಮತ್ತು ಜಿಲ್ಲೆಯಲ್ಲಿ ಮೊದಲನೆಯ ’ನಮ್ಮ ನಡೆ ಕೇರಿಯ ಕಡೆ’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡು ಯಶಸ್ವಿಯಾಗಿ ಜರುಗಿಸಿದ್ದು ನೋಡಿದರೆ, ಓದಿಕೊಂಡು ಊರು ಬಿಟ್ಟ ಎಲ್ಲರನ್ನು ಊರಿನೆಡೆಗೆ ಕೇರಿಯೆಡೆಗೆ ತಿರುಗುವಂತೆ ಮಾಡಿದೆ.
ಸಮಾನತೆಯ ಚಿಂತನೆಗಾಗಿ ನಾವೆಲ್ಲಾ
ರಮೇಶ ಗಬ್ಬೂರ್
ಗಂಗಾವತಿ.

Leave a Reply