ಸಾಮಾಜಿಕ ಭದ್ರತಾ ಯೋಜನೆ : ಮಾಹಿತಿ ಅಭಿಯಾನಕ್ಕೆ ಚಾಲನೆ

ಕೊಪ್ಪಳ, ಜು.೦೮ – ಕೊಪ್ಪಳದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಹಾಗೂ ನಬಾರ್ಡ್ ಇವರುಗಳ ಸಂಯುಕ್ತಾಶ್ರಯದಲ್ಲಿ, ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರನ್ನು ತಲುಪುವಂತೆ ಮಾಡಲು ಏರ್ಪಡಿಸಲಾಗಿರುವ ಮಹಾ ಅಭಿಯಾನಕ್ಕೆ ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಬ್ಯಾಂಕಿನ ಪ್ರಾದೇಶಿಕ ಪ್ರಬಂಧಕ ಎಮ್.ಅಶೋಕ, ಲೀಡ್ ಬ್ಯಾಂಕ್ ಅಧಿಕಾರಿ ಡಿ.ರವೀಂದ್ರ, ಪ್ರಾದೇಶಿಕ ಕಛೇರಿಯ ಹಿರಿಯ ಅಧಿಕಾರಿಗಳಾದ ಬಸನಗೌಡ ಮಾಲಿಪಾಟೀಲ್, ನಾಗರಾಜ ಜೋಷಿ, ಬಿ.ಎಮ್.ಪ್ರಭುದೇವ ಹಾಗೂ ಇತರರು ಈ ಸಂದರ್ಭದಲ್ಲಿದ್ದರು. ಮಹಾ ಅಭಿಯಾನವನ್ನು ಬ್ಯಾಂಕಿನ ಹತ್ತು ಪ್ರಾದೇಶಿಕ ಕಛೇರಿಗಳಲ್ಲಿ ಆರಂಭಿಸಲಾಗಿದ್ದು, ಪ್ರತಿಯೊಂದು ಕಛೇರಿಯಿಂದ ಎರಡು ವಾಹನಗಳನ್ನು ಬಿಡಲಾಗಿದೆ. ಈ ವಾಹನಗಳು ಜಿಲ್ಲೆಯ ಪ್ರತಿಯೊಂದು ಹಳ್ಳಿಗಳಿಗೆ ತೆರಳಿ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ (ಅಪಘಾತ ವಿಮೆ), ಪ್ರಧಾನಮಂತ್ರಿ ಜನ್-ಧನ್ ಯೋಜನೆ, ಅಟಲ್ ಪೆನ್ಷನ್ ಯೋಜನೆ, ಮುದ್ರಾ ಸಾಲ ಯೋಜನೆ ಇತ್ಯಾದಿ ಯೋಜನೆಗಳ ಕುರಿತು ಸಮಗ್ರ ಮಾಹಿತಿ ನೀಡಲಿವೆ. ಅಲ್ಲದೇ ಈ ಅಭಿಯಾನದಲ್ಲಿ ಹಳ್ಳಿಗರಿಗೆ ರೂಪೇ ಕಾರ್ಡ್‌ಗಳನ್ನು ಸಹ ವಿತರಿಸಲಾಗುವುದು ಎಂದು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ಪ್ರಬಂಧಕ ಎಮ್. ಅಶೋಕ್ ತಿಳಿಸಿದರು.

Leave a Reply