You are here
Home > Koppal News > ಮಹನೀಯರ ಜಯಂತಿಗಳ ಆಚರಣೆಗಳು ಆದರ್ಶ ಬದುಕಿಗೆ ಪ್ರೇರಣೆ- ಅಮರೇಶ್ ಕುಳಗಿ

ಮಹನೀಯರ ಜಯಂತಿಗಳ ಆಚರಣೆಗಳು ಆದರ್ಶ ಬದುಕಿಗೆ ಪ್ರೇರಣೆ- ಅಮರೇಶ್ ಕುಳಗಿ

): ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಂ, ಶ್ರೇಷ್ಠ ದಲಿತ ವಚನಕಾರರು ಹೀಗೆ ಹಲವಾರು ಮಹನೀಯರ ಜಯಂತಿ ಆಚರಣೆಗಳು ಆದರ್ಶದಾಯಕ ಬದುಕಿಗೆ ಪ್ರೇರಣೆ ನೀಡುತ್ತವೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು ಹೇಳಿದರು.

  ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಭಾನುವಾರದಂದು ಏರ್ಪಡಿಸಲಾಗಿದ್ದ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಂ ಹಾಗೂ ಶ್ರೇಷ್ಠ ದಲಿತ ವಚನಕಾರರ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
  ಹಸಿರು ಕ್ರಾಂತಿಯ ಹರಿಕಾರರೆಂದೇ ಖ್ಯಾತಿಗಳಿಸಿ, ಈ ದೇಶದ ಹಸಿವನ್ನು ಇಂಗಿಸುವ ಕಾರ್ಯಕ್ರಮಗಳನ್ನು ರೂಪಿಸಿದ ಡಾ. ಬಾಬು ಜಗಜೀವನರಾಂ ಅವರು ಸರಳ ಹಾಗೂ ಸಾರ್ಥಕ ಜೀವನ ನಡೆಸಿದರು. ೧೨ ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯನ್ನು ಮಾಡಿದ ವಚನಕಾರರು, ಸಾಮಾಜಿಕ ಸಮಾನತೆಯ ದೂರದೃಷ್ಟಿಯನ್ನಿಟ್ಟುಕೊಂಡು, ಆದರ್ಶ ಜೀವನ ನಡೆಸುವ ಮಾರ್ಗ ಹಾಕಿಕೊಟ್ಟರು.  ಇಂತಹ ಮಹನೀಯರ ಜಯಂತಿ ಆಚರಣೆಗಳು ಆದರ್ಶ ಬದುಕಿಗೆ ಪ್ರೇರಣೆ ನೀಡುತ್ತವೆ.  ಇವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗಿದಲ್ಲಿ ಉತ್ತಮ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಹೇಳಿದರು.
  ಡಾ. ಬಾಬು ಜಗಜೀವನರಾಂ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದ ಹಂಪಿ ಕನ್ನಡ ವಿವಿ ಸಿಂಡಿಕೇಟ್ ಸದಸ್ಯ ಪ್ರೊ. ಹೆಚ್. ಲಿಂಗಪ್ಪ ಅವರು, ದಲಿತರ ಏಳಿಗೆಗೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಸರ್ಕಾರ ಹಲವು ಯೋಜನೆಗಳ ಮೂಲಕ ಅವಕಾಶ ಕಲ್ಪಿಸಿಕೊಟ್ಟಿದ್ದು, ಇದರ ಸದ್ಬಳಕೆ ಮಾಡಿಕೊಂಡು ದಲಿತರು ಉತ್ತಮ ಬದುಕು ಕಟ್ಟಿಕೊಳ್ಳಬೇಕು.  ಉಪಪ್ರಧಾನಿಯಾಗಿದ್ದ ಬಾಬು ಜಗಜೀವನರಾಂ ಅವರು ನಿರ್ವಹಿಸಿದ ಎಲ್ಲ ಖಾತೆಗಳಲ್ಲೂ ದೂರದೃಷ್ಟಿಯ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿದರು. ಅಮೆರಿಕಾದಲ್ಲಿನ ನೀಗ್ರೋ ಜನಾಂಗದವರು ಸಹ ಬಾಬು ಜಗಜೀವನರಾಂ ಅವರ ಜಯಂತಿ ಆಚರಿಸುತ್ತಾ ಬರುತ್ತಿದ್ದಾರೆ ಎಂದರೆ, ಜಗಜೀವನರಾಂ ಅವರ ಪ್ರಭಾವ ವಿದೇಶಗಳಲ್ಲೂ ವ್ಯಾಪಿಸಿರುವುದಕ್ಕೆ ನಿದರ್ಶನವಾಗಿದೆ.  ಇಂದಿರಾಗಾಂಧಿ ಅವರು ದಲಿತರಿಗಾಗಿ ಹಾಕಿಕೊಟ್ಟ ಎಲ್ಲ ಕಲ್ಯಾಣ ಕಾರ್ಯಕ್ರಮಗಳ ಹಿಂದೆ ಜಗಜೀವನರಾಂ ಅವರ ಚಿಂತನೆ ಇತ್ತು.  ತುರ್ತು ಪರಿಸ್ಥಿತಿ ಸಂದರ್ಭದಲ್ಲಿ  ಜೈಲು ಸೇರಿದ ಅವರು, ಇಂದಿರಾಗಾಂಧಿ ಅವರ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತೊಮ್ಮೆ ರಕ್ಷಿಸುವ ಅಗತ್ಯವಿದೆ ಎಂದು ನೇರವಾಗಿ ಪತ್ರದ ಮೂಲಕ ತಿಳಿಸಿದ್ದರು ಎಂದರು.
  ಶ್ರೇಷ್ಠ ದಲಿತ ವಚನಕಾರರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದ, ಹೊಸಪೇಟೆ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಟಿ.ಹೆಚ್. ಬಸವರಾಜ ಅವರು, ಬಸವಣ್ಣರಾದಿಯಾಗಿ ಎಲ್ಲ ಶರಣರು ಜಾತಿ, ವರ್ಗ ವ್ಯವಸ್ಥೆಯನ್ನು ಮೀರಿ, ಎಲ್ಲ ವರ್ಗದ ವಚನಕಾರರಿಗೆ ಶ್ರೇಷ್ಠ ಸ್ಥಾನಮಾನ ಕಲ್ಪಿಸಿಕೊಟ್ಟಿದ್ದರು.  ಆದರೆ ಪ್ರಸ್ತುತ ದಿನಗಳಲ್ಲಿ ಇವರನ್ನು ದಲಿತ ವಚನಕಾರರನ್ನಾಗಿ ಪ್ರತ್ಯೇಕಿಸುತ್ತಿರುವುದು ಸಮಂಜಸವಲ್ಲ.  ಡೋಹರ ಕಕ್ಕಯ್ಯ, ಮಡಿವಾಳ ಮಾಚಿದೇವ ಅವರು ಕತ್ತಿಯನ್ನು ಹಿಡಿಯದೇ ಇದ್ದಿದ್ದರೆ, ಇಂದಿನ ಪೀಳಿಗೆಗೆ ವಚನಗಳು ಲಭ್ಯವಾಗದಿರುವ ಸಾಧ್ಯತೆಗಳಿದ್ದವು.  ಉರಿಲಿಂಗ ಪೆದ್ದಿ ವಚನಕಾರರು ಮೂಲತಃ ಕಳ್ಳನಾಗಿದ್ದರು, ಕಳ್ಳತನಕ್ಕೆಂದು ಬಂದಿದ್ದ ಅವರು, ಲಿಂಗ ದೀಕ್ಷೆ ಕಾರ್ಯಕ್ರಮವನ್ನು ಏಕಾಗ್ರತೆಯಿಂದ ವೀಕ್ಷಿಸಿ, ಮನ ಪರಿವರ್ತನೆಗೊಂಡು, ಮುಂದೆ ಅವರು ಉರಿಲಿಂಗ ದೇವರ ಆರಾಧನೆ ಪ್ರಾರಂಭಿಸಿ ಶ್ರೇಷ್ಠ ವಚನಕಾರರಾದರು.  ದಲಿತ ವಚನಕಾರರ ಪೈಕಿ ಉರಿಲಿಂಗ ಪೆದ್ದಿ ಅವರು ರಚಿಸಿದ  ಅತಿಹೆಚ್ಚು ೩೬೦ ವಚನಗಳು ಲಭ್ಯವಾಗಿದ್ದು, ಉಳಿದ ದಲಿತ ವಚನಕಾರರ ಕೆಲವೇ ಕೆಲವು ವಚನಗಳು ಮಾತ್ರ ಲಭ್ಯವಾದವು.  ಕಲ್ಯಾಣ ಕ್ರಾಂತಿ ಸಂದರ್ಭದಲ್ಲಿ ದಲಿತ ವಚನಕಾರರ ವಚನಗಳು ಕಾಣೆಯಾಗಿರಬಹುದು ಎಂದು ಅಭಿಪ್ರಾಯಪಟ್ಟರು.
  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ನಗರಸಭೆ ಉಪಾಧ್ಯಕ್ಷ ಬಾಳಪ್ಪ ಬಾರಕೇರ ಕಾರ್ಯಕ್ರಮ ಕುರಿತು ಮಾತನಾಡಿದರು.  ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಪಿ. ರಾಜಾ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಜಿ.ಪಂ. ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ನಗರಸಭೆ ಸದಸ್ಯರುಗಳಾದ ಸರಿತಾ ಸುಧಾಕರ್, ಮುತ್ತು ಕುಷ್ಟಗಿ, ಅಮ್ಜದ್ ಪಟೇಲ್, ಖಾಜಾವಲಿ, ವಿವಿಧ ಸಮಾಜದ ಮುಖಂಡರುಗಳು ವೇದಿಕೆ ಮೇಲೆ ಉಪಸ್ಥಿತರಿದ್ದರು.  ಜಿಲ್ಲಾ ಸಮಾಜಕಲ್ಯಾಣಾಧಿಕಾರಿ ಪಿ. ಶುಭಾ ಸ್ವಾಗತಿಸಿ ವಂದಿಸಿದರು, ಸಿ.ವಿ. ಜಡಿಯವರ್ ಕಾರ್ಯಕ್ರಮ ನಿರೂಪಿಸಿದರು. 
  ಸಮಾರಂಭಕ್ಕೂ ಪೂರ್ವದಲ್ಲಿ ಮಹನೀಯರ ಭಾವಚಿತ್ರದೊಂದಿಗೆ ಮೆರವಣಿಗೆಯು ತಹಸಿಲ್ದಾರರ ಕಚೇರಿ ಆವರಣದಿಂದ ಹೊರಟು, ಬಾಬು ಜಗಜೀವನರಾಂ ವೃತ್ತ, ಜವಾಹರ ರಸ್ತೆ ಮಾರ್ಗವಾಗಿ ಸಾಗಿ ಬಂದಿತು.  ಡೊಳ್ಳು ಕುಣಿತ ಸೇರಿದಂತೆ ಹಲವು ಕಲಾತಂಡಗಳು ಮೆರವಣಿಗೆಯನ್ನು ಆಕರ್ಷಕಗೊಳಿಸಿದವು.

Leave a Reply

Top