ಪತ್ನಿಯನ್ನು ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ

ಮಕ್ಕಳಾಗಿಲ್ಲವೆಂದು ತನ್ನ ಪತ್ನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ, ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ ಆರೋಪಿಗೆ ಕೊಪ್ಪಳದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
  ಕೊಪ್ಪಳ ತಾಲೂಕಿನ ಹುಸೇನಸಾಬ ತಂದೆ ಮೀರಸಾಬ ಕಟ್ಟಿ ಎಂಬಾತನೆ ತನ್ನ ಪತ್ನಿಯನ್ನು ಕೊಲೆಗೈದ ಆರೋಪಿ.  ಕನಕಗಿರಿಯ ನೂರಜಹಾನಬೇಗಂ ನಂದಾಪುರ ಎಂಬುವವರು ತಮ್ಮ ಮಗಳನ್ನು ಹಿಟ್ನಾಳ್ ನಿವಾಸಿ ಹುಸೇನಸಾಬ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದರು.  ಮದುವೆಯಾಗಿ ಒಂದು ವರ್ಷವಾದರೂ ಮಕ್ಕಳಾಗಿಲ್ಲ ಎಂದು ಮಾನಸಿಕ ಕಿರುಕುಳ ನೀಡುವುದು, ಶೀಲದ ಮೇಲೆ ಸಂಶಯಪಡುವುದು, ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದ ಹುಸೇನಸಾಬ, ನಿನಗೆ ಮಕ್ಕಳಾಗುವುದಿಲ್ಲ.  ನಾನು ಬೇರೆ ಮದುವೆ ಮಾಡಿಕೊಳ್ಳುತ್ತೇನೆ.  ನೀನು ತವರುಮನೆಗೆ ಹೋಗು ಎಂಬುದಾಗಿ ಕಳೆದ ೨೦೧೨ ರ ಜುಲೈ ೩೦ ರಂದು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದ.  ಒದಕ್ಕೆ ಒಪ್ಪದ ಪತ್ನಿಯನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ, ಪ್ರಕರಣ ಮುಚ್ಚಿ ಹಾಕಲು ಮೃತ ಪತ್ನಿ ಬರೆದಂತೆ ಹಾವಿನ ಬಾಲವನ್ನು ತುಳಿದಿದ್ದರಿಂದ, ಹಾವು ನನಗೆ ಮೂರು ಬಾರಿ ಕಚ್ಚಿದೆ.  ದೇವರು ನನ್ನನ್ನು ಕರೆದುಕೊಳ್ಳುತ್ತಿದ್ದಾನೆ ಎಂದು ಸುಮ್ಮನಾಗಿಬಿಟ್ಟಿದ್ದೇನೆ ಎಂಬುದಾಗಿ ಆರೋಪಿ ಹುಸೇನಸಾಬ ಚೀಟಿ ಬರೆದು ಇಟ್ಟಿದ್ದ.  ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಮುನಿರಾಬಾದ್ ಪಿಎಸ್‌ಐ ವಿ.ಕೆ. ಹಿರೇಗೌಡ ಹಾಗೂ ಕೊಪ್ಪಳ ಗ್ರಾಮೀಣ ಠಾಣೆ ಸಿಪಿಐ ವೆಂಕಟಪ್ಪ ನಾಯಕ ಅವರು ಆರೋಪಿಯ ವಿರುದ್ಧ ಹಾಗೂ ಆರೋಪಿಯ ತಂದೆ ಮತ್ತು ತಾಯಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.  ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ರೀಕಾಂತ ಡಿ. ಬಬಲಾದಿ ಅವರು ಆರೋಪಿ ಹುಸೇನಸಾಬ ಮೇಲಿನ ಕೊಲೆ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ೫೦೦೦ ರೂ. ದಂಡ ವಿಧಿಸಿದ್ದಾರೆ.  ಆರೋಪಿಯ ತಂದೆ ಮತ್ತು ತಾಯಿಯ ಮೇಲಿನ ಆರೋಪ ಸಾಬೀತಾಗಿಲ್ಲ ಎಂದು ತೀರ್ಮಾನಿಸಿ ಬಿಡುಗಡೆಗೊಳಿಸಿದ್ದಾರೆ.  ಸರ್ಕಾರಿ ಅಭಿಯೋಜಕ ಎಂ.ಎ. ಪಾಟೀಲ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
Please follow and like us:

Leave a Reply