fbpx

ಬ್ರಹ್ಮಚಾರಿಗೆ ಮಕ್ಕಳಾದ್ಹಂಗೆ-ಹೋರಾಟಗಳಿಗೆ ಲೇಬಲ್ ಅಗತ್ಯವಿಲ್ಲ: ಚಂಪಾ

ಮೈಸೂರು,ನ.19:ಚಂಪಾ ಅಂದ್ರೆ ಹಾಗೆ..ಒಂಥರಾ ಮಿರ್ಚಿ ಮೆಣಸಿನಕಾಯಿ ಇದ್ದ ಹಾಗೆ.ಅವರ ಕಾವ್ಯ,ಮಾತು ಮೆಣಸಿನಕಾಯಿಯಂತೆ ಬಲು ಖಾರವಾಗಿರುತ್ತದೆ. ಅವುಗಳನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡರೆ ಅಷ್ಟೇ ರುಚಿಕರ ಮತ್ತು ಸ್ವಾದಿಷ್ಟ. ಅವರ ಚುಟುಕು ಸಾಹಿತ್ಯ ಆಸ್ವಾದಿಸಿದರೆ 32ಹಲ್ಲುಗಳನ್ನೂ ಹೊರ ಪ್ರದರ್ಶಿಸುವಂತೆ ಮಾಡುತ್ತದೆ.ಶನಿವಾರ ಬೆಳಗ್ಗೆ ಎಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಕಿಕ್ಕಿರಿದು ನೆರದಿದ್ದ ಸಭಿಕರನ್ನು ನಗೆಗಡಲಿನಲ್ಲಿ ಮುಳುಗಿಸಿತು.
ಕನ್ನಡ ಸಾಹಿತ್ಯದ ಆದಿಕವಿ ಎಂದೇ ಖ್ಯಾತಿಯಾಗಿ ರುವ ಪಂಪ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸಿರುವ ಚಂದ್ರಶೇಖರ ಪಾಟೀಲ್(ಚಂಪಾ)ರನ್ನು ಎಂಜಿನಿ ಯರುಗಳ ಸಂಸ್ಥೆ ಮತ್ತು ಚುಟುಕು ಸಾಹಿತ್ಯ ಪರಿಷತ್‌ನ ಸಂಯುಕ್ತಾಶ್ರಯದಲ್ಲಿ ಅಭಿನಂದಿಸಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತಿಗಿಳಿದ ಚಂಪಾ ನಾವೆ ಲ್ಲರೂ ಹುಟ್ಟಿನಿಂದಲೇ ಹೋರಾಟಗಾರರು.ಏಕೆಂದರೆ ಹೋರಾಟ ಮಾಡಿದವರ ನೆಲದಲ್ಲಿ ನಾವು ಹುಟ್ಟಿದ್ದೇವೆ!ಹಿರಿಯರ ಹೋರಾಟದ ಹಾದಿಯಲ್ಲೇ ಇಂದಿಗೂ ಮುಂದುವರಿಯುತ್ತಿದ್ದೇವೆ.ಹೋರಾಟ ಇಲ್ಲದ ಜೀವನ ಹೆಣಕ್ಕೆ ಸಮಾನ. ದುರಂತದ ಸಂಗತಿ ಎಂದರೆ ಹೋರಾಟದ ಜೀವನ ಕಟ್ಟಿಕೊಳ್ಳಲು ಬಹು ತೇಕರು ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಾತಿನುದ್ದಕ್ಕೂ ಸ್ಮರಿಸಿಕೊಂಡ ತವರೂರಾದ ಧಾರವಾಡವನ್ನು ಸಾಹಿತ್ಯ, ಸಂಗೀತ ಹಾಗೂ ಸಂಘರ್ಷಗಳ ಕೂಡಲ ಸಂಗಮ ಎಂದು ಬಣ್ಣಿಸಿದರು. ಗೋಕಾಕ್,ಮಂಡೆಲ್,ಜಾತಿ ವಿನಾಶ ಸೇರಿದಂತೆ ಪ್ರಜಾಪ್ರಭುತ್ವದ ಹಲವಾರು ಚಳವಳಿ ಗಳು ಹುಟ್ಟಿನ ಜತೆಗೆ ಯಶಸ್ಸಿನ ಸಾಕ್ಷತ್ಕಾರ ಕಂಡಿದ್ದು ಧಾರವಾಡದಲ್ಲೆ. ಚೆನ್ನವೀರ ಕಣವಿ,ಗೋಕಾಕ್‌ರಂತಹ ಬದ್ಧತೆಯ ವ್ಯಕ್ತಿತ್ವವುಳ್ಳ ನಾಯ ಕರು ಚಳವಳಿಯ ನೇತೃತ್ವ ವಹಿಸಿದ್ದರಿಂದ ಇಂದಿಗೂ ಈ ಚಳವಳಿಗಳ ಯಶಸ್ಸಿನ ಫಲ ಆಚರಣೆಯಲ್ಲಿದೆ ಎಂದು ಹೇಳಿದರು.
ಬ್ರಹ್ಮಚಾರಿಗೆ ಮಕ್ಕಳಾದ್ಹಂಗೆ…ನಾನು (ಚಂಪಾ)ಇಂಗ್ಲೆಂಡ್‌ನಲ್ಲಿ ಎಂಎ ವ್ಯಾಸಂಗ ಮುಗಿಸಿ ಕರ್ನಾಟಕಕ್ಕೆ ವಾಪಸ್ ಬಂದು ಪಿಎಚ್.ಡಿ ಸಂಶೋಧನೆ ಮಾಡಲು ಪ್ರಾರಂಭಿಸಿದೆ.
ಆದರೆ,ಮಾರ್ಗದರ್ಶಕರಾಗಿದ್ದ ಕುಂಬ್ಲಿ ಎಂಬ ಪ್ರಾಧ್ಯಾಪಕರು ಅಕಾಲಿಕ ಮರಣಕ್ಕೆ ತುತ್ತಾದರು.ಬಳಿಕ ಕೊಟ್ರೇಸಿ ಶೆಟ್ಟಿ ಎಂಬ ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ಸಂಶೋಧನೆ ಮುಂದುವರಿಸಿದೆ.ದುರಂತವೆಂದರೆ,ಅವರೂ ಮರಣ ಹೊಂದಿದರು. ಅಲ್ಲಿಗೆ ಪಿಎಚ್.ಡಿ.ಸಂಶೋಧನೆಯ ಕನಸು ಮರೀಚಿಕೆಯಾಗಿಯೇ ಉಳಿಯಿತು. ಆದರೆ,ನನ್ನ ಜೀವನ ಮತ್ತು ಸಾಧನೆ ಕುರಿತು ಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿ ಯೊಬ್ಬರು ಡಾಕ್ಟರೇಟ್ ಪಡೆದಿದ್ದರೆ,ನನ್ನ ಮಾರ್ಗದರ್ಶನ ದಲ್ಲೇ ಹಂಪಿ ವಿವಿಯಲ್ಲಿ ಮತ್ತೊಬ್ಬರು ಪಿಎಚ್.ಡಿ ಪಡೆದು ಕೊಂಡರು.ನಾನು ಡಾಕ್ಟರೇಟ್ ಪಡೆಯದಿದ್ದರೂ ಬೇರೆಯವರು ಡಾಕ್ಟರೇಟ್ ಪಡೆಯಲು ನಾನು ವಸ್ತುವಾಗಿದ್ದು ಬ್ರಹ್ಮಚಾರಿಗೆ ಮಕ್ಕಳಾದ್ಹಂಗೆ ಎಂದು ತಮ್ಮ ಜೀವನದ ಅಪರೂ ಪದ ಘಟನೆಗಳನ್ನು ಅವರು ಸ್ಮರಿಸಿಕೊಂಡರು.
ಲೇಬಲ್ ಅಷ್ಟೇ…ದಲಿತ,ಬಂಡಾಯ,ನವ್ಯ,ನವೋದಯ..ಹೀಗೆ ಸಾಹಿತ್ಯ ಪ್ರಕಾರಗಳಾಗಲಿ ಅಥವಾ ಚಳವಳಿಗಳ ಹುಟ್ಟಾಗಲಿ ಇವು ಹೆಸರಿಗಷ್ಟೇ ಲೇಬಲ್ (ಮಾನದಂಡ).ಸಮಕಾಲೀನ ಎಲ್ಲ ಆಗುಹೋಗುಗಳಲ್ಲಿ ಪ್ರಾಮಾಣಿಕ ಹಾಗೂ ನಿಸ್ವಾರ್ಥದೊಂದಿಗೆ ತೊಡಗಿಕೊಂಡು ಯಶಸ್ಸುಗಳಿಸುವವರು ನೈಜ ಅಥವಾ ಸತ್ವವುಳ್ಳ ಹೋರಾಟಗಾರ ಹಾಗೂ ಸಾಹಿತಿಯಾಗಲಿದ್ದಾರೆ ಎಂದು ಚಂಪಾ ಅಭಿಪ್ರಾಯಪಟ್ಟರು.
ಕವಿ ನಿಸ್ವಾರ್ಥಿ.ತನ್ನೆಲ್ಲಾ ಭಾವನೆಗಳನ್ನು ಅಕ್ಷರಗಳ ಮೂಲಕ ಇನ್ನೊಬ್ಬರಿಗೆ ಹಂಚಿಕೊಳ್ಳುತ್ತಾನೆ.ಚಳವಳಿಗಾರ ಸಮಾಜಕ್ಕಾಗಿ ಬೀದಿಗಿಳಿ ಯುತ್ತಾನೆ.ಇಲ್ಲಿ ವೈಯಕ್ತಿಕಕ್ಕಿಂತ ಬೇರೆಯವರ ಸ್ಪಂದನೆಗೆ ತಮ್ಮನ್ನು ತೊಡಗಿಸಿಕೊಳ್ಳುವುದು ಮುಖ್ಯ.ಇದಕ್ಕೆ ಯಾವುದೇ ಹಣೆಪಟ್ಟಿ ಕಟ್ಟಿಕೊಳ್ಳುವುದು ಸಮಂಜಸ ವಲ್ಲ ಎಂದು ಅವರು ಹೇಳಿದರು.
ಮುಂದುವರಿದಿದೆಯೇ ಮನಸ್ತಾಪ?ಎಂಜಿಆರ್ ಅರಸು ನೇತೃತ್ವದಲ್ಲಿ ನಡೆಯುವ ಪ್ರತಿ ಕಾರ್ಯಕ್ರಮದಲ್ಲೂ ಸಾಮಾನ್ಯವಾಗಿ ಮೈಸೂರಿ ನವರೇ ಆದ ಹಿರಿಯ ಸಾಹಿತಿ (ದೇಜಗೌ)ಒಬ್ಬರು ಇರುತ್ತಾರೆ.ಅವರು ಬಂದರೆ ನಾನು ಬರೋದಿಲ್ಲ ಎಂದು ಹೇಳಿದ್ದೆ ಎಂದು ಚಂಪಾ ನುಡಿದರು.ಇದು ಸಾಹಿತಿ (ದೇಜಗೌ)ಮತ್ತು ಅವರ (ಚಂಪಾ)ನಡುವಿನ ಸೈದ್ಧಾಂತಿಕ ಬಿನ್ನಾಭಿಪ್ರಾಯದ ಮನಸ್ತಾಪ ಮುಂದುವರಿ ಯುತ್ತಿರುವುದಕ್ಕೆ ಸಾಕ್ಷಿ ಎನ್ನಬಹುದು.
ಕನ್ನಡದ ಕಲಿ:ಚಂಪಾರ ಆಯ್ದ ಚುಟುಕು ಕವನಗಳನ್ನು ಒಳಗೊಂಡ ಚಂಪಾ ಚುಟುಕು ಕೃತಿಯನ್ನು ಬಿಡುಗಡೆ ಮಾಡಿದ ಸಾಹಿತಿ ಹಾಗೂ ಚುಟುಕು ಸಾಹಿತ್ಯ ಕೇಂದ್ರ ಸಮಿತಿಯ ಗೌರವಾ ಧ್ಯಕ್ಷ ಡಾ.ಎಂ.ಅಕ್ಬರ್ ಅಲಿ ಮಾತನಾಡಿ,ಆಧುನಿಕ ಕನ್ನಡ ಸಾಹಿತ್ಯ ಮತ್ತು ಚುಟುಕು ಸಾಹಿತ್ಯ ಕೃಷಿಯಲ್ಲಿ ವಿಶಿಷ್ಟ ಸಾಧನೆಗೈದ ಪ್ರಾತಃಸ್ಮ ರಣಿಯ ರಲ್ಲಿ ಚಂದ್ರಶೇಖರ ಪಾಟೀಲರೂ ಒಬ್ಬರು.ಇವರ ಸಾಹಿತ್ಯ ಕೃಷಿಯಿಂದ ಕನ್ನಡ ಸಾಹಿತ್ಯಕ್ಕೆ ಆನೆ ಬಲ ಬಂದಿದೆ ಎಂದು ಶ್ಲಾಘಿಸಿದರು.
ದಿ ಇನ್‌ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್‌ (ಇಂಡಿಯಾ)ಮೈಸೂರು ಶಾಖೆಯ ಅಧ್ಯಕ್ಷ ಎ.ಎಸ್.ಸತೀಶ್ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಚ್.ವಿ.ರಾಜೀವ್,ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಪುಷ್ಪ ಅಯ್ಯಂಗಾರ್,ಡಾ.ಟಿ.ಅನಂತ ಪದ್ಮನಾಭ,ಎನ್.ಎಸ್. ಮಹಾದೇವಸ್ವಾಮಿ ಉಪಸ್ಥಿತರಿದ್ದರು.
ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಪ್ರಧಾನ ಸಂಚಾಲಕ ಡಾ.ಎಂ.ಜೆ.ಆರ್.ಅರಸ್ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದರು.
Please follow and like us:
error

Leave a Reply

error: Content is protected !!