ರಾಜಕೀಯ ಪಕ್ಷಗಳೂ ಆರ್‌ಟಿಐ ವ್ಯಾಪ್ತಿಗೆ: ಮಾಹಿತಿ ಹಕ್ಕು ಆಯೋಗ ಮಹತ್ವದ ಆದೇಶ

ಹೊಸದಿಲ್ಲಿ,ಜೂ.3: ರಾಜಕೀಯ ಪಕ್ಷಗಳು ಕೂಡಾ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಬರುತ್ತವೆಯೆಂದು ಕೇಂದ್ರ ಮಾಹಿತಿ ಹಕ್ಕು ಆಯೋಗವು ಸೋಮವಾರ ಮಹತ್ವದ ಆದೇಶವೊಂದನ್ನು ನೀಡಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ರಾಜಕೀಯ ಪಕ್ಷಗಳನ್ನು ಸಾರ್ವಜನಿಕ ಸಂಸ್ಥೆಗಳೆಂದು ಪರಿಗಣಿಸಲಾಗುವುದರಿಂದ ಅವು ಆರ್‌ಟಿಐ ಕಾಯ್ದೆಯಡಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುವ ಬಾಧ್ಯತೆ ಹೊಂದಿರುವುದಾಗಿ ಆಯೋಗ ತಿಳಿಸಿದೆ.
ಕಾಂಗ್ರೆಸ್, ಬಿಜೆಪಿ, ಸಿಪಿಎಂ,ಸಿಪಿಐ, ಎನ್‌ಸಿಪಿ ಹಾಗೂ ಬಿಎಸ್ಪಿಗಳಿಗೆ ಸಂಬಂಧಿಸಿ ಮಾಹಿತಿ ಹಕ್ಕು ಕಾಯ್ದೆಯಡಿ ಸಂಬಂಧಿಸಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುವ ಹೊಣೆಗಾರಿಕೆಯನ್ನು ಅವು ಹೊಂದಿವೆಯೆಂದು ಮುಖ್ಯ ಮಾಹಿತಿ ಆಯುಕ್ತ ಸತ್ಯಾನಂದ ಮಿಶ್ರಾ ಹಾಗೂ ಮಾಹಿತಿ ಆಯುಕ್ತರಾದ ಎಂ.ಎಲ್.ಶರ್ಮಾ ಹಾಗೂ ಅನ್ನಪೂರ್ಣ ದೀಕ್ಷಿತ್ ಅವರನ್ನೊಳಗೊಂಡ ಆಯೋಗದ ಪೀಠವು ಸೋಮವಾರ ನೀಡಿದ ಆದೇಶದಲ್ಲಿ ತಿಳಿಸಿದೆ.
ಈ ರಾಜಕೀಯ ಪಕ್ಷಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಆರು ವಾರಗಳೊಳಗೆ ತಮ್ಮ ಮುಖ್ಯ ಕಾರ್ಯಾಲಯಗಳಲ್ಲಿ ಕೇಂದ್ರ ಮಾಹಿತಿ ಅಧಿಕಾರಿ(ಸಿಪಿಐಓ) ಹಾಗೂ ಮೇಲ್ಮನವಿ ಸ್ವೀಕಾರ (ಅಪಲೇಟ್)ಅಧಿಕಾರಿಗಳನ್ನು ನಿಯೋಜಿಸುವಂತೆಯೂ ಆಯೋಗವು ಆದೇಶ ನೀಡಿದೆ. ನೇಮಕಗೊಂಡ ಸಿಪಿಐಓಗಳು, ನಾಲ್ಕು ವಾರಗಳೊಳಗೆ ತಮಗೆ ಬಂದಿರುವ ಆರ್‌ಟಿಓ ಅರ್ಜಿಗಳಿಗೆ ಉತ್ತರಿಸುವಂತೆಯೂ ಪೀಠವು ತಿಳಿಸಿದೆ.
ಸಾಮಾಜಿಕ ಕಾರ್ಯಕರ್ತ ಸುಭಾಶ್ ಅಗರ್‌ವಾಲ್ ಹಾಗೂ ಪ್ರಜಾತಾಂತ್ರಿಕ ಸುಧಾರಣೆಗಳ ಸಂಘದ ವರಿಷ್ಠ ಅನಿಲ್ ಬೈರ್‌ವಾಲ್ ಅವರು, ಈ ಆರು ರಾಜಕೀಯ ಪಕ್ಷಗಳ ಹಣಕಾಸಿನ ಪರಿಸ್ಥಿತಿ, ಅವುಗಳಿಗೆ ಹರಿದುಬರುತ್ತಿರುವ ದೇಣಿಗೆ ಮತ್ತು ದಾನಿಗಳ ಹೆಸರು ಹಾಗೂ ವಿಳಾಸದ ಬಗ್ಗೆ ಆರ್‌ಟಿಐ ಕಾಯ್ದೆಯಡಿ ಮಾಹಿತಿ ಕೋರಿದ್ದರು.
ಆದರೆ ಈ ಆರು ರಾಜಕೀಯ ಪಕ್ಷಗಳು ತಾವು ಆರ್‌ಟಿಐ ಕಾಯ್ದೆಯ ವ್ಯಾಪ್ತಿಗೆ ಒಳಪಡುವುದಿಲ್ಲವೆಂದು ಹೇಳಿಕೊಂಡು ಈ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದವು. ಹೀಗಾಗಿ ಅರ್ಜಿದಾರರು ಕೇಂದ್ರ ಮಾಹಿತಿ ಹಕ್ಕು ಆಯೋಗದ ಮೊರೆ ಹೋಗಿದ್ದು.
ಈ ಪ್ರಕರಣಕ್ಕೆ ಸಂಬಂಧಿಸಿ ಮಾಹಿತಿ ಹಕ್ಕು ಆಯೋಗದ ಪೀಠವು ನಡೆಸಿದ ಆಲಿಕೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಆರ್‌ಟಿಐ ಕಾಯ್ದೆಯ ವ್ಯಾಪ್ತಿಗೆ ಬರುವುದೆಂಬ ತನ್ನ ವಾದವನ್ನು ಸಮರ್ಥಿಸಲು ಬೈರ್‌ವಾಲ್ ಮೂರು ಪ್ರಮುಖ ಅಂಶಗಳನ್ನು ಮಂಡಿಸಿದ್ದರು.
ರಾಜಕೀಯ ಪಕ್ಷಗಳಿಗೆ ಕೇಂದ್ರ ಸರಕಾರದಿಂದ ಪರೋಕ್ಷವಾಗಿ ಗಣನೀಯ ಪ್ರಮಾಣದ ಆರ್ಥಿಕ ನೆರವು ಲಭಿಸುತ್ತಿದೆ ಹಾಗೂ ಅವು ಸಾರ್ವಜನಿಕವಾಗಿ ಕರ್ತವ್ಯ ನಿರ್ವಹಿಸುತ್ತವೆ ಮತ್ತು ಅವು ಕಾನೂನುಬದ್ಧವಾಗಿ ಹಕ್ಕುಗಳನ್ನು ಹಾಗೂ ಹೊಣೆಗಾರಿಕೆಗಳನ್ನು ಹೊಂದಿವೆಯೆಂಬ ಮೂರು ಕಾರಣಗಳಿಂದಾಗಿ ರಾಜಕೀಯ ಪಕ್ಷಗಳು ಆರ್‌ಟಿಐ ಕಾಯ್ದೆಯ ವ್ಯಾಪ್ತಿಗೆ ಒಳಪಡುತ್ತವೆಯೆಂದು ಬೈರ್‌ವಾಲ್ ಪ್ರತಿಪಾದಿಸಿದ್ದರು.
‘ದಿಲ್ಲಿಯ ಪ್ರಮುಖ ಪ್ರದೇಶಗಳಲ್ಲಿ ಭಾರೀ ವಿಸ್ತೀರ್ಣದ ಜಮೀನನ್ನು ರಾಜಕೀಯ ಪಕ್ಷಗಳಿಗೆ ಅತ್ಯಂತ ಕಡಿಮೆ ದರದಲ್ಲಿ ನೀಡಲಾಗಿದೆ. ಇದರ ಜೊತೆಗೆ ದೊಡ್ಡ ಪ್ರಮಾಣದ ಸರಕಾರಿ ವಸತಿಸೌಕರ್ಯಗಳು ಕೂಡಾ ಅವುಗಳಿಗೆ ಲಭ್ಯವಾಗಿದೆ’’ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದರು.
ರಾಜಕೀಯ ಪಕ್ಷಗಳಿಗೆ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಲಾಗುತ್ತಿದೆ ಹಾಗೂ ಚುನಾವಣೆಯ ಸಮಯಗಳಲ್ಲಿ ಆಕಾಶವಾಣಿ ಹಾಗೂ ದೂರದರ್ಶನಗಳಲ್ಲಿ ಅವುಗಳಿಗೆ ಉಚಿತವಾಗಿ ಪ್ರಚಾರಕ್ಕೆ ಅವಕಾಶ ನೀಡಲಾಗುತ್ತಿದೆ. ಇದು ರಾಜಕೀಯ ಪಕ್ಷಗಳು ಸರಕಾರದಿಂದ ಪರೋಕ್ಷವಾಗಿ ಹಣಕಾಸು ನೆರವನ್ನು ಪಡೆಯುತ್ತವೆಯೆಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆಯೆಂದು ಅವರು ವಾದಿಸಿದ್ದರು.
ಕಾಂಗ್ರೆಸ್, ಬಿಜೆಪಿ, ಸಿಪಿಎಂ, ಸಿಪಿಐ, ಎನ್‌ಸಿಪಿ ಹಾಗೂ ಬಿಎಸ್ಪಿ ಪಕ್ಷಗಳು ಕೇಂದ್ರ ಸರಕಾರದಿಂದ ಗಣನೀಯವಾಗಿ ಆರ್ಥಿಕ ನೆರವನ್ನು ಪಡೆದುಕೊಂಡಿವೆಯೆಂದು ಹೇಳಲು ನಾವು ಹಿಂಜರಿಯುವುದಿಲ್ಲ. ಆದುದರಿಂದ ಆರ್‌ಟಿಐ ಕಾಯ್ದೆಯ ಸೆಕ್ಷನ್ 2(ಎಚ್) ಅನ್ವಯ ಅವುಗಳನ್ನು ಸಾರ್ವಜನಿಕ ಸಂಸ್ಥೆಗಳೆಂದು ಪರಿಗಣಿಸಬಹುದಾಗಿದೆ’’ ಎಂದು ಪೀಠವು ಆದೇಶದಲ್ಲಿ ತಿಳಿಸಿದೆ.
Please follow and like us:
error