ಡೆಂಗ್ಯು ಜ್ವರ ರೋಗಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ

 ಡೆಂಗ್ಯು ಜ್ವರ ರೋಗಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ.  ಮುಂಜಾಗ್ರತಾ ಕ್ರಮ ಮತ್ತು ಸರಿಯಾದ ಹಾಗೂ ಪೂರ್ವಭಾವಿ ಚಿಕಿತ್ಸೆಯಿಂದ ತೊಂದರೆ ಮತ್ತು ಸಾವನ್ನು ತಪ್ಪಿಸಲು ಮಾರ್ಗೋಪಾಯವಾಗಿದೆ ಎಂದು ಕೊಪ್ಪಳ ತಾಲೂಕು ಆರೋಗ್ಯಾಧಿಕಾರಿ ಡಾ. ಎಸ್.ಬಿ. ದಾನರೆಡ್ಡಿ ಅವರು ತಿಳಿಸಿದ್ದಾರೆ.

  ‘ಡೆಂಗ್ಯು ಜ್ವರಕ್ಕೆ ನಿರ್ದಿಷ್ಟ ಔಷಧಿ ಇಲ್ಲ- ಕೈಚೆಲ್ಲಿದ ಡಾಕ್ಟರ್’ ಎಂಬುದಾಗಿ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿರುವ ಬಗ್ಗೆ ಸ್ಪಷ್ಟನೆ ನೀಡಿರುವ ತಾಲೂಕು ಆರೋಗ್ಯಾಧಿಕಾರಿ ಡಾ. ಎಸ್.ಬಿ. ದಾನರೆಡ್ಡಿ ಅವರು, ತಾ.ಪಂ. ಸಾಮಾನ್ಯ ಸಭೆಯಲ್ಲಿ ತಾ.ಪಂ. ಸದಸ್ಯ ಕೆ.ಬಿ. ಸಂಗಪ್ಪ ಅವರು ತಿಗರಿ ಗ್ರಾಮದಲ್ಲಿ ಸಂಶಯಾಸ್ಪದ ಡೆಂಗ್ಯು ಪ್ರಕರಣಗಳ ಬಗ್ಗೆ ಕೋರಿದ ಮಾಹಿತಿಗೆ ಸಭೆಯಲ್ಲಿ ಉತ್ತರ ನೀಡಿದ್ದು, ಡೆಂಗ್ಯು ಪ್ರಕರಣಗಳಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ.  ರೋಗಲಕ್ಷಣಗಳ ಆಧಾರಿಸಿ (ಸಿಂಪ್ಟಮ್ಯಾಟಿಕ್) ಚಿಕಿತ್ಸೆ ನೀಡಿದಲ್ಲಿ ಮುಂದಾಗಬಹುದಾದ ತೊಂದರೆಯನ್ನು ತಪ್ಪಿಸಬಹುದು.  ಯಾವುದೇ ಕಾರಣಕ್ಕೂ ಆಸ್ಪರಿನ್ ಮತ್ತು ಬ್ರೂಫಿನ್ ಮಾತ್ರೆ ನೀಡಬಾರದು, ಇದರಿಂದ ಹೊಟ್ಟೆಯಲ್ಲಿ ನೋವು ಮತ್ತು ರಕ್ತಸ್ರಾವ ಆಗುವ ಸಂಭವ ಇರುತ್ತದೆ.  ಆದ್ದರಿಂದ ರೋಗ ಬರುವುದಕ್ಕೂ ಮುನ್ನವೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅತಿ ಮುಖ್ಯ ಎಂಬುದಾಗಿ ವಿವರಣೆ ನೀಡಲಾಗಿದೆ.  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದ ಎನ್.ವಿ.ಬಿ.ಡಿ.ಸಿ.ಪಿ. ಮಾರ್ಗಸೂಚಿಯಲ್ಲಿಯೂ ಸಹ  ‘ಡೆಂಗ್ಯು ಜ್ವರ ಮತ್ತು ಚಿಕುಂಗುನ್ಯಾ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ.  ಸರಿಯಾದ ಮತ್ತು ಪೂರ್ವಭಾವಿ ಚಿಕಿತ್ಸೆ ನೀಡಿದಲ್ಲಿ, ಡೆಂಗ್ಯು ರೋಗ ಲಕ್ಷಣಗಳನ್ನು ಪರಿಹರಿಸಿ ಮುಂದಾಗಬಹುದಾದ ತೊಂದರೆ ಮತ್ತು ಸಾವನ್ನು ತಪ್ಪಿಸಬಹುದಾಗಿದೆ’ ಎಂದು  ಸ್ಪಷ್ಟವಾಗಿ ತಿಳಿಸಲಾಗಿದೆ.  ಆದ್ದರಿಂದ ಸಾರ್ವಜನಿಕರು ಡೆಂಗ್ಯು ರೋಗ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.  ಮತ್ತು ಸರಿಯಾದ ಹಾಗೂ ಪೂರ್ವಭಾವಿ ಚಿಕಿತ್ಸೆಯನ್ನು ವೈದ್ಯರಿಂದ ಪಡೆಯಬೇಕು ಎಂದು ಕೊಪ್ಪಳ ತಾಲೂಕು ಆರೋಗ್ಯಾಧಿಕಾರಿ ಡಾ. ಎಸ್.ಬಿ. ದಾನರೆಡ್ಡಿ  ತಿಳಿಸಿದ್ದಾರೆ.

Leave a Reply